ಮಾನವೀಯತೆಯನ್ನು ಮೈಗೂಡಿಸಿಕೊಳ್ಳೋಣ
ಕಳೆದ ವರ್ಷದಿಂದಲೂ ಇಡೀ ಮನುಕುಲವನ್ನು ಈ ಮಹಾಮಾರಿ ಕೊರೊನಾ ನಲುಗಿಸಿ ಬಿಟ್ಟಿದೆ.ಹೋದ ವರುಷದ 2020 ನೆ ಕೊನೆಯ ತಿಂಗಳುಗಳಲ್ಲಿ ಒಂದಿಷ್ಟು ಚೇತರಿಸಿಕೊಂಡಿದ್ದ ಜನ ಸಾಮಾನ್ಯರು ಈ ವರುಷದ 2021 ರ ಮಾರ್ಚ ತಿಂಗಳಿನಿಂದ ಕೊರೊನಾ 2 ನೆ ಅಲೆಗೆ ಮತ್ತಷ್ಟು ತತ್ತರಿಸಿ ಹೋಗಿದ್ದಾರೆ.ಏಕೆಂದರೆ ಒಂದು ವರುಷದಿಂದ ಆರ್ಥಿಕವಾಗಿ,ಮಾನಸಿಕವಾಗಿ ಸಂಪೂರ್ಣ ಸೋತು ಹೋಗಿದ್ದ ಜೀವಗಳು ಈಗಷ್ಟೇ ಚೇತರಿಸಿಕೊಂಡು ಮತ್ತೆ ಹೊಸ ಬದುಕು ಕಟ್ಟಿಕೊಳ್ಳಲು ಶುರು ಮಾಡಿದ್ದರು.ಆದರೆ ಈ 2 ನೆಯ ಅಲೆಯು ಮತ್ತೆ ಬರಸಿಡಿಲಿನಂತೆ ಎರಗಿ ಎಲ್ಲರ ಆಸೆಗಳಿಗೆ ನೀರು ಸುರಿದಿದೆ. ಬಂಧು,ಬಾಂಧವರನ್ನು ಕಳೆದುಕೊಂಡ ಗಾಯ ಇನ್ನೂ ಹಾಗೇ ಇರುವಾಗ ಮತ್ತೆ ಬರೆ ಬಿದ್ದಂತಾಗಿದೆ.
ಸರಕಾರ ಹಲವಾರು ಆಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು
1. ಎಲ್ಲ ಕೊರೊನಾ ರೋಗಿಗಳಿಗೆ ಉಚಿತ ಔಷಧೋಪಚಾರ,ಊಟದ ವ್ಯವಸ್ಥೆ ಸೂಕ್ತ ಆಮ್ಲಜನಕದ ಬಳಕೆ ಕಡ್ಡಾಯವಾಗಿ ಮಾಡಬೇಕು.
2.ದಿನಗೂಲಿ ಕಾರ್ಮಿಕರಿಗೆ,ನಿರಾಶ್ರಿತರಿಗೆ ಆಶ್ರಯ ಕೊಟ್ಟು ಪೋಷಿಸಬೇಕು.
3.ಪೊಲೀಸರು,ಆರೋಗ್ಯ ಕಾರ್ಯಕರ್ತರ ಮೂಲಕ ಕೊರೊನಾ 2 ನೆ ಅಲೆಯ ಬಗ್ಗೆ ಜನ ಜಾಗೃತಿ ಮೂಡಿಸಬೇಕು.
4.ಅಲ್ಲಲ್ಲಿ ಉಚಿತ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ರೋಗದ ಲಕ್ಷಣಗಳು ಮತ್ತು ನಿವಾರಣೆಯ ಸಂಪೂರ್ಣ ಮಾಹಿತಿ ಒದಗಿಸಬೇಕು.
5.ತುರ್ತುಪರಿಸ್ಥಿತಿಯಲ್ಲಿ ಜನಸಾಮಾನ್ಯರೆಲ್ಲರಿಗೂ ಅಂಬ್ಯುಲೆನ್ಸ ವ್ಯವಸ್ಥೆ ಸಮಯಕ್ಕೆ ಸರಿಯಾದ ಸಿಗುವಂತೆ ನೋಡಿಕೊಳ್ಳಬೇಕು.
6.ಯಾವುದೇ ತಾರತಮ್ಯ ಮಾಡದೇ ಮಾನವೀಯತೆಯ ಮೌಲ್ಯಗಳನ್ನು ಹೆಚ್ಚಿಸುವತ್ತ ಯೋಚಿಸಬೇಕು.
ಇನ್ನು ಜನಸಾಮಾನ್ಯರ ಜವಾಬ್ದಾರಿಗಳು
1.ಎಲ್ಲವನ್ನು ಸರ್ಕಾರವೇ ಮಾಡಲಿ,ಇದೆಲ್ಲಾ ಬರೀ ಸರಕಾರದ ಹೊಣೆ ಎಂಬ ಧೋರಣೆ ಮರೆತು ವ್ಯಕ್ತಿಗತ ಸಹಾಯ ಮಾಡುವ ಮನಸ್ಸುಳ್ಳವರಾಗಬೇಕು.
2.ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರ ಹೋಗಿ,ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
3.ಅನಾವಶ್ಯಕವಾದ ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಹರಡುವುದನ್ನು ಬಿಟ್ಟು ಸಕಾರಾತ್ಮಕ ಚಿಂತನೆಗಳು, ವಿಚಾರಗಳನ್ನು ಹಂಚಿಕೊಳ್ಳಬೇಕು.
4.ಸಭೆ, ಮದುವೆ ಕಾರ್ಯಕ್ರಮಗಳಿಗೆ ಹೋಗದೆ ಕಟ್ಟುನಿಟ್ಟಾಗಿ ಸರಕಾರದ ನೀತಿ ನಿಯಮಗಳನ್ನು ಪ್ರತಿಯೊಬ್ಬ ನಾಗರೀಕರು ಪಾಲಿಸಲೇಬೇಕು.
5. ತಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಮತ್ತು ವೈಯಕ್ತಿಕ ಸ್ವಚ್ಛತೆಯ ಕಡೆ ಗಮನವಿರಿಸಬೇಕು. ಸತ್ವಯುತ ಆಹಾರ ಸೇವನೆ ತಾಜಾ ತರಕಾರಿಗಳು, ವಿಟಾಮಿನ್ ‘ಸೀ’ಯುಕ್ತ ಹಣ್ಣುಗಳನ್ನು ದಿನ ನಿತ್ಯದ ಆಹಾರವಾಗಿ ಉಪಯೋಗಿಸಬೇಕು.
6.ಸ್ಥಿತಿವಂತರು ಬಡವರಿಗೆ ,ಅನಾಥಾಶ್ರಮಗಳಿಗೆ
ಫೋನ್ ಪೇ ಮೂಲಕ ಅಥವಾ ಸಂಬಂಧಪಟ್ಟ ಇಲಾಖೆ,ಸಂಸ್ಥೆಯೊಂದಿಗೆ ಸೇರಿ ಮೂಲಭೂತ ಸಹಾಯ ಮಾಡಬಹುದು.
ಸರಕಾರದ ನಿಯಮಗಳಿಗೆ ಬದ್ಧರಾಗಿ ತಮ್ಮ ತಮ್ಮ ಕುಟುಂಬವನ್ನು ಸಂರಕ್ಷಿಸಿಕೊಳ್ಳುವ ಜೊತೆಗೆ ಇಂತ ಕಠಿಣ ಪರಿಸ್ಥಿತಿಯಲ್ಲೂ ಪ್ರಾಮಾಣಿಕತೆಯನ್ನು,
ಮಾನವೀಯತೆಯನ್ನು ಮೈಗೂಡಿಸಿಕೊಂಡು ಸರಕಾರದ ಜೊತೆ ಜನಸಾಮಾನ್ಯರು ಹೆಜ್ಜೆ ಹಾಕಿದಾಗ ಮಾತ್ರ ಈ ಕೊರೊನಾ 2 ನೇ ಅಲೆಯನ್ನು ಹಂತ ಹಂತವಾಗಿ ಇಳಿಮುಖಗೊಳಿಸಬಹುದು.ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ.
–ಸರೋಜಾ ಶ್ರೀಕಾಂತ ಅಮಾತಿ, ಕಲ್ಯಾಣ ಮುಂಬೈ