ಕೋರಿಕೆ
ಕಣ್ಣಲಿ ಕರಗಿದ ಬಿಂಬವ ಕಂಡು
ಪುಳಕವು ಅರಳಿತು ಎದೆಯೊಳಗೆ
ಹುಣ್ಣಿಮೆ ದಿನವದು ಅಲೆಗಳು ಎದ್ದವು
ಕುಣಿಯುತ ನಲಿದವು ಕಡಲೊಳಗೆ
ಬಾರೊ ಚಂದಿರ ಜಗದಲಿ ಸುಂದರ
ಇರುಳಲಿ ಆಗಸ ಬೆಳಗಿಸು ನೀ
ತಾರೊ ಹರುಷವ ಕಳೆದು ಕ್ಲೇಶವ
ಬಾನು ಭುವಿಯನು ಅರಳಿಸು ನೀ
ಹಗಲಿರುಳೆನ್ನದೆ ದುಡಿಯುವ ಜೀವಕೆ
ಸುರಲೋಕದ ಸುಧೆ ಕುಡಿಸುತಿರು
ಬಳಲಿದ ತೊಳಲಿದ ಮುಳ್ಳನೆ ತುಳಿದಿಹ
ಬಡವಗೆ ಹೂವನು ಮುಡಿಸುತಿರು
ಬಿಸಿಲಿನ ತಾಪಕೆ ಮಳೆಯ ಶಾಪಕೆ
ಜಗವಿದು ನಲುಗಿದೆ ಕೊರಗುತಲಿ
ಎಲ್ಲರ ಬಾಳಲಿ ಸೋನೆಯ ಸುರಿಸು
ಗೋಳಿನ ಬಾಳಿಗೆ ಮರುಗುತಲಿ
ನೀನೆ ನೀತಿಯು ನೀನೆ ಪ್ರೀತಿಯು
ಬಿರಿದೊಡಲಿಗೆ ದಿಟ ವರವಾಗು
ನೀನೆ ಶಾಂತಿಯು ಇಲ್ಲ ಭ್ರಾಂತಿಯು
ಇರುಳಿನ ನಿದಿರೆಗೆ ನೆರವಾಗು
–ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – ೫೮೭೩೦೧