ಒಕ್ಕಲಿಗ
ಒಕ್ಕಲಿಗ ಬೇಕವ್ವ ಒಕ್ಕಲಿಗ
ಮನವೆಂಬ ಹೊಲವ ಹಸನು ಮಾಡಿ
ಹಸಿರುಕ್ಕಿಸುವ ಒಕ್ಕಲಿಗ ಬೇಕು
ನಮ್ಮ ಮುದ್ದಣ್ಣನಂತ ಒಕ್ಕಲಿಗ ಬೇಕು….
ಜತನದಿ ಕಾಯ್ದು ಜಂತಿಗೆ ಕಟ್ಟಿದ
ಮೌಲ್ಯ ಗಳ ಬೀಜವನು
ಹದಗೊಳಿಸಿದ ಮಣ್ಣಲ್ಲಿ
ಬಿತ್ತಿ ಬೆಳೆತೆಗೆವ ಛಲಗಾರ
ಒಕ್ಕಲಿಗ ಬೇಕವ್ವ ಒಕ್ಕಲಿಗ….
ಬೀಜದಿಂದೊಂಡೆದ ಮೊಳಕೆಯನು
ಜತನದಿಂದ ಕಾಯುತ್ತ
ಹಸಿರು ಪಡಲೊಡೆವರೆಗೆ
ಹರಿನೀರು ಹಾಯಿಸುತ್ತ
ಹೆಮ್ಮೆಯಲಿ ಬೀಗುವ
ಒಕ್ಕಲಿಗ ಬೇಕವ್ವ ಒಕ್ಕಲಿಗ….
ಅರಿಷಡ್ವರ್ಡವೆಂಬ ಕಳೆ ಆವರಿಸಿ
ಮೌಲ್ಯದ ಬೆಳೆಯನು ಹಾಳುಗೆಡವದಂತೆ
ನೋಡಿಕೊಂಡು ಕಳೆಕೀಳುವ
ಒಕ್ಕಲಿಗ ಬೇಕವ್ವ ಒಕ್ಕಲಿಗ….
ಕಾಳೊಂದರಿಂದ ಬೊಗಸೆ
ತುಂಬುವ ಕಾಳು
ಕೂಳಾಗಿ ಹಸಿದವರ ಹೊಟ್ಟೆತುಂಬಿಸಿ
ಜ್ಞಾನದ ಕಸುವು ನೀಡುವ ಹಂಬಲದ
ಒಕ್ಕಲಿಗ ಬೇಕವ್ವ ಒಕ್ಕಲಿಗ….
ಮಳೆಗಾಳಿಬಿಸಿಲೆಂಬ
ಬವಣೆಗಳಿಗಂಜದೆ
ಆತ್ಮಬಲವನಂಬಿ ಕಾಯಕವಮಾಡುತ್ತ
ಹಂಬಲಿಸಿಬಂದವರಿಗೆ
ಜ್ಞಾನ ದ ಅಂಬಲಿಯ ಹಂಚುವ
ಒಕ್ಕಲಿಗ ಬೇಕವ್ವ ಒಕ್ಕಲಿಗ….
-ಡಾ.ನಿರ್ಮಲಾ ಬಟ್ಟಲ
ಒಕ್ಕಲಿಗ ಕವಿತೆ ತುಂಬಾ ಚೆನ್ನಾಗಿದೆ, ಹೋಲಿಕೆ ಮಾಡಿರುವ ರೀತಿ ಇಷ್ಟವಾಯಿತು.
ಚೆನ್ನಾಗಿದೆ mam…see