ಆಲದ ಮರದಂತಿದ್ದ ನನ್ನ ಅಪ್ಪ
ನನ್ನ ಅಪ್ಪ ನನ್ನ ಬದುಕಿ ಸ್ಪೂರ್ತಿ, ಅವರು ಸವೆಸಿದ ಬದುಕು ಮುಳ್ಳಿನ ದಾರಿ. ಆದರೆ ನಮ್ಮ ಬದುಕಿಗಾಗಿ ಮುಳ್ಳಿನ ಮೇಲೆ ಕೈ ಇಟ್ಟು ಅದರ ಮೇಲೆ ನಮ್ಮನ್ನು ನಡೆೆಸದೆ, ನೋವುಂಡರು. ನಮಗೆ ಎಂದೂ ನೋವು, ಕಷ್ಟಗಳನ್ನೇ ತೋರಿಸಲಿಲ್ಲ.
ನಾವು ಚಿಕ್ಕವರಿದ್ದಾಗ ಅವರ ಹೆಗಲೆ ಮೇಲೆ ಹೊತ್ತುಕೊಂಡು ಸಾಗಿದಾಗ ಅವರ ಸ್ನೇಹಿತರು ನಿನ್ನ ಮಕ್ಕಳು ಸಣ್ಣವ ಎಂದಾಗ ಹೌದಪ್ಪ ನನ್ನ ಮಕ್ಕಳು ಇನ್ನು ಸಣ್ಣವು ಎಂದು ಮುಗುಳ ನಗೆ ಬೀರುತ್ತಿದದ್ದು ಇನ್ನೂ ನನ್ನ ಸ್ಮೃತಿಪಟದಲ್ಲಿ ಅಚ್ಚಳಿಯದೆ ಉಳಿದಿದೆ. ನಾವು ನಮ್ಮ ಅಪ್ಪನಿಗೆ ಐದು ಜನ ಮಕ್ಕಳಿದ್ದರೂ, ಅವರಿಗೆ ನಾನೆಂದರೆ ಪಂಚಪ್ರಾಣ. ಒಂದು ಕೆಲಸ ಮಾಡಿಸುತ್ತಿರಲಿಲ್ಲ, ನೀನು ಚನ್ನಾಗಿ ಓದಿ ಸಮಾಜಕ್ಕೆ ಮಾದರಿಯಾಗಬೇಕು. ಹಣ ಗಳಿಕೆ ಬೇಡ, ಗುಣಗಳ ಗಳಿಕೆ ಮಾಡು ಎಂದು ಪಾಠ ಹೇಳಿದರು.
ಓದಿನಲ್ಲಿ ಮುಂದೆ ಬಂದಾಗ ಹಿಗ್ಗಿದರು, ಖುಷಿ ಪಟ್ಟು ನಾಲ್ಕು ಜನ ಮುಂದೆ ಹೇಳಿಕೊಂಡ್ರು. ಚೆನ್ನಾಗಿ ಓದಿ ಒಬ್ಬ ಉಪನ್ಯಾಸಕನಾಗಬೇಕೆಂಬ ಆಸೆ ಅಪ್ಪ ಹೊಂದಿದ್ದರು. ಆದರೆ ಪದವಿ ಓದುವಾಗ ಪತ್ರಿಕೋದ್ಯಮದ ಕಡೆ ಮನಸ್ಸು ಮಾಡಿದಾಗ ಒಮ್ಮೆ ಆಲೋಚಿಸು ಎಂದಿದ್ದರು. ಆದರೆ ಅಪ್ಪನ ಆಸೆಯಂತೆ ಕನ್ನಡ ವಿಷಯ ಉಪನ್ಯಾಸಕನಾದೆ, ನನ್ನ ಆಸೆಯಂತೆ ಪತ್ರಕರ್ತರನು ಆದೆ. ಈ ಎರಡು ವೃತ್ತಿಗಳು ನನಗೆ ಅಚ್ಚು ಮೆಚ್ಚು. ನನ್ನ ಜೀವನ ಇಷ್ಟು ಸುಂದರಮಯವಾಗಿ ಹೂ ಅರಳುತ್ತಿವೆ ಎಂದರೆ ಅದಕ್ಕೆ ಅಪ್ಪ ಹಾಕಿದ ನೀರು ಕಾರಣ.
ನಾನು ಹೊಸ ಮನೆ ಕಟ್ಟಿಸುವ ವಿಚಾರ ಹೇಳಿದಾಗ ಅಪ್ಪ ಪಟ್ಟ ಸಂತೋಷ ಅಷ್ಟಿಷ್ಟಲ್ಲ. ಬಡವನಾಗಿ ಬದುಕು ಸವೆಸಿ ಕೊನೆಗೆ ಮಕ್ಕಳ ಕಾಲದಲ್ಲಿ ಪ್ರೀತಿಯ ಶ್ರೀಮಂತಿಕೆ ಅನುಭವಿಸುವ ಕಾಲ ಬಂದಿದ್ದಕ್ಕೆ ಸಾರ್ಥಕದ ಭಾವ ವ್ಯಕ್ತಪಡಿಸಿದ್ದರು. ಮನೆ ಗೃಹ ಪ್ರವೇಶದ ನಂತರ ಒಂದಿಷ್ಟು ದಿನಗಳು ಹೊಸ ಮನೆಯಲ್ಲಿದ್ದು ನಾನು ಮಾಡಿದ ಕಾರ್ಯಕ್ಕೆ ನನ್ನ ಬೆನ್ನು ಚಪ್ಪರಿಸಿ ಶಹಬಾಸ್ ಗಿರಿ ಕೊಟ್ಟಿದ್ದರು. ಆದರೂ ಮಗನೂ ದೊಡ್ಡ ಮನೆ ಕಟ್ಟಿದ್ದಾನೆ ಆತನಿಗೂ ಸಹಾಯ ಮಾಡಿ ಎಂದು ನನ್ನ ಸಹೋದರರಲ್ಲಿ ಮಾತೆತ್ತಿದ್ದರು.
ನೀನು ಎಂದಿಗೂ ಕುಗ್ಗಬಾರದು, ಯಾವಾಗಲೂ ಹಿಗ್ಗಬೇಕೆಂಬ ಆಸೆ ಅಪ್ಪನದು. ಆದರೆ ವಿಧಿಯಾಟದ ಮುಂದೆ——–ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಅಪ್ಪನನ್ನು ನೆನದರೆ ಕಣ್ಣಾಲೆಗಳು ನೀರು ತುಂಬುತ್ತವೆ. ಅಮ್ಮನನ್ನು ಕಳೆದುಕೊಂಡು ಮೂರು ವರ್ಷ ಅವಧಿಯಲ್ಲಿ ಅಪ್ಪನಲ್ಲಿ ಅಮ್ಮನನ್ನು ಕಂಡಿದ್ದವು. ಒಂದು ಸಾವು ಗೆದ್ದ ನನ್ನಪ್ಪ, ಎರಡನೆ ಬಾರಿಗೆ ಸಾವು ಗೆಲ್ಲಲು ಸಾಧ್ಯವಾಗಲಿಲ್ಲ. ಅಪ್ಪನನ್ನು ಕಾಪಾಡಿಕೊಳ್ಳಲು ಸಹೋದರರು ಮಾಡಿದ ಪ್ರಯತ್ನ, ಪ್ರಾರ್ಥನೆ ನಿಷ್ಪಲವಾಯಿತು. ಅಪ್ಪ ಮೇ. ೧೪ ರಂದು ಈ ಲೋಕ ತ್ಯಜಿಸಿದರು. ಆದರೆ ಇಂಥ ಅಪ್ಪನನ್ನು ಕಳೆದುಕೊಂಡ ನಾವು ದು:ಖದಲ್ಲಿದ್ದೇವೆ.
ಅವರ ಆದರ್ಶಗಳು ನಮ್ಮನ್ನು ಬಡಿದೆಚ್ಚರಿಸುತ್ತೇವೆ. ಅವರ ಆದರ್ಶದ ಮಾತುಗಳು ಪ್ರತಿ ಗಳಿಗೆಗೂ ನೆನಪಾಗುತ್ತವೆ. ಮುಂದಿನ ಜನ್ಮ ಅಂಥ ಇದ್ದರೆ ಅವರೇ ನಮಗೆ ಅಪ್ಪನಾಗಿರಲಿ, ನೀವಿಲ್ಲದ ಬದುಕು ನಿಜಕ್ಕೂ ಸ್ವಾದ ಇಲ್ಲದ್ದು, ನಿಮ್ಮ ನೆನಪು ಮಾತ್ರ ನಮ್ಮ ಹೃದಯಾಂತರಾಳದಲ್ಲಿ ಹಚ್ಚ ಹಸಿರಾಗಲಿವೆ. ಇಷ್ಟು ಮಾತ್ರ ನಾನು ಹೇಳಿ ಕೊಳ್ಳುವೆ ಅಪ್ಪ. ಅಪ್ಪಂದಿರ ದಿನಕ್ಕೆ ನೀನಿಲ್ಲ ಎಂದು ಅಂದುಕೊಳ್ಳಲು ಭಯವಾಗುತ್ತಿದೆ. ನಮ್ಮ ಜೀವನದ ಪ್ರತಿ ಹೆಜ್ಜೆಗೂ ನೀನು ಎಚ್ಚರಿಸು———
–ಅಶೋಕ ಬೆನ್ನೂರು, ಸಿಂಧನೂರು