ಎಲ್ಲರಂತಲ್ಲ ನನ್ನಪ್ಪ

ಎಲ್ಲರಂತಲ್ಲ ನನ್ನಪ್ಪ

ಎಲ್ಲಿಂದಲೋ… ಬಿರುಗಾಳಿಗೆ
ಹಾರಿಬಂದ ಬೀಜ ವೊಂದು
ಎಲ್ಲ ಅಡೆತಡೆಗಳು ಮೀರಿ
ಭೂಗರ್ಭ ಸೇರಿ, ಮೊಳಕೆಯೊಡೆದು
ಬೆಳೆಯುತ್ತಾ ಬೆಳೆಯುತ್ತಾ ಆಲದ ಮರದಂತೆ ಪ್ರೀತಿ ಮಮಕಾರಗಳ ಟೊಂಗೆಗಳ ಪಸರಿಸಿದ
ಭೂಮಿಯಾಳಕ್ಕೆ ನ್ಯಾಯ ನೀತಿಗಳ ಬೇರು ಬಿಟ್ಟು ಗಟ್ಟಿಯಾಗಿ ನೆಲೆಯುರಿದ್ದ….!
ಎಲ್ಲರಂತಲ್ಲ ನನ್ನ ಅಪ್ಪ…..

ಬುದ್ದಿಬಲವ ನಂಬಿದ್ದ ಕುಶಲಕರ್ಮಿ ನ್ಯಾಯ ನಿಷ್ಟುರಿ ನನ್ನಪ್ಪ
ಬಡತನದ ಬೆಗುದಿಯಲ್ಲಿ ತಾನು ನೊಂದು ಬೆಂದರೂ ಅದರ ಝಳ
ತಾಕದಂತೆ ಜತನದಿಂದ ನಮ್ಮ ಬೆಳೆಸಿದ್ದ….! ಹೆಗಲಮೇಲೆ ಹೊತ್ತು
ತಿರುಗಿದ್ದ, ಗೆಳೆಯನಂತೆ ಆಪ್ತನಾಗಿದ್ದ
ಎಲ್ಲರಂತಲ್ಲ ನನ್ನ ಅಪ್ಪ…..

ಅಪ್ಪನ ಏಳಿಗೆ ಸಹಿಸದವರು
ಕೊಟ್ಟ ಕಷ್ಟ, ನಷ್ಟ ,ಅವಮಾನ
ಅಪವಾದಗಳನು ತನ್ನ ಕಾಯಕ ನಿಷ್ಟೆಯಿಂದ ಅಲ್ಲಗಳೆದು
ಸವಾಲೆಸೆದು ಬದುಕಿ ತೋರಿದ
ಒಂಟಿ ಸೈನಿಕ ನಮ್ಮಪ್ಪ….!
ಎಲ್ಲರಂತಲ್ಲ ನನ್ನ ಅಪ್ಪ…..

ನಾನೊಂದು ಹೊಲ ಕೊಂಡಾಗ
ಹಿರಿ ಹಿರಿ ಹಿಗ್ಗಿದ ನನ್ನಪ್ಪ
ಹೇಳಿದ ಒಂದು ಮಾತು ಆಶಿರ್ವಾದ
“ನೀನು ನನ್ನ ಮಗನಾಗಿದ್ದಕ್ಕೆ ಸಾರ್ಥಕವಾಯಿತು ಮಗನೆ….” ಎಂದಾಗ. ನಿನ್ನ ಕಣ್ಣೊಳಗಿನ ಖುಷಿ ಕಂಡು ನನ್ನ ಜನ್ಮವು ಅಂದೆ ಸಾರ್ಥಕವಾಯಿತು ಅಪ್ಪ
ಎಲ್ಲರಂತಲ್ಲ ನನ್ನ ಅಪ್ಪ…..

ಅಪ್ಪ ನ್ಯಾಯ ನೀತಿ ಧರ್ಮಗಳ
ಪಾಲಕ ಪ್ರೀತಿ ಪ್ರೇಮಗಳ ಉಸಿರಲಿ
ಹೊತ್ತ ಧನಿಕ….!
ಅಪ್ಪ ಅವ್ವ… ನೀವಿಗ ನೆನಪು ಮಾತ್ರ
ನೀವು ನಡೆದ ಹೆಜ್ಜೆ ಗುರುತುಗಳೆ
ನಮಗಿಗ ದಾರಿದೀಪ….!

ಅಂಬಣ್ಣ ಬಟ್ಟಲ

Don`t copy text!