ನನ್ನಪ್ಪ ನನಗೆ ಸೈನಿಕ
ನನ್ನಪ್ಪ ನನಗೆ ಸೈನಿಕ,
ಜೀವನವೆಂಬೋ ಕುರುಕ್ಷೇತ್ರದಲ್ಲಿ
ಸೆಣಸಿ ವೀರಮರಣ ಹೊಂದಿದ ಹುತಾತ್ಮ.
ಹರಿದ ಅಂಗಿ ಬಣ್ಣದ ಲುಂಗಿ
ಮುಖದಮೇಲೆ ಮೂಡುತ್ತಿತ್ತು ನನಗಾಗೇ ಮಿಡಿಯುವ ಹೃದಯದ ಭಾವಭಂಗಿ.
ನನ್ನಪ್ಪನ ಒಳ್ಳೆಯತನಕ್ಕೆ ನೂರಾರು ಶತ್ರುಗಳು
ನನ್ನ ಬೆಳೆಸಲು ಮಾಡಿದ ನನ್ನಪ್ಪ ಅದೆಷ್ಟೋ ಪಾತ್ರಗಳು
ಹೊಲ ಮನಿ ಏನಿದ್ದರೂ, ಕಿರಿಯರ ಮುಂದೆಯೂ ಬರಲಿಲ್ಲ ಏರುದ್ವನಿ,
ನಯ ವಿನಯ ನ್ಯಾಯ ನನ್ನಪ್ಪನ ಆಸ್ತಿ
ಅದಕ್ಕೇನೋ ನನ್ನಪ್ಪನಿಗೆ ಆದೈವ ಕೊಡಲಿಲ್ಲ ಆಯಸ್ಸು ಜಾಸ್ತಿ.
ಅಪ್ಪ ಇಂದು ವಿಶ್ವ ಅಪ್ಪಂದಿರ ದಿನವಂತೆ,
ಈ ವಿಶ್ವಕ್ಕೆ ಪರಿಚಯಿಸಿದ ನೀನೇ ನನ್ನ ವಿಶ್ವ
ನಿನ್ನ ಹರಕೆ ಜೊತೆಗಿರೆ ನಾ ಸದಾ ಮುಂದೆ ಓಡುವ ಅಶ್ವ.
ಗರ್ಭದಲ್ಲೇ ಚಕ್ರವ್ಯೂಹ ಪ್ರವೇಶ ಹೇಳಿದ ಕೃಷ್ಣ ನೀನು.
ಭೇದಿಸಿ ನಿನಗೂ ಹೊರಬರಲಾಗಲಿಲ್ಲ
ನನಗೂ ಹೇಳಿಕೊಡಲಿಲ್ಲ.
ನಿನ್ನಷ್ಟು ಗೊತ್ತಿಲ್ಲ ನನಗೆ ಯುದ್ದದ ಪಟ್ಟುಗಳು,
ಅದಕ್ಕೇ ಮೇಲಿಂದ ಮೇಲೆ ಬೀಳುತ್ತಿವೆ ಪೆಟ್ಟುಗಳು.
ಯುದ್ದವನ್ನೇ ಮುಗಿಸಬಹುದು ಅರ್ಜುನನ ಆ ಪಾಶುಪತಾಸ್ತ್ರ
ಆದರೆ ಜೀವನವನ್ನೇ ಮುಗಿಸಿಬಿಡುತ್ತವೆ ಈ ಕಷ್ಟಕಾರ್ಪಣ್ಯಗಳೆಂಬ ಕಠಿಣಾಸ್ತ್ರ.
ಒಂದು ದಿನವೂ ನನ್ನ ರಣಾಂಗಣಕ್ಕೆ ಕರೆದೊಯ್ಯಲಿಲ್ಲ
ಎದೆ ಸೀಳುವ ಬಾಣಗಳ ನಡುಮುರಿಯುವ ಕಲೆಯ ಕಲಿಸಲಿಲ್ಲ.
ನಿನ್ನ ಚಿತ್ರ ನನ್ನೆದೆಯ ಬಿತ್ತಿಮೇಲೆ ಹಾಕಿ
ನಾನಾಗಲೇ ಏಕಲವ್ಯ?
ಪಟ್ಟುಗಳ ಕಲಿಸದೇ ಹೆಬ್ಬೆಟ್ಟು ಕೇಳುವ ದ್ರೋಣಾಚಾರ್ಯರ ಭಯ!
ಏನೇ ಆಗಲಿ ಅಪ್ಪ, ನೀ ಕಟ್ಟಿದ ಸಾಮ್ರಾಜ್ಯಕ್ಕೆ ನಾನೇ ವಾರಸುದಾರ
ಜೀವವಿರುವವರೆಗೆ ಹೋರಾಡುವ ಸರದಾರ
ಅಪ್ಪ ನೀನೇ ನನಗೆ ಮಾದರಿ
ನಿನ್ನಾದರ್ಶಗಳೇ ನನ್ನ ಜೀವನದ ಗುರಿ
ನೀ ಕಿಕ್ಕಿರಿದ ರಣಾಂಗಣದಿ ನುಗ್ಗಿದ ಒಂಟಿಸಲಗ,
ನಿನ್ನಿಂದಲೇ ಧರೆಗಿಳಿದ ನಾ ಮಾಡಲಾರೆನೇ ಕಾಳಗ?
–ಸುರೇಶ ಬಳಗಾನೂರು.