ರೈತಮಕ್ಕಳ ವರ್ಷದ ಮೊದಲ ಹಬ್ಬ ಕಾರಹುಣ್ಣಿಮೆ

ರೈತಮಕ್ಕಳ ವರ್ಷದ ಮೊದಲ ಹಬ್ಬ ಕಾರಹುಣ್ಣಿಮೆ

ವಿಶೇಷ ಲೇಖನ

ಭಾರತ ದೇಶ ಹಬ್ಬಗಳ ನಾಡು. ಸಂಸ್ಕೃತಿಯ ನೆಲೆವೀಡು. ಇಲ್ಲಿ ವರ್ಷಪೂರ್ತಿ ಒಂದರ ಹಿಂದೆ ಒಂದು ಹಬ್ಬಗಳು ಬರುತ್ತವೆ. ಹೀಗೆ ಬರುವ ಹಬ್ಬಗಳು ಮನೆಯಲ್ಲಿ ಸಡಗರದ ವಾತಾವರಣ ನಿರ್ಮಿಸುತ್ತವೆ. ಜನರು ಸದಾ ಚಟುವಟಿಕೆಯಿಂದ ಇರುವಂತೆ ಮಾಡುತ್ತವೆ. ಈ ಹಬ್ಬಗಳು ಜನರ ಮನಸ್ಸಿಗೆ ಮುದ ಕೊಡುವದರೊಂದಿಗೆ ಅವರನ್ನು ಸದಾ ಕ್ರಿಯಾಶೀಲರಾಗಿರುವಂತೆ ಮಾಡುತ್ತವೆ. ಅಂತ ಹಬ್ಬಗಳಲ್ಲಿ ಕಾರಹುಣ್ಣಿಮೆ ಸಹ ಒಂದು.
ಮುಂಗಾರು ಮಳೆಯ ಆರಂಭದಲ್ಲಿ ಬರುವ ಕಾರಹುಣ್ಣಿಮೆ ಕೃಷಿಕರು ಆಚರಿಸುವ ಹಬ್ಬಗಳಲ್ಲಿ ವರ್ಷದ ಮೊದಲ ಹಬ್ಬ.ಇದರ ಬೆನ್ನಹಿಂದೆ ಇತರ ಹಬ್ಬಗಳು ಪ್ರಾರಂಭವಾಗಿ ಅವು ಯುಗಾದಿಯವರೆಗೆ ಮುಂದುವರೆಯುತ್ತವೆ.ಹಾಗಾಗಿ ಜನಪದರು “ಕಾರಹುಣ್ಣಿಮೆ ಕರ್ಕೊಂಡು ಬಂದ್ರ ಯುಗಾದಿ ಗುಡಿಸಿಕೊಂಡು ಹೋಗ್ತದ” ಎಂದು ಹೇಳುತ್ತಾರೆ.

‘ಕಾರ್’ ಎಂದರೆ ಮಳೆಗಾಲ.ಕಾರಹುಣ್ಣಿಮೆ ಸಮಯದಲ್ಲಿ ಮುಂಗಾರಿನ ಮೋಡಗಳು ಕಪ್ಪಾಗಿ ಆಕಾಶದಲ್ಲಿ ಒಂದಕ್ಕೊಂದು ತಾಕಲಾಡುತ್ತಿರುತ್ತವೆ. ಮೋಡಗಳ ಈ ತಾಕಲಾಟವನ್ನು ಕೇಳಿ ನವಿಲುಗಳು ನರ್ತಿಸಲು ಆರಂಭಿಸುತ್ತವೆ. ಇದನ್ನೇ ಚಾಮರಸನು ತನ್ನ ‘ಪ್ರಭುಲಿಂಗಲೀಲೆ’ಯಲ್ಲಿ” ಕಾರ್ಮುಗಿಲ ಘರ್ಜನೆಯನ್ನು ಕೇಳಿದ ಸೊಗೆಯಂತೆ “ಎಂದು ವರ್ಣಿಸಿದ್ದಾನೆ. ಈ ವೇಳೆ ರೈತರು ತಾವು ಬೆಳೆದ ಬೆಳೆಯನ್ನು ಮಾರಿ ಸಾಲ ತೀರಿಸಿ ಮನೆ,ಹೊಲ,ಒಡವೆ ಖರೀದಿ ಮಾಡುವ ವೇಳೆಗೆ ಈ ಹಬ್ಬ ಬರುತ್ತದೆ. ಜೊತೆಗೆ ರೈತರು ತಮ್ಮ ಬಿತ್ತನೆ ಕಾರ್ಯವನ್ನು ಆರಂಭಿಸುವ ವೇಳೆಗೆ ಇದು ಬರುವುದರಿಂದ ಇದು ರೈತರಿಗೆ ಸಂತೋಷ ನೀಡುವ ಹಬ್ಬ. ಈ ಹಬ್ಬವನ್ನು ರೈತರು ಮೂರು ದಿನಗಳವರೆಗೆ ಆಚರಿಸುತ್ತಾರೆ.

ಹೊನ್ನುಗ್ಗಿ – ಕಾರಹುಣ್ಣಿಮೆ ಹಿಂದಿನ ದಿನವನ್ನು ಹೊನ್ನುಗ್ಗಿ ಎಂದು ಕರೆಯುತ್ತಾರೆ.ಇದು ಈ ಹಬ್ಬದ ಮೊದಲ ದಿನ. ತನ್ನ ಕೃಷಿ ಚಟುವಟಿಕೆಯಲ್ಲಿ ಉಪಯೋಗಿಸುವ ಪ್ರತಿಯೊಂದು ವಸ್ತುವನ್ನು ದೇವರೆಂದು ಭಾವಿಸುವ ರೈತರು ತಮ್ಮ ಕೃಷಿ ಚಟುವಟಿಕೆಯ ಮೂಲವಾದ ಎತ್ತುಗಳನ್ನು ದೇವರೆಂದು ತಿಳಿದು ಅವಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸುವ ದಿನ ಹೊನ್ನುಗ್ಗಿ. ಈ ದಿನ ರೈತರು ತಮ್ಮ ಎತ್ತು, ದನಗಳನ್ನೆಲ್ಲ ಊರಿನ ಕೆರೆ ಬಾವಿಗೆ ಒಯ್ದು ಅವುಗಳ ಮೈ ತೊಳೆಯುತ್ತಾರೆ. ಎತ್ತಿನ ಕೊಡಿಗೆ ಪಾಲಿಶ್ ಮಾಡಿ, ಬಣ್ಣ ಬಳಿದು, ಕೊರಳಿಗೆ ಗೆಜ್ಜೆಸರ ಹಾಕಿ, ಕೊಡಿಗೆ ರಿಬ್ಬನ್ ಕಟ್ಟಿ ಅವುಗಳನ್ನು ಶೃಂಗರಿಸುತ್ತಾರೆ.

ದನಕರುಗಳಿಗೆ ರೋಗ ಬಾರದಿರಲಿ ಮುಂದಿನ ಕೃಷಿ ಚಟುವಟಿಕೆಗಳಿಗೆ ಅವು ಅಣಿಯಾಗಲಿ ಎಂದು ಅವುಗಳಿಗೆ ಗುಟ್ಟಿ ಹಾಕುತ್ತಾರೆ ಹಿಂಡಿ ನುಚ್ಚು ಕಲಿಸಿ ತಿನಿಸುತ್ತಾರೆ.
ಸಾಯಂಕಾಲ ಮನೆಯ ಪಡಸಾಲೆಯಲ್ಲಿ ಕಂಬಳಿಯನ್ನು ಹಾಸಿ ಅದರ ಮೇಲೆ ಎತ್ತುಗಳನ್ನು ನಿಲ್ಲಿಸಿ ಅವುಗಳಿಗೆ ಪೂಜೆ ಸಲ್ಲಿಸಿ ಆರತಿ ಮಾಡುತ್ತಾರೆ. ಕೆಲವರು ಎತ್ತುಗಳ ಪಾದಕ್ಕೆ ಬಂಗಾರವನ್ನು ಮುಟ್ಟಿಸುತ್ತಾರೆ. ಅಂದಿನ ದಿನ ವಿಶೇಷವಾಗಿ ಜೋಳದ ಕಿಚಡಿಯನ್ನು ಮಾಡುತ್ತಾರೆ. ಜೋಳವನ್ನು ಕುಟ್ಟಿ ಅದರಲ್ಲಿ ಅರಿಶಿನ,ಅಡಿಕೆ,ಬೆಳ್ಳುಳ್ಳಿಯನ್ನು ಹಾಕಿ ಕುದಿಸಿ ಕಿಚಡಿ ತಯಾರಿಸುತ್ತಾರೆ.

ಜೋಳದಿಂದ ಮಾಡಿದ ಇದು ಅದರಲ್ಲಿ ಅರಿಶಿನ ಅಡಿಕೆ ಹಾಕುವುದರಿಂದ ಅದು ಬಂಗಾರದ ವರ್ಣಕ್ಕೆ ತಿರುಗುತ್ತದೆ. ಇದರಿಂದ ಅದಕ್ಕೆ ಹೊನ್ನುಗ್ಗಿ ಎಂದು ಕರೆಯುತ್ತಾರೆ. ಕೆಲವರು ಜೋಳ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಹುಗ್ಗಿಯನ್ನು ಎತ್ತುಗಳಿಗೆ ನೀಡುತ್ತಾರೆ. ಕಿಚಡಿಯನ್ನು ಎತ್ತುಗಳಿಗೆ ನೈವೇದ್ಯ ಮಾಡಿ ಅದನ್ನು ಅವುಗಳಿಗೆ ತಿನಿಸುತ್ತಾರೆ. ಎತ್ತುಗಳಿಗೆ ನಮಸ್ಕರಿಸಿ ಸಮೃದ್ಧಿಗಾಗಿ ಬೇಡಿಕೊಳ್ಳುತ್ತಾರೆ. ನಂತರ ಈ ಕಿಚಡಿಯನ್ನು ಮನೆಯವರೆಲ್ಲ ಊಟ ಮಾಡುತ್ತಾರೆ.
ಜನಪದರ ಹೇಳಿಕೆಯ ಪ್ರಕಾರ ಹೊನ್ನುಗ್ಗಿ ಆಚರಣೆ ಹಿಂದೆ ಒಂದು ಕಥೆ ಇದೆ. ಒಂದು ದಿನ ಶಿವನನ್ನು ಮುಟ್ಟಿಸಬೇಕಾದ ಸ್ಥಳಕ್ಕೆ ನಿರ್ದಿಷ್ಟವಾದ ಸಮಯದಲ್ಲಿ ನಂದಿ ಶಿವನನ್ನು ಮುಟ್ಟಿಸಿದ್ದರಿಂದ ಅವನ ಮೇಲೆ ಪ್ರೀತಿಗೊಂಡ ಶಿವನು ಅಂದು ಅವನ ಆತಿಥ್ಯಕ್ಕಾಗಿ ಗಿರಿಜೆಗೆ ಹುಗ್ಗಿ ತಯಾರಿಸಲು ಹೇಳುತ್ತಾನೆ. ಗಿರಿಜೆ ಹುಗ್ಗಿಯನ್ನು ತಯಾರಿಸುವಾಗ ಅವಳ ಕೈಯಲ್ಲಿದ್ದ ಹೊನ್ನಿನ ಉಂಗುರ ಜಾರಿ ಅವಳು ತಯಾರಿಸುತ್ತಿದ್ದ ಹುಗ್ಗಿಯಲ್ಲಿ ಬಿಳುತ್ತದೆ. ಇದರಿಂದ ಆ ದಿನ ಹೊನ್ನಿನ ಹುಗ್ಗಿ ತಯಾರಾಗುತ್ತದೆ. ಹೀಗೆ ಗಿರಿಜೆಯಿಂದ ಹೊನ್ನಿನ ಹುಗ್ಗಿ ತಯಾರಾದ ದಿನವೇ ಹೊನ್ನುಗ್ಗಿ ಆಯಿತು.

ಪ್ರತಿವರ್ಷ ಆ ದಿನವನ್ನು ಹೊನ್ನುಗ್ಗಿಯಾಗಿ ಆಚರಿಸುವ ಪದ್ಧತಿ ಬಂದಿತೆಂದು ಹೇಳಲಾಗುತ್ತದೆ.ಅದರಿಂದ ಈ ದಿನದಂದು ಜೋಳದ ಹುಗ್ಗಿ ಅಥವಾ ಕಿಚಡಿಯನ್ನು ತಯಾರಿಸಿ ಎತ್ತುಗಳಿಗೆ ತಿನ್ನಿಸುವ ಪರಂಪರೆ ಬೆಳೆದು ಬಂತೆಂದು ಜನಪದರು ಹೇಳುತ್ತಾರೆ.
ಕಾರಹುಣ್ಣಿಮೆ- ಹೊನ್ನುಗ್ಗಿ ಮರುದಿನ ಕಾರಹುಣ್ಣಿಮೆ.ಅಂದು ಎತ್ತುಗಳನ್ನು ಶೃಂಗರಿಸಿ ಊರಲ್ಲಿ ಮೆರವಣಿಗೆ ಮಾಡುತ್ತಾರೆ. ಬೇವಿನ ಸೊಪ್ಪು ಮತ್ತು ಕೊಬ್ಬರಿ ಬಟ್ಟಲನ್ನು ಹೆಣೆದು ಸರಮಾಡಿ ಮಾಡಿ ಊರ ಅಗಸೆಯ ಬಾಗಿಲಿಗೆ ಕಟ್ಟುತ್ತಾರೆ.ಅದನ್ನು ಕರಿ ಎನ್ನುತ್ತಾರೆ‌ ನಂತರ ಗ್ರಾಮಸ್ಥರೆಲ್ಲ ಊರಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿ ಊರ ಪ್ರಮುಖರು ಸೇರಿ ಒಂದೊಂದು ಕರಿ ಮತ್ತು ಬಿಳಿ ಎತ್ತುಗಳನ್ನು ಆಯ್ಕೆಮಾಡುತ್ತಾರೆ.ನಂತರ ಕರಿ ಮತ್ತು ಬಿಳಿ ಎತ್ತುಗಳನ್ನು ಅದರ ಹಿಂದೆ ಉಳಿದೆಲ್ಲ ಎತ್ತುಗಳನ್ನು ಊರಲ್ಲಿ ಓಡಿಸುತ್ತಾರೆ. ಊರ ಅಗಸಿಯಲ್ಲಿ ಕಟ್ಟಿದ ಕರಿಯನ್ನು ಯಾವ ಎತ್ತು ಮೊದಲು ಹರಿಯುತ್ತದೆ ಅದರ ಮೇಲೆ ಮುಂದಿನ ಮಳೆ ಬೆಳೆಯನ್ನು ನಿರ್ಧಾರ ಮಾಡುತ್ತಾರೆ. ಕರಿ ಎತ್ತು ಮೊದಲು ಬಂದರೆ ಮುಂಗಾರು ಮಳೆಬೆಳೆ, ಬಿಳಿ ಎತ್ತು ಮೊದಲು ಬಂದರೆ ಹಿಂಗಾರು ಮಳೆಬೆಳೆ ಉತ್ತಮ ಬರುತ್ತದೆ ಎಂದು ಹೇಳುತ್ತಾರೆ. ಈ ಎತ್ತುಗಳ ಓಡುವಿಕೆ ಮೇಲೆ ರೈತರು ಮುಂದಿನ ಮಳೆಬೆಳೆ ಭವಿಷ್ಯವನ್ನು ನಿರ್ಧರಿಸುತ್ತಾರೆ


ಹುಣ್ಣಿಮೆಯ ಮರುದಿನ ಅಂದರೆ ಮೂರನೇಯ ದಿನ ಕರಿ. ಇಂದು ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಇಂದು ವಿಶೇಷವಾಗಿ ಸಿಹಿಗಾರಿಗೆ,ಖಾರದಗಾರಿಗೆ, ಕರ್ಚಿಕಾಯಿ ಮುಂತಾದ ಕರಿದ ತಿಂಡಿಗಳನ್ನು ತಯಾರಿಸುತ್ತಾರೆ. ಇದನ್ನು ಹೆಣ್ಣುಮಕ್ಕಳಿಗೂ, ಬೀಗರಿಗೂ ಕೊಟ್ಟು ಕಳಿಸುವ ಸಂಪ್ರದಾಯವಿದೆ.
ಹೊನ್ನುಗ್ಗಿಯಿಂದ ಕರಿಯವರೆಗೆ ಮೂರು ದಿನ ರೈತರು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಕೃಷಿ ಚಟುವಟಿಕೆ ಆರಂಭದ ಮುನ್ನುಡಿಯಾಗಿದೆ. ಈ ಹಬ್ಬ ಕೇವಲ ಆಚರಣೆ ಮಾತ್ರವಾಗಿರದೆ ಇದರ ಹಿಂದೆ ಒಂದು ಸದುದ್ದೇಶವನ್ನು ಹೊಂದಿದೆ. ಮಳೆಗಾಲ ಮನುಷ್ಯ ಮತ್ತು ಪ್ರಾಣಿಗಳಿಗೆ ರೋಗ ತರುವ ಕಾಲ.

ಮಳೆಗಾಲದಿಂದ ಬರುವ ರೋಗ ರುಜಿನಗಳನ್ನು ಬಾರದಂತೆ ತಡೆಯುವುದು ಅವಶ್ಯಕ. ಕಾಲಕ್ಕೆ ತಕ್ಕಂತೆ ಆಹಾರ ಪದಾರ್ಥಗಳ ಸೇವನೆಯನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ದೇಹವನ್ನು ಗಟ್ಟಿಗೊಳಿಸಿಕೊಂಡಾಗ ಇಂತಹ ರೋಗಿಗಳನ್ನು ತಡೆಯಬಹುದು.ಮಳೆಗಾಲಕ್ಕೆ ತಕ್ಕಂತೆ ಶಾಖ ಮತ್ತು ಕೊಬ್ಬುಯುಕ್ತ ಜೊತೆಗೆ ರೋಗನಿರೋಧಕ ಶಕ್ತಿ ಹೊಂದಿರುವ ಜೋಳ,ಎಣ್ಣೆ,ಬೆಲ್ಲ,ಅರಿಶಿನ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಮಳೆಗಾಲದಲ್ಲಿ ನಮ್ಮ ದೇಹವನ್ನು ರೋಗಗಳಿಂದ ರಕ್ಷಣೆ ಮಾಡಿಕೊಳ್ಳಬಹುದು.ನಾವು ಕೇವಲ ನಮ್ಮ ರಕ್ಷಣೆಯನ್ನಷ್ಟೆ ಮಾಡಿಕೊಂಡರೆ ಸಾಲದು. ನಮ್ಮ ಬದುಕಿಗೆ ಆಸರೆಯಾದ ಪ್ರಾಣಿಗಳನ್ನು ರಕ್ಷಿಸಬೇಕು.

ಆ ಕಾರಣಕ್ಕಾಗಿ ನಮ್ಮೊಂದಿಗೆ ನಮ್ಮ ಪ್ರಾಣಿಗಳನ್ನು ರೋಗಗಳಿಂದ ಮುಕ್ತಗೊಳಿಸುವ ಇಂತಹ ಒಂದು ಹಬ್ಬವನ್ನು ನಮ್ಮ ಹಿರಿಯರು ಆಚರಣೆಗೆ ತಂದರು.ನಮ್ಮ ಹಿರಿಯರ ಪ್ರತಿಯೊಂದು ಆಚರಣೆಯ ಹಿಂದೆ ಒಂದು ಸಕಾರಾತ್ಮಕ ಉದ್ದೇಶ ಇರುತ್ತದೆಂಬುದನ್ನು ಈ ಹಬ್ಬ ನಮಗೆ ಸ್ಪಷ್ಟಪಡಿಸುತ್ತದೆ.

-ಡಾ.ರಾಜೇಶ್ವರಿ ಶೀಲವಂತ
ಬೀಳಗಿ

Don`t copy text!