ಎಕಿಷ್ಟು ಅವಸರ
ಚೈತ್ರದಾ ಚಿಗುರು ನೀನು
ಚಿಗುರು ಕಳೆದು ಹೂವರಳಿ
ಪರಾಗ ಸ್ಪರ್ಶದಿ ಕಾಯಾಗಿ ||
ಕಾಯಿ ಮಾಗಿ ಹಣ್ಣಾಗಿ
ಹಣ್ಣು ತೊಟ್ಟು ಬಿಟ್ಟು ಕಳಚಿ
ಫಲಕೊಟ್ಟ ಬೀಜವದು ||
ಮಣ್ಣು ಸೇರಿ ಮೊಳಕೆಯೊಡೆದು
ಹೆಮ್ಮೆಯಿಂದ ಬೀಗುವುದು
ಹೆಮ್ಮರವಾ ಬೆಳೆಸುವದು||
ಏನಿದು ಅಚ್ಚರಿ
ಮಣ್ಣ ಸ್ನೇಹ ಬಯಸದೆ
ಹಣ್ಣಿನಲ್ಲೆ ಮೊಳಕೆಯೊಡೆದೆ ||
ಚೈತ್ರ ನಾಚುವಂತೆ
ಚಿಗುರೆಲೆಯ ಹೊಮ್ಮಿಸಿದೆ
ಅಚ್ಚರಿಯ ಮೂಡಿಸಿದೆ ||
ಎಕಿಷ್ಟು ಅವಸರ
ಕಾಯಬೇಕಿತ್ತು ನೀನು
ಹಣ್ಣು ಮಾಗಿ ಮಣ್ಣು ಸೇರುವವರೆಗೆ||
ಆಧುನಿಕತೆಯ ಗಾಳಿ
ನಿನ್ನನ್ನು ಆವರಿಸಿತೆ
ಅಭಿವೃದ್ಧಿಯ ನೆಪದಲ್ಲಿ
ಪ್ರಕೃತಿಯ ವಿರುದ್ಧ ಬೇಡಾ ||
–ಸವಿತಾ ಮಾಟೂರು, ಇಲಕಲ್ಲ