ಇಬ್ಬನಿಗೊರಳು
ಸೂರ್ಯನುರಿಬಿಸಿಯ
ಕಿರಣಗಳು ಮೈ ತಾಕಲು
ಕಡಲು ನಿಡುಸುಯ್ದು
ಏರಿತೇರಿತು ಆವಿಯಾಗಿ!
ಮೇಲೆ ಮೇಲೇರಿದೆತ್ತರಕೆ
ಮೇಲೆ ಮುಗಿಲೆ ಮೇರೆ
ಮೋಡ ಕಂಡವು ಗಾಳಿಗೆ
ನೀರ್ಗೊಂಡ ಬಾವಿಯಾಗಿ!
ಅದೆಲ್ಲಿಂದಲೋ ಬೀಸಿದ
ಮಾರುತಕೆ ಬೆದರಿಬೆಚ್ಚಿ
ಕರಿಯ ಚಾದರವನೆ
ಹೊದ್ದೆವು ಎಲ್ಲ ಕೂಡಿ!
ನಭದ ತುಂಬೆಲ್ಲ ಫಳಫಳ
ಹೊಳೆವ ಕೋಲ್ಮಿಂಚು
ಗುಡುಗು ಸಿಡಿಲಿನಾರ್ಭಟ
ಕೆ ಬೆಚ್ಚಿತು ಜೀವನಾಡಿ!
ಧೋ ಎಂದು ಸುರಿದ
ಭರಕೆ ಇಳೆ ತುಂಬ ಹೊಳೆ
ಜನಜೀವನ ಸ್ತಬ್ಧ ಒಳ
ಗೊಳಗೇ ಮಂತ್ರಮುಗ್ಧ!
ಹುಚ್ಚುಹಿಡಿದು ನೀರುಂಡ
ನೆಲಕೆ ಬೆಚ್ಚನೆಯ ಮುಗಿಲು
ನಲಿದಾಡೊ ಖಗಮೃಗಕೆ
ಬುವಿಯದೊ ದಿವ್ಯ ಸ್ವರ್ಗ!
ಇಂತಾದ ಸೊಂಪಿನಲಿ
ನಕ್ಕುನಲಿದ ನವಿರುಸಿರು
ಮುದದಿ ಮೇಲಕೆ ಸಾಗಿ
ನೀಲಿ ಗಗನ ಮೆಲ್ಲ ತಾಗಿ!
ಧರಣಿಯೆಡೆ ಹೊರಟಿತು
ಇರುಳಿನಲಿ ಮತ್ತೆ ಹನಿಪಡೆ
ಬೆಳ್ಳಿರಂಗಲಿ ಹಬ್ಬಗೊಂಡವು
ಮಂಜು ಕಣವಾಗಿ!
ರೆಂಬೆ ಕೊಂಬೆಗಳಲೆಲ್ಲ
ನವಚೈತನ್ಯ ನವೋಲ್ಲಾಸ
ಕಚ್ಚಿಕೊಂಡವು ಎಲೆ ಮೊಗ್ಗು
ಗಳು ಕಣ್ಣಗೊಂಬೆಯಾಗಿ!
ಕಂಡವರ ಕಣ್ಮಣಿಯಾಗಿ
ರುವುದೆ ಬಲು ಸೊಗಸು
ಕವಿಕಂಡ ಭಾಗ್ಯ ನನದು
ಮೂಡಿದೆ ಕವಿತೆಯಾಗಿ!
– ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301
🌠9448591167