ವಚನ ಸಂಪತ್ತನ್ನು ಉಳಿಸಿಕೊಟ್ಟ ಮಹಾನುಭಾವ ಡಾ.ಫ.ಗು ಹಳಕಟ್ಟಿ

ವಚನ ಸಂಪತ್ತನ್ನು ಉಳಿಸಿಕೊಟ್ಟ ಮಹಾನುಭಾವ ಡಾ.ಫ.ಗು ಹಳಕಟ್ಟಿ

(ಡಾ. ಫ. ಗು ಹಳಕಟ್ಟಿ ಅವರ ೧೪೦ ನೆಯ ಜನ್ಮದಿನದ ಪ್ರಯುಕ್ತ)

ಸಮಾಜ ಸುಧಾರಣೆಯ ಉದ್ದೇಶದಿಂದ ಶರಣರಿಂದ ರಚನೆಗೊಂಡ ವಚನಗಳು ನಮ್ಮ ನಾಡಿನ ಅಮೂಲ್ಯ ನಿಧಿಗಳಾಗಿವೆ.ವಚನಗಳು ೧೨ ನೇಯ ಶತಮಾನದಲ್ಲಿ ರಚನೆಗೊಂಡರು ಅವುಗಳಲ್ಲಿರುವ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ.ಸರ್ವಕಾಲಕ್ಕು ಅನ್ವಯವಾಗುವ ನೈತಿಕ ತತ್ವಗಳನ್ನು ಶರಣರ ವಚನಗಳು ಒಳಗೊಂಡಿವೆ.

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರಿಂದ ರಚನೆಗೊಂಡ ಇಂತಹ ಅನೇಕ ವಚನಗಳು ನಾಶಗೊಂಡವು.ಅಳಿದುಳಿದ ವಚನಗಳನ್ನು ಸಂರಕ್ಷಿಸುವ ಕಾರ್ಯ ತರುವಾಯ ಪ್ರಾರಂಭವಾಯಿತು. ಆ ಕಾರ್ಯ ೧೨ ನೆಯ ಶತಮಾನದಿಂದ ೨೧ ನೆಯ ಶತಮಾನದವರೆಗೆ ಅವ್ಯಾಹತವಾಗಿ ನಡೆದಿದೆ.ಇಂತಹ ಅಮೂಲ್ಯವಾದ ಸಂಪತ್ತನ್ನು ಉಳಿಸಿಕೊಟ್ಟ ಮಹಾನುಭಾವರಲ್ಲಿ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಪ್ರಮುಖರು.

ಜನನ ಶಿಕ್ಷಣ ಮತ್ತು ವೃತ್ತಿ
ವಚನ ಪಿತಾಮಹ ಎಂದೆ ಹೆಸರಾಗಿದ್ದ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಜನಿಸಿದ್ದು ೧೮೮೦ ರ ಜುಲೈ ೨ ರಂದು ಧಾರವಾಡದ ನೇಕಾರ ಕುಟುಂಬದಲ್ಲಿ. ತಂದೆ ಗುರುಬಸಪ್ಪ, ತಾಯಿ ದಾನಮ್ಮ. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು, ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು.

ಗುರುಬಸಪ್ಪನವರು ಇಂಗ್ಲೆಂಡ್ ದೇಶದ ಇತಿಹಾಸ, ಏಕನಾಥ ಸಾಧುಗಳ ಚರಿತ್ರೆ, ಚಿಂತಾಮಣಿ ಅಥವಾ ಟ್ಯಾಲಿಸ್ಮನ್,ಡ್ಯೂಕ್ ಆಪ್ ವೆಲ್ದಿಂಗ್ ದೇಶಗಳ ಚರಿತ್ರೆ, ನಿಜವಾದ ವೀರನು ಅಥವಾ ಜಗಮಲ್ಲನು,ನೆಪೋಲಿಯನ್ ಬೊನಾಪಾರ್ಟಿಯ ಚರಿತ್ರೆ, ಪ್ರಾನ್ಸ್ ದೇಶದ ರಷ್ಯಾ ಕ್ರಾಂತಿ, ಭೂಮಿತಿಯ ಸುತ್ತ,ಸಿಕಂದರ್ ಬಾದಷಹನ್ ಚರಿತ್ರೆ ಇತ್ಯಾದಿ ಕೃತಿಗಳನ್ನು ರಚಿಸಿದ್ದರು. ಜೊತೆಗೆ ಸಮಕಾಲೀನ ನಿಯತ ಪತ್ರಿಕೆಗಳಾದ ಕರ್ನಾಟಕ ವೃತ್ತಿ, ಮೈಸೂರು ಸ್ಟಾರ್, ವಾಗ್ಭೂಷಣ,ಲೋಕಶಿಕ್ಷೆ ಮುಂತಾದವುಗಳ ಪ್ರಮುಖ ಲೇಖಕರಾಗಿದ್ದರು. ಹೀಗಾಗಿ ತಂದೆಯ ಈ ಸಾಹಿತ್ಯದ ಅಭಿರುಚಿ ಮಗನನ್ನು ತನ್ನತ್ತ ಸೆಳೆಯಿತು.

ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಫಕೀರಪ್ಪನವರು ಅಜ್ಜಿ ಬಸಮ್ಮನ ಆಶ್ರಯದಲ್ಲಿ ಬೆಳೆದರು. ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮುಗಿಸಿದರು. ೧೮೯೬ ರಲ್ಲಿ ಮ್ಯಾಟ್ರಿಕ್ ಮುಗಿಸಿ ಮುಂಬಯಿನ ಸೆಂಟ್ ಝೆವ್ಹಿಯರ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಅಲ್ಲಿ ಅಧ್ಯಯನ ಮಾಡುವಾಗ ೧೫೦೦ ವರ್ಷಗಳ ಹಿಂದಿನ ಕನ್ನಡ ಸಾಹಿತ್ಯ ಇತ್ತೀಚಿನ ಗುಜರಾತಿ, ಮರಾಠಿ ಸಾಹಿತ್ಯಗಳಿಗಿಂತ ಹಿಂದೆ ಬಿದ್ದಿರುವುದು ಮತ್ತು ಗುಜರಾತಿ, ಮರಾಠಿ ಜನರ ಭಾಷಾಭಿಮಾನ ,ಕನ್ನಡಿಗರ ಭಾಷಾ ನಿರಭಿಮಾನ ಅವರಿಗೆ ನೋವನ್ನು ಉಂಟುಮಾಡಿತು.

ಆಗಲೇ ಕನ್ನಡ ಸಾಹಿತ್ಯ ಉದ್ಧರಿಸುವ ಸಂಕಲ್ಪ ಮಾಡಿದರು. ಆಗ ಅವರಿಗೆ ಸಹಪಾಠಿ ಆಗಿದ್ದವರು ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು. ಇಬ್ಬರೂ ಸೇರಿ ಕರ್ನಾಟಕ ಏಕೀಕರಣದ ಕನಸು ಕಂಡರು.

೧೯೦೪ ರಲ್ಲಿ ಕಾನೂನು ಪದವಿಯನ್ನು ಪಡೆದ ಫಕೀರಪ್ಪನವರು ಧಾರವಾಡದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಎಂ ಎ ಪದವಿಗೆ ಕಟ್ಟಿದ್ದರು ಕಾರಣಾಂತರದಿಂದ ಪರೀಕ್ಷೆಗೆ ಹಾಜರಾಗಲಿಲ್ಲ‌.ನಂತರ ತಮ್ಮ ವೃತ್ತಿಯನ್ನು ವಿಜಯಪುರಕ್ಕೆ ಬದಲಾಯಿಸಿದರು. ಬನಹಟ್ಟಿಯ ಚಿಕ್ಕೋಡಿ ತಮ್ಮಣ್ಣಪ್ಪನವರ ಮಗಳು ಭಾಗೀರಥಿ ಯನ್ನು ಮದುವೆಯಾಗಿ ವಿಜಯಪುರದಲ್ಲಿಯೆ ನೆಲಸಿದರು.ಅವರ ದಕ್ಷ ವಕೀಲಿ ವೃತ್ತಿಯನ್ನು ನೋಡಿದ ಸರ್ಕಾರ ಅವರಿಗೆ ಪಬ್ಲಿಕ್ ಪ್ರಾಸಿಕ್ಯುಟರ್ ಅಥವಾ ಸರಕಾರಿ ಪ್ಲೊಡರ್ ಎಂದು ನೇಮಕ ಮಾಡುತ್ತದೆ. ಆದರೆ ಆ ವೇಳೆಗಾಗಲೇ ವಚನ ಸಾಹಿತ್ಯದ ಮಾಂತ್ರಿಕ ಶಕ್ತಿಯ ಸೆಳೆತಕ್ಕೊಳಗಾಗಿದ್ದ ಫಕೀರಪ್ಪನವರು ತಮ್ಮ ಯಾಂತ್ರಿಕ ವಕೀಲಿ ವೃತ್ತಿಯಿಂದ ನಿವೃತ್ತಿ ಪಡೆದು ವಚನ ಸಾಹಿತ್ಯದ ಸೇವೆಗೆ ನಿಲ್ಲುತ್ತಾರೆ.

ವಚನ ಸಾಹಿತ್ಯದ ಸೇವೆ
ಹಳಕಟ್ಟಿಯವರಿಗೆ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿಯೆ ಹಸ್ತಪ್ರತಿ ವಾಚನದ ಹವ್ಯಾಸ ಬೆಳೆಯಿತು. ೧೯೦೩ ರಲ್ಲಿ ಅವರು ಧಾರವಾಡದ ಶಿವಲಿಂಗಪ್ಪ ಮಂಚಾಲಿ ಅವರ ಮನೆಯಲ್ಲಿ ಷಟಸ್ಥಲ ತಿಲಕ ಮತ್ತು ವಚನ ತಾಡೋಲೆ ಗ್ರಂಥಗಳ ದೊಡ್ಡ ಸಮುದಾಯವನ್ನು ಕಾಣುತ್ತಾರೆ. ಇಲ್ಲಿಯವರೆಗೆ ಕಾಗದದ ಕಟ್ಟುಗಳನ್ನು ಮಾತ್ರ ಕಂಡಿದ್ದ ಅವರು ಇಲ್ಲಿರುವ ತಾಳೆಗರಿ ಕಟ್ಟುಗಳನ್ನು ಕಂಡ ತಕ್ಷಣ ಅವರಲ್ಲಿ ವಚನ ಸಂಗ್ರಹಣೆಯ ಆಸಕ್ತಿ ಮೊಳಕೆಯೊಡೆಯುತ್ತದೆ.ಅಂದಿನಿಂದ ವಚನಗಳ ಸಂಗ್ರಹಣೆಗೆ ತೊಡಗುತ್ತಾರೆ. ಆ ವೇಳೆಗಾಗಲೇ ಅನೇಕ ವಚನಗಳು ನಾಶವಾಗಿದ್ದವು.ಜನರು ನಿರ್ಲಕ್ಷದಿಂದ ಅವುಗಳನ್ನು ಪೂಜೆಸಿದ್ದರಿಂದ ,ಊರವಲಾಗಿ ಅವುಗಳನ್ನು ಬಳಕೆ ಮಾಡಿದ್ದರಿಂದ ಎಷ್ಟೋ ವಚನಗಳ ಹಸ್ತಪ್ರತಿಗಳು ನಾಶವಾಗಿದ್ದರೆ ,ಉಳಿದವುಗಳು ಅವಸಾನದ ಅಂಚನ್ನು ತಲುಪಿದ್ದವು.ವಚನ ಸಾಹಿತ್ಯದ ಈ ದಯನೀಯ ಸ್ಥಿತಿಯನ್ನು ಕಂಡ ಫಕೀರಪ್ಪನವರು ವಚನ ಸಾಹಿತ್ಯದ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತರು.ಊರೂರು ಅಲೆದಾಡಿ ಜನರಿಂದ ಕಾಡಿಬೇಡಿ ವಚನ ಕಟ್ಟುಗಳನ್ನು ತಂದರು.ವಚನಗಳ ಸಂಗ್ರಹಣೆಗಾಗಿ ಅವರು ಅಲೆದಾಡದ ಊರೂಗಳಿಲ್ಲ.ತಡಕಾಡದ ಕೇರಿಗಳಿಲ್ಲ. ಹೀಗೆ ಅಲೆದಾಡಿ ೧೯೨೦ ರ ವೇಳೆಗೆ ಸುಮಾರು ೧೭ ವರ್ಷಗಳಲ್ಲಿ ಸುಮಾರು ೧೦೦೦ ವಚನ ಕಟ್ಟುಗಳನ್ನು ಸಂಗ್ರಹಿಸಿದರು.

‌ ಹೀಗೆ ವಚನಗಳನ್ನೆನೋ ಸಂಗ್ರಹಿಸಿದರು.ಆದರೆ ಸಂಗ್ರಹಿಸಿದ ಬಹುತೇಕ ವಚನಗಳು ಅವಸಾನದ ಸ್ಥಿತಿಯನ್ನು ತಲುಪಿದ್ದವು.ಆಗ ಆ ವಚನಗಳನ್ನು ಸಂರಕ್ಷಿಸುವುದು, ಕಾಗದದಲ್ಲಿ ಬರೆಯುವದು,ಅವುಗಳನ್ನು ವಿಂಗಡಿಸುವುದು, ಕಠಿಣ ವಚನಗಳಿಗೆ ಟೀಕು ಬರೆಯುವದು ಅವಶ್ಯಕವಾಗಿತ್ತು. ಇಲ್ಲಿಯವರೆಗೆ ವಚನಗಳ ಸಂಗ್ರಹಣೆಯ ಜವಾಬ್ದಾರಿ ಹೊತ್ತಿದ್ದ ಇವರು ಈ ಜವಾಬ್ದಾರಿಯನ್ನು ತಮ್ಮ ಹೆಗಲೆರಿಸಿಕೊಂಡರು. ಸಂಗ್ರಹಿಸಿದ ವಚನಗಳನ್ನು ಸಂರಕ್ಷಿಸಿ, ಅವುಗಳನ್ನು ಕಾಗದದಲ್ಲಿ ಬರೆದು, ಅವುಗಳನ್ನು ವಿಭಾಗಿಸಿ, ಕಠಿಣ ವಚನಗಳಿಗೆ ಟೀಕು ಸಹ ಬರೆಯುತ್ತಾರೆ. ಹೀಗೆ ಒಂದು ವಿಶ್ವವಿದ್ಯಾಲಯ ಮಾಡಬಹುದಾಗಿದ್ದ ಕೆಲಸವನ್ನು ಹಳಕಟ್ಟಿಯವರು ಒಬ್ಬರೆ ಸಾಧಿಸಿ ಸಾರ್ಥಕತೆ ಮೆರೆಯುತ್ತಾರೆ.ಇವರ ಈ ಸಾಧನೆಯಿಂದಲೆ ” ಕನ್ನಡಕೊಬ್ಬನೇ ಜಟ್ಟಿ ಹಳಕಟ್ಟಿ ” ಎಂದು ಖ್ಯಾತರಾಗುತ್ತಾರೆ.

ಇವರು ಹಗಲಿರುಳು ಶ್ರಮವಹಿಸಿ ಮಾಡಿದ ಸಂಶೋಧನೆಯಿಂದ ೧೯೨೧ ರಲ್ಲಿ ” ವಚನಶಾಸ್ತ್ರಸಾರ ಭಾಗ-೧ ” ಸಿದ್ದಗೊಳ್ಳುತ್ತದೆ. ಆಗ ವಿಷಮಶೀತ ಜ್ವರದಿಂದ ನರಳುತ್ತಿದ್ದರು ಮಲಗಿಕೊಂಡೆ ಹೊಟ್ಟೆಯ ಮೇಲೆ ರಟ್ಟನಿಟ್ಟುಕೊಂಡು ವಚನಶಾಸ್ತ್ರಸಾರ ಭಾಗ ೧ ನ್ನು ಸಿದ್ದಪಡಿಸುತ್ತಾರೆ. ಇದನ್ನು ಪ್ರಕಟಗೊಳಿಸಲು ೫೦೦ ರೂಪಾಯಿ ಮುಂಗಡ ಹಣದೊಂದಿಗೆ ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ ಗೆ ಕೊಟ್ಟು ಕಳುಹಿಸುತ್ತಾರೆ. ಆದರೆ ಅವರು “ನಿಮ್ಮ ಧರ್ಮದ ತತ್ವಗಳಿಗೂ ನಮ್ಮ ಧಾರ್ಮಿಕ ಗ್ರಂಥಗಳಿಗೂ ಹೋಲಿಕೆ ಇರುವುದರಿಂದ ನಮ್ಮ ಮಿಶನರಿ ಉದ್ದೇಶಕ್ಕೆ ಧಕ್ಕೆ ಬರುತ್ತದೆ .ಕ್ಷಮಿಸಿರಿ” ಎಂದು ಪ್ರಕಟಿಸಲು ನಿರಾಕರಿಸಿ ಪತ್ರ ಕಳುಹಿಸುತ್ತಾರೆ. ಇದರಿಂದ ಬೇಸರಗೊಂಡರು ಉತ್ಸಾಹ ಕಳೆದುಕೊಳ್ಳದ ಫಕೀರಪ್ಪನವರು ಬೆಳಗಾವಿಯ ಚೌಗಲೆ ಅವರ ಮಹಾವೀರ ಮುದ್ರಣಾಲಯದಲ್ಲಿ ಅದನ್ನು ಪ್ರಕಟಿಸುತ್ತಾರೆ.

ವಚನ ಸಾಹಿತ್ಯದ ಪ್ರಕಟಣೆಗಾಗಿ ಮುದ್ರಣಾಲಯದ ಸ್ಥಾಪನೆ
ವಚನಗಳ ಸಂಗ್ರಹಿಸಿದ ನಂತರ ಅವುಗಳ ಸಂರಕ್ಷಣೆಗಾಗಿ ಅವುಗಳನ್ನು ಪ್ರಕಟಣೆ ಮಾಡುವದು ಹಳಕಟ್ಟಿಯವರಿಗೆ ಅನಿವಾರ್ಯವಾಗುತ್ತದೆ. ಆದರೆ ವಚನಶಾಸ್ತ್ರಸಾರ ಪ್ರಕಟಣೆ ಸಂದರ್ಭದಲ್ಲಿ ಅನುಭವಿಸಿದ ತೊಂದರೆಗಳನ್ನು ನೆನೆದು ವಚನಗಳ ಪ್ರಕಟಣೆಗಾಗಿ ಮುದ್ರಣಾಲಯ ಸ್ಥಾಪನೆ ಅವಶ್ಯಕ ಎಂದು ಮನಗಾಣುತ್ತಾರೆ.ಅದಕ್ಕಾಗಿ ತಮ್ಮ ಸ್ವಂತ ಮನೆಯನ್ನು ಮಾರಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡು ಅದೆ ಹಣದಿಂದ ” ಹಿತಚಿಂತಕ “ಮುದ್ರಣಾಲಯ ಸ್ಥಾಪಿಸುತ್ತಾರೆ. ಕರ್ನಾಟಕದಲ್ಲಿ ಕೇವಲ ಸಂಶೋಧನೆ ಪ್ರಕಟಣೆಗಾಗಿ ಸ್ಥಾಪಿಸಿದ ಮುದ್ರಣಾಲಯ ಎಂಬ ಹೆಮ್ಮೆ ಇದರದು.ಅಲ್ಲಿಂದ ಹಳಕಟ್ಟಿಯವರಿಂದ ವಚನ ಸಾಹಿತ್ಯ ಕೃತಿಗಳ ಪ್ರಕಟಣೆಯ ಸುರಿಮಳೆಯೆ ನಡೆದು ವಚನ ಸಾಹಿತ್ಯದಲ್ಲಿ ಬಹುದೊಡ್ಡ ಕ್ರಾಂತಿಯೆ ಉಂಟಾಯಿತು.ತಾವು ಸಂಗ್ರಹಿಸಿದ ಎಲ್ಲಾ ವಚನಗಳನ್ನು ಪ್ರಕಟಗೊಳಿಸುತ್ತಾರೆ.

ಶ್ರೀ ಫ.ಗು ಹಳಕಟ್ಟಿಯವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನ ಸಾಹಿತ್ಯ ಕೃತಿಗಳು ೧೭೫ ಕ್ಕೂ ಹೆಚ್ಚು. ಇವರು ಶಿವಶರಣರ ವಚನಗಳ ಪ್ರಕಟಣೆಯಿಂದ ಕೈತೊಳೆದುಕೊಳ್ಳಲಿಲ್ಲ.ಅವರ ಧ್ಯೇಯಾದರ್ಶಗಳು ನಾಡಿಗೆ ಮಾರ್ಗದರ್ಶಕವಾಗಲೆಂದು ಶಿವಶರಣರ ಚರಿತ್ರೆಗಳ ನಾಲ್ಕು ಸಂಪುಟಗಳನ್ನು, ಶಿವಶರಣೆಯರ ಚರಿತ್ರೆಯ ಒಂದು ಸಂಪುಟವನ್ನು ಹೊರತಂದರು.ಇದಲ್ಲದೆ ೬೩ ಶಿವಶರಣರ ಎರಡು ಹೊತ್ತಿಗೆಗಳನ್ನು ಪ್ರಕಟಿಸಿದರು. ವಚನಶಾಸ್ತ್ರಸಾರ ಹೆಸರಿನ ಮೇರು ಕೃತಿಗಳನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದರು. ಶಿವಾನುಭವ ಶಬ್ದಕೋಶ, ಹೊಸ ಪದ್ಧತಿಯ ಬಸವೇಶ್ವರರ ವಚನಗಳು, ಲಿಂಗಾಯತ ಮತತತ್ವ,ಲಿಂಗಪೂಜೆಯ ತತ್ವಗಳು, ವರದಾನಿ ಗುಡ್ಡಮ್ಮೆಯ ಚರಿತ್ರೆ,ಶಿವಶರಣರ ಸಂಗೀತ ವಚನಗಳು, ಶಿವಶರಣರ ಪದಗಳು, ಶಿವಶರಣರ ಅಹಿಂಸಾಧರ್ಮ, ಹರಳಯ್ಯನ ತ್ರಿಪದಿಗಳು, ತೋಂಟದಾರ್ಯರ ರಗಳೆ, ಹರಿಹರನ ಸಮಗ್ರ ರಗಳೆ ಎಂಟು ಭಾಗಗಳಲ್ಲಿ, ಆದಿಶೆಟ್ಟಿಯ ಪುರಾಣ ಹೀಗೆ ಶರಣರಿಗೆ ಸಂಬಂಧಿಸಿದ ಅನೇಕ‌ ಕೃತಿಗಳನ್ನು ಪ್ರಕಟಗೊಳಿಸಿದರು.

ಆ ಕಾಲದಲ್ಲಿ ಸುಮಾರು ೫೦ ಜನ ಶಿವಶರಣರ ಹೆಸರಗಳು ಪಂಡಿತರಿಗೆ ಗೊತ್ತಿದ್ದವು.ಇವರ ಸಂಶೋಧನೆಯಿಂದ ಮತ್ತೆ ೨೫೦ ಕ್ಕೂ ಹೆಚ್ಚು ಶಿವಶರಣರ ಹೆಸರುಗಳು ಬೆಳಕಿಗೆ ಬಂದು ಶಿವಶರಣರ ಸಂಖ್ಯೆ ೩೦೦ ಗಡಿ ದಾಟಿತು. ವಚನ ಸಾಹಿತ್ಯ ಪ್ರಕಟಗೊಳಿಸುವದರೊಂದಿಗೆ ಅದನ್ನು ಅನ್ಯಭಾಷೆಗೆ ಅನುವಾದ ಮಾಡುವ ಕಾರ್ಯವನ್ನು ಸಹ ಇವರು ಮಾಡಿದರು.೧೯೨೨ ರಲ್ಲಿ ರೆವ್ಹರೆಂಡ್ ಜೆ ಎಸ್ ಪಾರಕ್ವಹಾರ ಎಂಬ ಐರೋಪ್ಯ ಪಂಡಿತರ ಸಲಹೆ ಸೂಚನೆ ಮೇರೆಗೆ ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಅವನ್ನು ಇಂಡಿಯನ್ ಆ್ಯಂಟಿಕ್ವರಿಯಲ್ಲಿ ಪ್ರಕಟಿಸಿದರು. ಜೊತೆಗೆ ವಚನಗಳ ಗಾಯನ ವ್ಯವಸ್ಥೆ ಮಾಡಿದರಲ್ಲದೆ , ಶ್ರೇಷ್ಠ ಸಂಗೀತಗಾರರನ್ನು ವಚನ ಗಾಯನ ರೆಕಾರ್ಡಿಂಗ್ ಗಾಗಿ ಮುಂಬಯಿಗೆ ಕಳುಹಿಸಿಕೊಟ್ಟರು.

ಪತ್ರಿಕೆಗಳ ಪ್ರಕಟಣೆ
ವಚನ ಸಾಹಿತ್ಯದ ಪ್ರಕಟಣೆಗಾಗಿ ಇವರು ಪತ್ರಿಕೆಗಳನ್ನು ಸಹ ಪ್ರಕಟಿಸುತ್ತಾರೆ. ೧೯೨೬ ರಲ್ಲಿ “ಶಿವಾನುಭವ” ತ್ರೈಮಾಸಿಕ ಪತ್ರಿಕೆ ಆರಂಭಿಸುತ್ತಾರೆ. ಇದರಲ್ಲಿ ವಚನ ಸಾಹಿತ್ಯ, ಶರಣ ಧರ್ಮದ ತತ್ವಗಳು, ಲಿಂಗಾಯತ ಅರಸು ಮನೆತನಗಳು, ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಶಾಸನಗಳು,, ಲಿಂಗಾಯತ ಸಾಹಿತ್ಯ ಕೃತಿಗಳು ಹೀಗೆ ಶರಣ ಧರ್ಮಕ್ಕೆ ಸಂಬಂಧಿಸಿದ ನಾಡಿನ ವಿದ್ವಾಂಸರಿಂದ ರಚನೆಗೊಂಡ ಅನೇಕ ಲೇಖನಗಳು ಇದರಲ್ಲಿ ಪ್ರಕಟಗೊಳ್ಳುತ್ತವೆ.ಇದು ೩೫ ವರ್ಷಗಳ ಕಾಲ ನಿರಂತರವಾಗಿ ನಡೆದ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ೧೯೫೧ ರಲ್ಲಿ ತನ್ನ ರಜತ ಮಹೋತ್ಸವವನ್ನು ವೈಭವದಿಂದ ಆಚರಿಸಿಕೊಂಡಿತು. ಇದರ ಖ್ಯಾತಿಯಿಂದ ತರುವಾಯ ಇದು ಮಾಸಿಕ ಪತ್ರಿಕೆಯಾಗಿ ರೂಪಗೊಳ್ಳುತ್ತದೆ. ಇದರೊಂದಿಗೆ ಇವರು ” ನವಕರ್ನಾಟಕ,” ಎಂಬ ವಾರಪತ್ರಿಕೆಯನ್ನು ಆರಂಭಿಸುತ್ತಾರೆ. ಕರ್ನಾಟಕ ಏಕೀಕರಣದ ಉದ್ದೇಶದಿಂದ ರಚನೆಗೊಂಡ ಇದು ರಾಜಕೀಯ, ಸಾಮಾಜಿಕ ಹೀಗೆ ವೈವಿಧ್ಯಮಯ ವಿಷಯಗಳ ಆಗರವಾಗಿತ್ತು.

ಸಂಘ ಸಂಸ್ಥೆಗಳ ಸ್ಥಾಪನೆ
ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಸಂಘಟನೆ, ಕೃಷಿ, ಬ್ಯಾಂಕಿಂಗ್, ನೇಕಾರಿಕೆ, ಸಹಕಾರಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ೧೯೧೦ ರಲ್ಲಿ ಬಿಜಯಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘ(ಬಿ ಎಲ್ ಡಿ ಇ) ೧೯೧೨ ರಲ್ಲಿ ಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದರು. ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘ ಸ್ಥಾಪಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಲಿಂಗೈಕ್ಯ
೧೯೫೧ ರಲ್ಲಿ ಇವರ ಮಗ ಚಂದ್ರಶೇಖರ ಆಕಸ್ಮಿಕವಾಗಿ ಮರಣ ಹೊಂದುತ್ತಾನೆ.ಕೈ ಹಿಡಿದ ಪತ್ನಿ ಭಾಗೀರಥಿ ಇಳಿವಯಸ್ಸಿನಲ್ಲಿ ಮರಣ ಹೊಂದುತ್ತಾರೆ. ಬಡತನದ ಬೇಗೆಯಲ್ಲಿಯೆ ಜೀವನ ಕಳೆದ ಇವರು ಪತ್ನಿ ಮಗನ ಅಕಾಲಿಕ ನಿಧನದಿಂದ ಮನನೊಂದು ಶರಣ ಸಾಹಿತ್ಯಕ್ಕೆ ತನ್ನ ಬದುಕನ್ನೇ ಮುಡಿಪಿಟ್ಟ ಇಳೆಗಿಳಿದ ಶರಣ ಫಕೀರಪ್ಪನವರು ೨೯೬೪ ಜೂನ್ ೨೯ ರಂದು ಲಿಂಗೈಕ್ಯರಾಗುತ್ತಾರೆ‌

ಸಂದ ಗೌರವ ಪುರಸ್ಕಾರಗಳು
ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ಹಳಕಟ್ಟಿಯವರಿಗೆ ಸಂದ ಗೌರವ ಪುರಸ್ಕಾರಗಳು ಅನೇಕ. ೧೯೨೦ ರಲ್ಲಿ ಮುಂಬಯಿ ವಿಧಾನಸಭೆಯ ಸದಸ್ಯರಾದರು. ೧೯೨೬ ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೨೮ ರಲ್ಲಿ ೨ ನೆಯ ಕರ್ನಾಟಕ ಏಕೀಕರಣ ಪರಿಷತ್ತಿನ .ಅಧ್ಯಕ್ಷತೆ ವಹಿಸಿದ್ದರು. ೧೯೩೧ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ ಹೊಂದಿದರು. ೧೯೩೩ ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ೧೯೫೬ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಜನರು ಇವರನ್ನು ವಚನ ಪಿತಾಮಹ ಎಂದು ಗುರುತಿಸಿದರೆ,ಸರ್ಕಾರ ಇವರಿಗೆ ರಾವ್ ಬಹದ್ದೂರ್ ಪದವಿ ನೀಡಿ ಗೌರವಿಸಿತು.

ಬಿ ಎಲ್ ಡಿ ಇ ಸಂಸ್ಥೆಯು ೩೦ ಲಕ್ಷ ರೂಪಾಯಿ ವೆಚ್ಚದಲ್ಲಿ ಅವರ ಸಮಗ್ರ ಸಾಹಿತ್ಯವನ್ನು ೧೫ ಸಂಪುಟಗಳಲ್ಲಿ ಪ್ರಕಟಿಸಿದೆ.ಇವರ ಹೆಸರಿನಲ್ಲಿ ಫ.ಗು ಹಳಕಟ್ಟಿ ಪ್ರತಿಷ್ಠಾನ, ವಚನ ಪಿತಾಮಹ ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ

ಹಳಕಟ್ಟಿಯವರು ವಚನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಮೋಘವಾದುದು.ಹೀಗಾಗಿಯೇ ವಿಜಯಪುರಕ್ಕೆ ಭೇಟಿ ನೀಡಿದ ಬಿ ಎಂ ಶ್ರೀ ಅವರನ್ನು ಗೋಳಗುಮ್ಮಟ ನೋಡುವಿರಾ ಎಂದು ಪ್ರಶ್ನಿಸಿದಾಗ ಅವರು” ನಾನು ವಚನ ಗುಮ್ಮಟದ ದರ್ಶನ ಮಾಡುವೆ “ಎಂದು ಉತ್ತರಿಸಿದ್ದು.

-ಡಾ.ರಾಜೇಶ್ವರಿ ವೀ ಶೀಲವಂತ
ಬೀಳಗಿ- 

Don`t copy text!