ಕರಣೇಂದ್ರಿಯಗಳು
ಮನದಾಸೆಯ ಮಹಾದ್ವಾರವು ತೆರೆದು
ಬೆಯುತಿದೆ ಬಯಕೆಯ ಕಿಚ್ಚಲಿ
ಬಚ್ಚಿಟ್ಟಷ್ಟು ಬಿಸಿ ಹೊರಹೊಮ್ಮುತಿದೆ
ಶಮನಗೊಳಿಸುವ ಪರಿಯ ಅರಿಯೆ ||
ಕರಣೇಂದ್ರಿಯಗಳ ಕಟ್ಟಿಹಾಕಲು
ಗಟ್ಟಿದಾರವನರಸಿದೆ, ಮನವ ನೋಡುತ
ಆಂತರ್ಯದಲೆಯಲಿ ಇಮ್ಮನವನಳಿಸಿ
ಒಮ್ಮನವಾಗಿಸಿದೆ, ಮೌನವಾಯ್ತು ಮನವು||
ಸುಬುದ್ಧಿಯನ್ನು ಶುದ್ಧೋದಕದಿ ಅದ್ದಿ
ಲಿಂಗವಿದ್ಯೆಯನರುಹಿದೆ
ಅಜ್ಞಾನವಳಿಸಿ ಸುಜ್ಞಾನ ಸುರಿದು
ಲಿಂಗಮುಖದಿ ಒಂದಾದೆ ||
ಚಿತ್ತ ಬಿತ್ತಿಯ ಚಿತ್ತವಳಿಸಿದೆ
ಗೊತ್ತುಗುರಿಯಾ ಅರುಹಿದೆ
ನಿತ್ಯ ನಿತ್ಯವು ಸತ್ಯಸಾಧನೆ
ಮತ್ತೆ ಬೇಕಿದೆ ಆತ್ಮಕೆ. ||
ಅಹಂಕಾರದ ಅರಿವನರಿತು
ಮರೆಯಬೇಕಿದೆ ನನ್ನನು
ನಾನು ತೊರೆದು ಲಿಂಗದಿ ಬೆರೆದು
ಅಹಂಕಾರವನಳಿಸು ವಿಜಯಮಹಾಂತೇಶ ||
–ಸವಿತಾ ಮಾಟೂರು ಇಲಕಲ್ಲ