e- ಸುದ್ದಿ, ಮಸ್ಕಿ
ರೈತರಿಗೆ ಮೋಸ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ರೈತರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡುವ ಮೂಲಕ ಆಡಳಿತದ ಹೆಸರು ಉಳಿಸಬೇಕು ಎಂದು ಶಾಸಕ ಬಸನಗೌಡ ತುರುವಿಹಾಳ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎನ್ನುವ ಮಾಹಿತಿ ಇದೆ. ಕಚೇರಿಯಲ್ಲೇ ಇರುವುದಿಲ್ಲ. ಬೀಜ, ಗೊಬ್ಬರ ಪೂರೈಕೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎನ್ನುವ ದೂರುಗಳಿವೆ ಎಂದು ಶಾಸಕ ಬಸನಗೌಡ ತುರುವಿಹಾಳ ಅಸಮಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ನೀಡುತ್ತಿರುವ ಹಾರಿಕೆ ಉತ್ತರಕ್ಕೆ ಕೆಂಡ ಮಂಡಲಾದ ಶಾಸಕ ಬಸನಗೌಡ ತುರ್ವಿಹಾಳ ಮಸ್ಕಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶಿವಶರಣ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ರೈತರ ಕಷ್ಟಗಳಿಗೆ ಸ್ಪಂದಿಸಬೇಕಾದ ನೀವು ರೈತರಿಗೆ ಕಷ್ಟಕೊಡುತ್ತಿದ್ದೀರಿ, ಕಮೀಷನ್ ಏಜೆಂಟರ್ ಮೂಲಕ ಗೊಬ್ಬರ, ಬಿತ್ತನೆ ಬೀಜ ವಿತರಣೆ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು ಇದು ಮುಂದುವರೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಶಾಸಕರು ನಕಲಿ ಬೀಜ, ರಸಗೊಬ್ಬರ ಪೂರೈಕೆ ಬಗ್ಗೆ ದೂರುಗಳಿವೆ ಇದನ್ನು ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನೇರ ಹೊಣೆ: ವಿವಿಧ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ರಸ್ತೆಗಳು ಒಂದು ವಾರದಲ್ಲಿಯೇ ಕಿತ್ತು ಹೋಗುತ್ತಿವೆ. ಇದಕ್ಕೆ ಸಂಬಂಧ ಪಟ್ಟ ಇಲಾಖೆಗಳ ಎಂಜನಿಯರ್‍ಗಳೇ ನೇರ ಹೊಣೆಗಾರರಾಗಬೇಗುತ್ತದೆ. ಬಳಗಾನೂರು, ನಾರಾಯಣ ನಗರ ಕ್ಯಾಂಪ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗೆ ಕೊಚ್ಚಿ ಹೋಗಿ ತಿಂಗಳಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಸಾಕ್ಷಿಯಾಗಿದೆ. ಕೆಲಸ ಮಾಡದ ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿ ಮಾಡುತ್ತೀರಿ, ಸರ್ಕಾರದ ಹಣ ಅಂದ್ರೆ ಏನು ತಿಳಿದುಕೊಂಡಿರಿ ಎಂದು ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು.
ಬಂಜಾರು ಅಭಿವೃದ್ಧಿ ಇಲಾಖೆಯಿಂದ ವಿವಿಧ ತಾಂಡಾಗಳಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಬಿಲ್ ತಡೆ ಹಿಡಿಯುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಗೆ ಸೂಚಿಸಿದರು.
ಕೆಲವೊಂದು ಇಲಾಖೆ ಅಧಿಕಾರಿಗಳು ಕೆಲಸ ಅಪೂರ್ಣಗೊಂಡಿದ್ದರು ಕೆಲಸ ಪೂರ್ಣವಾಗಿದೆ ಎಂದು ಸುಳ್ಳು ವರದಿ ಕೊಡುತ್ತಿದ್ದಾರೆ. ಇದು ನಿಲ್ಲಬೇಕು, ವಾಸ್ತಾವ ವರದಿ ನೀಡಿ ಎಂದರು.
ಆರ್‍ಡಿಪಿಆರ್ ಇಲಾಖೆಯಿಂದ ತಾಲೂಕಿನಲ್ಲಿ ಕೈಗೊಂಡಿರುವ ಕುಡಿವ ನೀರಿನ ಕಾಮಗಾರಿಗಳು ಕಳೆದು ಆರೇಳು ವರ್ಷಗಳ ಹಿಂದೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರೂ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಜನರು ಕುಡಿವ ನೀರಿಗಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಆರ್‍ಡಿಪಿಆರ್ ಇಲಾಖೆಯಿಂದ ಕೈಗೊಂಡಿರುವ ಕುಡಿವ ನೀರಿನ ಕಾಮಗಾರಿಗಳನ್ನು ಕೂಡಲೇ ಪುನಾರಂಭಿಸಿ ಕಾಮಗಾರಿಯನು ಪೂರ್ಣಗೊಳಿಸಿ ಜನರಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು.
ತರಾಟೆ: ತಾಲೂಕಿನಲ್ಲಿ ಆರ್‍ಡಿಪಿಆರ್ ಮತ್ತು ಪಿಡ್ಲ್ಯೂಡಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಮತ್ತು ಕುಡಿವ ನೀರಿನ ಅರ್‍ಓ ಪ್ಲಾಂಟ್‍ಗಳನ್ನು ನಿರ್ಮಿಸಲು ಗುತ್ತೇದಾರರಿಗೆ ಗುತ್ತಿಗೆ ನೀಡಿದ್ದರಿಂದ ಗುತ್ತೇದಾರರು ಬೇಕಾಬಿಟ್ಟಿಯಾಗಿ ಕೆಲಸ ಮಾಡಿದ್ದರೆ. ಅಂತಹ ಕಾಮಗಾರಿಗಳ ಬಿಲ್‍ಗಳನ್ನು ತಡೆಹಿಡಿಯಬೇಕೆಂದರು.
ಪಿಡ್ಲ್ಯೂಡಿ ಇಲಾಖೆಯಿಂದ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗಳು ಬಹುತೇಕ ಕಡೆಗಳಲ್ಲಿ ಟೆಂಡರ್ ಪ್ರಕ್ರಿಯೇ ಮುಗಿದು ಆರೇಳು ತಿಂಗಳು ಗತಿಸಿದರೂ ಕಾಮಗಾರಿ ಅರಂಭಿಸಿಲ್ಲ. ಮತ್ತು ಹತ್ತಿಗುಡ್ಡ, ಬಳಗಾನೂರುದಿಂದ ಜವಳಗೇರಾ ರಸ್ತೆ ನಿರ್ಮಿಸಿದ ನಾಲ್ಕೈದು ತಿಂಗಳೊಳಗೆ ಡಾಂಬರು ಕಿತ್ತಿ ಹೋಗಿವೆ ಅಂತಹ ಕಾಮಗಾರಿಗಳ ಬಿಲ್ ಮಾಡದೆ ತಡೆಯಬೇಕು. ಈಗಾಗಲೇ ನಿರ್ಮಿಸಿದ ಅರೆ-ಬರೆ ರಸ್ತೆಗಳು ದುರಸ್ತಿಗೊಂಡಿದ್ದರಿಂದ ಗುತ್ತಿಗೆ ಪಡೆದ ಗುತ್ತೇದಾರರಿಗೆ ಕೂಡಲೇ ನೋಟಿಸ್ ಜಾರಿ ಮಾಡಬೇಕು. ಕೆಲವೊಂದು ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳದೇ ಬಿಲ್‍ಗಳನ್ನು ಹೇಗೆ ಪಾವತಿಸಿದ್ದಿರೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ತರಾಟೆಗೆ ತೆಗೆದುಕೊಂಡರು.
ಎಪಿಎಂಸಿ ಅಧ್ಯಕ್ಷ ಮಲ್ಲಾರಡ್ಡೆಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ, ಜಿ.ಪಂ.ನೋಡಲ್ ಅಧಿಕಾರಿ ರೋಣಿ, ತಹಸೀಲ್ದಾರ ಕವಿತಾ, ತಾ.ಪಂ.ಮಸ್ಕಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಸಿಂಧನೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪವನ ಕುಮಾರ ಇದ್ದರು.