ಅಂತರಂಗ ಬಹಿರಂಗ ಶುದ್ಧಿಯ ಪ್ರತೀಕ ಅಕ್ಕಮಹಾದೇವಿ
“ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ
ಕ್ಷಮೆ ದಮೆ ಶಾಂತಿ ಸೈರಣೆ ಇರಲು
ಸಮಾಧಿಯ ಹಂಗೆಕಯ್ಯಾ
ಲೋಕವೆ ತಾನಾದ ಬಳಿಕ
ಏಕಾಂತದ ಹಂಗೆಕಯ್ಯಾ
ಚನ್ನಮಲ್ಲಿಕಾರ್ಜುನಯ್ಯಾ”
ವೈರಾಗ್ಯ ನಿಧಿ ಅಕ್ಕಮಹಾದೇವಿ ದಿಟ್ಟ ನಿಲುವಿನ, ಸಾತ್ವಿಕ ಕಳೆಯ, ಒಳಹೊರಗೊಂದಾಗಿ ನಿಂತ ಭವ್ಯ ತೇಜೋ ರೂಪ. ಇಡಿ ಜಗತ್ತಿನಲ್ಲಿಯೆ ಇವಳಿಗೆ ದೃಷ್ಟಾಂತ ಕೊಡಲು ಮತ್ತೊಬ್ಬರಿಲ್ಲವೆಂದರೆ ತಪ್ಪಗಲಾರದು. ಅಂತಹ ಅದ್ಬುತ ವ್ಯಕ್ತಿತ್ವದ ಆಧ್ಯಾತ್ಮದ ಉನ್ನತ ಶಿಖರವೆರಿದ ವೀರ ವಿರಾಗಿಣಿ ಅಕ್ಕನ ಈ ವಚನ ಅವಳ ಅಂತರಂಗ ಬಹಿರಂಗ ಪರಿಶುದ್ಧತೆಯ ಪ್ರತಿಕವಾಗಿದೆ.
“ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ
ಉಸುರಿಗೆ ಪರಿಮಳ ಬರಲು ಅಂತರಂಗ ಶುದ್ಧವಿಲ್ಲದೆ ಪರಿಮಳ ಸೂಸಲಾರದು. ಅಂತರಂಗದ ಇಂದ್ರೀಯಗಳಾದ ಮನ, ಬುದ್ಧಿ, ಚಿತ್ತ, ಅಹಂಕಾರಗಳು ಶುದ್ಧವಾದಲ್ಲಿ ತನು ಮನ ಭಾವಕ್ಕೆ ಅಂಟಿಕೊಂಡಿರುವ ಮಲತ್ರಯಂಗಳಾದ ಅಣವ, ಮಾಯಾ, ಕಾರ್ಮಿಕ ಮಲಗಳು ಶುದ್ಧವಾಗುತ್ತವೆ. ಇದರಿಂದ ಗುಣತ್ರಯಗಳಾದ ಸತೊ, ರಜೊ, ತಮೊ ಗುಣಗಳು ಅಳಿದು ನಿರ್ಗುಣ ಸ್ವರೂಪನಾಗುತ್ತಾನೆ. ಆಗ ತ್ರಿದೋಷಗಳಾದ ವಾತ, ಪಿತ್ತ, ಕಫ ಗಳು ದೂರವಾಗಿ ಸಂಪೂರ್ಣ ಅಂತರಂಗ ಶುದ್ಧಿಯಾಗುತ್ತದೆ. ಸ್ವಾಸ್ತ್ಯ ಆರೋಗ್ಯವಿದ್ದಾಗ ಉಸುರಿನಿಂದ ಸುವಾಸನೆಯುಕ್ತ ಪರಿಮಳ ಸೂಸುತ್ತದೆ. ಆಗ ಯಾವುದೆ ಕುಸುಮದ ಅವಶ್ಯಕತೆ ಇರುವದಿಲ್ಲ.
ಕ್ಷಮೆ ದಮೆ ಶಾಂತಿ ಸೈರಣೆ ಇರಲು
ಸಮಾಧಿಯ ಹಂಗೆಕಯ್ಯ
“ಕ್ಷಮಯಾ ಧರಿತ್ರಿ” ಭೂಮಿಯಷ್ಟು ಕ್ಷಮಾ ಗುಣ ಇರಬೇಕು ಎಂದು ಹೇಳುತ್ತಾರೆ. ಆದರೆ ಅನುಸರಿಸುವದು ಕಷ್ಟ ಸಾಧ್ಯ. ಕ್ಷಮಾ ಗುಣ ಅತ್ಯಂತ ಶ್ರೇಷ್ಠತೆಯನ್ನು ತಂದುಕೊಡುವಂತಹದ್ದು. ನಮ್ಮಲ್ಲಿರುವ ಅಹಂಕಾರ, ಅಭಿಮಾನ ಬಿಟ್ಟಾಗ ಮಾತ್ರ ಕ್ಷಮಾ ಗುಣ ಸಾಧ್ಯ. ನಮ್ಮನ್ನು ದೊಡ್ಡವರನ್ನಾಗಿ ಮಾಡುತ್ತದೆ.
“ದಮೆ” ದಮೆ ಅಂದರೆ ಬಹಿರ್ ಇಂದ್ರೀಯ ನಿಗ್ರಹ. ಪಂಚೇಂದ್ರೀಯಗಳು ಮತ್ತು ಅವುಗಳಿಗೆ ಪೂರಕವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳು ವಿಷಯ ವಾಸನೆಯನ್ನು ಹೊರಡಿಸುತ್ತವೆ. ಪಂಪ ಹೇಳುವಂತೆ “ಅತೀಂದ್ರೀಯಮೆ ಸುಖಂ” ಅಂದರೆ ಪಂಚೇಂದ್ರೀಯಗಳಿಂದ ಪಡೆಯುವ ಸುಖವು ಅಲ್ಪವಾದದ್ದು. ಆದರೆ ಅಂತೀದ್ರೀಯದಿಂದ ಪಡೆಯುವ ಸುಖವೆ ಶಾಶ್ವತವಾದದ್ದು. ಅದಕ್ಕಾಗಿ ಬಹಿರ್ ಇಂದ್ರೀಯ ನಿಗ್ರಹ ಪರಮ ಸುಖದ ದಾರಿಯು.
ಎಲ್ಲ ವಿಷಯಾದಿಗಳನ್ನು ಅಳಿದವನಿಗೆ ಶಬ್ದವೆಂದರೆ ಗುರುವಿನ ವಚನ. ಸ್ಪರ್ಶ ಎಂದರೆ ಇಷ್ಟಲಿಂಗ ಸ್ಪರ್ಶ. ರೂಪವೆಂದರೆ ರುದ್ರಾಕ್ಷಿ, ವಿಭೂತಿ ಮುಂತಾದವುಗಳ ನೋಟ. ರಸವೆಂದರೆ ಪ್ರಸಾದದ ರುಚಿ. ವಾಸನೆ ಎಂದರೆ ಶಿವನ ನಿರ್ಮಲತೆ. ಹೀಗೆ ತನ್ಮಾತ್ರೆಗಳನ್ನು ನಿಯಂತ್ರಸಬಲ್ಲ ಸಾಧಕನು ಗುರುಲಿಂಗವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.
“ಶಾಂತಿ” ಮಾನವನ ಮೂಲ ಸ್ವರೂಪವೆ ಶಾಂತಿ. ಶರಣರು ಹೇಳಿದ ಕಲೆಗಳಲ್ಲಿ “ಶಾಂತಿ” ಕಲೆಯು ಒಂದು. ಕಲೆಗಳು ಸಾಧಕನಿಗೆ ಆಧ್ಯಾತ್ಮಿಕ ಜೀವನವನ್ನು ಪ್ರಬಲಗೊಳಿಸಲು ಸಹಾಯ ಮಾಡುತ್ತವೆ. ಶಾಂತಿ ಕಲೆಯು ಪ್ರಣವ ಪಂಚಾಕ್ಷರಿಯಲ್ಲಿ “ವ” ಕಾರವನ್ನು ಪ್ರತಿನಿಧಿಸುತ್ತದೆ. ಪರಶಿವನಿಗೆ ಎಲ್ಲವನ್ನು ಅರ್ಪಿಸಿದ ಸಾಧಕನಿಗೆ ಉಂಟಾಗುವ ಅಧ್ಬುತ ಅನುಭೂತಿ. ಶಾಂತಿ ಕಲೆಯಿಂದ ಸಾಧಕನು ವಾಯುಗಳನ್ನು ನಿಯಂತ್ರಸುತ್ತಾನೆ. (ಪ್ರಾಣ, ಸಮಾನ, ಉದಾನ, ಅಪಾನ, ವ್ಯಾನ) ಮತ್ತು ಪರಶಿವನಂತೆ ಸತ್ತು, ಚಿತ್ತು, ಆನಂದ, ನಿತ್ಯ ಪರಿಪೂರ್ಣನಾಗುತ್ತಾನೆ.
ಸೈರಣೆ: ಅಂದರೆ ಸಹನೆ, ತಾಳ್ಮೆ. “ತಾಳಿದವನು ಬಾಳಿಯಾನು” ಎಂಬಂತೆ ಸಹನೆ ನಮ್ಮೊಳಗಿರುವ ಅದ್ಬುತ ಗುಣ. ಮೊದಲು ಲಿಂಗಾಂಗ ಸಾಮರಸ್ಯ ಬೆಳೆಸಿಕೊಳ್ಳಲು ಸೈರಣೆ ಮಹತ್ವದ ಪಾತ್ರವಹಿಸುತ್ತದೆ. ಸೈರಣೆ ಸಾಧಿಸಿದ ಮೇಲೆ ಷಟ್ಸ್ಥಲದ ಕೊನೆಯ ಹಂತವಾದ ಐಕ್ಯ ಅಂದರೆ ಸಮಾಧಿ ಸ್ಥಿತಿ ತಲುಪಿದಂತೆ. ಕ್ಷಮೆ, ದಮೆ ,ಶಾಂತಿ, ಸೈರಣೆ ಇವುಗಳನ್ನು ಸಾಧಿಸಿದವನಿಗೆ ಕೊನೆಯ ಸ್ಥಲವನ್ನು ತಲುಪಿದಂತೆಯೆ. ಆದ್ದರಿಂದ ಸಾಧಕನು ಷಟ್ಸ್ಥಲದ ಹಂಗನ್ನು ಮೀರಿ ಬೆಳೆಯುತ್ತಾನೆ.
ಲೋಕವೆ ತಾನಾದ ಬಳಿಕ
ಏಕಾಂತದ ಹಂಗೆಕಯ್ಯಾ
ಚನ್ನಮಲ್ಲಿಕಾರ್ಜುನಯ್ಯಾ”
ಹೀಗೆಸಾಧಿಸಿದ ಸಾಧಕನು ಪರಶಿವನ ಜೋತೆಗೆ ಒಂದಾಗುತ್ತಾನೆ. ಆಗ ಸಾಧಕನು ಬೇರೆಯಲ್ಲ. ಪರಶಿವ ಬೇರೆಯಲ್ಲ. ಜಗತ್ತು ಬೇರೆಯಲ್ಲ. ಅವನು ಎಲ್ಲದರಲ್ಲೂ ಒಂದಾಗುತ್ತಾನೆ. ಸಾಧಕನು ಪರಶಿನ ಪ್ರತಿರೂಪವಾಗಿ ನಿಲ್ಲುತ್ತಾನೆ. ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ಪರಶಿವನಲ್ಲಿ ಒಂದಾಗಿತ್ತಾನೆ.
ಹೀಗೆ ಅಕ್ಕಮಹಾದೇವಿಯು ಸಾಧನೆಯ ಶಿಖರವೆರಿ ಅನನ್ಯವಾದ ಅನೂಭೂತಿಯನ್ನು ಪಡೆದ ಮಹಾ ಮೇರು ಪರ್ವತ.
–ಸವಿತಾ.ಮಾಟೂರ
ಇಲಕಲ್ಲ.
——————————————_——————————–