ಶಿವಶರಣ ಹಡಪದ ಅಪ್ಪಣ್ಣ

ಶಿವಶರಣ ಹಡಪದ ಅಪ್ಪಣ್ಣ

( ಶಿವಶರಣರ ಹಡಪದ ಅಪ್ಪಣ್ಣ ಜಯಂತಿ( ಕಡ್ಲಿಗಾರ ಹುಣ್ಣುಮೆ) ಪ್ರಯುಕ್ತ)

(ಹಡಪದ ಅಪ್ಪಣ್ಣನವರು ಬಸವಣ್ಣನವರನ್ನು ರಾತ್ರಿ‌ಕರೆ ತರುವಾಗ ಹಿಡಿದುಕೊಳ್ಳುತ್ತಿದ್ದ ದೀವಟಿಗೆ)

೧೨ ನೆಯ ಶತಮಾನದಲ್ಲಿ ಧರ್ಮ ಪ್ರಭುತ್ವವು ಸಮಾಜದಲ್ಲಿ ಸೃಷ್ಟಿಸಿದ್ದ ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ನಡೆದ ವಚನ ಚಳುವಳಿ ಇಡೀ ಮಾನವ ಕುಲವೆ ಹೆಮ್ಮೆ ಪಡುವ ಸಂಗತಿ.

ಕಲ್ಯಾಣ ಸಮಾಜ ನಿರ್ಮಾಣದ ಆಸೆ ಹೊತ್ತ ಬಸವಣ್ಣನವರು ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾದಾಗ ಇಲ್ಲಿಯವರೆಗೆ ಸಾಮಾಜಿಕ, ಆರ್ಥಿಕ, ಲಿಂಗ ತಾರತಮ್ಯದಿಂದ ನೊಂದಿದ್ದ ಜನ ಸಮಾನತೆಯ ಕನಸು, ಭರವಸೆಗಳೊಂದಿಗೆ ಕಲ್ಯಾಣ ನಗರಕ್ಕೆ ಆಗಮಿಸುತ್ತಾರೆ.

ವಿಶ್ವದ ಮೊದಲ ಸಂಸತ್ತು ಎನಿಸಿಕೊಂಡ ಕಲ್ಯಾಣದ ಅನುಭವ ಮಂಟಪ ಸರ್ವಸಮಾನತೆಯ ತತ್ವವನ್ನು ಸಾರುವ ವೇದಿಕೆಯಾಗುತ್ತದೆ.ಸರ್ವಜನಾಂಗದವರಿಗೆ ವಚನ ರಚನೆಯ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸುತ್ತದೆ. ಇದರಿಂದ ಇಲ್ಲಿಯವರೆಗೆ ಸಮಾಜದ ದೃಷ್ಟಿಯಿಂದ ಕೀಳುತನವನ್ನು ಅನುಭವಿಸುತ್ತಿದ್ದವರು ತಮ್ಮ ಜಾತಿ, ವೃತ್ತಿಯ ಬಗೆಗಿದ್ದ ಕೀಳುರಿಮೆಯನ್ನು ಕಳೆದುಕೊಂಡು ತಮ್ಮ ಕಾಯಕದ ಬಗ್ಗೆ ಗೌರವ ಭಾವನೆಗಳನ್ನು ಬೆಳಸಿ ಕೊಳ್ಳುತ್ತಾರೆ .ಹೀಗೆ ಬಂದವರಲ್ಲಿ ಬಹುತೇಕ ಶರಣರು ಕೆಳಸ್ತರದವರೆ ಆಗಿದ್ದರು. ಅವರಲ್ಲಿ ಬಸವಣ್ಣನವರ ಬಲಗೈ ಭಂಟನೆಂದು ಹೆಸರು ಪಡೆದಿದ್ದ ಹಡಪದ ಅಪ್ಪಣ್ಣ ನವರು ಒಬ್ಬರು.
ಅನುಭವ ಮಂಟಪದ ಮಹಾನುಭಾವ “ನಿಜಸುಖಿ ಅಪ್ಪಣ್ಣ” ಎಂದು ಕರೆಯಿಸಿಕೊಂಡ ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದವರು. ಇವರ ಸತಿ ವಚನಕಾರ್ತಿ “ನಿಜಮುಕ್ತೆ ಹಡಪದ ಲಿಂಗಮ್ಮ”.. ಇವರ ಗುರು ಚನ್ನಬಸವೇಶ್ವರರು.ಇವರ ಕಾಲವನ್ನು ಸುಮಾರು ೧೧೬೦ ಎಂದು ಗುರುತಿಸಲಾಗುತ್ತದೆ. ಇವರು “ಬಸವಪ್ರಿಯ ಕೂಡಲ ಚೆನ್ನಬಸವಣ್ಣ” ಎಂಬ ಅಂಕಿತನಾಮದಲ್ಲಿ ಸುಮಾರು ೨೫೦ ವಚನಗಳನ್ನು ರಚಿಸಿದ್ದಾರೆ. ಕೊನೆಗೆ ಇವರು ತಂಗಡಗಿ ಯಲ್ಲಿ ಐಕ್ಯರಾಗಿದ್ದು, ಅಲ್ಲಿ ಇವರ ಸಮಾಧಿ ಇದೆ. ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನಲ್ಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹ ಇದೆ.


ಅಪ್ಪಣ್ಣನವರ ಹೆಸರಿನೊಂದಿಗೆ ಸೇರಿಕೊಂಡಿರುವ “ಹಡಪ” ಎಂಬ ಪದಕ್ಕೆ ‘ಎಲೆ ಅಡಿಕೆ ಇಡುವ ಚೀಲ (ಸಂಚಿ)’ ಎಂದು , ಹಾಗೆಯೇ ‘ಕ್ಷೌರಿಕರು ಕ್ಷೌರಕ್ಕೆ ಬಳಸುವ ವಸ್ತುಗಳನ್ನು ಇಡುವ ಚೀಲ’ ಎಂದು ಅರ್ಥಗಳಿವೆ.ಇವರು ತಾಂಬೂಲ ವೃತ್ತಿಯವರಾಗಿದ್ದರೆ ಅಥವಾ ಕ್ಷೌರಿಕ ವೃತ್ತಿಯವರಾಗಿದ್ದರೆ ಎಂದು ಅವರ ವೃತ್ತಿಯ ಬಗ್ಗೆ ಗೊಂದಲಗಳಿವೆ.”ಶರಣ ಲೀಲಾ ಮೃತ “ದಲ್ಲಿ ಬಿಜ್ಜಳನ ಆಸ್ಥಾನದಲ್ಲಿದ್ದ ಬಸವಣ್ಣನವರಿಗೆ ಅಪ್ಪಣ್ಣನವರು ತಾಂಬೂಲ ಕಳುಹಿಸಿಕೊಟ್ಟ ತಾಂಬೂಲ ಪವಾಡದ ಕತೆ ಉಕ್ತವಾಗಿದೆ.ಹಾಗಾಗಿ ಶರಣರಿಗೆ ತಾಂಬೂಲ ಪೂರೈಸುವ ವೃತ್ತಿಯನ್ನು ಇವರು ಮಾಡಿರಬಹುದು ಎನ್ನಲಾಗುತ್ತದೆ. ಇಂದು ಕ್ಷೌರಿಕ ವೃತ್ತಿಯನ್ನು ಮಾಡುವ ಹಡಪದ ಸಮಾಜದವರು ಹಡಪದ ಅಪ್ಪಣ್ಣನೇ ತಮ್ಮ ಸಮಾಜದ ಮೂಲಪುರುಷ ಎನ್ನುತ್ತಾರೆ. ಜೊತೆಗೆ ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದುರಿಗೆ ಬಂದರೆ ಅಪಶಕುನವಾಗುತ್ತದೆ ಎಂಬ ಮೂಢನಂಬಿಕೆ ಸಮಾಜದಲ್ಲಿ ಇತ್ತು. ಅದನ್ನು ಹೋಗಲಾಡಿಸಲು ಬಸವಣ್ಣನವರು ಯಾರೆ ಬಂದರೂ ಮೊದಲು ಅಪ್ಪಣ್ಣನವರನ್ನು ನೋಡಿಕೊಂಡೆ ಬರಬೇಕೆಂಬ ನಿಯಮ ಮಾಡಿದ್ದರೆಂಬ ಪ್ರತೀತಿ ಇದೆ. ಹೀಗಾಗಿ ಅಪ್ಪಣ್ಣನವರು ಶರಣರ ಕ್ಷೌರ ಮಾಡುವ ವೃತ್ತಿಯನ್ನು ಮಾಡುತ್ತಿದ್ದರು ಎಂಬ ಅಭಿಪ್ರಾಯಗಳಿವೆ.
ಅಪ್ಪಣ್ಣನವರು ತಮ್ಮ ೨೫೦ ವಚನಗಳಲ್ಲಿ ಕೇವಲ ಒಂದು ವಚನದಲ್ಲಿ ಮಾತ್ರ ‘ಹಡಪಿಗ ‘ ಎಂಬ ಪದ ಪ್ರಯೋಗ ಮಾಡುತ್ತಾರೆ. ” ದೇವ ದೇವ ಮಹಾಪ್ರಸಾದ ……ಹಣೆಯ ಹೊಣೆಯ ತೋರಿ ಉದರವ ಹೊರೆದು ನಿಮ್ಮ ಮರೆಯಲಡಗಿಪ್ಪ ಹಡಪಿಗ ನಾನಯ್ಯ “ಎನ್ನುತ್ತಾರೆ.ಆದರೆ ಈ ವಚನದಲ್ಲಿ ಅವರ ವೃತ್ತಿಯನ್ನು ಪ್ರಸ್ತಾಪ ಮಾಡುವುದಿಲ್ಲ. ಹಾಗಾಗಿ ಅವರ ವೃತ್ತಿಯ ಬಗೆಗಿನ ಗೊಂದಲ ಪರಿಹಾರವಾಗಿಲ್ಲ‌. ಬಸವಣ್ಣನವರು ” ದೇವ ಸಹಿತ ಭಕ್ತ ಮನೆಗೆ ಬಂದರೆ ಕಾಯಕಯಾವುದೆಂದು ಬೆಸಗೊಂಡಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ತಲೆದಂಡ ತಲೆದಂಡ ” ಎಂದು ಹೇಳಿದಂತೆ ಅಪ್ಪಣ್ಣನವರು ಯಾವುದೇ ವೃತ್ತಿ ಮಾಡಿದ್ದರು ಅವರು ಎಕನಿಷ್ಟೆಯಿಂದ ಕಾಯಕ ಮಾಡಿದಂತು ಸತ್ಯ. ಹೀಗಾಗಿ ಅವರು ಯಾವುದೇ ಕಾಯಕ ಮಾಡಿದ್ದರು ಅವರ ಗೌರವ ಕುಂದುವುದಿಲ್ಲ.
ಅಪ್ಪಣ್ಣನವರು ಬಸವಣ್ಣನವರ ಆಪ್ತಸೇವಕ,ಒಡನಾಡಿಯಾಗಿ ಬದುಕಿದ್ದವರು.ಬಸವಣ್ಣನವರ ಬಾಲ್ಯದ ಜೊತೆಗಾರ. ಅನುಭವ ಮಂಟಪದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಬಸವಣ್ಣನವರ ನಿಕಟವರ್ತಿಯಾಗಿದ್ದವರು.ಹಾಗೆಯೇ ಬಸವಣ್ಣನವರ ಬಗ್ಗೆ ಅವರಿಗೆ ಅಪಾರ ಗೌರವ ಭಕ್ತಿ. ಅಣ್ಣನ ಸೇವೆಯನ್ನು ಕಾಯಾ ವಾಚಾ ಮನಸ್ಸಿನಿಂದ ಮಾಡಿದವರು ಅಪ್ಪಣ್ಣನವರು.
ಅಯ್ಯಾ ಎನಗೆ ಬಸವಪ್ರಿಯನೆಂದರೂ ನೀನೆ
ಕೂಡಲ ಚೆನ್ನಬಸವಣ್ಣನೆಂದರೂ ನೀನೆ
ಗುರುವೆಂದರೂ ನೀನೆ,ಲಿಂಗವೆಂದರೂ ನೀನೆ
ಜಂಗಮವೆಂದರೂ ನೀನೆ,ಪ್ರಸಾದವೆಂದರೂ ನೀನೆ
ಅದೇನು ಕಾರಣವೆಂದರೆ
ನೀ ಮಾಡಲಾಗಿ ಅವೆಲ್ಲವು ನಾಮರೂಪಿಗೆ ಬಂದವು
ಅದು ಕಾರಣ ನಾನೆಂದರೆ ಅಂಗ ನೀನೆಂದರೆ ಪ್ರಾಣ
ಈ ಉಭಯವನು ನೀವೆ ಅರುಹಿದರಾಗಿ
ಇನ್ನು ಭಿನ್ನವಿಟ್ಟು ನೊಡಿದನಾದರೆ ಚೆನ್ನಮಲ್ಲೇಶ್ವರ ನೀವೆ ಬಲ್ಲಿರಿ
ಎಮ್ಮ ಬಸವಪ್ರಿಯ ಕೂಡಲ ಚೆನ್ನಬಸವಣ್ಣನಲ್ಲಿ ಏಕವಾದ ಕಾರಣ.
ಎನಗೆ ಕ ಬಂಧನವಿಲ್ಲ ಅದಕ್ಕೆ ನೀವೆ ಸಾಕ್ಷಿ
(ವಚನ ಸಂಪುಟ-೯,ವಚನ ಸಂಖ್ಯೆ-೮೫೨,ಪುಟ-೨೮೨)
ಅಪ್ಪಣ್ಣನವರ ಈ ವಚನ ಬಸವಣ್ಣನವರ ಬಗ್ಗೆ ಅವರಲ್ಲಿದ್ದ ನಿಷ್ಕಲ್ಮಶ ಭಕ್ತಿ, ಗೌರವವನ್ನು ವ್ಯಕ್ತಪಡಿಸುತ್ತದೆ. ಅಷ್ಟಾವರಣಗಳ ಸೃಷ್ಟಿಕರ್ತನಲ್ಲಿಯೆ ಅಷ್ಟಾವರಣಗಳನ್ನು ಕಂಡವರು ಅಪ್ಪಣ್ಣನವರು. ಅವರ ಈ ನಿಷ್ಠೆಯಿಂದಲೆ ಅಣ್ಣನವರು ” ಹಡಪದ ಅಪ್ಪಣ್ಣನಿಂದ ಕಂಡ ಎನ್ನ ಜನ್ಮ ಸಫಲವಾಯಿತ್ತಯ್ಯಾ” ಎಂದು ಹೇಳುತ್ತಾರೆ.
ಇಂತಹ ನಿಷ್ಕಲ್ಮಶ ಭಾವ ಹೊಂದಿದ್ದರಿಂದ ಅಪ್ಪಣ್ಣ ಬಸವಣ್ಣನವರ ಪ್ರಾಣವೇ ಆಗಿದ್ದರು. ಅದರಿಂದಲೇ ಅಣ್ಣ ತಮ್ಮ ಜೀವಿತದ ಕೊನೆಯವರೆಗೂ ಅಪ್ಪಣ್ಣನವರನ್ನು ತಮ್ಮ ಜೊತೆಯಲ್ಲಿಯೇ ಇಟ್ಟುಕೊಂಡಿದ್ದರು. ಶರಣರ ಎಳೆಹೂಟಿ ಪ್ರಸಂಗದಿಂದ ಕಲ್ಯಾಣದಲ್ಲಿ ಕ್ರಾತಿಯುಂಟಾದಾಗ ಅಣ್ಣ ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ತೆರಳುವಾಗ ಮಡದಿಯರಾದ ಗಂಗಾಂಬಿಕೆ,ನೀಲಾಂಬಿಕೆ,ಅಕ್ಕ ನಾಗಮ್ಮ,ಅಳಿಯ ಚೆನ್ನಬಸವಣ್ಣ ಯಾರನ್ನೂ ತಮ್ಮ ಸಂಗಡ ಕರೆದುಕೊಂಡು ಹೋಗದಿದ್ದರು ತನ್ನ ಒಡನಾಡಿ ಅಪ್ಪಣ್ಣನವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅರ್ಧದಾರಿಯಲ್ಲಿ ಮನಸ್ಸು ಬದಲಿಸಿ ನೀಲಮ್ಮನನ್ನು ಕರೆತರಲು ಕಳಿಸುತ್ತಾರೆ.
ಅಪ್ಪಣ್ಣ ನೀಲಮ್ಮನನ್ನು ಕರೆತರುವುದರಲ್ಲಿಯೆ ಬಸವಣ್ಣ ಐಕ್ಯರಾಗಿದ್ದರೆಂದು ,ಅದನ್ನು ತಿಳಿದು ನೀಲಮ್ಮ ಅಪ್ಪಣ್ಣ ದಾರಿಮಧ್ಯೆಯೆ ತಂಗಡಗಿ ಯಲ್ಲಿ ಐಕ್ಯರಾಗುತ್ತಾರೆ.ತಂಗಡಗಿಯಲ್ಲಿ ನೀಲಾಂಬಿಕೆ,ಅಪ್ಪಣ್ಣನವರ ಸಮಾಧಿಗಳಿವೆ.

ಮತ್ತೊಂದು ಅಭಿಪ್ರಾಯದ ಪ್ರಕಾರ ಅಪ್ಪಣ್ಣ ನೀಲಮ್ಮನನ್ನು ಕರೆತರಲು ಹೋದಾಗ ನೀಲಮ್ಮ ” ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೆ ” ಎಂದು ಕೂಡಲ ಸಂಗಮಕ್ಕೆ ಹೋಗಲು ನಿರಾಕರಿಸಿ ಲಿಂಗಪೂಜೆ ಮಾಡುತ್ತಲೆ ಬಯಲಲ್ಲಿ ಬಯಲಾಗುತ್ತಾಳ. ಈ ವಿಷಯವನ್ನು ಅಪ್ಪಣ್ಣ ಬಸವಣ್ಣನವರಿಗೆ ತಿಳಿಸಿದಾಗ ಅಣ್ಣ ಆಕೆ ಬಯಲಾದ ರೀತಿಯನ್ನು ತೋರಿಸು ಎನ್ನುತ್ತಾನೆ.ನೀಲಾಂಬಿಕೆಯ ರೀತಿ ಲಿಂಗಪೂಜೆ ಮಾಡುತ್ತಾ ಅಪ್ಪಣ್ಣ ಸಹ ಐಕ್ಯರಾಗುತ್ತಾರೆ.ನಂತರ ಅಣ್ಣ ಐಕ್ಯರಾದರೆಂದು ಹೇಳಲಾಗುತ್ತದೆ. ಇದರಲ್ಲಿ ಯಾವುದೇ ಘಟನೆ ನಡೆದಿದ್ದರೂ ಬಸವಣ್ಣನವರ ಜೀವಿತದ ಕೊನೆಯ ಹಂತದವರೆಗೆ ಅವರ ನಿಷ್ಠಾವಂತ ಒಡನಾಡಿ ಅಪ್ಪಣ್ಣ ಅವರ ಜೊತೆಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.
ಅಲ್ಲಮಪ್ರಭು ಮೊದಲಬಾರಿಗೆ ಸಿದ್ದರಾಮೇಶ್ವರರೊಡನೆ ಕಲ್ಯಾಣಕ್ಕೆ ಬಂದಾಗ ಲಿಂಗಪೂಜೆಗೆ ಕುಳಿತಿದ್ದ ಬಸವಣ್ಣ ಲಿಂಗಪೂಜೆ ಬಿಟ್ಟು ಎದ್ದು ಬರದೆ ಇದ್ದಾಗ, ಬಂದವರಲ್ಲಿ “ಪ್ರಭುದೇವರ ಭಾವ ತೋರುತ್ತದೆ” ಎಂಬ ಮಾತನ್ನು ಬಸವಣ್ಣನವರಿಗೆ ತಿಳಿಸಿ ಪ್ರಭುದೇವರನ್ನು ಎದುರುಗೊಳ್ಳುವಂತೆ ಮಾಡಿದವರು ಹಡಪದ ಅಪ್ಪಣ್ಣನವರೆ. ವೈರಾಗ್ಯನಿಧಿ ಪ್ರಭುದೇವ,ಭಕ್ತಿ ಭಂಡಾರಿ ಬಸವಣ್ಣನವರ ಮಧ್ಯ ಸೂಕ್ಷ್ಮವಾದ ರೀತಿಯಲ್ಲಿ ದೌತ್ಯವನ್ನು ನಡೆಸಿ ಬಿರುಕು ಮೂಡದಂತೆ ತಡೆದವರು ಅಪ್ಪಣ್ಣನವರೆ.ಯಾವುದೇ ಸಂದರ್ಭದಲ್ಲಿಯೂ ಬಸವಣ್ಣನವರಿಗೆ ಮೂಜುಗರವಾಗದಂತೆ ಕಾರ್ಯನಿರ್ವಹಿಸಿದರು.
ಅನುಭವ ಮಂಟಪದ ಮಹಾನುಭಾವಿಯಾದ ಹಡಪದ ಅಪ್ಪಣ್ಣನವರು ಸುಮಾರು ೨೫೦ ವಚನಗಳನ್ನು ರಚಿಸಿದ್ದಾರೆ. ಪ್ರಭುದೇವ,ಅಕ್ಕಮಹಾದೇವಿ ಯರಂತೆ ಬೆಡಗಿನ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಷಟಸ್ಥಲದ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ.ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಕಂಡುಬರುವ ಇವರ ವಚನಗಳಲ್ಲಿ ಸಹಜತೆ, ಸರಳತೆ ಇದೆ.ಕೆಲವು ವಚನಗಳಲ್ಲಿ ಕಥಾಶೈಲಿಯ ಬಳಕೆಯನ್ನು ಇವರು ಮಾಡುತ್ತಾರೆ. ತತ್ವ ನಿರೂಪಣೆಯ ಸಂಧರ್ಭದಲ್ಲಿ ಲೋಕಪ್ರಸಿದ್ಧ ನಿದರ್ಶನಗಳನ್ನು ಬಳಸಿರುವದನ್ನು ಕಾಣಬಹುದು.
ತನ್ನ ಮನೆಯನರಿಯದೆ ತವರುಮನೆಗೆ ಹಾರುವ ಹೆಣ್ಣಿನಂತೆ
ಭಿನ್ನವಿಟ್ಟು ನೋಡಿಹೆನೆಂದು, ನಿಮ್ಮನರಿಯದೆ ಕೆಟ್ಟಿತು ಜಗವೆಲ್ಲ
ಅದಂತಿರಲಿ ಇನ್ನು ತನ್ನ ತಾನರಿದವಂಗೆ ತನುವೇ ಲಿಂಗ ಮನವೇ ಪುಷ್ಪ
ಈ ಅನುವರಿದು ಘನವ ನೆಮ್ಮಿದ ಶರಣರ ಎನಗೊಮ್ಮೆ ತೋರಯ್ಯಾ
ನಿಮ್ಮ ಧರ್ಮ ನಿಮ್ಮ ಧರ್ಮ ಬಸವಪ್ರಿಯ
(ವಚನ ಸಂಪುಟ-೯, ವಚನ ಸಂಖ್ಯೆ-೯೫೩_ಪುಟ-೩೧೭)
ಶರಣ ತನ್ನಲ್ಲಿಯೇ (ಆತ್ಮಲಿಂಗ) ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು.ಅದನ್ನು ಬಿಟ್ಟು ತಾನು ದೇವರು ಭಿನ್ನವೆಂದು ಬೇಧಭಾವ ಮಾಡಿ ಎಲ್ಲಿಯೂ ದೇವರನ್ನು ಹುಡುಕಬಾರದು.ದೇವರನ್ನು ಅನ್ಯ ಸ್ಥಳದಲ್ಲಿ ಹುಡುಕುವವರ ಸ್ಥಿತಿಯನ್ನು ಹೀಗೆ ಉಪಮೆ ಮೂಲಕ ಕಟ್ಟಿಕೊಡುತ್ತಾರೆ.

ಅಪ್ಪಣ್ಣನವರು ಕಾಯಕ ಪ್ರೇಮಿಗಳಾಗಿದ್ದರು
ಅನ್ನ ಉದಕವ ಕೊಂಡೆಹೆನೆಂದಡೆ ಭೂಮಿಯ ಹಂಗು
ಹೊನ್ನ ಹಿಡಿದೆಹನೆಂದಡೆ ಲಕ್ಷ್ಮಿಯ ಹಂಗು
ಹೆಣ್ಣು ಹಿಡಿದೆಹೆನೆಂದಡೆ ಕಾಮನ ಹಂಗು
ಹಾಲ ಕೊಂಡೆಹೆನೆಂದಡೆ ಹಸುವಿನ ಹಂಗು
ಹೂಫಲಾದಿಗಳ ಕೊಂಡೆಹೆನೆಂದಡೆ ತರುಮರದ ಹಂಗು
ತರುಗೆಲೆಯ ಕೊಂಡೆನೆಂದಡೆ ವಾಯುವಿನ ಹಂಗು
ಬಯಲಾಪೆಕ್ಷೆಯ ಕೊಂಡೆನೆಂದಡೆ ಆಕಾಶದ ಹಂಗು
ಇದನರಿದು ಇವೆಲ್ಲವನು ಕಳೆದು
‌‌ ವಿಶ್ವ ಬ್ರಹ್ಮಾಂಡಕ್ಕೆ ನಡೆನುಡಿ ಚೈತನ್ಯವಾದ ಜಂಗಮಲಿಂಗದ ಪಾದವಿಡಿದು
ಅವರು ಬಿಟ್ಟ ಪ್ರಸಾದ ಉಟ್ಟ ಮೈಲಿಗೆಯ ಉಗುಳ ತಾಂಬೂಲವ
ಈ ತ್ರಿವಿಧವ ಕೊಂಡೆನ್ನ ಭವಂ ನಾಸ್ತಿಯಾಯಿತು
ಮರ್ತ್ಯಲೋಕದ ಮಹಾಗಣಂಗಳು ಸಾಕ್ಷಿಯಾಗಿ
ದೇವಲೊಕದ ದೇವಗಣಂಗಳು ಸಾಕ್ಷಿಯಾಗಿ
‌ ನಾ ನಿಜಮುಕ್ತನಾದೆನಯ್ಯಾ ನೀವು ಸಾಕ್ಷಿಯಾಗಿ
‌ ಬಸವಪ್ರಿಯ ಕೂಡಲಚೆನ್ನಬಸವಣ್ಣಾ
(ವಚನ ಸಂಪುಟ-೯,ವಚನ ಸಂಖ್ಯೆ-೮೪೭,ಪುಟ-೨೮೦)
ಅನ್ನ,ಹೆಣ್ಣು, ಹೊನ್ನು,ಹಾಲು,ಹೂ,ಫಲ,ಗಿಡಮರಗಳು ಇವೆಲ್ಲವುಗಳನ್ನು ನೇರವಾಗಿ ತೆಗೆದುಕೊಂಡರೆ ಅದು ಪ್ರಕೃತಿಯ ಹಂಗಾಗುತ್ತದೆ.ಹಾಗಾಗಿ ಕಾಯಕ ಮಾಡಿ ,ಲಿಂಗ ಜಂಗಮದ ಸೇವೆ ಮಾಡಿ ಅವರು ನೀಡಿದ ಪ್ರಸಾದ ಸೇವಿಸಿದರೆ ನನ್ನ ಜನ್ಮ ಸಾರ್ಥಕವಾಗುತ್ತದೆ.ಮುಕ್ತಿ ಸಿಗುತ್ತದೆ ಎಂಬ ಭಾವ ಅಪ್ಪಣ್ಣನವರದು.ಕಾಯಕ ಮಾಡದೆ ಬಂದುದೆಲ್ಲವು ವ್ಯರ್ಜ್ಯ ಎಂಬ ಭಾವನೆ ಅವರಲ್ಲಿದೆ.ನಿರಾಶ್ರಮದಿಂದ ಸಂಪಾದಿಸಬಾರದು.
ಢಂಬಾಚಾರ ,ಅಹಂಕಾರ ಗುಣಗಳನ್ನು ನಿರಾಕರಿಸುವ ಅಪ್ಪಣ್ಣ ನಿಜ ಶರಣರ ಗುಣಗಳು ಹೇಗಿರುವರೆಂಬುದನ್ನು ತಮ್ಮ ವಚನದಲ್ಲಿ ಪ್ರಸ್ತಾಪಿಸುತ್ತಾರೆ.
ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ
ದೇಶವ ತಿರುಗಿ ಕಲಿತಮಾತ ನುಡಿದವರಲ್ಲ
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು,ರೋಷವಿಲ್ಲದೆ ನುಡಿವರು
ಹರುಷವಿಲ್ಲದೆ ಕೇಳುವರು,ವಿರಸವಿಲ್ಲದೆ ಮುಟ್ಟುವರು
ಸರಸವಿದ್ದಲ್ಲಿಯೇ ವಾಸಿಸುವರು
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ
ಬಸವಪ್ರಿಯ ಕೂಡಲಚೆನ್ನಬಸವಣ್ಣ
ಇಂತಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ
(ವಚನ ಸಂಪುಟ -೯,ವಚನ ಸಂಖ್ಯೆ ೮೬೩,ಪುಟ-೨೮೭)
ನಿಜ ಶರಣರಿಗೆ ಡಂಭಾಚಾರ,ಅಹಂಕಾರ,ವೈರತ್ವದ ಸೊಂಕಿಲ್ಲ,ಅವರಿಗೆ ಯಾವ ಅಸೆ ಅಪೆಕ್ಷೆಗಳಿಲ್ಲ.ಎಲ್ಲರೊಂದಿಗೆ ಹೊಂದಿ ನಡೆಯುವ ಗುಣ ಹೊಂದಿದವರು ಎಂದು ಅವರ ಗುಣಗಳ ಕೊಂಡಾಡುತ್ತಾನೆ ಅಪ್ಪಣ್ಣ.
ಅಪ್ಪಣ್ಣ ಲೌಕಿಕ ಮಾತ್ರವಲ್ಲ ಪಾರಮಾರ್ಥದಲ್ಲಿಯೂ ಬಸವಣ್ಣನವರಿಗೆ ಸಹಾಯಕನಾಗಿದ್ದ.ಪಾರಮಾರ್ಥಿಕ ವಿಷಯದಲ್ಲಿ ಚಾಣಾಕ್ಷ ತಿಳುವಳಿಕೆಯುಳ್ಳವನಾಗಿದ್ದ. ಅಪ್ಪಣ್ಣ ಲೌಕಿಕ, ಪಾರಮಾರ್ಥಿಕಗಳೆರಡನ್ನು ಯಾವ ಎಡರುತೊಡರುಗಳಿಲ್ಲದೆ ಲೀಲಾಜಾಲವಾಗಿ ತೂಗಿಸಿಕೊಂಡು ಹೋಗುತ್ತಿದ್ದ‌.ಇದಕ್ಕಾಗಿಯೇ ಶರಣರೆಲ್ಲ ಅವನನ್ನು “ನಿಜಸುಖಿ ಅಪ್ಪಣ್ಣ'” ಎಂದು ಕರೆದರು.ಇವರ ಶರಣಸತಿ ಶ್ರೇಷ್ಠ ಅನುಭಾವಿ ಲಿಂಗಮ್ಮ ನಿಜಸುಖಿಯ ಸತಿಯಾದ್ದರಿಂದ ನಿಜಮುಕ್ತೆ ಎನಿಸಿಕೊಂಡಳು.

-ಡಾ.ರಾಜೇಶ್ವರಿ ವೀ.ಶೀಲವಂತ
ಕನ್ನಡ ಉಪನ್ಯಾಸಕರು
ಬೀಳಗಿ

Don`t copy text!