ಓಂ ಶ್ರೀ ಗುರುಭ್ಯೋನಮ
ಗುರುಪರಂಪರೆಯನ್ನು ವಂದಿಸುವ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಶುಭ ದಿನವೆ ಗುರುಪೂರ್ಣಿಮೆ. ಇದನ್ನು ವ್ಯಾಸ ಪೂರ್ಣಿಮೆ ಅಂತ ಕೂಡ ಕರೆಯುತ್ತಾರೆ.
“ಲಾಯರ್ ಇಲ್ಲದಿದ್ದರೆ ನ್ಯಾಯವಿಲ್ಲ
ಡಾಕ್ಟರ್ ಇಲ್ಲದಿದ್ದರೆ ಆರೋಗ್ಯವಿಲ್ಲ
ಪೋಲಿಸ್ ಇಲ್ಲದಿದ್ದರೆ ಭದ್ರತೆ ಇಲ್ಲ
ಇಂಜನೀಯರ್ ಇಲ್ಲದಿದ್ದರೆ ತಾಂತ್ರಿಕತೆ ಇಲ್ಲ
ಶಿಕ್ಷಕರು ಇಲ್ಲದಿದ್ದರೆ ಮೇಲಿನವರಾರು ಇಲ್ಲ.”
ಶಿಕ್ಷಕರ ಮಹತ್ವ ಹಾಗು ಅವರ ಜವಾಬ್ದಾರಿಯನ್ನು ಶ್ರೀಸಿದ್ದೇಶ್ವರಶ್ರೀಗಳು ಒಂದೇ ಮಾತಿನಲ್ಲಿ ಅರ್ಥೈಸಿದ್ದಾರೆ. ಶಿಕ್ಷಣವೆನ್ನುವದು ಕೇವಲ ಡಿಗ್ರಿ ಅಲ್ಲ. ಹಣಗಳಿಕೆಯ ಮಾರ್ಗವಲ್ಲ ಎಂದು ತಿಳಿಹೇಳುತ್ತ ವಿದ್ಯಾರ್ಥಿಗಳನ್ನು ತಿದ್ದಿ ಒಳ್ಳೆಯ ಮೂರ್ತಿ ಕಟೆದು ಸತ್ಪ್ರಜೆಯಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ.
ಗು ಅಂದರೆ ಕತ್ತಲೆ, ಅಜ್ಞಾನ ರು ಅಂದರೆ ಬೆಳಕು ನೀಡುವ, ಜ್ಞಾನದ ಮಾರ್ಗದರ್ಶನ ಮಾಡುವ ಪ್ರತಿಯೊಬ್ಬರು ಗುರುಗಳೆ.
ದೇವತೆಗಳಿಗು ರಾಜರುಗಳಿಗು ಗುರುಗಳಿದ್ದರು.
ವಿದ್ಯಾರ್ಥಿಗಳೆ ಶಿಕ್ಷಕರ ಜೀವಂತ ಪ್ರಮಾಣಪತ್ರ. ‘ಆಚಾರ್ಯ ದೇವೋಭವ’ ಎಂದು ಮಾರ್ಗದರ್ಶನ ನೀಡಿದ ಗುರುಗಳನ್ನು ಶ್ರಧ್ಧಾಭಕ್ತಿಯಿಂದ ನೆನೆಯುವದು ವಿದ್ಯಾರ್ಥಿಗಳ ಕರ್ತವ್ಯ ಕೂಡ.. ಅಜ್ಞಾನವೆಂಬ ಅಂಧಕಾರದಿಂದ ಸುಜ್ಞಾನವೆಂಬ ಬೆಳಕಿನೆಡೆಗೆ ನಡೆಸುವವನೆ ಗುರು. ಭಾರತದಲ್ಲಿ ಗುರುವಿಗೆ ದೊಡ್ಡ ಪರಂಪರೆ ಇದೆ.
ಗುರುಬ್ರಹ್ಮ, ಗುರುವಿಷ್ಣು,ಗುರುದೇವೊ ಮಹೇಶ್ವರ: ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮ:”
ಗುರುವಿಗೆ ದೇವರ ಸ್ಥಾನ ನೀಡಲಾಗಿದೆ.
ಮೊದಲು ಗುರುವಿಗೆ ವಂದಿಸಿ,ನಂತರ ದೇವರನ್ನು ಪೂಜಿಸುವದು ಭಾರತೀಯ ಸಂಸ್ಕೃತಿ. ಬದುಕಿನ ಪಯಣದಲ್ಲಿ ಸಮರ್ಥ ಗುರು ಹಿಂದೆ, ಮುಂದೆ ಗುರಿ ಇರಬೇಕು. ಮನುಷ್ಯರ ಭೌತಿಕ ಶರೀರಕ್ಕೆ ಸಂಸ್ಕಾರ ನೀಡಿ ಸಮಾಜ ಜೀವಿ, ಭಾವಜೀವಿ, ಜ್ಞಾನಜೀವಿ ಸಹಾಯಜೀವಿ ಯೋಗಜೀವಿಯಾಗಿ ಪರಿವರ್ತಿಸುವಲ್ಲಿ ಗುರುವಿನ ಮಾರ್ಗದರ್ಶನ ಎಲ್ಲರ ಬಾಳಿನ ದಾರಿದೀಪಗಳು.
ಬಸವಣ್ಣನವರು “ಶಿವಪಥವನರಿವಡೆ ಗುರುಪಥವೆ ಮೊದಲು” . ಭವವೆಂಬ ಪರೀಕ್ಷೆ ಪಾಸಾಗಲು ಗುರುಪದೇಶ ಮಂತ್ರವೈದ್ಯನಂತೆ ಎಂದರು. ಅಕ್ಕನೆಂಬ ಅದಮ್ಯ ಶಕ್ತಿ,”ನರಜನ್ಮವ ತೊಡೆದು ಹರಜನ್ಮವ ಮಾಡಿದಾತ ಗುರು, ಆಧ್ಯಾತ್ಮಿಕ ಆಸಕ್ತಿಗೆ ಗುರು ಕಾರಣ ಎನ್ನುತ್ತಾಳೆ. ಭಕ್ತಿ ಪರಂಪರೆಯಲ್ಲಿ ಅಕ್ಕನೊಂದಿಗೆ ಮುಖಾಮುಖಿಯಾಗುವ ಮೀರಾಬಾಯಿ, ಹೆಳವನಕಟ್ಟೆ ಗಿರಿಯಮ್ಮ, ಇನ್ನುಳಿದ ಶರಣೆಯರು ತಮ್ಮ ಆರಾಧ್ಯ ದೈವವನ್ನೆ ಗುರುವೆಂದು ಸ್ವೀಕರಿಸಿದ್ದಾರೆ. ಶರಣರಲ್ಲಿ ಗುರುವಿನ ಕಲ್ಪನೆ ಆಗಾಧವಾದದ್ದು.
ಅಲ್ಲಮಪ್ರಭುಗಳ ವಚನ
“ ಇಹವ ತೋರಿದಾತ ಶ್ರೀಗುರು,
ಪರವ ತೋರಿದಾತ ಶ್ರೀಗುರು,
ಎನ್ನ ತೋರಿದಾತ ಶ್ರೀಗುರು,
ತನ್ನ ತೋರಿದಾತ ಶ್ರೀಗುರು,
ಗುರು ತೋರಿದಡೆ ಕಂಡೆನು….ಅಂತ ಗುರುಮಹಿಮೆ ಕೊಂಡಾಡಿದ್ದಾರೆ.
ಈ ಹಂತ ದಾಟಿದ ಮೇಲೆ ಉದಯವಾಗುವದೇ ಅರಿವು. ಮನುಕುಲದ ಉಳಿವಿಗೆ ಅಂತರಂಗದ ಅರಿವೇ ತನ್ನ ಗುರು ಎಂಬುದನ್ನು ಎಲ್ಲ ಶರಣರು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅರಿವು ವಿದ್ಯೆಗಿಂತ ದೊಡ್ಡದು, ಪಾಂಡಿತ್ಯಕ್ಕಿಂತ ಶ್ರೇಷ್ಟವಾದದ್ದು. ತಾನು ಎಲ್ಲ ಬಲ್ಲೆ ಎನ್ನುವವರಿಗೆ ”ಅರಿದಿಹೆನೆಂದಡೆ ಅರವಿಂಗೆ ಅಸಾಧ್ಯ” ಎನ್ನುತ್ತಾರೆ ಅಲ್ಲಮಪ್ರಭುಗಳು..
ವಚನಗಳನ್ನು ಇಂದಿನ ಅಗತ್ಯತೆ, ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳೆಸಬೇಕು.
ನೈತಿಕತೆಯ ಕೊರತೆಯಿಂದಾಗಿ ಮಾನವೀಯ ಮೌಲ್ಯಗಳು ಅಧ:ಪತನವಾಗುತ್ತಿವೆ ಎನ್ನುವ ಈ ಸಂದರ್ಭದಲ್ಲಿ , ಅವರಲ್ಲಿಯ ಅಜ್ಞಾನ ಕಳೆಯುವ ವಚನಗಳ ಮೌಲ್ಯಗಳನ್ನು ಬಿತ್ತಿ ಬೆಳೆಸಬೇಕಿರುವದು ಇಂದಿನ ತುರ್ತು ಅನಿವಾರ್ಯತೆ. ಇಂದಿನ ಸಂಕೀರ್ಣ ಸಮಯದಲ್ಲಿ ಗುರು ತನ್ನ ವಿವಿಧ ರೀತಿಯ ಪಾತ್ರ ನಿರ್ವಿಹಿಸಿ, ಸರ್ವತೋಮುಖ ಅಭಿವೃದ್ಧಿಗೆ ಶಿಷ್ಯರಲ್ಲಿ ಸದ್ಭಾವನೆ, ಸತ್ಚಿಂತನೆ, ಸುಜ್ಞಾನ ಬೆಳೆಸುವದು ಅವಶ್ಯಕವಾಗಿದೆ. ಮಾನವೀಯಮೌಲ್ಯವಿರುವ ವಚನಗಳಾದ “ಇವನಾರವ ಇವನಾರವ ಎಂದೆನಿಸದಿರಯ್ಯಾ,ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ” ಹಾಗೆ “ಕಾಗೆ ಒಂದಗುಳ ಕಂಡರೆ ಕರೆಯದೆ ತನ್ನ ಬಳಗವನೆಲ್ಲ, ಕೋಳಿ ಒಂದುಗುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವನೆಲ್ಲ” ಎನ್ನುವ ವಚನ, ಇನ್ನು ಬಸವಣ್ಣನವರ ಸಪ್ತಸೂತ್ರದ ವಚನ “ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,ಮುನಿಯಬೇಡ, ಅನ್ಯರಿ್ಎ ಅಸಹ್ಯಪಡಬಢ, ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ” ಮುಂತಾದ ವಚನಗಳ ಸಾರವನ್ನು ಬಾಲ್ಯದಲ್ಲೆ ಬಿತ್ತಿದರೆ ಸಂಸ್ಕಾರವಂತನಾಗುವನಲ್ಲದೆ, ಸದೃಢಸಮಾಜ ನಿರ್ಮಾಣವಾಗುದರಲ್ಲಿ ಸಂದೇಹವಿಲ್ಲ. ಮನುಷ್ಯತ್ವದಿಂದ ದೈವತ್ವದೆಡೆಗೆ ಕೊಂಡೊಯ್ಯಬೇಕಿದೆ. ಭಾರತೀಯ ಸಂಸ್ಕೃತಿಯಲ್ಲಿ ಗುರು ಶಿಷ್ಯ ಪರಂಪರೆಗೆ ಶ್ರೇಷ್ಟ ಸ್ಥಾನವಿದೆ.
ಇಂದು ತಂತ್ರಜ್ಯಾನದಿಂದಾಗಿ ಶಿಕ್ಷಕರ ಪಾತ್ರ ಕ್ಷೀಣಿಸಿತ್ತಿದೆ, ಬದಲಾದ ಕಾಲದಲ್ಲಿಯ ಗುರು ಶಿಷ್ಯ ಸಂಬಂಧವನ್ನು ಅಲ್ಲಮಪ್ರಭುದೇವರು ಈ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ:
“ಕೃತಯುಗದಲ್ಲಿ ಶ್ರೀಗುರು ಶಿ಼ಷ್ಯಂಗೆ
ಬಡಿದು ಬುಧ್ದಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದನಯ್ಯ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ
ಬಯ್ದು ಬುಧ್ದಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದನಯ್ಯ
ದ್ವಾಪರಯುಗದಲ್ಲಿ ಶ್ರೀಗುರು ಶಿಷ್ಯಂಗೆ
ಝಂಕಿಸಿ ಬುಧ್ದಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದನಯ್ಯ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ
ವಂದಿಸಿ ಬುಧ್ದಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದನಯ್ಯ
ಗುಹೇಶ್ವರ ನಿಮ್ಮ ಕಾಲದ ಕಟ್ಟಳೆಯ
ಕಲಿತನಕ್ಕೆ ನಾ ಬೆರಗಾದೆನು”
ಕಲಿಯುಗದ ಶಿಕ್ಷಣಮೌಲ್ಯದ ಕುಸಿತ ಮತ್ತು ಗುರು ಶಿಷ್ಯ ಸಂಬಂಧ ಕುರಿತು ೧೨ ನೇ ಶತಮಾನದಲ್ಲೆ ಹೇಳಿರುವದು ಶರಣರ ಕಾಲಜ್ಞಾನದ ಅರಿವಾಗುತ್ತದೆ.
ಮೋಬೈಲ್ ನಲ್ಲೇ ಶಾಲೆ ಪ್ರಾರಂಭವಾಗಿ, ಶಾಲೆ ಅಂದರೆ ಮೊಬೈಲ್ ಎನ್ನುವಂತಾಗಿರುವದು ಮಕ್ಕಳ ಮನಸ್ಸಿನ ಮೇಲೆ ದುಶ್ಪರಿಣಾಮ ಬೀರುತ್ತಿದೆ. ಅಷ್ಟೆ ಅಲ್ಲ ಇಂದು ಕೋವಿಡ್ನಿಂದಾಗಿ ಶಿಕ್ಷಣಕ್ಷೇತ್ರ ಅಯೋಮಯವಾಗಿದೆ. ಆನ್ಲೈನ್ ಶಿಕ್ಷಣದಿಂದ ಅರಿವುಳ್ಳ ಮಾನವೀಯ ಮೌಲ್ಯಗಳನ್ನು ಬೆಳೆಸುವದು ಕಷ್ಟ. ಆದರಿದು ಸಾಂದರ್ಭಿಕ. ಆದಷ್ಟು ಬೇಗ ಮಕ್ಕಳು ಶಾಲೆಗೆ ಹೋಗಿ ಪಾಠ ಕೇಳುವಂತಾಗಲಿ , ಮೊದಲಿನ ವಾತಾವರಣ ಮರಳಲಿ. ಗುರುಶಿಷ್ಯ ಪರಂಪರೆ ಉಳಿಯಲಿ, ಶಿಷ್ಯತ್ವದಿಂದ ಗುರುತ್ವದ ಪಯಣ ಸಾಗಲಿ ಎಂದು ಆಶಿಶೋಣ.
–ಶಾರದಾ. ಸಂ.ಕೌದಿ
ಅಡಕಿ ಓಣಿ
ಮಂಗಳವಾರ ಪೇಟ
ಧಾರವಾಡ
8951491838