ದಯಾಮಯಿ ಗುರು

ದಯಾಮಯಿ ಗುರು

ಗುರು ಶಿಷ್ಯರಿಗೆ ಆಶೀರ್ವದಿಸಿ ಗಹನವಾದ ಜಟಿಲ ಸಮಸ್ಯೆಗಳಿಗೆ ಪರಿಹಾರ ಮಾಡುವ ಪರಮ ಶ್ರೇಷ್ಠ ಉಪಾಯವನ್ನು ತಿಳಿಸಿಕೊಡುತ್ತಾನೆ.

ಗುರು ದಯಾಮಯಿ ದೀನ ಬಂಧು ಬ್ರಹ್ಮಸೂತ್ರದ ವ್ಯಾಖ್ಯಾನವನ್ನು ಶಿಷ್ಯನಿಗೆ ಬೋಧಿಸಿ ಬಾಳನ್ನು ಪೌರ್ಣಿಮೆಯನ್ನಾಗಿಸುವ ಸಂಕಟ ದೂರ ಮಾಡುವ ಭುವಿಯ ದೇವರು.ಚರಾಚರಗಳಲ್ಲಿನ ಅಣುರೇಣು ತೃಣಕಾಷ್ಠಗಳಲ್ಲಿನ ಸೋಜಿಗವ ಎಳೆ ಎಳೆಯಾಗಿ ಭಿತ್ತಿಯ ಚಿತ್ತಾರದಲ್ಲಿ ಮೂಡಿಸುವಾತ, ಆತನನ್ನು ಸುಲಭವಾಗಿ ಯಾರಿಂದಲೂ ಅರಿಯಲು ಸಾಧ್ಯವಿಲ್ಲ.ಇಂತಹ ಗುರುವಿನ ಉಪಕಾರವನ್ನು ಮರೆಯುವುದಾದರು ಹೇಗೆ? ಸಾಧ್ಯವಿಲ್ಲದ ಮಾತು, ಸಾಧ್ಯವಿಲ್ಲದ ನುಡಿಗಳು.

ತರುಣರಾದ ಶಿಷ್ಯರಿಗೆ ಉಪಾಯ ಹೇಳಿ, ಕರುಣೆ ಎಂಬ ಬುತ್ತಿಯ ಊಟವನುಣಬಡಿಸಿ ತುಟಿಯ ಮೇಲೆ ಮಂದಹಾಸ ತೋರಿ ಭವದ ಭಯವನ್ನು ದೂರ ಮಾಡುವ ಶಕ್ತಿ ಸಾಮರ್ಥ್ಯ ಗುರುವಿಗಲ್ಲದೆ ಮತ್ತಾರಿಗೂ ಇಲ್ಲ. ಇಂತಹ ಕಾರುಣ್ಯವ ಮರೆಯಲು ಸಾಧ್ಯವೇ ? ವಾತ, ಪಿತ್ತ, ಕಫಗಳೆಂಬ ಮನಸಿನ ಮಲತ್ರಯಗಳನ್ನು ಬಿಡಿಸಿ, ಕೆಟ್ಟ ಸಮಾಜದ ಚಿತ್ರಣವ ಸಾದರಪಡಿಸಿ, ಸತ್ಯ ಪಥವನ್ನು ತೋರಿಸಿ, ಆಧ್ಯಾತ್ಮದಲ್ಲಿ ತನ್ಮಯವಾಗುವಂತೆ ಮಾಡಿ ಉಪಕಾರ ಮಾಡಿದ ಗುರುವನ್ನು ಮರೆಯಲು ಸಾಧ್ಯವೇ ? ಆಗದು ಎಂದೂ ಆಗದು.

ನಶ್ವರ ದೇಹ ನಶಿಸುತ್ತದೆ, ತುಚ್ಛ ವಾಸನೆಯನ್ನು ಜೀವ ಇದ್ದಾಗ ಬೀರುತ್ತದೆ ಇಂತಹ ದೇಹ ಬೆಚ್ಚದಿರಲಿ, ಬೆದರದಿರಲಿ ಎಂಬ ಎಚ್ಚರಿಕೆಯ ಅಭಯ ಹಸ್ತವನ್ನು ಮಸ್ತಕದಲ್ಲಿರಿಸಿ ಹಾರೈಸುವ ಗುರುವಿನ ಪರಿ ಬೆರಗು ಮೂಡಿಸುತ್ತದೆ. ಶರಣರ ಸಂಗವನ್ನು ಹಿಡಿಯಲು ಆ ದಿವ್ಯ ಚೇತನ ಬುದ್ಧಿಮಾತು ಕಲಿಸುತ್ತದೆ. ಹರಿಹರ ಬ್ರಹ್ಮಾದಿ ದೇವರ ಸ್ಮರಣೆ ಮಾಡುತ್ತ ಜನನ-ಮರಣ ಭಯವನ್ನು ಹೋಗಲಾಡಿಸಿಕೊಳ್ಳಲು ಗುರೂಪದೇಶ ನೀಡುತ್ತಾನೆ. ಘನ ಸುಖವನ್ನು ತ್ಯಜಿಸಿ ವೇದ, ಶಾಸ್ತ್ರ, ಪುರಾಣಗಳ ಅರ್ಥದಂತೆ ಅನುದಿನ ಶಿಷ್ಯಕೋಟಿ ಬಿಡದಂತೆ ಸಾಧಿಸಿ ಅಗಣಿತ ಸುಖವನ್ನು ನೀಡುವ ಗುರುವನ್ನು ಮರೆಯಲಾದೀತೇ ? ಇಲ್ಲ ಎಂದೆಂದಿಗೂ ಇಲ್ಲ.

ವಿದ್ಯೆಯನ್ನು ಶಿಷ್ಯರಿಗೆ ಧಾರೆಯೆರೆದು ಅದರ ತನು-ಮನಗಳು ಕಾಂತಿಯುತವಾಗಿ ತೇಜೋಪುಂಜದಂತೆ ಹೊಳೆಯುವ ಹೊಳೆಯುವಂತೆ ಮಾಡುವ ಅತಿಬಲ ಗುರುವೇ ನಿಮ್ಮ ಅಡಿದಾವರೆಗಳಿಗೆ ಶರಣು ಶರಣು. ಕತ್ತಲೆಯಿಂದ ದೇದೀಪ್ಯಮಾನವಾಗಿ ಬೆಳಕನು ಮೂಡಿಸಿ ಮನದ ಮಬ್ಬನು ದೂರ ದಬ್ಬಿದ ನಿನ್ನ ಸೋಜಿಗವ ಕಂಡು ಶಿಷ್ಯ ಪರಂಪರೆ ಪುಳಕವಾಯಿತು. ಬ್ರಹ್ಮಪದ ವಿದ್ಯೆಯನ್ನು ಕಲಿಸಿ, ಮನವನ್ನು ಶುಚಿಗೊಳಿಸಿ ಸ್ವಯಂ ಆನಂದತುಂದಿಲರಾಗುವಂತೆ ಮಾಡುವ ಗುರುವಿನ ಬಲವನ್ನು , ಬಲ್ಲವರುಂಟೇ ಈ ವಿಸ್ಮಯ ಜಗದಲಿ ? ಇಲ್ಲ ಎಲ್ಲೂ ಇಲ್ಲ.

ನಿಜ ಆನಂದವನ್ನು ಅರಿತ ಚಿನ್ಮಯ ಸ್ವರೂಪನಾದ ಭಗವಂತನ ಸಾಲಿನಲ್ಲಿ ನಿಲ್ಲಬಹುದಾದ ಗುರುವಿನ ದಯೆಯನ್ನು ವರ್ಣಿಸಲಸದಳವು, ನಿರುಪಮ, ನಿರಂಜನ ಸಾಕಾರ ಮೂರ್ತಿಯು ನಮ್ಮ ಗುರುವು ಥಳಥಳಿಸುವ ಪರಂಜ್ಯೋತಿಯಂತೆ ತನ್ನನು ತಾನು ಸುಟ್ಟುಕೊಂಡು ಜಗದ ಅಂಧಕಾರ ನಿಗುವ ಪರಮಗುರು ಸ್ಥೂಲ ಸೂಕ್ಷ್ಮಗಳ ತಿಳಿಸುತ್ತಾ ಮಿರಿಮಿರಿ ಮಿಂಚುತ ಸಂಚಾರಗೈವ ನಿಮ್ಮ ಅನುಭೂತಿಗೆ ಅನಂತಕೋಟಿ ಪ್ರಣಾಮಗಳು.

ಧರೆಯೊಳು ವ್ಯಾಪಿಸಿ, ಗಗನಭರಿತನಾಗಿ ಬೆಳಗಿನೊಳು ಘನಬೆಳಕಾದ ನಿಮ್ಮ ಚರಣ ಕಮಲಗಳಿಗೆ ಶಿರಸಾಸ್ಟಾಂಗ ನಮನಗಳು, ವಿದ್ಯೆಯ ಭಿಕ್ಷಾಂದೇಹಿ….

ಶಂಕರ್.ಜಿ.ಬೆಟಗೇರಿ
ಉಪನ್ಯಾಸಕರು ಹೂವಿನಹಡಗಲಿ
ಮೊ.ನಂ-9886575441

Don`t copy text!