ಸಾಂಸ್ ಏ ಗಜಲ್

ಪುಸ್ತಕ ಪರಿಚಯ

ಕೃತಿ ಹೆಸರು…..ಸಾಂಸ್ ಏ ಗಜಲ್  (ಕನ್ನಡ ಗಜಲ್ ಗಳು)

ಲೇಖಕರು…ಡಾ.ರೇಣುಕಾತಾಯಿ ಎಂ ಸಂತಬಾ  ರೇಮಾಸಂ) ಮೊ.೯೮೪೫೨೪೧೧೦೮
ಪ್ರಥಮ ಮುದ್ರಣ ೨೦೨೦
,ಪ್ರಕಾಶನ… ಸಂತಬಾ ಪ್ರಕಾಶನ ಹುಬ್ಬಳ್ಳಿ

ಡಾ.ರೇಣುಕಾತಾಯಿ ಎಂ ಸಂತಬಾ ಇವರು ಹಿಂದಿ ಭಾಷಾ ಅಧ್ಯಾಪಕಿಯಾಗಿ ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಈ. ಆರ್. ಟಿ) ಬೆಂಗಳೂರಿನಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಯಾಗಿ ಸಿ.ಸಿ.ಇ *ಸಾಧನೆ* ಹಾಗೂ ಗುರುಚೇತನಾ ಕಾರ್ಯಕ್ರಮ ಗಳ ಅಡಿಯಲ್ಲಿ ಶಿಕ್ಷಕರಿಗಾಗಿ ಅನೇಕ ಮಾಡ್ಯಲ್ ಗಳ ರಚನಾ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
ಜಿಲ್ಲಾ ಮಟ್ಟ,ರಾಜ್ಯ ಮಟ್ಟದ ಅನೇಕ ತರಬೇತಿಗಳನ್ನು ಶಿಕ್ಷಕ ಸಮೂಹಕ್ಕೆ ನೀಡಿದ್ದಾರೆ.ಶ್ರೀ ಸತ್ಯಸಾಯಿ ಆಲ್ ಇಂಡಿಯಾ ಬಾಲವಿಕಾಸ ಅಲ್ಯೂಮಿನೈ ರಾಷ್ಟ್ರೀಯ ಪುರಸ್ಕಾರ, ಎಕ್ಸಲೆನ್ಸ್ ಅವಾರ್ಡ್ ೨೦೦೪,ಶಿಕ್ಷಣ ಇಲಾಖೆಯ ತಾಲೂಕ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ.ವಿವೇಕಾನಂದ ಅಸೋಸಿಯೇಷನ್, ರೋಟರಿ ಸಂಸ್ಥೆಗಳಿಂದ “ನ್ಯಾಷನಲ್ ಬಿಲ್ಡರ್ ಅವಾರ್ಡ್” ಹಾಗೂ ಅನೇಕ ಸಂಘ ಸಂಸ್ಥೆಗಳ ಗೌರವ ಪಾತ್ರರಾಗಿದ್ದಾರೆ. ಇವು ಇವರ ವೃತ್ತಿಗೆ ಸಂಬಂಧಿಸಿದವು ಆದರೆ ಇವರ ಪ್ರವೃತ್ತಿ ಗಳು ಹಾಡುಗಾರಿಕೆ, ಸಾಹಿತ್ಯ ರಚನೆ,ಪೇಂಟಿಂಗ್, ಓದು,ಸಮಾಜಸೇವೆ,ವಿಶೇಷವಾಗಿ ಶ್ರೀ ಸತ್ಯಸಾಯಿ ಸೇವಾಕಾರ್ಯದಲ್ಲಿ ಭಕ್ತಿಯಿಂದ ಭಾಗವಹಿಸುವಿಕೆ ಇವರ ನೆಚ್ಚಿನ ಹವ್ಯಾಸವಾಗಿದೆ.
ಈಗಾಗಲೇ ರೇಣುಕಾತಾಯಿ ಅವರು “ಕಣ್ಣ ರೆಪ್ಪೆಯ ಅಹವಾಲು” ಎಂಬ ಕವನ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಹಾಗೂ *ಸಾಂಸ್ ಏ ಗಜಲ್* ಎಂಬ ಪ್ರಥಮ ಕನ್ನಡ ಗಜಲ್ ಸಂಕಲನವನ್ನು ಪ್ರಕಟಿಸಿ ಓದುಗರ ಕೈಗೆ ಕೊಟ್ಟಿದ್ದಾರೆ .ಇದು ಕನ್ನಡ ಗಜಲ್ ಸಂಕಲನ ವಾದರೂ ರೇಣುಕಾತಾಯಿ
ಯವರು ಹಿಂದಿ ಶೀಷಿ೯ಕೆ ಕೊಟ್ಟಿದ್ದಾರೆ.ಬಹುಶಃ ಅವರು ಹಿಂದಿ ಪ್ರಾಧ್ಯಾಪಕರಾಗಿದ್ದ ಕಾರಣ ಅಥವಾ ಹಿಂದಿಯ ಮೋಹ ಹಾಗೆ ಮಾಡಿರ ಬಹುದೆಂದು ನನಗೆ ಅನಿಸಿತು

*ಸಾಂಸ್ ಏ ಗಜಲ್* ಎಂದು ಕೃತಿಯ ಶೀಷಿ೯ಕೆ ಓದಿದ ತಕ್ಷಣ ನನಗೆ ಗುಲ್ಜಾರ್ ಅವರ “ಸಾಂಸ್ ಮೆ ತೇರಿ ಸಾಂಸ್ ಮಿಲಿತೋ ಮುಝೆ ಸಾಂಸ್ ಆಯಿ” ಎಂಬ ಗಜಲ್ ದ ಮಿಸ್ರಾ ನೆನಪಾಯಿತು.ಒಲಿದ ಉಸಿರಲಿ ಉಸಿರು ಬೆರೆತಾಗ ಬದುಕಿಗೊಂದು ಹೊಸ ಉಲ್ಲಾಸ ಬರುವುದು ನಿಜ .ರೇಣುಕಾತಾಯಿ ಅವರು ಉಸಿರೇ ಗಜಲ್ ಆಗಿವೆಂದು ಹೇಳುತ್ತಾರೆ.ಜೀವನ ಅನುಭವ ಮತ್ತು ಅನುಭಾವ ಗಜಲ್ ಆದಾಗ ಅಂತಹ ಗಜಲ್ ಗಳು ಓದುಗರ ಹೃದಯ ತಟ್ಟುತ್ತವೆ ,ಮತ್ತು ಅನುಭವದ ಮೂಸೆಯಿಂದ ಬಂದ ಗಜಲ್ ಗಳು ಜನ ಮನದಲ್ಲಿ ಬಹುಕಾಲ ಉಳಿಯುವವು.ಗಜಲ್ ದ ಉಸಿರು ಓದುಗನ ನರ ನಾಡಿಯಲ್ಲಿ ಸಂಚರಿಸಿದಾಗ ಒಂದು ಮಿಂಚು ಸಂಚರಿಸುವುದು ಸತ್ಯ. ಗಜಲ್ ದ ಉಸಿರೇ ಪ್ರೀತಿ,ಪ್ರೇಮ,ಪ್ರಣಯ,ಅನುರಾಗ,ವಿರಹ,ಕಾಯುವಿಕೆ,ಅನುಸಂದಾನ,ಲೌಕಿಕ ದಿಂದ ಅಲೌಕಿಕ ಕಡೆ ಕೊಂಡ್ಯೊಯುವ ಸೆಳೆತವಾಗಿದೆ.ದೈವತ್ವವನ್ನು ಪಡೆಯುವುದು ,ಶರಣ ಸತಿ ಲಿಂಗ ಪತಿ ಎಂದು ನಿವೇದನೆ ಮಾಡಿಕೊಳ್ಳುವ ಶಕ್ತಿ ಗಜಲ್ ಗಳಲ್ಲಿ ಇದ್ದಾಗ,ಆ ತೀವ್ರತೆ ಭಾವ ಓದುಗನನ್ನು ಮಂತ್ರ ಮುಗ್ಧ ಗೊಳಿಸುತ್ತದೆ. ಒಂದು ಹೃದಯ ಇನ್ನೊಂದು ಹೃದಯಕ್ಕೆ ತನ್ನ ನೋವು ನಲಿವುಗಳನ್ನು ಪಿಸು ಮಾತಿನಲ್ಲಿ ಹೇಳುತ್ತಾ ಮನಸುಗಳನ್ನು ಬೆಸೆಯುವ ಒಂದು ಮಾಂತ್ರಿಕ ಶಕ್ತಿ ಗಜಲ್ ಗೆ ಇದೆ.ನೋವಿನ ಕಡಲ ಸುಳಿಯಲ್ಲಿ ಸಿಲುಕಿದ ಬದುಕಿನ ಹರಿಗೋಲನ್ನು ದಡಕ್ಕೆ ತರುವ ಸುಖದ ನೆಮ್ಮದಿಯ ಹಾಯ್ ದೋಣಿ.ನಾದ ಲಯದಲ್ಲಿ ತೀವ್ರತೆಯ ಭಾವ ತರಂಗ ದಲ್ಲಿ ಮೈ ಮರೆಸುವುದು.ಬದುಕೇ ನಶ್ವರ ಎಂಬ ಅರಿವು ಮೂಡಿಸುವ ಸತ್ಯದ ಸಾಕ್ಷಾತ್ಕಾರ ತೋರಿಸುವ ದಿವ್ಯ ಪ್ರಭೆ.ಧರ್ಮದ ಹಂಗು ಹರಿದು ಸರ್ವರನ್ನು ಸಮಾನ ದೃಷ್ಟಿಯಿಂದ ನೋಡುತ್ತಾ ಪ್ರೀತಿ, ಕರುಣೆ, ಸ್ನೇಹ, ಅನುರಾಗ, ಅನುಕಂಪ ಗಳಲ್ಲಿ ಮನುಜರನ್ನು ಬಂಧಿಸುವುದು ಗಜಲ್ ಸಾಹಿತ್ಯ.

*ಸಾಂಸ್ ಏ ಗಜಲ್* ಸಂಕಲನದಲ್ಲಿ ಒಟ್ಟು ೫೨ ಗಜಲ್ ಗಳಿವೆ.ಈ ಗಜಲ್ ಗಳನ್ನು ಓದುತ್ತಾ ಹೊರಟಾಗ ರೇಣುಕಾತಾಯಿ ಯವರ ಉಸಿರೇ ಗಜಲ್ ರೂಪ ತಾಳಿದ ಭಾವನೆ ಬರುತ್ತದೆ ಅವರಿಗೆ ಹಿಂದಿ ಭಾಷಾ ಪ್ರವೀಣತೆ ಇರುವುದರಿಂದ ಹಿಂದಿ ಗಜಲ್ ಗಳಲ್ಲಿ ಇರುವ ಲಾಲಿತ್ಯವನ್ನು ಕನ್ನಡದಲ್ಲಿ ಸರಾಗವಾಗಿ ತುಂಬಿದ್ದಾರೆ.ಅವರಿಗೆ ಸಂಗೀತ ಮತ್ತು ಹಾಡುಹಾರಿಕೆ ಗೊತ್ತಿರುವುದರಿಂದ ಛಂದಸ್ಸಿಗೆ ಅನುಗುಣವಾಗಿ ಹಾಡಲು ಬರುವಂತೆ ಲಯಬದ್ಧವಾಗಿ ಮೃದು ಮಧುರ ಶಬ್ದ ಗಳಲ್ಲಿ ಗಜಲ್ ಗಳನ್ನು ರಚಿಸಿದ್ದಾರೆ.ಅಲ್ಲಲ್ಲಿ ಹಿಂದಿ ಪದಗಳನ್ನು ಗಜಲ್ ರಚನೆಯಲ್ಲಿ ಬಳಿಸಿದ್ದಾರೆ.ಸಾಯಿಬಾಬಾರ ಭಕ್ತರಾದ ಕಾರಣ ಆಧ್ಯಾತ್ಮದ ಗಾಢ ಛಾಯೆ ಇವರ ಗಜಲ್ ಗಳಲ್ಲಿದ್ದು ದೇವರ ಆರಾಧನೆಯಲ್ಲಿಯೇ ಎಲ್ಲವನ್ನು ಮರೆತು ತನ್ಮಯರಾಗಿ ಸಂದಾನಿಸುವ ಪರಿ ವಿಸ್ಮಯ ಉಂಟುಮಾಡುತ್ತದೆ .ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ ಹೃದಯ ಇವರದೆಂದು ಗಜಲ್ ಗಳಿಂದ ಓದುಗರಿಗೆ ಅರಿವಾಗುತ್ತದೆ. ಪ್ರೀತಿ , ಪ್ರೇಮ, ವಿರಹ, ವೈರಾಗ್ಯ, ಆಧ್ಯಾತ್ಮಿಕತೆ ಜೊತೆಗೆ ಇವರ ಗಜಲ್ ಗಳಲ್ಲಿ ಕೌಟುಂಬಿಕ ಸಂಬಂಧಗಳ ಬಗ್ಗೆ ,ಸಂಸ್ಕೃತಿ ,ಹಬ್ಬ ಹರಿದಿನಗಳ ಆಚರಣೆ ಬಗ್ಗೆ ಗಜಲ್ ಗಳ ರಚನೆ ಯಲ್ಲಿ ಚಿತ್ರಸಿದ್ದಾರೆ.

*ಸಾಂಸ್ ಏ ಗಜಲ್* ಸಂಕಲನದ ಮುನ್ನುಡಿ ಯನ್ನು ಹಿರಿಯ ಗಜಲ್ ಕಾರರಾದ ಅಲ್ಲಾಗಿರಿರಾಜ್ ಕನಕಗಿರಿ ಅವರು ಬರೆದಿದ್ದಾರೆ, ಬೆನ್ನುಡಿಯನ್ನು ಹೆಸರಾಂತ ಕವಿಗಳಾದ ಎ ಎಸ್ ಮಕಾನದಾರ ಗದಗ ಇವರು ಬರೆದು ಬೆನ್ನು ತಟ್ಟಿದ್ದಾರೆ.ಇತರ ಗಜಲ್ ಕಾರರಾದ ಗಣೇಶ ಪಾಂಡೇಲು ,ಡಾ.ಸುರೇಶ ನೆಗಳಗುಳಿ,ನಾಗೇಶ ನಾಯಕ್, ಶ್ರೀ ಮತಿ ಸುಜಾತಾ ಲಕ್ಮನೆ, ನೂರ ಅಹ್ಮದ್ ನಾಗನೂರ,ಇವರೆಲ್ಲಾ ಸಂಕಲನ ಪ್ರಕಟಣೆಗೆ ಮುಂಚೆ ಗಜಲ್ ಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ಬರೆದು ಸಂಕಲನದ ಮೌಲ್ಯ ವನ್ನು ಹೆಚ್ಚಿಸಿದ್ದಾರೆ.

*ಈ ಸಂಕಲನ ದಲ್ಲಿ ನನಗೆ ಮೆಚ್ಚಿಗೆಯಾದ ಕೆಲವು ಗಜಲ್ ಗಳ ಮಿಸ್ರಾ ಗಳು*

*ಸುಳ್ಳು ಶಬ್ದ ಗಳ ಪೋಣಿಸಿ ಸರಮಾಲೆ ಹಾಕದಿರು ಗೆಳೆಯಾ*
*ಪೊಳ್ಳು ಮಾತಿನಲಿ ಸಿಲುಕಿಸಿ ಬಲೆಯ ಬೀಸದಿರು ಗೆಳೆಯಾ* (ಗಜಲ್ ೫)
ಮೇಲಿನ ಮತ್ಲಾದಲ್ಲಿ ಗಜಲ್ ಕಾತಿ೯ ಯು ತನ್ನ ಗೆಳೆಯನಿಗೆ ಹೇಳುತ್ತಾಳೆ,ತೋರಿಕೆಯ ಪ್ರೀತಿಗಾಗಿ ಸುಳ್ಳು ಆಡಂಬರದ ಮೋಸದ ಶಬ್ದಗಳ ಸರಮಾಲೆ ಹಾಕದಿರು, ಮರಳು ಮಾತಿನ ಮೋಡಿಯಲ್ಲಿ ಬಂದಿಸದಿರು ಎಂದು ಎಚ್ಚರಿಕೆ ಕೊಡುತ್ತಾಳೆ.ಇಂದಿನ ವಾಸ್ತವಿಕ ತೆಯಲ್ಲಿ ಎಷ್ಟೋ ಹೆಣ್ಣು ಹುಡುಗಿಯರು ತಮ್ಮ ಗೆಳೆಯರ ಮೋಹಕ ಮಾತುಗಳಿಗೆ ಮೋಸಹೋಗಿ ,ಬಾಳು ಹಾಳು ಮಾಡಿಕೊಂಡಿದ್ದು ಅರಿತ ಗಜಲ್ ಕಾತಿ೯ ನೇರವಾಗಿ ಗೆಳೆಯನಿಗೆ ಮೋಸದ ಮೋಹಕದ ಮಾತುಗಳನ್ನು ಆಡಬೇಡವೆಂದು ಎಚ್ಚರಿಸುತ್ತಾಳೆ

*ಪ್ರೀತಿ ದುಕಾನನಲಿ ಮಾರಾಟಕ್ಕೆ ಸಿಗುವುದೇನು*
*ಅನುರಾಗವನು ಬೆಲೆಯಲಿ ಹುಡುಕದಿರು ಸಾಕಿ* (ಗಜಲ್ ೭)
ಮೇಲಿನ ಮಿಸ್ರಾ ದಲ್ಲಿ ಗಜಲ್ ಕಾತಿ೯ ಸಾಕಿಗೆ ಪ್ರೀತಿ ಎಂಬುದು ಸಂತೆಯಲ್ಲಿ ಮಾರಾಟಕ್ಕೆ ಇಟ್ಟ ವಸ್ತು ವಲ್ಲ,ಹಣ ದಿಂದ ಈ ಜಗದಲ್ಲಿ ಎಲ್ಲವನ್ನೂ ಖರೀದಿಸಲಾಗುವುದಿಲ್ಲ ವೆಂದು ಎಚ್ಚರಿಸುತ್ತಾಳೆ.ಪ್ತೀತಿ ಅನುರಾಗಗಳನ್ನು ಬೆಲೆಯಲ್ಲಿ ಅಳೆಯಬಾರದೆಂದು ಹೇಳುತ್ತಾ ಮಕ್ತಾದಲ್ಲಿ ಪ್ರೀತಿ ವಿಶ್ವಾಸದ ಅಡಿಪಾಯದಲ್ಲಿ ಒಲವು ಬೆಳೆಯುವ ಬಳ್ಳಿ ಎಂದು ಸಾಕಿಗೆ ತಿಳಿ ಹೇಳಿದ್ದಾರೆ.

*ಮಾಯಾಜಾಲದ ಆಳದಲಿ ಬಿದ್ದಿರುವೆ ಎತ್ತಿಕೊ ಎನ್ನ*
*ಚಂಚಲತೆಯ ಚಿಂತನದ ಚಿತ್ತವನು ಚದುರಿಸು ದೇವನೇ* (ಗಜಲ್ ೧೭)

ಮೇಲಿನ ಮಿಸ್ರಾ ದಲ್ಲಿ ಗಜಲ್ ಕಾತಿ೯ ನಿರಾಕಾರನಾದ ಭಗವಂತನಲ್ಲಿ ತನ್ನ ಅಸಹಾಯಕತೆಯನ್ನು ನಿವೇದಿಸಿ ಕೊಳ್ಳುತ್ತಾ ಕಾಪಾಡೆಂದು ಬೇಡುತ್ತಾಳೆ. ಮನ ಒಂದು ಮರ್ಕಟ ಸದಾ ಚಂಚಲತೆಯಿಂದಿರುತ್ತದೆ ,ಮಾಯಾ ಮೋಹದ ಜಗದ ಕೂಪದಲ್ಲಿ ಬಿದ್ದಿದೆ,ಚಂಚಲತೆಯ ಸುಳಿಯಲಿ ಸಿಲುಕಿ ಒತ್ತಾಡುತಿದೆ ಹೊರಗೆ ಬರಲಾರದೆ ಮನ ಚಿಂತಿಸುತಿದೆ ,ಈ ವ್ಯಾಮೋಹದ ಜಾಲದಿಂದ ನನ್ನ ಬಿಡುಗಡೆ ಮಾಡು ದೇವ ಎಂದು ದೇವರೊಂದಿಗೆ ತನ್ನ ಮನದ ಅಳಲನ್ನು ಅಸಹಾಯಕತೆಯನ್ನು ಹೇಳುತ್ತಾ ,ನಿನ್ನ ಚರಣದಲ್ಲಿರುವಂತೆ ಅನುಗ್ರಹಿಸೆನ್ನುತ್ತಾ ದೇವರೊಂದಿಗೆ ಅನುಸಂದಾನ ಮಾಡಿಕೊಳ್ಳುವ ಆಧ್ಯಾತ್ಮಿಕ ಗಜಲ್ ಇದಾಗಿದೆ.

*ಬೌದ್ಧ ಧರ್ಮದಡಿ ಪಾಯದಲಿ ಸಣ್ಣ ಕಲ್ಲಾಗುತ್ತಿದ್ದೆನು *
*ಕಲ್ಪಿಸಲಿಲ್ಲ ನೀ ಇಷ್ಟೇನಾ ತಿಳಿದಿರುವುದು ಸಿದ್ಧಾರ್ಥ* (ಗದಜಲ್ ೨೨)

ಈ ಗಜಲ್ ದಲ್ಲಿ ಸಿದ್ಧಾಥ೯ ಮಧ್ಯರಾತ್ರಿಯಲ್ಲಿ ಸಂಸಾರದ ಜಂಜಾಟವನ್ನು ತ್ಯಜಿಸಿ ಬೆಳಕು (ಜ್ಞಾನ) ಹುಡುಕುತ್ತಾ ಹೋಗಿರುತ್ತಾನೆ.ಬೆಳಗಾದ ಮೇಲೆ ಯಶೋಧರೆಗೆ ಪತಿ ಸಂಸಾರ ತೊರೆದು ಹೋಗಿದ್ದು ತಿಳಿಯುತ್ತದೆ.ಆಗ ರಾಣಿ ಯಶೋಧರೆ ಮನದಲ್ಲಿ ಎದ್ದ ವಿಚಾರಗಳನ್ನು ಸಿದ್ಧಾರ್ಥನಿಗೆ ಪ್ರಶ್ನೆ ಯ ರೂಪದಲ್ಲಿ ಕೇಳುವ ವಿಷಯವನ್ನು ಗಜಲ್ ದಲ್ಲಿ ಹಿಡಿದಿಟ್ಟಿದ್ದಾರೆ.ಒಂದು ದೃಷ್ಟಿಯಿಂದ ನೋಡಿದಾಗ ಇದು ಮಹಿಳಾ ಸಂವೇದನೆಯ ಗಜಲ್ ಆಗುತ್ತದೆ.ಯಶೋಧರೆ ತನ್ನಲ್ಲಿ ಎದ್ದ ವಿಚಾರಗಳನ್ನು ಪ್ರಶ್ನಾ ರೂಪದಲ್ಲಿ ಸಿದ್ಧಾರ್ಥನಿಗೆ ಕೇಳುತ್ತಾಳೆ,ಕನಸಲ್ಲೂ ನನ್ನ ಹೃದಯ ನಿನ್ನಡೆಗೆ ಚಲಿಸುತ್ತದೆ ,ನೀನು ಕದ್ದು ಮುಚ್ಚಿ ಯಾಕೆ ಹೋದೆ,ಮಗನ ಮಮತೆ ನಿನ್ನ ತಡಿಯಲಿಲ್ಲವೇ?,ನಾನೂ ನಿನ್ನೊಂದಿಗೆ ಜಗದ ಮಾಯಾ ಮೋಹವ ದಾಟುತ್ತಿದ್ದೆ,ನೀನು ಈಗ ಬುದ್ಧನಾಗಿರುವೆ ,ನೀನು ಸ್ಥಾಪಿಸಿದ ಬೌದ್ಧ ಧರ್ಮ ಕ್ಕೆ ಅಡಿಪಾಯದಲ್ಲಿ ನಾನು ಒಂದು ಸಣ್ಣ ಪೀಚುಕಲ್ಲಾಗುತ್ತಿದ್ದೆ,ನೀನು ನನ್ನ ಅರ್ಥ ಮಾಡಿಕೊಳ್ಳಲಿಲ್ಲ,ಪತಿಯ ಕಾರ್ಯದಲ್ಲಿ ಸತಿ ಸದಾ ಸಹಕರಿಸುತ್ತಾಳೆಂದು ನಿನಗೆ ಯಾಕೆ ಗೊತ್ತಾಗಲಿಲ್ಲ.ನೀನು ಜಗಕೆ ಹರಡುವ ಜ್ಞಾನದ ಬೆಳಕನ್ನು ನಾನು ತಡೆಯುತ್ತಿರಲಿಲ್ಲ.ಹೀಗೆ ಯಶೋಧರೆ ಯ ಹೃದಯ ದಲ್ಲಿ ಎದ್ದ ವಿಚಾರಗಳನ್ನು ಬಹಳ ಸುಂದರವಾಗಿ ಗಜಲ್ ದಲ್ಲಿ ಹಿಡಿದಿಟ್ಟಿದ್ದಾರೆ ರೇಣುಕಾತಾಯಿ ಯವರು.

*ನಿಂತ ನೀರಾಗದೇ ಹರಿಯುವ ನದಿಯಾಗಿ ದಾಹ ತಣಿಸು*
*ವೈಚಾರಿಕ ತಳಹದಿಯಲಿ ಹೋಗುತಿರು ಗುರಿಯ ಅರಸು* (ಗಜಲ್ ೩೦)

ಮೇಲಿನ ಮಿಸ್ರಾ ದಲ್ಲಿ ಗಜಲ್ ಕಾತಿ೯ಯು ಪ್ರಗತಿ ಪರ ವಿಚಾರಗಳನ್ನು ಹಿಡಿದು ಇಟ್ಟಿದ್ದಾರೆ ಮನುಜ ಯಾವಾಗಲೂ ಪ್ರಗತಿಯತ್ತ ಸಾಗಬೇಕು.ಹಳೆಯ ವಿಚಾರ ,ಮೂಢ ನಂಬಿಕೆ ,ಹಳೆಯ ಕಂದಾಚಾರಗಳಲ್ಲಿ ಉಳಿದು ನಿಂತ ನೀರಾಗಿ ಕೊಳೆಯದೆ ಹರಿಯುವ ನದಿ ಯಾಗಿ ಎಲ್ಲರ ದಾಹ ತಣಿಸು ಎಂದು ಹೇಳುತ್ತಾ ವೈಚಾರಿಕ ಹಾದಿಯಲ್ಲಿ ಮುಂದೆ ಸಾಗಲಿ ಜೀವನ ವೆಂದು ಹೇಳುತ್ತಾ ಮುಂದೆ ದುರಾಸೆ ಮನದಲಿ ಚಿಗುರಲು ಬಿಡಬೇಡ,ಅಪ್ರಾತಂಗೆ ದಾನ ಮಾಡದಿರು,ಜ್ಞಾನ ದ ಬೆಳಕನ್ನು ಹರಡುತ್ತಾ ಆಲದ ಮರದಂತೆ ಬೆಳೆ ಎಂದು ಹೇಳಿದ್ದಾರೆ.

* ಜಗದಳಲು ಇರದೇ ಜಗವೆಲ್ಲ ಮುಗಿಲಗಲ ನಗುತಿರಲಿ ಸದಾ*
*ಏಕತೆಯ ಮಿಡಿತದ ನಾದವು ಪ್ರತಿ ಹೃದಯದಲಿ ಅರಳಲಿ ಸದಾ* ( ಗಜಲ್ ೩೭)

ಮೇಲಿನ ಮತ್ಲಾ ಓದಿದಾಗ ನನಗೆ ಈಶ್ವರ ಸಣಕಲ್ ಅವರ “ಜಗವೆಲ್ಲಾ ನಗುತಿರಲಿ ಜಗದಳವು ನನಗಿರಲಿ” ಎಂಬ ಕವಿತೆಯ ಸಾಲು ನೆನಪಾಯಿತು.ಇಲ್ಲಿ ಗಜಲ್ ಕಾತಿ೯ ಜಗದಲ್ಲಿ ದುಃಖ ನೋವು ಗಳಿರದೆ ಸದಾ ಸಕಲ ಜೀವಿಗಳು ನಗುತಿರಲೆಂದು ಎಂದು ಹೇಳುತ್ತಾ ,ಎಲ್ಲರೂ ನಾವು ಒಂದು ಎಂಬ ಭಾವ ಹೃದಯದಲ್ಲಿ ಮಿಡಿಯುತಾ ಅರಳಲಿ ಎಂಬ ಮತ್ಲಾ ದಿಂದ ಪ್ರಾರಂಭವಾದ ಗಜಲ್ ಮುಂದೆ ಲಿಂಗ ಭೇದ ಏಕೆ ಎಲ್ಲರೂ ಸಮವೆಂದು ಒಮ್ಮತದಲಿ ಬಾಳೋಣ ವೆಂದು ಹೇಳುತ್ತಾ ವಿಶ್ವದಲ್ಲಿ ಭಾವೈಕ್ಯತೆ ಕಡಿಮೆಯಾಗಿದೆ ಅದನ್ನು ಹೆಚ್ಚಿಸಲು ಪ್ರೀತಿಯ ಹಣತೆ ಬೆಳಗಿಸೋಣ ,ಕತ್ತಲೆ ದೂಡೋಣವೆಂಬ ಆಶಯದೊಂದಿಗೆ ಗಜಲ್ ರಚನೆಯಾಗಿದೆ.

*ಬತ್ತಿದೆದೆಯ ಬಾವಿಯಲಿ ನೀರನು ಅರಸಿದೆ ಸಾಕಿ*
*ಬರಡಾದ ಮನದಲಿ ಪ್ರೀತಿಯನು ಹುಡುಕಿದೆ ಸಾಕಿ* (ಗಜಲ್ ೫೧)

ಮೇಲಿನ ಮತ್ಲಾದ ಗಜಲ್ ದಲ್ಲಿ ಗಜಲ್ ಕಾತಿ೯ಯು ಭಗ್ನ ಪ್ರೇಮಿಯ ಮನದ ಆಳದ ನೋವನ್ನು ರೂಪಕ ಪ್ರತಿಮೆಯಲ್ಲಿ ಹಿಡಿದಿಟ್ಟಿದ್ದಾರೆ.ಹೃದಯದಲ್ಲಿ ಪ್ರೀತಿಯೇ ಇಲ್ಲದವರಲ್ಲಿ ಒಲವನ್ನು ಬಯಸಿದರೆ ಸಿಕ್ಕುವುದೆ, ಬತ್ತಿದೆದೆಯ ಬಾವಿಯಲಿ ನೀರು ಹುಡುಕಿದರೆ ಸಿಗುವುದೆ ಸಾಕಿ ಎಂದು ತನ್ನ ಆತ್ಮ ಸಂಗಾತಿಯನ್ನು ಕೇಳುತ್ತಾರೆ.ಮರುಭೂಮಿಯಲಿ ನೀರು ಹುಡುಕಿದರೆ ಪಯಣಿಕನಿಗೆ ಸಿಗುವುದೇ ಎಂಬ ಭಾವ ದೊಂದಿಗೆ ಭಗ್ನ ಪ್ರೇಮಿಯ ಮನದ ನೋವನ್ನು ಸುಂದರವಾಗಿ ಗಜಲ್ ದಲ್ಲಿ ಹೆಣೆದಿದ್ದಾರೆ.

*ಸಾಂಸ್ ಏ ಗಜಲ್* ಸಂಕಲನದಲ್ಲಿ ಇಂತಹ ಅನೇಕ ಮಿಸ್ರಾ ಗಳು ಓದುಗರನ್ನು ಮಂತ್ರ ಮುಗ್ಧ ಮಾಡುತ್ತವೆ.ಜೊತೆಗೆ ನಿತ್ಯ ಬದುಕಿನಲಿ ಕಂಡ ಹತ್ತಾರು ಘಟನೆಗಳನ್ನು ಗಜಲ್ ದಲ್ಲಿ ಕಟ್ಟಿದ್ದಾರೆ.ಇದರ ಜೊತೆಗೆ ತಂದೆ, ತಾಯಿ ,ದೇವರು, ಸಮಾಜ ಮಹಿಳಾ ಸಂವೇದನೆ,ಆಧ್ಯಾತ್ಮಿಕ ಧ್ಯಾನಸ್ಥ , ಹೀಗೆ ಎಲ್ಲಾ ವಿಷಯದ ಬಗ್ಗೆ ಗಜಲ್ ಗಳನ್ನು ರಚಿಸಿದ್ದಾರೆ.* ಸಾಂಸ್ ಏ ಗಜಲ್* ಸಂಕಲನವು ರೇಣುಕಾತಾಯಿ ಯವರ ಮೊದಲ ಸಂಕಲನವಾದ ಕಾರಣ ಅಲ್ಲಲ್ಲಿ ಕೆಲವು ಗಜಲ್ ಗಳಲ್ಲಿ ಭಾವಗೀತೆಯ ಛಾಯೆ ಕಾಣಿಸುತ್ತದೆ, ರೇಣುಕಾತಾಯಿ ಯವರು ಗಜಲ್ ದ ಛಂದಸ್ಸು ಅರಿತು ಸರಿಯಾಗಿ ಬಳಿಸಿದ್ದಾರೆ,ಮತ್ಲಾ ಕಾಫಿಯಾ,ರದೀಫ್, ಮಕ್ತಾ ದಲ್ಲಿ “ತಾಯಿ” ಎಂಬ ತಖಲ್ಲುಸನಾಮದೊಂದಿಗೆ (ಕಾವ್ಯ ನಾಮ)ಗಜಲ್ ಗಳನ್ನು ರಚಿಸಿದ್ದಾರೆ.ಮುಂದೆ ರೇಣುಕಾತಾಯಿ ಯವರು ಇನ್ನೂ ಉತ್ತಮವಾದ ಗಜಲ್ ಗಳನ್ನು ರಚಿಸುತ್ತಾರೆಂಬ ಭರವಸೆಯೊಂದಿಗೆ ನನ್ನ ಬರಹಕ್ಕೆ ವಿರಾಮ ನೀಡುವೆ.

ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ
ವಿಜಯಪುರ
ಮೊ.೮೪೦೮೮ ೫೪೧೦೮

 

 

 

.

Don`t copy text!