(ಮಠದ ಚಿತ್ರವನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ. ಈ ಲೇಖನಕ್ಕೂ ಚಿತ್ರದಲ್ಲಿರುವ ಮಠಕ್ಕೂ ಸಂಬಂಧವಿಲ್ಲ- ಸಂಪಾದಕ)
ವಿರಕ್ತ ಮಠಗಳಲ್ಲಿ ಆಧುನಿಕತೆಯ ಅಗತ್ಯತೆ
ಶರಣ ಧರ್ಮದಲ್ಲಿ ಮಠಗಳ ವ್ಯವಸ್ಥೆ ಬಂದಿದ್ದು 15-16 ನೇ ಶತಮಾನದಿಂದ .ಬಸವಣ್ಣನವರ ಶರಣರ ವಚನಗಳನ್ನು ತತ್ವಗಳನ್ನು ನಾಡಿನ ಮೂಲೆ ಮೂಲೆಗೂ ಪಸರಿಸಲು ಮತ್ತು ತಾಡೋಲೆಗಳ ಮರು ಸಂಕಲನಕ್ಕಾಗಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರನ್ನು ಕೂಡಿಸಿಕೊಂಡು ಹಳ್ಳಿಗೆ ಏಕ ರಾತ್ರಿ ಪಟ್ಟಣಕೆ ಪಂಚ ರಾತ್ರಿ ಎಂದು ಸಂಚಾರಿ ಜಂಗಮ ವ್ಯವಸ್ಥೆ ಮಾಡಿಕೊಂಡಿದ್ದು ಸತ್ಯವಾಗಿದೆ. ಆದರೆ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳಿಗೆ ಇದನ್ನು ಸಂಸ್ಥೆ ಮಾಡಬೇಕೆಂಬ ಉದ್ಧೇಶವಿರಲಿಲ್ಲ .
ಬಸವಣ್ಣನವರ ತತ್ವಕ್ಕೆ ಜನ ಮಾರು ಹೋಗಿರುವ ಸತ್ಯ ತಿಳಿದ ಕಾಪಾಲಿಕರು ಕಾಳಾಮುಖಿ ಶೈವರು ವಿರಕ್ತರ ವೇಷವನ್ನು ಧರಿಸಿ ತಾವು ತೋಂಟದ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳ ಪರಂಪರೆ ಎಂದು ಹೇಳುತ್ತಾ ಮುಂದೆ 17 ಶತಮಾನದಲ್ಲಿ ಬೇರೆ ಬೇರೆ ಸಮಯ ಹೊಂದಿದ ಮಠಗಳಾಗಿ ಪರಿವರ್ತನೆಗೊಂಡವು.
ವಿರಕ್ತ ಮಠಗಳಲ್ಲಿ ಸಮಯ ಭೇದವಿದೆ .
1) ಮುರಘಿ ಸಮಯ 2 ) ಕೆಂಪಿ ಸಮಯ 3 )ಚಿಲ್ಲಾಳ ಸಮಯ 4 ) ದುರುದುಂಡಿ ಸಮಯ 5) ಕುಮಾರ ಸಮಯ.6) ಸಂಪಾದನಾ ಸಮಯ
ಹೀಗೆ ಸಮಯ ಭೇದಗಳಿಂದ ಶ್ರೇಣೀಕೃತಗೊಂಡ ವಿರಕ್ತ ಮಠಗಳಲ್ಲಿ ಸಮಾನತೆ ತರುವುದು ಹೇಗೆ ಸಾಧ್ಯ.
ವಿರಕ್ತರ ಭೂಟಾಟಿಕೆಯನ್ನು ಅಂದಿನ ಅಮುಗೆ ರಾಯಮ್ಮ ,ಅಂಬಿಗರ ಚೌಡಯ್ಯ ಇನ್ನು ಅನೇಕರು ಟೀಕಿಸಿದ್ದಾರೆ.
ವಿರಕ್ತವೆಂದರೆ ರಕ್ತ ಸಂಬಂಧ ಹೊರತು ಪಡಿಸಿ ಸಮಾಜಕ್ಕೆ ದುಡಿಯುವವನು ,ನಿಜ ವಿರಕ್ತರು ತಮ್ಮ ಪೂರ್ವಾಶ್ರಮದ ಹಂಗು ತೊರೆದು ಸಮಾಜ ಸೇವೆಗೆ ತಮ್ಮ ಆಯುಷ್ಯ ಮೀಸಲಾಗಿಡುವ ಒಂದು ಸಾರ್ವಜನಿಕ ಜವಾಬ್ದಾರಿಯಾಗಿದೆ. ವಿರಕ್ತ ಪರಂಪರೆಯಲ್ಲಿ ಬೌದ್ಧ ಧರ್ಮದ ಲಾಮಾರನಂತೆ ಕರ್ತವ್ಯ ನಿಷ್ಠೆ ಪ್ರಾಮಾಣಿಕತೆ ಪಾರದರ್ಶಕತೆ ಬದ್ಧತೆ ಇರಬೇಕು.
ಆದರೆ ಲಿಂಗಾಯತ ಮಠಗಳ ವಸ್ತು ಸ್ಥಿತಿ ಬೇರೆಯಾಗಿದೆ. ಇಂದು ಮಠಗಳು ವ್ಯಾಪಾರಿ ಕೇಂದ್ರವಾಗಿವೆ,ಇರುವ ಮಠಾಧೀಶರು ತಮ್ಮ ಮನೆಯ ಅಕ್ಕನ ಅಣ್ಣನ ತಮ್ಮನ ಮಗನನ್ನೆ ಮಠಕ್ಕೆ ವಟುವಾಗಿ ತರುವುದು ರೂಢಿಯಾಗಿ ಬಿಟ್ಟಿದೆ.
ಮಠಾಧೀಶರು ಮಠದ ಆಸ್ತಿ ಕಾಯುವ ಆಡಳಿತಾಧಿಕಾರಿಯಾಗಿದ್ದಾರೆ. ಬಹುತೇಕ ಮಠಗಳಲ್ಲಿ ಇಂದು ಮೌಢ್ಯತೆ ಕಂದಾಚಾರಗಳು ತಾಂಡವವಾಡುತ್ತಿವೆ. , ವೈದಿಕ ಪರಂಪರೆಯ ಮರು ಹುಟ್ಟು ನಾವು ಶ್ರೀ ಮಠಗಳಲ್ಲಿ ಮತ್ತೆ ಕಾಣುತ್ತೇವೆ. ಪಾದ ಪೂಜೆ ಅಡ್ಡಪಲ್ಲಕ್ಕಿ ಯಜ್ಞ ಹೋಮ ಹವನ, ಲಕ್ಷ ದೀಪೋತ್ಸವ ಕೋಟಿ ಬಿಲ್ವಾರ್ಚನೆ,ಮುಂತಾದ ಅನೇಕ ಅನಿಷ್ಟ ಪದ್ದತಿಗಳು ಮತ್ತೆ ಚಿಗುರೊಡೆದಿವೆ .
ಸಮಾಜವನ್ನು ಆರ್ಥಿಕವಾಗಿ ವೈಚಾರಿಕವಾಗಿ ಸಾಮಾಜಿಕವಾಗಿ ಸಧೃಡಗೊಳಿಸಬೇಕಾದವರೆ ತಪ್ಪು ದಾರಿ ಹಿಡಿದು ಸೆಲೆಬೆರಿಟಿಯಾಗಿದ್ದಾರೆ. ಜನರ ಭಕ್ತರ ಉತ್ಸಾಹ ಉನ್ಮಾದವನ್ನು ಮೂಲ ಬಂಡವಾಳವನ್ನಾಗಿ ಮಾಡಿಕೊಂಡು ಮಠಗಳ ಉತ್ಸವಕ್ಕೆ ಸ್ವಾಮಿಗಳು ಬಳಸುವುದು ವಾಡಿಕೆಯಾಗಿದೆ.
ಜಾತ್ರೆ ,ಹಬ್ಬ ,ಪಟ್ಟಾಧಿಕಾರ, ವರ್ಧಂತಿ ಉತ್ಸವ ಹೀಗೆ ಮಠಗಳು ಅನಗತ್ಯ ಖರ್ಚು ಮಾಡುವ ಜನರಿಂದ ಹಣ ವಸೂಲಿ ಮಾಡುವ ಸುಲಿಗೆ ಶೋಷಣಾ ಕೇಂದ್ರಗಳಾಗಿವೆ.
ಶರಣ ತತ್ವಗಳಲ್ಲಿ ನಂಬಿಕೆ ಇಟ್ಟ ವಿರಕ್ತ ಮಠಗಳು ಹೇಗಿರಬೇಕು ಎಂಬುದನ್ನು ಚರ್ಚಿಸೋಣ.
*ವಿರಕ್ತ ಮಠಗಳು ವಿಶ್ವ ಮಾನವ ಸಮತಾವಾದಿ ಬಸವಣ್ಣನವರ ಅತ್ಯಂತ ಸರಳ ಸಹಜ ಸಾರ್ವಕಾಲಿಕ ಪ್ರಸ್ತುತ ವಿಚಾರಧಾರೆಯಲ್ಲಿ ಶೃದ್ಧೆ ನಂಬಿಕೆ ಇತ್ತು ಬದ್ಧತೆ ಹೊಂದಿರಬೇಕು.
*ಮಠಾಧೀಶರಿಗೆ ಕನ್ನಡ ಹೊರತು ಪಡಿಸಿ ಇಂಗ್ಲೀಷ ಹಿಂದಿ ಭಾಷೆಯಲ್ಲಿ ಪ್ರಭುತ್ವ ಪಡೆಯಬೇಕು.
*ಮಠಗಳಲ್ಲಿ ರಾರಾಜಿಸುವ ವೈದಿಕ ಪಾಠಶಾಲೆ ಸಂಸ್ಕೃತ ಪಾಠ ಶಾಲೆ ಬದಲಿಗೆ ವಚನ ಪಾಠ ಶಾಲೆ ,ಅನುಭವ ಕಮ್ಮಟ ಬರಬೇಕು.
*ಮಠಾಧೀಶರು ವೈಭವ ಆಡಂಬರದ ಜೀವನ ಹೊರತು ಪಡಿಸಿ ಸರಳ ಸಾತ್ವಿಕ ಜೀವನ ನಡೆಸಿ ಎಲ್ಲರಿಗೂ ಆದರ್ಶಪ್ರಾಯವಾಗಬೇಕು.
* *ಜಗದ್ಗುರು ಶ್ರೀ ಮ ನೀ ಪ್ರ ಷ ಬ್ರ ಶೊ ಬ್ರ. ಮುಂತಾದ ಅರ್ಥವಿಲ್ಲದ ನಾಮ ವಿಶೇಷಣ ಬಿಟ್ಟು ಉಳಿದವರಂತೆ ತಮ್ಮನ್ನು ಗುರುತಿಸಿಕೊಳ್ಳಬೇಕು.
**ಲಿಂಗಾಯತ ಧರ್ಮದೊಂದಿಗೆ ಬೌದ್ಧ ಇಸ್ಲಾಮ್ ಕ್ರೈಸ್ತ ಧರ್ಮಗಳ ತೌಲನಿಕ ಅಧ್ಯಯನದ ಅಗತ್ಯ ಇದೆ.
**ಶರಣ ಸಂಸ್ಕೃತಿ ಉಪನ್ಯಾಸದಲ್ಲಿ ಉಪನಿಷತ್ತು ವೇದ ಶಾಸ್ತ್ರಗಳ ಉದಾಹರಣೆ ಕೊಟ್ಟು ರಂಜಿಸುವ ಮತ್ತು ಸಂಸ್ಕೃತ ಶ್ಲೋಕ ಹೇಳಿ ತಮ್ಮ ಪಾಂಡಿತ್ಯ ಪ್ರದರ್ಶಿಸುವ ಹುಚ್ಚುತನವನ್ನು ಬಿಡಬೇಕು.
**ಮಠಾಧೀಶರು ಸಮಕಾಲೀನ ಇತಿಹಾಸ ಪ್ರಗತಿ ಪರ ಚಿಂತನೆ ದೇಶ ನಾಡು ನುಡಿ ನೆಲ ಜಲ ಮುಂತಾದವುಗಳ ಸಮಗ್ರ ಅಧ್ಯನ ಹೊಂದಿರಬೇಕು.
**ಮಠಾಧೀಶರು ವಾಹನ ಚಾಲನೆ ಈಜು ವ್ಯಾಯಾಮ ಯೋಗ ಮುಂತಾದ ವಿದ್ಯೆಗಳನ್ನು ಕಲಿತಿರಬೇಕು.
**ಮಠಾಧೀಶರು ತಮ್ಮ ರಕ್ತ ಸಂಬಂಧಿಗಳನ್ನು ಮಠಕ್ಕೆ ನೇಮಿಸುವದನ್ನು ನಿಲ್ಲಿಸಬೇಕು. ಮಠದ ಆಡಳಿತ ವ್ಯವಹಾರ ಒಳ್ಳೆಯ ಟ್ರಸ್ಟ್ ನೋಡಿಕೊಳ್ಳಬೇಕು.
*ಪ್ರತಿ ಮಠದಲ್ಲಿ ಉತ್ತಮ ಲೈಬ್ರರೀ ಇರಬೇಕು ಶರಣರ ವಚನಗಳ ಶರಣರ ಜೀವನ ಚರಿತ್ರೆ ಸಂಶೋಧಿತ ಗ್ರಂಥಗಳ ಪುಸ್ತಕಗಳು ಇರಬೇಕು.
* *ಸಮಾಜ ಮುಖಿ ಸೇವೆ ನೀರಾವರಿ ಯೋಜನೆಗಳ ಕಾರ್ಯಾಗಾರ ,ನಿರುದ್ಯೋಗ ನಿವಾರಣೆ ,ಕೃಷಿ ಕರ ಕುಶಲ ತರಬೇತಿಯ ಸಂಸ್ಥೆಗಳನ್ನು ತೆರೆಯಬೇಕು.
*ಮಠಗಳಲ್ಲಿ ರುದ್ರಾಭಿಷೇಕ ಕೋಟಿ ಲಿಂಗ ಮುಂತಾದ ಸ್ಥಾವರ ಪೂಜೆ ನಿಲ್ಲಿಸಬೇಕು.
*ಇತ್ತೀಚಿಗೆ ಸ್ವಾಮಿಗಳಿಗೆ ಮಾತೆ ಅಕ್ಕನವರಿಗೆ ಬೃಹತ್ ಬಸವಣ್ಣನವರ ಮೂರ್ತಿ ನಿಲ್ಲಿಸಿ ನೂರಾರು ಕೋಟಿ ಹಣ ಸಂಗ್ರಹಿಸುವ ವ್ಯಾಪಾರಿ ಮನೋಭಾವವನ್ನು ಬಿಡಬೇಕು.*
*ಶಿವಯೋಗ ಲಿಂಗ ಪೂಜೆ ತ್ರಾಟಕ ಯೋಗ ,ಷಟಸ್ಥಲ ಮಂತ್ರ ಗೌಪ್ಯ ಕರಣ ಹಸಿಗೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು
*ಮೇಳ ಉತ್ಸವದಲ್ಲಿ ಹುಚ್ಚು ಸಂಪ್ರದಾಯವನ್ನು ಹುಟ್ಟು ಹಾಕಿ ಜನರನ್ನು ವಂಚಿಸುವ ಪ್ರವೃತ್ತಿ ಬಿಡಬೇಕು.
*ಇಂದು ಮಠಗಳ ಸ್ವಾಮಿಗಳ ಅಕ್ಕ ಮಾತೆಯರ ಮೇಲೆ ಜನರ ನಂಬಿಕೆ ವಿಶ್ವಾಸ ಕಡಿಮೆಯಾಗುವ ಹಿನ್ನೆಲೆಯಲ್ಲಿ ಈಗಲೇ ಎಚ್ಚತ್ತು ಬಸವ ತತ್ವ ನೈಜ ಆಚರಣೆಗೆ ಪ್ರಾಮುಖ್ಯತೆ ಕೊಡುವುದು ಅನಿವಾರ್ಯ ಹಾಗು ಅಗತ್ಯತೆಯು ಕೂಡ.
-ಡಾ.ಶಶಿಕಾಂತ.ಪಟ್ಟಣ.ಪೂನಾ
(e-ಸುದ್ದಿಯಲ್ಲಿ ಪ್ರಕಟವಾಗು ಲೇಖನ, ಕತೆ ಕವಿತೆಗಳಿಗೆ ಆಯಾ ಲೇಖಕರೇ ಹೊಣೆಗಾರರು.)