ಮಸ್ಕಿ ಬೆಟ್ಟದ ಮಲ್ಲಿಕಾರ್ಜುನ ವಚನಗಳು

ನಾ ಓದಿದ ಪುಸ್ತಕ ಪರಿಚಯ

ಮಸ್ಕಿ ಬೆಟ್ಟದ ಮಲ್ಲಿಕಾರ್ಜುನ ವಚನಗಳು

ವಚನಕಾರರು– ಶ್ರೀ ಶ್ರೀಧರ ಬಳ್ಳೊಳ್ಳಿ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನಾದಿ ಕಾಲದಿಂದ, ಇಲ್ಲಿಯವರೆಗೂ ಧರ್ಮದ ಪ್ರತೀಕವಾಗಿ ತನ್ನದೇ ಪರಂಪರೆಯನ್ನು ಉಳಿಸಿಕೊಂಡು, ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತ ಬಂದಿರುವ ಸಾಹಿತ್ಯ… ಅದು “ವಚನ ಸಾಹಿತ್ಯ”.
ಬಸವಣ್ಣರಾದಿಯಾಗಿ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ದೇವರ ದಾಸಿಮಯ್ಯ, ಆಯ್ದಕ್ಕಿ ಲಕ್ಕಮ್ಮ, ಸರ್ವಜ್ಞ ಮುಂತಾಗಿ ಅನೇಕರ ವಚನಗಳು ಇಂದಿಗೂ ನಮ್ಮೆಲ್ಲರನ್ನು ಧರ್ಮದ ಮಾರ್ಗದೆಡೆಗೆ ಕೊಂಡೊಯ್ಯಲು ಸಹಕಾರಿಯಾಗಿವೆ.
ಇಂತಹ ಶರಣರ ಪರಂಪರೆಯನ್ನು ಮುಂದುವರೆಸುವವರು ವಿರಳವಾಗಿ ಕಂಡರೂ ಸಹಸ್ರಾರು ವಚನಗಳನ್ನು ರಚಿಸಿ ಎಲೆಮರೆಕಾಯಿಯಂತೆಯೇ ಉಳಿಯುತ್ತಿರುವವರು ಅನೇಕರು ಇದ್ದಾರೆ.

ಆಧುನಿಕ ವಚನಕಾರರಲ್ಲಿ “ಮಸ್ಕಿ ಬೆಟ್ಟದ ಮಲ್ಲಿಕಾರ್ಜುನ” ವಚನಾಂಕಿತರಾದ “ಶ್ರೀ ಶ್ರೀಧರ ಬಳ್ಳೊಳ್ಳಿ”ಯವರು. ಅಪ್ಪಟ ಕನ್ನಡಾಭಿಮಾನಿಗಳು.

ಒಬ್ಬ ಬರಹಗಾರನಿಗೆ ಸಿಗಬೇಕಾದ ಮನ್ನಣೆ ನಮ್ಮ ಸುತ್ತಲಿನ ಸಾಹಿತ್ಯ ಬಳಗ ಯಾವಾಗ ನೀಡುವುದಿಲ್ಲವೋ ಆಗ, ಆ ಬರಹಗಾರನ ಲೇಖನ ತನ್ನ ಶಕ್ತಿಯನ್ನು ಇಂಗಿಸಿಕೊಳ್ಳುತ್ತದೆ. ಸಾವಿರಾರು ವಚನಗಳು ಒಂದು ಮಸ್ತಕದಿಂದ ಹೊರಹೊಮ್ಮುತ್ತವೆ ಎಂದರೆ ಅದರ ಹಿಂದೆ ಶರಣರ, ಶರಣರು ನಂಬಿದ ದೈವದ ಸಂಕಲ್ಪ ಇಲ್ಲದೇ ಇರಲಾರದು. ಅಂತಹ ಮಸ್ಕಿಯ ವಚನ ಕಣ್ಮಣಿಯ ಹೊಳಪು ಯಾರ ಕಣ್ಣಿಗೂ ಗೋಚರಿಸದಿರುವುದು ವಿಪರ್ಯಾಸವೇ ಸರಿ. ಹೆಜ್ಜೆ ಹೆಜ್ಜೆಗೂ ತಿರಸ್ಕಾರ, ಉದಾಸೀನತೆಗೆ ಸಿಕ್ಕು ನರಳಿದ ಹೂವು ಈಗ ಬೆಂಕಿಯಲ್ಲೂ ಅರಳಿ ನಿಂತಿದೆ.
ಧರ್ಮ, ಸಾಮಾಜಿಕ ಮೌಲ್ಯ, ಬದುಕಿನ ಸಾರ, ಶರಣರ ತತ್ವವನ್ನು ಒಳಗೊಂಡ ಸುಮಾರು ನಾಲ್ಕುನೂರಾ ಇಪ್ಪತ್ತು ವಚನಗಳನ್ನೊಳಗೊಂಡ ವಚನ ಪುಸ್ತಕ ಇದಾಗಿದೆ.
ಧರ್ಮ ಸೂಕ್ಷ್ಮತೆ, ದೈವಿಕ ಪ್ರಜ್ಞೆ, ಸಾಮಾಜಿಕ ಕಾಳಜಿಯ ಜೊತೆಗೆ ಮೌಲ್ಯಗಳನ್ನು ಸಾರುವ ವಚನಗಳನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ.

ಈ ಕೃತಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಬಾಳೆಹನ್ನೂರರು ಮತ್ತು ಶ್ರೀ ಮಹಾಂತಲಿಂಗ ಶಿವಾಚಾರ್ಯರು ನಂದವಾಡಗಿಯವರು ಶುಭಾಶೀರ್ವಾದ ನೀಡಿ ವಚನಕಾರರ ಕುರಿತಾಗಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದು ಕೃತಿಯ ಮೇರುತನಕ್ಕೆ ಸಾಕ್ಷಿಯಾಗಿದೆ. ಹಾಗೆ ಆಧುನಿಕ ವಚನಕಾರರಾದ
ಶ್ರೀ ಶಶಿಧರ ಸ್ವಾಮಿ ಉದ್ಬಾಳವರ ಅಭಿಮಾನದ ಬೆನ್ನುಡಿಯೂ ಉತ್ತಮವಾಗಿದ್ದು ಕೃತಿಯ ಸಫಲತೆಗೆ ಕನ್ನಡಿಯಾಗಿದೆ.

೧) ಸಕಲವೂ ಪರಮಾತ್ಮನೇ ಆಗಿರುವಾಗ, ಅನ್ಯ ದೇಶ ಸುತ್ತಿ, ಅನ್ಯ ಕೋಶ ಓದಿ ಬೆಂಡಾಗಿ ಬಂದಿಹೆ ಉದ್ಧರಿಸು ತಂದೆ ಬೆಟ್ಟದ ಮಲ್ಲಿಕಾರ್ಜುನ ಎಂದು ಮೊದಲ ವಚನದಲ್ಲೇ ದೈವದ ಪ್ರಭಾವ ಹೆಚ್ಚು ಎಂದು ತಿಳಿಹೇಳಿದ್ದಾರೆ.

೨೭) ಗುರು ಹಿರಿಯರಿಗ ಸಂತುಷ್ಟಗೊಳಿಸದ ಬಲ, ಮನೆ ಮನೆಯವರಿಗೆ ಸಂತೂಷ್ಟಗೊಳಿಸದ ತನು ಇದ್ದರೇನು ಫಲ, ನಿಮ್ಮನ್ನು ಸಂತುಷ್ಟಗೊಳಿಸುವವನು, ಅವರನ್ನು ಸಂತುಷ್ಟಗೊಳಿಸಿದವನೇ ಆಗಬೇಕೆಂದು ಅರ್ಥವತ್ತಾಗಿ ಹೇಳಿದ್ದಾರೆ.

೨೯) ಅನುಭಾವದೊಳಗಿನ ಅನುಭವ,
ನುಡಿ ಜ್ಞಾನದೊಳಗಿನ ಸುಜ್ಞಾನ ಅರಿಯಲು ಜ್ಞಾನದೊಳಗಿನ ಮರ್ಮ ಅರಿಯಲೇಬೇಕೆಂದು ಮಾರ್ಮಿಕವಾಗಿ ಹೇಳಿದ್ದು ಓದುಗರಿಗೆ ಮುಟ್ಟತ್ತದೆ.

೩೪) ಕಾರಣವಿಲ್ಲದೇ ಹುಲ್ಲು ಕಡ್ಡಿಯೂ ಅಲುಗಾಡದು, ಕಾರಣವಿಲ್ಲದೆ ಜೀವ ಜಗಕೆ ಬಾರದು, ಅಂತೆಯೇ ಪರಮಾತ್ಮನ ಆಜ್ಞೆ ಇಲ್ಲದೇ ಆತನ ಸೇವೆಯೂ ಅಲಭ್ಯ ಎಂಬುದನ್ನು ಸ್ಪಷ್ಪಡಿಸುವ ವಚನ ಚೆನ್ನಾಗಿ ರಚಿಸಿದ್ದಾರೆ.

೩೬)ಮೂರು ಅರಿಯದ ಮುನ್ನ ಮನದಿ
ಆರು ಅರಿಯದ ಮುನ್ನ ದೇಹದಿ
ಮೂರು ಆರರ ಅರ್ಥವಿರದ ಜೀವನಕೇನೆಂಬೆ
ಎಂದು ಬದುಕಿನ ಗುಟ್ಟನ್ನು ಅರ್ಥಮಾಡಿಕೊಂಡವನಿಗೆ ಮುಕ್ತಿ, ಇಲ್ಲದಿದ್ದರೆ ಇಲ್ಲವೆಂಬ ಗೂಢಾರ್ಥವುಳ್ಳ ಕವನ ಶ್ರೀಯತರ ಪ್ರೌಢಿಮೆಯನ್ನು ತೋರಿಸುತ್ತದೆ.

೫೨)ಆವ ಕಾಯಕವ ಮಾಡಿದರೇನು?
ಆವ ಪೂಜೆಯನು ಮಾಡಿದರೇನು? ಶ್ರದ್ಧೆ, ಭಕ್ತಿ ಇರದ ಕಾರ್ಯ ಪೂಜೆಗೆ ಫಲವಿಲ್ಲ ಎಂಬ ಸತ್ಯದ ವಚನ ಇದು.

೬೨) ಲಿಂಗದ ಸತ್ಯ, ಅಂಗದ ಸತ್ಯ, ಆತ್ಮದ ಸತ್ಯವನ್ನು ಹೋಲಿಸಿ ಬರೆದು ಮಲ್ಲಿಕಾರ್ಜುನನ ಪಾದ ಸೇರಲು ಇವು ಮೂರೂ ಅವಶ್ಯವೆಂದು ತಿಳಿಸುತ್ತಾರೆ.

೭೫) ತಾಯಿ ತಂದೆಗಳನು ಪ್ರೀತಿಸದಾ ಪೂಜೆ,
ಬಂಧುಬಳಗವ ಆರೈಸದಾ ನಿಷ್ಠೆ,
ಸಕಲ ಜೀವರಾಶಿಗಳು ತನ್ನಂತೆ ನೋಡದಾ ಜೀವ ಮೂರು ನಡೆಗಳಿಗೆ ಮುಕ್ತಿ ನೀಡದಿರು ಬೆಟ್ಟದ ಮಲ್ಲಿಕಾರ್ಜುನ ಎಂದು ಪಕ್ವ ಮನದಿಂದ ಬೇಡಿಕೊಳ್ಳುತ್ತಾರೆ…

೮೯) ಅಧೀನನಿಗೆ ಗುರುವಿನ ಸತ್ವದ ಜ್ಞಾನವಿರಬೇಕು,
ಅಜ್ಞಾನಿಗೆ ಜ್ಞಾನದ ಸೊಬಗಿನ ಅರಿವಿರಬೇಕು,
ಭಕ್ತನಿಗೆ ಭಕ್ತಿರಸದ ರಸವತ್ತತೆಯ ಅರಿವಿರಬೇಕೆಂದು ಮಲ್ಲಿಕಾರ್ಜುನನ ಸೇವೆಗೆ ಬಲವಿರಬೇಕು, ಅಂದರೆ ಅದೃಷ್ಟ ಬೇಕೆಂದು ಉತ್ತಮವಾದ ಹೋಲಿಕೆಗಳೊಂದಿಗೆ ಬರೆದಿದ್ದಾರೆ.

೧೨೦) ಹಸಿದಾಗ ಅನ್ನದ ಮಹತ್ವ,
ಜಯಗಳಿಸಿದಾಗ ಸತ್ಯದ ಮಹತ್ವ,
ನರಕಕ್ಕೆ ಹೋದಾಗಲೇ ಭಕ್ತಿಯ ಮಹತ್ವ ಮಾನವನಿಗೆ ಅರಿವಾಗುತ್ತದೆ, ಅನುಭವವೇ ನಿಜವಾದ ಗುರು ಮನುಷ್ಯನಿಗೆಂಬ ಸತ್ಯವನ್ನು ಈ ವಚನದ ಮೂಲಕ ಸಾರಿ, ಇಂತಹ ಅಂಧಕಾರದಲ್ಲಿರವವರಿಗೆ ಮೋಕ್ಷ ನೀಡೆಂದು ವಿನಮ್ರವಾಗಿ ಬೇಡಿಕೊಳ್ಳುತ್ತಾರೆ.

೧೩೧) ಜ್ಞಾನದಿಂದ ಕ್ರೋಧದ ಅಳಿವು, ಅದುವೇ ಕರ್ಮ
ಉತ್ತಮ ಮನಸಿನಿಂದ ಮನದ ಮರ್ಮದ ಅಳಿವು ಅದುವೇ ಆನಂದ,
ಇದೇ ನಮ್ಮನ್ನು ಕಾಯುವ ಕರ್ಮದ ಕನಕ, ಬದುಕು ಬಂಗಾರವಾಗುವುದಕ್ಕೆ ಸತ್ಕರ್ಮದ ಮಾರ್ಗ ಹಿಡಿಯಬೇಕೆಂದು ಸೂಚಿಸುತ್ತಾರೆ.

೧೫೫) ನಾನು ಅಮರನಲ್ಲ, ಕ್ಷಣಿಕ ಎಂದು ಅರಿತು ಭಕ್ತಿ ಶ್ರದ್ಧೆಯಿಂದಿರುವುದೇ ದೇವನನ್ನಲಿಸಿಕೊಳ್ಳುವ ಮಾರ್ಗ ಎಂದು ತಿಳಿಹೇಳಿದ್ದಾರೆ…

೨೦೧)ಹರಿವ ಹಳ್ಳಜ ನೀರಿಗೆ ಹಾಳಾದ ಕ್ಯಾತ್ನಟ್ಟಿ
ಪುನಃ ಹಾಳಾದೀತು?
ಮಾಸಂಗಿಪುರವು ತನ್ನ ಮೆರುಗನ್ನು ಪುನಃ ಮನುಜರಿಗೆ ನೀಡೀತು? ಎಂದು ಪ್ರಶ್ನಾತೀತವಾಗಿ ಚಿಂತಿಸಿ, ಹಳೆಯ ಮಾಸಂಗಿಯ ವೈಭವವನ್ನು ಮೆಲುಕು ಹಾಕಿದ್ದಾರೆ.

೨೮೪) ನೀತಿ ಇದ್ದರೆ ಹಾನಗಲ್ ಕುಮಾರರಂತಿರಬೇಕು
ಶ್ರದ್ಧೆ ಇದ್ದರೆ ಗಾನಯೋಗಿ ಪಂಚಾಕ್ಷರರಂತಿರಬೇಕು,
ನಿನ್ಮ ಭಕ್ತಿಗಾದರೆ ಅಕ್ಕಮಹಾದೇವಿಯರಂತಿರಬೇಕು ಎಂದು ಮಹಾತ್ಮರನ್ನು ನೆನೆಯುವುದರ ಜೊತೆಗೆ ನಾವು ಹೇಗಿರಬೇಕೆಂದು ಮನಮುಟ್ಟುವಂತೆ ತಿಳಿಹೇಳಿದ್ದಾರೆ.

೩೪೭)ದೈವತ್ವವಿಲ್ಲದ ಪರಮ ಭಕ್ತಿಯು
ಮಾತೃತ್ವವಿಲ್ಲದ ಪರಮ ವಾತ್ಸಲ್ಯವು
ದೃಢತ್ವವಿಲ್ಲದ ಪರಮ ಮನಸ್ಸಿನಿಂದ ಏನನ್ನು ಸಾಧಿಸಲಾಗದು, ಕಾಯಕಕ್ಕೆ ಶ್ರದ್ಧೆ, ಪೂಜೆಗೆ ಭಕ್ತಿಯ ಜೊತೆ ದೈವೀ ಬಲವೂ ಬೇಕೆಂದು ಹೇಳುವ ಶ್ರೀಯುತರ ವಚನ ಮುಕ್ತಿ ಮಾರ್ಗಕ್ಕೆ ದಾರಿಯೆನಿಸುತ್ತದೆ.

೩೭೫) ಬಸವಣ್ಣಗೆ ಕೂಡಲಸಂಗಮ ಶ್ರೇಷ್ಠ
ಶಂಕರದಾಸಿಮಯ್ಯಗೆ ನವಿಲೆ ಜಡೀಶಂಕರ ಶ್ರೇಷ್ಠ
ಮಸ್ಕಿಯ ಶ್ರೀಧರನಿಗೆ ಮಸ್ಕಿ ಬೆಟ್ಟದ ಮಲ್ಲಿಕಾರ್ಜುನನೇ ಶ್ರೇಷ್ಠ ಎಂದು ಮಲ್ಲಯ್ಯನ ಮೇಲೆ ಇರುವ ಅಪಾರವಾದ ಭಕ್ತಿಯನ್ನು ವಚನದಲ್ಲಿ ತೋರಿಸಿ, ಎಲ್ಲಕ್ಕೂ ನೀನೆ, ಎಲ್ಲವೂ ನಿನಗೇ ಮುಡಿಪೆಂದು ಅರ್ಪಣಾ ಮನೋಭಾವ ತೋರಿಸಿದ್ದಾರೆ.

ಇನ್ನೂ ಹಲವಾರು ವಚನಗಳು ನಮಗೆ ಸಂತೃಪ್ತಿಭಾವವನ್ನು ನೀಡುತ್ತವೆ. ಮೌಲ್ಯಗಳನ್ನು ಜೀವನ ಪಾಠವನ್ನು ಕಲಿಸುತ್ತನೆ. ಎಲ್ಲವನ್ನೂ ವಿವರಿಸುವ ಮಹದಾಸೆ ಇದ್ದರೂ, ೪೨೦ ವಚನಗಳ ವಿಶ್ಲೇಷಿಸುವುದು ಕಷ್ಟ ಸಾಧ್ಯವಾದುದರಿಂದ ಬರಹಕ್ಕೆ ಮಿತಿಗೊಳಿಸುತ್ತಿದ್ದೇನೆ. ಕೆಲವೊಂದನ್ನು ಮಾತ್ರ ಪರಿಚಯಾತ್ಮಕವಾಗಿ ಬರೆದಿದ್ದೇನೆ.

ಅರಿಷಡ್ವರ್ಗಗಳನ್ನು ತಮ್ಮ ಅಧೀನದಲ್ಲಿರಿಸಿಕೊಂಡು, ಭಕ್ತಿ, ಸೌಜನ್ಯ, ಶ್ರದ್ಧೆ, ಕಾರುಣ್ಯ, ನಿಷ್ಠೆ, ಸತ್ಯತೆ, ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡು ಮಸ್ಕಿ ಬೆಟ್ಟದ ಮಲ್ಲಿಕಾರ್ಜುನನಲ್ಲಿ ಅಪರಿಮಿತ ಭಕ್ತಿಯನ್ನಿಟ್ಟು ೪೨೦ ವಚನಗಳನ್ನು ವಿಭಿನ್ನವಾದ ಶೈಲಿಯಲ್ಲಿ, ನಾನಾ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದಾದ ವಚನಗಳನ್ನು ನಮಗೆ ನೀಡಿರುವ ಶ್ರೀಧರ ಬಳ್ಳೊಳ್ಳಿಯವರು ಉತ್ತಮ ವಚನಕಾರರಾಗಿ ಹೊರಹೊಮ್ಮಿದ್ದಾರೆ. ಇಂತಹ ಯುವ ವಚನಕಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯ ಕವಿಮನಸುಗಳಿಂದ, ಶರಣರಿಂದ, ಬಸವತತ್ವ ಸಾರುವ ಮಠಮಾನ್ಯಗಳಿಂದ ಆಗಬೇಕಿರುವುದು ಅವಶ್ಯಕವಾಗಿದೆ.
ಅಂತೆಯೇ ಶ್ರೀ ಶ್ರೀಧರ ಬಳ್ಳೊಳ್ಳಿಯವರು ಸತ್ವಯುತವಾದ, ಮೌಲ್ಯಯುತವಾದ ವಚನಗಳನ್ನು ಮತ್ತಷ್ಟು ಮಗದಷ್ಟು ರಚಿಸಲಿ, ಹತ್ತಾರು ಸಂಕಲನಗಳನ್ನು ನಮ್ಮೆಲ್ಲರ ಓದಿಗೆ, ಜ್ಞಾನಾರ್ಜನೆಗೆ, ನೀತಿ ಮಾರ್ಗದ ಅರಿವಿಗೆ ನೀಡಲಿ ಎಂದು ಹಾರೈಸುತ್ತೇನೆ.

ವರದೇಂದ್ರ ಕೆ ಮಸ್ಕಿ
9945253030

ಪುಸ್ತಕಕ್ಕಾಗಿ ಸಂಪರ್ಕಿಸಿ
ಶ್ರೀ ಶ್ರೀಧರ ಬಳ್ಳೊಳ್ಳಿ
ಮಸ್ಕಿ
9986779206, 7353472944

Don`t copy text!