ಶ್ರೀ ಕೃಷ್ಣ – ಕುಚೇಲ

ಶ್ರೀ ಕೃಷ್ಣ – ಕುಚೇಲ

ಕೃಷ್ಣ ಶ್ರೀ ಪತಿ
ಕುಚೇಲ ಪತಿಯಷ್ಟೇ

ಒಂದು ಮಗುವ ಮೀನಿನ ಬಾಯಿಗಿಟ್ಟಾಗ ಅದ ಸಂಕಟ
ಇರುವ ಮಕ್ಕಳಿಗೆ ಅನ್ನ ಬಟ್ಟೆ ನೆತ್ತಿಗಳಿಲ್ಲದ ಸಂಕಟ
ಎರಡೂ ಒಂದೇ ಜಗಕ್ಕೆ !
ವ್ಯಾಸ ಅನಿಸಿದ್ದೇ ಇವೆರಡರ ಅತಿ ಮಿತಿಗಳ ಅರಿತ ಸನ್ಯಾಸದಲ್ಲಿ

ಸರಳ ನಿರಾಳಗಳ ಮಧ್ಯೆ ಒಂದಷ್ಟು ವಿಶಾದ
ಬಳ್ಳಿ ಹಬ್ಬಿದಂತೆ ಮರದ ಸುತ್ತ
ಬಡತನ ಸಿರಿತನಗಳ ಅಂತರ

ನಡುವೆ
ಮಾರ್ಕ್ಸ್ ಕರೆದು ನಿಲ್ಲಿಸಿ ಅಧ್ಯಾತ್ಮದ ಹಾದಿ ಬಂದಾದಂತೆ
ವ್ಯಾಸನನು ನಿಲ್ಲಿಸಿದರೆ ವರ್ಗಗಳ ಮರೆತುಬಿಡುವ
ಅಧ್ಯಾತ್ಮದ ಸುಖ ಕಾಣಿಸುವ ತಲ್ಲೀನದಲ್ಲಿ
ಡೆರಿಡಾ ಬಂದು ಮಧ್ಯೆ ನಿಂತರೆ ಮುಗಿಯಿತಲ್ಲಿ
ಒಂದು ಕಾಲದ ಕಾಲಮಾನದ ವೈರುಧ್ಯಗಳವು

ರುಕ್ಮಿಣಿ ಸತ್ಯಭಾಮೆಯರಿದ್ದೂ ಶ್ರೀಕೃಷ್ಣ ಏಕಾಂಗಿ
ತಾವರೆ ಎಲೆಯ ಮೇಲಿನ ನೀರ ಹನಿ !
ಕಾಲದ ಪ್ರತಿಫಲನಕ್ಕೆ ಬೆರಗು ಕಣ್ಣು
ಹೆಂಡತಿ ಮಕ್ಕಳಿಗಾಗಿ ಕುಚೇಲನ ಪಡಿಪಾಟಲು
ಸಂಸಾರ ಸಾರದಲಿ ಲೀನ ತಲ್ಲೀನ !
ಪರಂಧಾಮದ ಮಾರ್ಗವನು ಅವಲಕ್ಕಿಯಲಿ ಅನ್ವೇಷಿಸಿದವ

ಎರಡೂ ಅತೀ ಮಿತಿಯಲ್ಲಿಲ್ಲ
ನೀರ ಹನಿಗೆ ನಿರಾಳ ತಿಳಿಯುವುದಿಲ್ಲ
ಬಳ್ಳಿಗೆ ಮರದ ಕಷ್ಟ ಎಂದೂ ಅರ್ಥವಾಗುವುದಿಲ್ಲ

ನೋಡಿ
ನಾವಾದರೂ ಇದ್ದೇವೆ
ಅತ್ತ ಅಮರವೂ ಅಲ್ಲ ಇತ್ತ ಮರವೂ ಅಲ್ಲ
ತಾವರೆ ಎಲೆಯ ಮೇಲಿನ ಜಲಬಿಂದು
ಎನ್ನದಿರಿ ನೊಂದೀತು ಆತ್ಮಸಾಕ್ಷಿ !

ಸಾಂದೀಪನಿ ನಿರಾಳವಾದ
ಎರಡು ಅತಿಗಳಿಗೂ ಸಾಕ್ಷಿಯಾಗಿ
ಬದುಕ ಎರಡು ದಿಕ್ಕುಗಳ ಕಾಣಿಸಿ
ವ್ಯಾಸ ನಿರಾಳವಾದ
ನಾವು ಸಮರತಿ ಸಾಧಿಸದ ಸಮಪಾದ
ದಾಸರು

ಆರ್. ದಿಲೀಪ್ ಕುಮಾರ್
ಚಾಮರಾಜನಗರ

Don`t copy text!