ಗುರು ಪೀಠಕ್ಕೆ ಸಾರಥಿಯಾದ, ಶರಣ ಉರಿಲಿಂಗಪೆದ್ದಿಯವರು

 

ಗುರು ಪೀಠಕ್ಕೆ ಸಾರಥಿಯಾದ, ಶರಣ ಉರಿಲಿಂಗಪೆದ್ದಿ

೯೦೦ ವರ್ಷಗಳ ಹಿಂದೆಯೇ, ಜಾತಿ ವ್ಯವಸ್ಥೆಗೆ ಸೆಡ್ಡು ಹೊಡೆದು
‘ಗುರು ಪೀಠಕ್ಕೆ ಸಾರಥಿಯಾದ, ಶರಣ ಉರಿಲಿಂಗಪೆದ್ದಿಯವರು

ಕರ್ನಾಟಕ ಸರಕಾರ ಗುರುತಿಸಿ ದಲಿತ ವಚನಕಾರರ ಪಟ್ಟಿಯಲ್ಲಿ,
ಶರಣ ಉರಿಲಿಂಗಪ್ಪೆದ್ದಿಯವರು ಕೂಡ ಒಬ್ಬರು ಇವರು ಬಸವಣ್ಣನವರ ಸಮಕಾಲೀನರು.
ಇವರ ಅಂಕಿತನಾಮ- ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
ಇವರ ಒಟ್ಟು 360 ವಚನಗಳು ಲಭ್ಯವಿವೆ.
ಪೂರ್ವಾಶ್ರಮದಲ್ಲಿ ಈತನೊಬ್ಬ ಚೋರವೃತ್ತಿಯವ ಎಂದು ತಿಳಿದು ಬರುತ್ತದೆ,
ಆ ನಂತರ ಈತ ಮಹಾ ಶರಣನಾಗಿ ಬದಲಾದ ಸನ್ನಿವೇಶವನ್ನು ನೋಡೋಣ ಬನ್ನಿ,

ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿ ಅವಸೆ ಕಂಧಾರ ಎಂಬುದು ಒಂದು ಊರಿನಲ್ಲಿ.ಉರಿಲಿಂಗದೇವ ಎಂಬ ಶರಣನಿದ್ದ ಈತನೂ ಕೂಡ ವಚನಕಾರನೇ ಎಂಬುದು ವಿಶೇಷ, ಉರಿಲಿಂಗದೇವ ಭಕ್ತಜನಕ್ಕೆ ಉಪದೇಶ ಮಾಡುತ್ತಿದ್ದ ಗುರು. ಅವನು ಇಪ್ಪತ್ತೊಂದು ಗುರುಸಂಪ್ರದಾಯಕ್ಕೆ ಗುರುವೆಂದು ಕರೆಸಿಕೊಂಡವ, ಒಮ್ಮೆ ನಂದ್ಯವಾಡದಲ್ಲಿ ಸೂರಯ್ಯ ಎಂಬ ಭಕ್ತನಿಗೆ ಅವನ ಮನೆಯಲ್ಲಿ ಉಪದೇಶವನ್ನು ಮಾಡುತ್ತಿದ್ದ. ಅದಕ್ಕೆ ಬೇಕಾದ ಬೆಲೆ ಬಾಳುವ ಪೂಜಾ ಸಮಗ್ರಿಗಳನ್ನು ತಂದಿದ್ದ, ಈ ವಿಷಯ ತಿಳಿದಿದ್ದ ಪೆದ್ದಣ್ಣ ಅದೇ ದಿನ ರಾತ್ರಿ ಸೂರಯ್ಯನ ಮನೆಗೆ ಕಳ್ಳತನ ಮಾಡಲು ಹೊರಟ. ಆದರೆ ನಾನಾ ಕಾರಣಗಳಿಂದ ಹೋಗಲು ತಡವಾಗಿ ಬೆಳಗಿನ ಜಾವವಾಗಿತ್ತು, ಸೂರಯ್ಯನ ಮನೆಯ ಮಾಳಿಗೆಯನ್ನೇರಿ ಗಿಡಕಿಯಿಂದ ಇಣುಕಿ ಮನೆಯೊಳಗೆ ನೋಡಿದ. ಉರಿಲಿಂಗದೇವನು ಉಪದೇಶ ಮಾಡುವ ಮುನ್ನ ಮೊದಲು ಶಿವಪೂಜೆಯಲ್ಲಿ ತೊಡಗಿದ್ದ. ತಾನು ಮಾಡುವ ಪೂಜೆ ಇತರರಿಗೆ ಕಾಣಬಾರದೆಂದು ಅವನು ಕೋಣೆಯ ಬಾಗಿಲನ್ನು ಮುಚ್ಚಿಕೊಂಡಿದ್ದ. ಅಷ್ಟವಿಧಪೂಜೆ, ಷೋಡಶೋಪಚಾರಗಳನ್ನು ಪೂರೈಸಿದ ಮೇಲೆ ಅವನ `ಶರಣಸತಿ ಲಿಂಗಪತಿ’ ಭಾವದಲ್ಲಿ ತಲ್ಲೀನನಾಗಿ ಲಿಂಗಪೂಜೆಯಲ್ಲಿ ವಚನ ಹಾಡುತಿದ್ದ. ಆಹಾ ಅದೇನೋ ಕುತೂಹಲವೋ, ಅಲ್ಲೇ ಕುಳಿತ ಪೆದ್ದಣ್ಣನೂ ಮೂಕ ವಿಸ್ಮಿತನಾಗಿ ಕಳೆದು ಹೋಗಿದ್ದ, ನಂತರ ಲಿಂಗಪೂಜೆಯು ಮುಗಿಯಿತು. ತಾನು ದೀಕ್ಷೆ ಕೊಡಲು ಮರಳಿದ.  ಇದನ್ನೆಲ್ಲ ಪೆದ್ದಣ್ಣ ಮಾಳಿಗೆಯಿಂದಲೇ ಇಣುಕಿ ನೋಡುತ್ತಿದ್ದ; ಪೆದ್ದಣ್ಣ ಗುರು ಶಿಷ್ಯನಿಗೆ ದೀಕ್ಷೆ ನೀಡುವ ಕ್ರಮವನ್ನೆಲ್ಲ ಮಾಳಿಗೆಯಿಂದಲೇ ಅವನು ಗಮನಿಸಿದ್ದ. ಕೊನೆಯಲ್ಲಿ ಶಿಷ್ಯರು ಉರಿಲಿಂಗದೇವನಿಗೆ ಶರಣೆಂದು ನಮಸ್ಕಾರ ಮಾಡುವುದನ್ನು ಕಂಡ, ಪೆದ್ದಣ್ಣ ತಾನೂ ತಡ ಮಾಡದೇ ಶರಣು ಶರಣು ಎನ್ನುತ್ತ ಮಾಳಿಗೆಯಿಂದ ಜಿಗಿದು ಓಡೋಡಿ ತನ್ನ ಮನೆಗೆ ಬಂದ ಪೆದ್ದಣ್ಣ ಅಂದೇ ಕಳ್ಳತನ ವೃತ್ತಿಯನ್ನು ತ್ಯಜಿಸಿ ಶಿವಭಕ್ತನಾಗಿ ಬದಲಾದ.
ಮರುದಿನವೇ ಪೆದ್ದಣ್ಣ ಉರಿಲಿಂಗದೇವನ ಮನೆಗೆ ಬಂದ. ಅವನು ಹೇಳದಿದ್ದರೂ ತಾನಾಗಿಯೇ ಅವನಿಗೆಂದು ಒಂದು ಹೊರೆ ಹುಲ್ಲು, ಒಂದು ಹೊರೆ ಕಟ್ಟಿಗೆಯನ್ನು ತಂದು ಹಾಕಿದ. ಅಂದು ಮಾತ್ರವಲ್ಲ, ಇದನ್ನು ಪ್ರತಿನಿತ್ಯ ಮಾಡುತ್ತ ಬಂದ. ಹಿಂಗೆ ಕೆಲವು ದಿನಗಳು ಕಳೆದವು.


ಒಂದು ದಿನ ಉರಿಲಿಂಗದೇವನು, “ನಿನಗೇನು ಬೇಕೊ? ಮಾರಾಯ ಇದುವರೆಗೆ ಹುಲ್ಲು ಕಟ್ಟಿಗೆ ಹೊರೆಗಳನ್ನು ತಂದು ಹಾಕಿದ್ದಕ್ಕ ಬಾಬ್ತು ಹಣವನ್ನು ತೆಗೆದುಕೋ, ಮತ್ತೆ ಈ ಕಡೆ ಬರಬೇಡ, ಎಂದು ಗದರಿಸಿದ. ನನ್ನಂತವರಿಗೆ ಲಿಂಗದೀಕ್ಷೆ ಕೊಡಲಿಕ್ಕೆ ಸಾಧ್ಯವಿಲ್ಲ ಅದ್ಕೆ. ಇಲ್ಲಿ ಬರಬೇಡವೆಂದು ಹೇಳುತ್ತಿದ್ದಾರೆ ಎಂಬುದಾಗಿ ಪೆದ್ದಣ್ಣ ಅರ್ಥಮಾಡಿಕೊಂಡ. ಆದ್ರೆ ಹುಲ್ಲುಕಟ್ಟಿಗೆ ಹೊರೆಗಳನ್ನು ತಂದುಹಾಕುವುದನ್ನು ಮಾತ್ರ ಆತ ನಿಲ್ಲಿಸಲಿಲ್ಲ. ಹೀಗೆಯೇ ಮತ್ತೆ ಕೆಲವು ದಿನಗಳು ಕಳೆದವು. ಮುಂದೆ ಒಂದು ದಿನ ಕಟ್ಟಿಗೆಯನ್ನು ತಂದಾಗ ಉರಿಲಿಂಗದೇವನು ಮತ್ತೆ, “ನಿನಗೆ ಏನು ಬೇಕು? ಯಾಕ್ ಹಿಂದೆ ಬಿದ್ದೀಯಾ ಪೆದ್ದಾ ಎಂದು ಕೇಳಿದ. ಆಗ ಪೆದ್ದಣ್ಣನು, “ಸ್ವಾಮಿ, ನಂದಿವಾಡದ ಸೂರಯ್ಯ ಭಕ್ತನಿಗೆ ಅದೇನೋ ದೀಕ್ಷೆಯನ್ನು ನೀಡಿದಂತೆ ನನಗೂ ನೀಡಿ” ಎಂದು ವಿನಯದಿಂದ ಕೇಳಿಕೊಂಡ. “ಆ ವಿಚಾರ ನಿನಗೆ ಹೇಗೆ ತಿಳಿಯಿತು?” ಎಂದು ಉರಿಲಿಂಗದೇವರು ಕೇಳಿದಾಗ ಪೆದ್ದಣ್ಣನು ತಾನು ಮಾಳಿಗೆಯ ಮೇಲಿನಿಂದ ಅದನ್ನು ಕಂಡ ವಿಷಯವನ್ನು ವಿವರಿಸಿದ. ಗುರು ಆಗ ಸುಮ್ಮನಾದ.

ಮತ್ತೂ ಕೆಲವು ದಿವಸಗಳಾದವು; ಪೆದ್ದಣ್ಣ ಹುಲ್ಲು-ಕಟ್ಟಿಗೆಯನ್ನು ತರುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮತ್ತೊಂದು ದಿನ ಬಂದು ನಂಗೂ ಲಿಂಗವನ್ನು ಕೊಡಿ ಎಂದು ಕೇಳಿಕೊಂಡ; `ಇವನು ತಾನು ಹೋದಲ್ಲಿ ಹಿಂಬಾಲಿಸುತ್ತಾನೆ, ಇವನ ಕಾಟ ಕಳೆದುಕೊಳ್ಳಬೇಕೆಂದು ಉರಿಲಿಂಗದೇವನು ಒಂದು ಕಲ್ಲನ್ನು ಕೈಯಲ್ಲಿ ತೆಗೆದುಕೊಂಡು ‘ಗೆ ದಗಡಿ, ಜಾ’ (ತಗೋ ಕಲ್ಲು, ತೊಲಗು) ಮಾರಾಯ ಎಂದು ಹೇಳಿ ಒಂದು ಕಲ್ಲು ಕೊಟ್ಟ. ಅದನ್ನು ಸ್ವೀಕರಿಸಿದ ಮುಗ್ಧ ಪೆದ್ದಣ್ಣ ಗುರು ಬೈದದ್ದನ್ನೇ ಮಂತ್ರವೆಂದು ತಿಳಿದು “ಗೆ ದಗಡಿ, ಜಾ” “ಜಾ, ದಗಡಿ ಗೆ” ಎಂದು ಹೇಳಿಕೊಳ್ಳುತ್ತ ನಡೆದ. ಪೆದ್ದಣ್ಣನ ಭಾವದ ಬಲುಭಕ್ತಿಯಿಂದ ಕಲ್ಲು ಜ್ಯೋತಿರ್ಮಯ ಇಷ್ಟಲಿಂಗವಾಯಿತು ಅವನು ಗುರುಸೇವೆಯನ್ನು ಮುಂದುವರಿಸಿದ.
ಈಗಿನ ನಾಂದೇಡ್ ಪ್ರಾಂತ್ಯದಲ್ಲಿ, ನಂದರಾಜನೆಂಬುವನು ಒಂದು ಕೆರೆಯನ್ನು ಕಟ್ಟಿಸುತ್ತಿದ್ದ, ಆದರೆ ಭೂಮಿಯನ್ನೆಷ್ಟೇ ಅಗೆದರೂ ಕೂಡ ಕಿಂಚಿತ್ತೂ ನೀರು ಬೀಳಲಿಲ್ಲ. ಆಗ ಅವನು ತಾನು ಬಲ್ಲ ಶಿಲ್ಪಿಯೊಬ್ಬನನ್ನು ಕರೆದು ಸಲಹೆ ಕೇಳಿದ. ಅವನು “ಮಧ್ಯದಲ್ಲಿರುವ ಬಂಡೆಯನ್ನು ಕಿತ್ತಿದರೆ ನೀರು ಬರಬಹುದೆಂದನು” ಆಗ ಉರಿಲಿಂಗದೇವನು ಉರಿ ಕಣ್ಣಲ್ಲಿ ನೋಡಿದಲ್ಲದೆ ಈ ಕಲ್ಲನ್ನು ಕೀಳಲು ಆಗಲಾರದೆಂದು ಭಾವಿಸಿದ ನಂದರಾಜನು ಗುರು ಉರಿಲಿಂಗದೇವರನ್ನು ಕರೆದುಕೊಂಡು ಹೋಗಿ ಅದನ್ನು ತೋರಿಸಿದ. ಆಗ ಅವರು ಈ ಚಿಕ್ಕ ಕೆಲಸ ನಾ ಮಾಡಬೇಕೆ ಎಂದರು. ಅಷ್ಟರಲ್ಲೇ ಹಿಂದೆಯೇ ಹಿಂಬಾಲಿಸಿಕೊಂಡು ಬಂದಿದ್ದ ಪೆದ್ದಣ್ಣನು ತನ್ನ ಗುರುವಿಗೆ ಈ ಕೆಲಸ ನಾನೆ ಮಾಡುವುದಾಗಿ ಹೇಳಿದ, ಆಗ ತನ್ನ ಲಿಂಗವನ್ನು ಕುರಿತು, “ಗೆ, ದಗಡಿ, ಜಾ” ಎಂದು ಹೇಳಿದ. ಆಗ ಲಿಂಗವು ಕಟ್ಟನೆ ಹೋಗಿ ಆ ಬಂಡೆಯ ಮೇಲೆ ಕುಳಿತುಕೊಂಡಿತು. ಮತ್ತೊಮ್ಮೆ “ಗೆ, ದಗಡಿ, ಜಾ” ಎಂದು ಪೆದ್ದಣ್ಣ ಹೇಳಲು ಅದು ಬಂಡೆಯನ್ನು ಕಿತ್ತು ಹಾಕಿತು, ನೀರಿನ ಸೆಲೆ ಸರ್ರನೆ ಚಿಮ್ಮಿತು.

ನಂದರಾಜನು ಅತ್ಯಂತ ಆನಂದದಿಂದ ನಮಸ್ಕರಿಸಿ ಅವರಿಬ್ಬರನ್ನೂ ಕಳಿಸಿಕೊಟ್ಟ.
ಈ ಘಟನೆಯಿಂದಾಗಿ ಉರಿಲಿಂಗದೇವನಿಗೆ ಪೆದ್ದಣ್ಣನ ಮಹಿಮೆ ಗೊತ್ತಾಯಿತು. ಈತನು ದೊಡ್ಡ ಗುರುಭಕ್ತನೆಂಬುದನ್ನು ಮನಗಂಡ, ಹಾಗೂ ತಾತ್ಸಾರದಿಂದ ತಾನಿತ್ತಿದ್ದ ಕಲ್ಲೇ ಅವನ ಕೈಯಲ್ಲಿ ಜ್ಯೋರ್ತಿಮಯಲಿಂಗವಾದುದನ್ನು ಕಂಡು ಅಚ್ಚರಿಗೊಂಡು ಮರುಗಿದ. ಅವನಿಗೆ ಉರಿಲಿಂಗಪೆದ್ದಣ್ಣ ಎಂಬ ಹೊಸ ಹೆಸರನ್ನಿತ್ತು ಅವನಿಗೆ ಸಕಲವನ್ನೂ ಉಪದೇಶಮಾಡಿದ. ತನ್ನ ಭಕ್ತನಿಗೇ ತಾ ಭಕ್ತನಾಗಿ , ಉರಿಲಿಂಗದೇವನು ತನ್ನ ಗುರು ಪೀಠವನ್ನು ಪೆದ್ದಣ್ಣನಿಗಿಗೆ ಒಪ್ಪಿಸಿ
“ತನ್ನ ಗುರುಸಂಪ್ರದಾಯವ ಮುನ್ನೆಡೆಸು” ಎಂದು ಸೂಚಿಸಿದ. ಅದರಂತೆ ಪೆದ್ದಣಯ್ಯನು ಶಿವಭಕ್ತನಾದ, ನಂತರ ಅಲ್ಲಿಯವರೆಗೆ ಶ್ರೇಷ್ಠ ಕುಲದವರು ತಮ್ಮ ಸ್ವತ್ತೆಂದು ಬೀಗುತಿದ್ದ ಎಲ್ಲಾ ವಿದ್ಯೆಗಳನ್ನು ಕರಗತ ಮಾಡಿಕೊಂಡ, ಉರಿಲಿಂಗಪೆದ್ದಿಯವರು ವೇದ ಶಾಸ್ತ್ರ ಆಗಮ ಉಪನಿಷತ್ತು ಎಲ್ಲವನ್ನೂ ಅಳಿದುತೂಗಿ ತೂಕ ಮಾಡಿ, ಶ್ರೇಷ್ಠಜ್ಞಾನಿಯನಿಸಿದರು ನಂತರ ದಶದಿಕ್ಕುಗಳಿಂದ ಕೇಳಿ ಬರುತಲಿದ್ದ ಬಸವಣ್ಣನವರ ಕೀರ್ತಿವಾರ್ತೆಯನ್ನು ಕೇಳಿ ಕಲ್ಯಾಣಕ್ಕೆ ಬಂದನೆಂದು ಹಾಗೂ ಬಸವಣ್ಣನವರು ಉರಿಲಿಂಗಪೆದ್ದಿಗಳ ಕಂಡು ‘ಲಿಂಗವನ್ನೇ ಕಲ್ಲೆನುವ ಕಾಲದಲ್ಲಿ, ಕಲ್ಲನ್ನೇ ಲಿಂಗವನ್ನಾಗಿ ಕಂಡ ಶ್ರೇಷ್ಠ ಶರಣನಿಗೆ ಶರಣು ಶರಣಾರ್ಥಿ’ ಎಂದು ಸ್ವಾಗತಿಸಿದರೆಂದು, ಇದರಿಂದ ರೋಮಾಂಚಿತರಾದ ಶರಣ ಉರಿಲಿಂಗಪೆದ್ದಿಗಳು…

ಶಿವ ಶಿವಾ, ಬಸವಣ್ಣನೇ ಗುರುತತ್ತ್ವವುಳ್ಳ ಮಹಾವಸ್ತುವಾಗಿ
ಶ್ರೀಗುರುಲಿಂಗವೂ ಬಸವಣ್ಣನೇ.
ಶಿವಸುಖಸಂಪನ್ನನಾಗಿ ಶಿವಲಿಂಗವೂ ಬಸವಣ್ಣನೇ.
ಜಂಗಮಪ್ರಾಣಿಯಾಗಿ, ಜಂಗಮಲಿಂಗವೂ ಬಸವಣ್ಣನೇ.
ಪ್ರಸಾದಗ್ರಾಹಕನಾಗಿ, ಪ್ರಸಾದಲಿಂಗವೂ ಬಸವಣ್ಣನೇ.
ಭಾವಶುದ್ಧವುಳ್ಳ ಮಹಾನುಭಾವಿಯಾಗಿ, ಭಾವಲಿಂಗವೂ ಬಸವಣ್ಣನೇ.
ಪಂಚಾಚಾರ ನಿಯತಾತ್ಮನಾಗಿ, ಆಚಾರಲಿಂಗವೂ ಬಸವಣ್ಣನೇ.
ಗುರುಲಿಂಗಜಂಗಮಕ್ಕೆ, ಎನಗೆ ಇಷ್ಟವಾಗಿ,
ಇಷ್ಟಲಿಂಗವೂ ಬಸವಣ್ಣನೇ.
ಇಂತೀ ಚತುರ್ವಿಧ ಪ್ರಾಣವಾಗಿ, ಪ್ರಾಣಲಿಂಗವೂ ಬಸವಣ್ಣನೇ.
ಮಹಾಮಹಿಮನೂ ಬಸವಣ್ಣನೇ.
ಮಹಾವಸ್ತುವ ಗರ್ಭೀಕರಿಸಿಕೊಂಡಿಪ್ಪಾತನೂ ಬಸವಣ್ಣನೇ.
ಮಹಾಸತ್ಯನೂ ಬಸವಣ್ಣನೇ, ಮಹಾನಿತ್ಯನೂ ಬಸವಣ್ಣನೇ.
ಮಹಾಶಾಂತನೂ ಬಸವಣ್ಣನೇ, ಮಹಾಸುಖಿಯೂ ಬಸವಣ್ಣನೇ.
ಮಹಾಪರಿಣಾಮಿಯೂ ಬಸವಣ್ಣನೇ, ಮಹಾಲಿಂಗವೂ ಬಸವಣ್ಣನೇ.
ಇಂತೀ ನವವಿಧಲಿಂಗವೂ ಬಸವಣ್ಣನೇ.
ಇಂತಿವನೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದು
ಎನಗೆ ಪ್ರಸಾದವನಿಕ್ಕಿ ಸಲಹಿದನಯ್ಯಾ ಬಸವಣ್ಣನು.
ಇದು ಕಾರಣ, ಅನವರತ ನಾನು ಬಸವಾ, ಬಸವಾ, ಬಸವಯ್ಯಾ,
ಬಸವ ಗುರುವೇ, ಬಸವಲಿಂಗವೇ, ಬಸವ ತಂದೆಯೇ
ಬಸವಪ್ರಭುವೇ ನಮೋ ನಮೋ ಎನುತಿರ್ದೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಎಂದು ಹೇಳುತ್ತಾ…
ಗುರುವೆಂಬುವುದು ಮೇಲು ಜಾತಿಗೆ ಒಲಿದ ಒಂದು ಸ್ಥಾನವೆನಿಸಿದ ಕಾಲಮಾನದಲ್ಲಿ.
ಸಾಮಾನ್ಯರಲ್ಲೂ ಅರಿವು ಜಾಗ್ರತವಾಗಿಸಿ ಆ ‘ಅರಿವೇ ಗುರು’ವೆಂದು ಸಾರಿದ ಗುರು ತತ್ವದ ಮೇರುಗಿರಿಯನ್ನು ಚಿತ್ತದೊಳಗೆ ತಂದಿಟ್ಟ ಗುರು ಬಸವಣ್ಣನೇ, ಆ ಅರಿವಿನ ಮೂರ್ತಿವೆತ್ತಂತಿರುವ ಆಚಾರ ಲಿಂಗವೂ ಬಸವಣ್ಣನೇ. ತನ್ನೊಳಗಿನ ಪರಮಸುಖವ ತೋರಿದನಾಗಿ ಶಿವಸುಖಸಂಪನ್ನ ಶಿವಲಿಂಗವೂ ಬಸವಣ್ಣನೇ. ಸಕಲವೆಲ್ಲದರಲ್ಲೂ ಚೈತನ್ಯ ಶೀಲನಾಗಿ ಜಂಗಮ ಲಿಂಗವೂ ಬಸವಣ್ಣನೇ. ಸುಖ ದುಖಃವೆಂಬ ಬೇಧವಿಲ್ಲಾಗಿ ಬಂದದ್ದೆಲ್ಲವೂ ಪ್ರಸಾದಮಯವಾದ ಕಾರಣ ಪ್ರಸಾದಲಿಂಗವೂ ಬಸವಣ್ಣನೇ. ಹೀಗೇ ಎನ್ನ ಇಷ್ಟಲಿಂಗವೂ, ಭಾವಲಿಂಗವೂ, ಪ್ರಾಣಲಿಂಗವೂ, ತನುಮನವೆಲ್ಲವೂ ಬಸವಣ್ಣನೆಂದು, ಹಾಡಿಹೊಗಳಿದ್ದಾರೆ ಶರಣ ಉರಿಲಿಂಗಪ್ಪೆದ್ದಿಯವರು.
ನಂತರ,

ಎನ್ನ ಕರಸ್ಥಲಕ್ಕೆ ಬಂದು ಜ್ಞಾನಾಮೃತವೆಂಬ ಪ್ರಸಾದವನಿಕ್ಕಿ ಸಲಹಿದ ಗುರು ಬಸವಣ್ಣನೆಂದು ಕೊಂಡಾಡಿದ್ದಾರೆ,

ಇಂತಿವನೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದು
ಎನಗೆ ಪ್ರಸಾದವನಿಕ್ಕಿ ಸಲಹಿದನಯ್ಯಾ ಬಸವಣ್ಣನು.
ಇದು ಕಾರಣ, ಅನವರತ ನಾನು ಬಸವಾ, ಬಸವಾ, ಬಸವಯ್ಯಾ,
ಬಸವ ಗುರುವೇ, ಬಸವಲಿಂಗವೇ, ಬಸವ ತಂದೆಯೇ
ಬಸವಪ್ರಭುವೇ ನಮೋ ನಮೋ ಎನುತಿರ್ದೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. ಎಂದು ಅನವರತ ಯಾವಾಗಲೂ ಬಸವಾ, ಬಸವಾ, ಬಸವಾ, ಎನ್ನುವೆನೆಂದು ಬಸವಣ್ಣನವರನ್ನು ಹಾಡಿ ಕೊಂಡಾಡಿದ್ದಾರೆ.

ಯಾರು ಸಮಾಜದಿಂದ ದಲಿತರನ್ನು ದೂರ ತಳ್ಳಿ, ಜನರನ್ನು ಅಕ್ಷರ ವಂಚಿತರನ್ನಾಗಿಸಿದ್ದರೋ, ಯಾರು ಜಾತಿಯಿಂದ ನಾವೇ ಶ್ರೇಷ್ಠ, ವಿದ್ಯೆ ಜ್ಞಾನ ಎಲ್ಲವೂ ನಮ್ಮ ಪೂರ್ವಾರ್ಜಿತ ಸ್ವತ್ತು ಎಂದು ಬೀಗುತ್ತಿದ್ದರೊ ,
ಮತ್ತೊಬ್ಬರು ವೇದ ಓದಿದರೆ ನಾಲಿಗೆ ಕೀಳುತಿದ್ದರೊ,
ಯಾರು ಅವರು ಓದುವುದನ್ನು ಕವಿಯಿಂದ ಕೇಳಿದರೆ ಆ ಕಿವಿಗಳಿಗೆ ಕಾದ ಸೀಸ(ಸುಡುವ ಎಣ್ಣೆ) ಸುರಿಯುತ್ತಿದ್ದರೊ,
ಆ ಕಾಲಮಾನದಲ್ಲಿ ವಿದ್ಯೆಯೇ ಗಗನ ಕುಸುಮವಾಗಿತ್ತು,
ಆ ದಿನಮಾನಗಳಲ್ಲಿ ಸಮಾಜದಿಂದ ಬಹಿಷ್ಕರಿಸಿದ ಜನರು ಶಾಲೆ ಹೋಗುವುದೇ ದುಸ್ತರವಾದ ಕಾಲದಲ್ಲಿ, ಕಳ್ಳನಾಗಿದ್ದ ವ್ಯಕ್ತಿಯೊಬ್ಬ,
ಪವಾಡವೆನಿಸುವ ರೀತಿಯಲ್ಲಿ ಬದಲಾಗಿ, ಛಲದಿಂದ ಚಿಮ್ಮಿದೆದ್ದು ಕಠಿಣವೆನಿಸಿದ ವೇದ ಶಾಸ್ತ್ರ ಆಗಮ ಉಪನಿಷತ್ತುಗಳ ಕಲಿತು ಸಕಲ ವಿದ್ಯೆಗಳ ಕರಗತವಾಗಿಸಿಕೊಂಡು
ಮಹಾನ್ ಜ್ಞಾನಿಯೆನಿಸಿ ಮಹೋನ್ನತ, ಗುರು ಪದವಿಯನ್ನೇ ಪಡೆದು, ‘ಉರಿಲಿಂಗಪ್ಪೆದ್ದಿಪ್ರಿಯ ವಿಶ್ವೇಶ್ವರಾ’ ಎಂಬ ನಾಮಾಂಕಿತದಲ್ಲಿ ಹಲವಾರು ಅತ್ಯದ್ಭುತ ವಚನಗಳ ರಚಿಸಿ (ಪ್ರಸ್ತುತ 360ವಚನಗಳು ಲಭ್ಯವಿವೆ,) ತನ್ನ ಪಾಂಡಿತ್ಯ ಮತ್ತು, ಭಕ್ತಿ ಜ್ಞಾನದ ಮೂಲಕ ವಿಶ್ವ ಭೂಪಟದಲ್ಲಿ ಮಿಚಿಂದ ಅತ್ಯಂತ ಕ್ರಾಂತಿಕಾರಿ ಶರಣರಾಗಿದ್ದಾರೆ ಉರಿಲಿಂಗಪೆದ್ದಿಯವರು,.

ಲೇಖನ-: ಲೋಕೇಶ್ ಎನ್ ಮಾನ್ವಿ.
9972536176

Don`t copy text!