ಕಾಲದ ಬಸಿರು

ನಾನು ಓದಿದ ಪುಸ್ತಕ

ಕಾಲದ ಬಸಿರು
(ಕವನ ಸಂಕಲನ)

ಕೃತಿಕಾರರು :- ಹೆಚ್ ಷೌಕತ್ ಅಲಿ

“ಸರ್ವಕಾಲಕೂ ಹಸಿರಾಗಿ ಉಳಿಯುವ ಕಾಲದ ಬಸಿರು ಕವಿತೆಗಳು”

ಹೆಚ್ ಷೌಕತ್ ಅಲಿ… ಪ್ರತಿಭಾನ್ವಿತ ಮತ್ತು ಮಗು ಮನಸಿನ ಲೇಖಕರು. ಸಹೋದರಿ, ಕವಯಿತ್ರಿ “ಹಂಗಿಲ್ಲದ ಹಾದಿ” ಕೃತಿ ಕರ್ತೃ ಶ್ರೀಮತಿ ಜಹಾನ್ ಆರಾ ಅವರ ತಂದೆ.
ಮಗಳಿಗೂ ತಮ್ಮ ಸಾಹಿತ್ಯಾಭಿರುಚಿಯನ್ನು ಹಸ್ತಾಂತರಿಸಿ ಉತ್ತಮ ಕಾವ್ಯ ರಚನೆಯಲ್ಲಿ ತೊಡಗುವಂತೆ ಮಾಡಿದ ಶ್ರೀಯತರನ್ನು ಅನುಸರಿಸುವ ಮತ್ತು ಅವರ ಸಾಹಿತ್ಯವನ್ನು ಓದುವ ಪ್ರತ್ಯೇಕ ಬಳಗವೇ ಇದೆ ಎಂಬುದು ವಿಶೇಷ. ಶಿಕ್ಷಕ ವೃತ್ತಿಯ ಜೊತೆಗೆ ತಮ್ಮ ಕನ್ನಡ ಪ್ರೇಮಕ್ಕೆ ಅಕ್ಷರ ರೂಪ ಕೊಟ್ಟು ಸಾಹಿತ್ಯದ ಮೂಲಕ ಬದುಕಿನ ಮೌಲ್ಯಗಳನ್ನು ದಿನವೂ ಬಿತ್ತರಿಸುವ ಹವ್ಯಾಸಿ ಬರಹಗಾರರು ಶ್ರೀ ಹೆಚ್ ಷೌಕತ್ ಅಲಿ ಅವರು. ಅತ್ಯುನ್ನತ ಸ್ಥಾನದಲ್ಲಿದ್ದರೂ, ಸಹೃದಯರಾಗಿ ತಮಗಿಂತ ಅತ್ಯಂತ ಚಿಕ್ಕವರನ್ನೂ ಸಹ ನಲ್ಮೆಯಿಂದ ಮಾತನಾಡಿಸುವ ಇವರ ಸಹಜತೆ, ಇವರ ಗುಣಕ್ಕೆ ಸೌಂದರ್ಯವನ್ನು ಹೆಚ್ಚಿಸಿದೆ.

ನಾನು ಸಹೋದರಿ, ಶ್ರೀಮತಿ ಜಹಾನ್ ಆರಾ ಅವರ “ಹಂಗಿಲ್ಲದ ಹಾದಿ” ಕವನ ಸಂಕಲನದ ಕುರಿತಾಗಿ ಅನಿಸಿಕೆಗಳನ್ನು ಅಭಿವ್ಯಕ್ತಿಸಿದಾಗ; ಖುದ್ದಾಗಿ ಫೋನಾಯಿಸಿ ನನ್ನ ಅವಲೋಕನ ಬರಹದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ, ಆತ್ಮೀಯವಾಗಿ ಮಾತನಾಡಿ ನನ್ನ ಕೃತಿಯನ್ನೂ ಓದಿ ಎಂದು ತಮ್ಮ ನಾಲ್ಕನೇ ಕೃತಿಯಾದ “ಕಾಲದ ಬಸಿರು” ಕವನ ಸಂಕಲನವನ್ನು ನನಗೆ ಮತ್ತು ನನ್ನ ತಂದೆಯವರಿಗೆ ಒಂದೊಂದು ಪ್ರತಿಯನ್ನು ಕಳಿಸಿಕೊಟ್ಟರು. ಇದು ನಮ್ಮಂತಹ ಕಿರಿಯರಿಗೆ ಆಶೀರ್ವಾದ ಪೂರಕ ಬೆನ್ನು ತಟ್ಟುವಿಕೆಯಾಗಿದೆ.

“ಕಾಲದ ಬಸಿರು” ಕೃತಿಯ ಶೀರ್ಷಿಕೆಯೇ ವಿಭಿನ್ನವಾಗಿದೆ. ಕಾಲದ ಗರ್ಭದಲ್ಲಿ ಹುದುಗಿದ ಸತ್ಯಗಳು, ಮನುಷ್ಯನ ಗರ್ವದಲ್ಲಿ ಹೂತು ಹೋದ ಸತ್ವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಾಸವಾಗಿ ಓದುಗರ ಸುಪ್ತ ಮನಸಿಗೆ ತಾಕುವಂತೆ ಬರೆದಿದ್ದಾರೆ. ಕಾವ್ಯ ಎಂಬುದು ಒಂದು ಕನ್ನಡ ಭಾಷೆಯ ಸೌಂದರ್ಯಕ್ಕೆ ಹಿಡಿದ ಕನ್ನಡಿ. ಕೃತಿಯ ಓದಿನ ನಂತರ ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಕವಿಗಳು ತಾವು ಹೇಳಬೇಕಾದುದನ್ನು ಸರಳವಾಗಿ ಮತ್ತು ಸಹಜವಾಗಿ ಓದುಗನಿಗೆ ತಲುಪಿಸಿದ್ದಾರೆ ಎನ್ನಬಹುದು.


ಈ ಕೃತಿಯ ಕವಿತೆಗಳು, ಕೇವಲ ಕಾವ್ಯ ರಚಿಸಬೇಕೆಂದು ರಚಿಸಿದ ಕವಿತೆಗಳಲ್ಲ ಎನಿಸುತ್ತದೆ. ಬಹುತೇಕ ಕವನಗಳು ಕವಿಗಳ‌ ಅನುಭವದ ಕೂಸುಗಳಾಗಿವೆ. ಹುಟ್ಟಿನ ಜೊತೆಗೆ ಸಂಸ್ಕಾರವನ್ನೂ ಕವಿತೆಗಳಲ್ಲಿ ತುಂಬಿ ಪಕ್ವತೆಯನ್ನು ನೀಡಿದ್ದಾರೆ. ಪ್ರಕೃತಿಯಿಂದ ಹಿಡಿದು ಸಂಸಾರದವರೆಗೆ, ಸ್ನೇಹ, ಪ್ರೀತಿ, ಒಡನಾಟದಿಂದ ಹಿಡಿದು ರಾಷ್ಟ್ರ ಪ್ರೇಮ, ತ್ಯಾಗ ಬಲಿದಾನಗಳವರೆಗೆ ತಮ್ಮ ಅಕ್ಷರಗಳನ್ನು ಹರಿಸಿದ ಕೃತಿಕಾರರು ಎಲ್ಲವನ್ನು ತಿಳಿದರೂ “ಕಾಲದ ಬಸಿರ”ಲ್ಲಿ ಇನ್ನೂ ನಿಗೂಢತೆ‌ ಎಂಬುದನ್ನು ಪ್ರಕೃತಿ ಉಳಿಸಿಕೊಂಡಿದೆ ಎಂಬ ಸತ್ಯವನ್ನು ತಮ್ಮ ಕವಿತೆಗಳಲ್ಲಿ ಎತ್ತಿ ಹಿಡಿಯುತ್ತಾರೆ…. ಇಂತಹ 60 ಕವಿತೆಗಳಿರುವ ಕೃತಿಯಿಂದ, ಕೆಲವು ಕವಿತೆಗಳನ್ನು ಆಯ್ದು; ಅವುಗಳ ಕುರಿತಾಗಿ ನನ್ನ ಮತಿಗೆ ನಿಲುಕಿದ ಒಂದಷ್ಟು ಮಾತುಗಳು ತಮ್ಮ ಓದಿಗೆ ಇಲ್ಲಿ ಬರೆಯುತ್ತಿದ್ದೇನೆ.

* ಮೊಟ್ಟ ಮೊದಲಲ್ಲಿ “ಭಾರತ ಮಾತೆ” ಗೆ ನಮಿಸುತ್ತ,
” ಭವ್ಯ ಪರಂಪರೆ ಸಂಸ್ಕೃತಿ ಸುಜನರ ಕಾಯೇ
ಕಲೆ ಸಾಹಿತ್ಯದ ಸಿರಿವಂತೆ ನೀ”
ಎಂದು ಹೊಗಳುತ್ತ, ನೀ ನೊಲಿದರೆ ಭಾರತದ ಮಣ್ಣ ಕಣ ಕಣವೂ ಚಿನ್ನವಾಗುತ್ತದೆ, ಅನ್ನದಾತನ ಆರಾಧನೆ ನಿನಗಾಗುತ್ತದೆ, “ಜಗದಾಂಬೇ ನಾವೆಲ್ಲ ಭಾರತೀಯರೆಂಬ ಹೆಮ್ಮೆ ನಮಗೆ” ಎಂದು ತಮ್ಮ ದೇಶ ಪ್ರೇಮವನ್ನು ಹೊರಹಾಕುತ್ತಾರೆ.

* ನಮಗೆ ಸ್ವಾತಂತ್ರ್ಯ ಬಂದ ಪರಿಯನ್ನು “ಸ್ವಾತಂತ್ರ್ಯ” ಕವಿತೆಯಲ್ಲಿ ಕಟ್ಟಿಕೊಡುತ್ತ, ಅನೇಕ ವೀರರ ಬಲಿದಾನಕ್ಕೆ ನಾವು ಗೌರವ ಕೊಡಬೇಕಾದರೆ,
“ವಸುಧೈವ ಕುಟುಂಬಕಂ ನುಡಿಯಂತೆ ನಾವು
ವಿಶ್ವ ಬಂಧುವಾಗಬೇಕು ಎಲ್ಲರೊಳಗೊಂಡು ನಾವು”
ಎಂದು ಕವಿಗಳು ಜಾತಿ, ಧರ್ಮ, ಭಾಷೆಗಳ ಸಮನ್ವಯದ ಸಾರಥಿಗಳು ನಾವಾಗಬೇಕು, ವಿಶ್ವಾಸವೇ ನಮ್ಮ ಮೂಲ ಮಂತ್ರವಾಗಬೇಕು. ನ್ಯಾಯ ನೀತಿಯನ್ನು ಅನುಸರಿಸಿ ಭ್ರಾತೃತ್ವ ಮೆರೆದು ನಮ್ಮ ದೇಶವನ್ನು ಮುನ್ನಡೆಸೋಣ, ನಮ್ಮ ಸಂಸ್ಕೃತಿಯನ್ನು ಗೌರವಿಸಿ ಜಗದಗಲ ಸಾರೋಣ‌ ಎಂದು “ವಿಶ್ವ ಬಂಧು” ಕವಿತೆಯ ಮೂಲಕ ತಿಳಿಸಿ, ಭಾರತಾಂಬೆಯ ಮೇಲಿನ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.

* ನಮ್ಮ ದೇಶವನ್ನು ಕಟ್ಟುವಲ್ಲಿ ಅನೇಕ ಮಹನೀಯರ ತ್ಯಾಗ, ಬಲಿದಾನ, ಕೊಡುಗೆ ಇದೆ. ತಮ್ಮ ಪ್ರತಿಯೊಂದು ಕ್ಷಣವನ್ನೂ ಸಮಾಜಕ್ಕೆ ಮುಡುಪಾಗಿಟ್ಟ ಸಾತ್ವಿಕರು, ಸೃಜನಶೀಲರ ಕುರಿತಾಗಿ ಎಷ್ಟು ಮಾತನಾಡಿದರೂ ಕಡಿಮೆಯೇ. ಅಂತಹ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಸಮಾಜ ಸೇವಕರನ್ನು, ಕವಿಗಳು “ಅಂಬೇಡ್ಕರ್ ನೀ ಅಮರ”, “ನೇತಾಜಿ ಸುಭಾಷ್ ಚಂದ್ರಬೋಸ್”, “ಸೋದರಿ ನಿವೇದಿತಾ” ಮತ್ತು “ಕನ್ನಡ ನಾಡಿನ ಕಲಿಗಳು” ಕವಿತೆಗಳಲ್ಲಿ ನೆನೆಯುವುದರ ಜೊತೆಗೆ ಹಿರಿಯರು ಮಾಡಿದ ಸಾಧನೆ ನಡೆದು ಬಂದ ದಾರಿಯನ್ನೂ ಓದುಗರಿಗೆ‌ ನೀಡುತ್ತಾರೆ. ಅಲ್ಲದೆ ಅವರೇಕೆ ಪ್ರಮುಖರು ಎಂಬುದನ್ನು ಕವಿತೆಯ ಓದಿನಿಂದ ಅರ್ಥೈಸಿಕೊಳ್ಳುವಂತೆ ಮಾಡುತ್ತಾರೆ.

* ಭೂ ಮಂಡಲದಲ್ಲಿ ಭಗವಂತನ ಕೊಡುಗೆ‌ ಅಪಾರ. ಪರಿಸರ ಸಮತೋಲನವಾಗಿರಲು ಎಲ್ಲ ಕ್ರಮಗಳನ್ನು ಭಗವಂತನೇ ಕೈಗೊಂಡಿದ್ದಾನೆ. ಜೊತೆಗೆ ಯಾರೂ ಅರಿಯಲಾಗದಂತಹ ವಿಸ್ಮಯಗಳನ್ನೂ ನಮ್ಮ ಮುಂದೆ ನಿರ್ಮಿಸಿದ್ದಾನೆ. ಇಂತಹ ವಿಸ್ಮಯಗಳು ಅವಿಸ್ಮರಣೀಯ ಎಂಬುದನ್ನು ಕವಿಗಳು “ಭಕ್ತಿಯ ಕಣ”ದಲ್ಲಿ ಸೊಗಸಾಗಿ ಬಿಂಬಿಸಿ, ಈ ಎಲ್ಲ ಕೊಡುಗೆಗೆ ನಾವು ಪ್ರತಿಯಾಗಿ ಭಗವಂತನಿಗೆ ಭಕ್ತಿಯ ಕೊಡುಗೆಯನ್ನು ನೀಡಬೇಕೆಂದು ಆಶಿಸುತ್ತಾರೆ. ಭಕ್ತಿ ಅರ್ಪಿಸಿಯೇ ಆನಂದವನ್ನು ಪಡೆಯೋಣ ಎಂಬ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಮತ್ತು ಇದು ಮಾನವರು ದೇವರಿಗೆ ಅರ್ಪಿಸುವ ಕೃತಜ್ಞತೆಯ ಸಮರ್ಪಣೆ ಎಂದರೂ ಸರಿ ಅನಿಸುತ್ತದೆ.

* “ಗೂಡಿನಲ್ಲಿ ಮರಿ ಹಕ್ಕಿಗಳ ಆರ್ತನಾದ
ಬಿರುಬಿಸಿಲಿನಲ್ಲಿ ಹನಿ ನೀರಿಗಾಗಿ ಆಕ್ರಂದನ
ಹಕ್ಕಿಗಳ ಪರಿಶ್ರಮ, ಕೇಳಿಸದೆ ರೋದನ
ಹಕ್ಕಿಗಳು ಸೋಲುತ್ತಿವೆ ಸಾವಿನ ಅಂಚಿನಲ್ಲಿ”
“ಹಕ್ಕಿಗಳ ಉಪವಾಸ” ಕವಿತೆ ಓದುತ್ತಿದ್ದರೆ ಹಾಗೆ ಮನಸು ಸ್ತದ್ಭವಾಗಿಬಿಡುತ್ತದೆ. ಹಕ್ಕಿಗಳ ನೋವು ನಿಜಕ್ಕೂ ಅರಣ್ಯ ರೋದನವೇ ಹೌದು. ಪ್ರಕೃತಿ‌ ವಿಕೋಪಕ್ಕೆ ಸಿಕ್ಕು ನಲುಗಿದ ಹಕ್ಕಿಗಳು ಮಾತು ಬರುವಂತಿದ್ದರೆ ಇದೇ ಸಾಲುಗಳನ್ನು ಹೇಳುತ್ತಿದ್ದವೇನೋ ಅನಿಸುವಷ್ಟು ನೈಸರ್ಗಿಕವಾದ ಸತ್ಯವನ್ನು ಅರುಹಿದ್ದಾರೆ. ಇಡೀ ಕವಿತೆಯ ಅಷ್ಟೂ ಸಾಲುಗಳನ್ನು ಬಿಟ್ಟು ಬಿಡದಂತೆ ಮತ್ತೆ ಮತ್ತೆ ಓದುಬೇಕೆನಿಸುವಂತೆ ಬರೆದಿದ್ದಾರೆಂಬುದು ಅತಿಶಯೋಕ್ತಿಯ ಮಾತಲ್ಲ.

* ಮುಪ್ಪು ಒಂದು ಶಾಪ ಎಂದು ಕೇಳಿದ್ದೆ. ಅದಕ್ಕೆ ನಿದರ್ಶನವೇ “ಬೇಸರ” ಮತ್ತು “ವಯಸ್ಸಾಯಿತು” ಕವಿತೆಗಳು . ಬಾಲ್ಯ, ಹರೆಯ ಎಷ್ಟು ಮಧುರಾನುಭವಗಳನ್ನು ನೀಡುತ್ತವೆಯೋ! ಎಷ್ಟು ಉಲ್ಲಾಸದ ಬದುಕನ್ನು ನೀಡುತ್ತವೆಯೋ! ಅದಕ್ಕೆ ತದ್ವಿರುದ್ಧವಾಗಿ; ಮುಪ್ಪು ಅಷ್ಟೇ ಬೇಸರವನ್ನು ಉಂಟುಮಾಡುತ್ತದೆ. ಯಾಕಾಗಿ ಈ ಜೀವ ಉಳಿದಿದೆ, ಎಂದು ಸಾವು ನಮ್ಮನ್ನು ಕರೆಯುತ್ತದೆ ಎನ್ನಿಸುವಷ್ಟು “ಬೇಸರ” ಮುಪ್ಪಲ್ಲಿ ಮೂಡುವುದು ಸಹಜ ಎಂಬುದಕ್ಕೆ ಸಾಕ್ಷಿ ಈ ಕವಿತೆಯಾದರೂ…
“ಕೊನೆಯ ಆಸೆ ಕೈಗೂಡಿ
ಮಣ್ಣ ಮಡಿಲ ಸೇರಬೇಕು”
ಎಂದು, ಕವಿ ಇದೇ ಕವಿತೆಯ ಕೊನೆಯಲ್ಲಿ ಆಶಿಸುತ್ತಾರೆ. ಸಾವಿನಲ್ಲೂ ನಮ್ಮ ಆಸೆಗಳು ಮುಗಿಯುವುದಿಲ್ಲ ಎಂಬ ಸತ್ಯಾಂಶಕ್ಕೆ ಕೈಗನ್ನಡಿ “ಬೇಸರ”ಕವಿತೆಯಾದರೆ, ನೆಮ್ಮದಿಗಾಗಿ ಹಂಬಲಿಸುತ್ತಲೇ‌ ಮಣ್ಣು ಸೇರುವ ನಿರೀಕ್ಷೆಯಲ್ಲಿ ಜೀವನ ಇರುತ್ತದೆ ಎಂದು “ವಯಸ್ಸಾಯಿತು” ಕವಿತೆ ತಿಳಿಸುತ್ತದೆ.

* ಈ ಮೇಲಿನ ಕವಿತೆಗಳು ವೈರಾಗ್ಯ ಭಾವ ಮೂಡಿಸಿದರೆ, ತಕ್ಷಣವೇ ಸಿಗುವ ಕವಿತೆ ಬದುಕುವ ಛಲವನ್ನು ಎಚ್ಚರಿಸುತ್ತದೆ. ನಮಗಿನ್ನೂ ಕನಸುಗಳಿವೆ ಎನ್ನುತ್ತಲೇ ನಾವು ಸಾಧಿಸಬೇಕಾದದ್ದೇನು? ಸಾಧನೆಯ ಪಥಕ್ಕೆ ಕನಸು ಅಗತ್ಯ, ಅದನ್ನು ನನಸಾಗಿಸಲು ಶ್ರಮ ಅಗತ್ಯ ಎಂದು ಚೊಕ್ಕವಾಗಿ, ಆದರ್ಶಮಯವಾಗಿ‌ “ಕನಸುಗಳಿವೆ ಇನ್ನು” ಕವಿತೆಯಲ್ಲಿ ಕವಿಗಳು ತಿಳಿಸಿಕೊಡುತ್ತಾರೆ.

* ಬದುಕುವ ವಿಧಾನ ಬೇರೆ ಬೇರೆ ಇರಬಹುದು ಆದರೆ, ಆದರೆ… ನಿಮ್ಮಂತೆ ನಮಗೂ ಬದುಕುಂಟು, ನಿಮ್ಮ ಬದುಕಂತೆ ನಮಗೂ ಬದುಕಿನ ಎಲ್ಲಾ ಅವಕಾಶಗಳನ್ನು ಪರಿಸರ ನೀಡಿದೆ. ಹಾಗಾಗಿ ನಾವೆಲ್ಲಾ ಒಂದೇ ಎಂಬ “ನಾವು ನೀವು” ಮತ್ತು “ದಲಿತರ ದನಿ” ಕವಿತೆಗಳಲ್ಲಿನ ಸಾಲುಗಳು ಮಾರ್ಮಿಕವಾಗಿದ್ದು ಓದುಗನನ್ನು ಆಕರ್ಷಿಸುತ್ತವೆ.

* ರಾಜಕಾರಣಿಗಳೆಂದರೆ ಎಲ್ಲಾ ವೇಷಧಾರಿಗಳು, ಓಲೈಸುವ ತಾಂತ್ರಿಕರಷ್ಟೆ, ನಾಟಕೀಯ ನೋಟ ಅವರದ್ದು ಎಂದು “ರಾಜಕಾರಣ” ಕವಿತೆಯಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ವಿಡಂಬಿಸಿದ್ದಾರೆ.

* ಮನುಷ್ಯ ಬಿಗುಮಾನ, ಅಹಂಕಾರದಿಂದ ಎಷ್ಟೇ ಉರಿದರೂ ಕೊನೆಗೆ ಗಾಣಕ್ಕೆ ಕಟ್ಟಿದ ಎತ್ತಿನಂತೆ ಪ್ರಾಯಶ್ಚಿತ್ತ ಎಂಬ ಗಾಣದ ಗೂಟದ ಬಳಿಯೇ ಬಂದು ಬೀಳಬೇಕು. ದೀಪ ಎಷ್ಟೇ ಪ್ರಜ್ವಲಿಸಿದರೂ ಸಹಕರಿಸಿದ ಎಣ್ಣೆ ಬರಿದಾದ ಮೇಲೆ ದೀಪ ನಂದಲೇಬೇಕು. ಇದು ಜಗದ ನಿಯಮ. ಪಾಪ ಪುಣ್ಯಗಳ ಲೆಕ್ಕಾಚಾರದಿ ಬಂಧಿತ ಮನಸು; ಮಾಡಿದ ಪಾಪದ ಬುತ್ತಿಯನ್ನು ಕರಗಿಸಿ ‌ಉಳಿದ ನವರಾತ್ರಿಗಳನ್ನು ಪುಣ್ಯ ಕಾರ್ಯಕ್ಕೆ‌ ವಿನಿಯೋಗಿಸಬೇಕೆಂಬ ಒಳಾರ್ಥದ ಕವಿತೆ “ಪಾಪದ ಪ್ರೇರಣೆ”, ಒಂದೇ ಓದಿಗೆ ದಕ್ಕದು. ಇಂತಹ ಪ್ರಬುದ್ಧವಾದ ಕವಿತೆ ರಚಿಸಿ ಓದುಗನನ್ನು ಚಿಂತನೆಗೆ ಹಚ್ಚುತ್ತಾರೆ ಮಾನ್ಯ ‌ಷೌಕತ್ ಅಲಿ ಅವರು.

* ಈ ಜಗತ್ತೇ ಒಂದು ಅದ್ಭುತ, ಇಲ್ಲಿ ನಮ್ಮನ್ನು ನಾವು ಅರಿಯುವುದರಲ್ಲೇ ಬದುಕು, ಅರ್ಥ ಕಂಡುಕೊಳ್ಳುತ್ತದೆ. ಇಲ್ಲವೇ ಅರ್ಥ ಕಳೆದುಕೊಳ್ಳುತ್ತದೆ. ಅರ್ಥ ಅನರ್ಥಗಳ ನಡುವೆ ನಾವು ದೈಹಿಕ ಸಂಬಂಧಗಳಲ್ಲಿ ಅವಲಂಬಿತರಾಗಿದ್ದರೂ, ಮಾನಸಿಕವಾಗಿ ಏಕಾಂಗಿತನವನ್ನು ಅನುಭವಿಸುತ್ತಿರುತ್ತೇವೆ. ಅದಕ್ಕಾಗಿಯೇ ಕವಿ ಷೌಕತ್ ಅಲಿಯವರು …
“ಸೃಷ್ಟಿಕರ್ತನ ದೃಷ್ಠಿಯಲ್ಲಿ ಪ್ರಕೃತಿ ಪವಾಡದಿಂದ ಕೂಡಿದೆ ಅದನ್ನು ತಿಳಿಯಲು, ಬಣ್ಣಿಸಲು ನಾವು ಕೊನೆಗೂ ಅಸಮರ್ಥರಾಗಿಯೇ ಉಳಿಯುತ್ತೇವೆ” ಎಂಬುದನ್ನು ಸೊಗಸಾಗಿ “ಅರ್ಥ” ಕವಿತೆಯಲ್ಲಿ ಚಿತ್ರಿಸುತ್ತಾರೆ. ವಿಭಿನ್ನತೆಯಿಂದ ಕೂಡಿದ ಈ ಕವಿತೆಯ ಸಾಲುಗಳು ಓದುಗನನ್ನು ಅಂತರ್ಮುಖಿಯಾಗಿಸುತ್ತವೆ.

* ಇಂತಹ ಕವಿತೆ ಹುಟ್ಟಿದ ಕವಿ ಮನಸು ನಿರ್ಲಿಪ್ತತೆಗೆ ಸಿಲುಕದೆ, ಮತ್ತೊಂದು ಕವಿತೆಯಲ್ಲಿ “ಭರವಸೆ”ಯ ಚೇತನವನ್ನು ಹುಟ್ಟಿಸಿ ಸಾರ್ಥಕ ಭಾವ ಪಡೆಯುತ್ತದೆ.
“ಬದುಕು, ಶಿಥಿಲಾವಸ್ಥೆಗೆ ತಲುಪಿದ
ಕಟ್ಟಡದಂತಾದರೂ,
ನೆರಳು ನೀಡದ ಮರದಂತಾದರೂ”
ಮಾತು ಬಿದ್ದು ಹೋಗುವ ಕೊನೆಗಳಿಗೆಯಲ್ಲೂ, ಮೌನ ಮಾತಾಗಿ ಹೃದಯ ಮಿಡಿಯುತ್ತದೆ ಎಂದು ಹೊಸ ಸಂವೇದನೆಯನ್ನು ಸೃಷ್ಟಿಸುತ್ತಾರೆ.

* “ಗ್ರಹಗಳಿಂದ ಗ್ರಹಗಳಿಗೆ ಜಿಗಿಯುವ
ಗ್ರಹತಾರೆಗಳೊಂದಿಗೆ ನಿನ್ನ ಬಾಂಧವ್ಯ
ಕ್ಷಣಾರ್ಧದಲ್ಲಿ ಮಿಂಚಿನಂತೆ ಮರೆಯುವ
ಸಾವಿಗೆ ನಿನ್ನ ಕೊಡುಗೆ ಏನು ಇಲ್ಲ”
ಹೌದಲ್ವಾ, ಮಾನವ ಏಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ, ಸಾವಿನ ಗುಟ್ಟನ್ನು ಅರಿಯಲು ಇಂದಿಗೂ ಸಾಧ್ಯವಾಗಿಲ್ಲ. ಕ್ಷಣಾರ್ಧದಲ್ಲಿ ಬಂದೊದಗುವ ಸಾವಿನ ಮುಂದೆ ನಾವು ಶರಣಾಗಿ ನಿಲ್ಲಲೇಬೇಕು, ಎಂಬುದನ್ನು “ನಶ್ವರ” ಕವಿತೆಯಲ್ಲಿ ತಿಳಿಸಿ, ಮನುಜನಿಗೆ ಅಂಟಿದ ಅಹಂಕಾರದ ನಶೆಯನ್ನಿಳಿಸಲು ಕವಿಗಳು ಪ್ರಯತ್ನಿಸುತ್ತಾರೆ. ಒಂದು ಸಾಮಾಜಿಕ ಕಳಕಳಿಯ ಕವಿತೆಯಾಗಿ ಈ ಕವಿತೆ ತನ್ನತನವನ್ನು ಉಳಿಸಿಕೊಳ್ಳುತ್ತದೆ.

* ಇದರ ಮುಂದುವರಿದ ಭಾಗವೇನೋ ಎಂಬಂತೆ “ಜನನ ಮರಣ” ಕವಿತೆ ನಮ್ಮನ್ನು ಮತ್ತಷ್ಟು ಪಕ್ವ ಯೋಚನೆಗೆ ದೂಡುತ್ತದೆ. ಬದುಕು ಒಂದು ದಿನದ ಆಟ. ಮುಂಜಾನೆ ಹೊಸ ಜನ್ಮ ತಾಳಿ, ಕತ್ತಲಾಗುವಷ್ಟರಲ್ಲಿ ಬದುಕು ಅಯೋಮಯ ಎನಿಸಿಬಿಡುತ್ತದೆ. ಇಷ್ಟೇ ನಮ್ಮ ಬದುಕು ಇದನ್ನರಿಯಲು ನಮಗೆ ನೂರಾರು ವರುಷ ಬೇಕೆ? ಎಂದು ಪ್ರಶ್ನಿಸುತ್ತಾ ಕವಿಗಳು ಇದು ನನ್ನ ಒಂದು ದಿನದ ಕನಸಿನ ಜೀವನ, ನೂರು ವರುಷವಾದರೂ ಹೀಗೆ, ಜನನ ಮತ್ತೆ ಮರಣ ಇದ್ದೆ ಇರುತ್ತದೆ ಎಂದು ಬದುಕಿನ ಕಥೆಯ ಸತ್ಯವನ್ನು ತಿಳಿಸುತ್ತಾರೆ.

ಹೀಗೆ “ಕಾಲದ ಬಸಿರು” ಕೃತಿಯಲ್ಲಿ ‘ಕಾಯಕ’, ‘ಮೌನ’ ‘ಆತ್ಮ ತೃಪ್ತಿ’, ‘ನ್ಯಾಯ ದೇಗುಲ’, ‘ಸಾರಥಿ’ ಈನ್ನೂ ಅನೇಕ ಕವಿತೆಗಳು ಸೊಗಸಾಗಿ ಮೂಡಿಬಂದಿವೆ. ಕೃತಿಯ ಪ್ರಾರಂಭದ ಕೆಲವು ಕವಿತೆಗಳ ಸಾಹಿತ್ಯ ನೇರವಾಗಿ ಅರ್ಥವಾಗುತ್ತದೆ. ಆದರೆ ಮುಂದೆ ಓದುತ್ತಾ ಸಾಗಿದಂತೆ ಕವಿತೆಗಳು ಬಲವಾಗುತ್ತಾ ಹೋಗಿ ಕವಿಗಳ ಸಾಹಿತ್ಯ ಪ್ರೌಢಿಮೆಯನ್ನು ತೋರಿಸುತ್ತವೆ. ಕವಿಗಳ ನೋಟದ ಸೂಕ್ಷ್ಮತೆಯನ್ನು ನಾವು ಈ ಕೃತಿಯ ಕವಿತೆಗಳಲ್ಲಿ ಕಾಣಬಹುದು. ಪ್ರಕೃತಿ(ದೇವರು) ಮೇಲಿನ ಕವಿಗಳ ಅಚಲವಾದ ನಂಬಿಕೆ ಕೆಲವು ಕವಿತೆಗಳಲ್ಲಿ ಓದುತ್ತೇವೆ. ತಮ್ಮ ಸಾಹಿತ್ಯ ಹೀಗೇ‌ ಇರಬೇಕೆಂಬುದಕ್ಕಿಂತ ಹೆಚ್ಚಾಗಿ ತಮ್ಮ ಮನೋಭೀಷ್ಟವನ್ನು ಓದುಗರಿಗೆ ಮುಟ್ಟಿಸುವುದಕ್ಕೆ ಕವಿಗಳು ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ.

ನವೋದಯ ಸಾಹಿತ್ಯ, ನವ್ಯ ಸಾಹಿತ್ಯ ಮತ್ತಾವುದೋ ಸಾಹಿತ್ಯ ಪ್ರಕಾರಕ್ಕೆ ಜೋತು ಬೀಳದೆ ಓದುಗನನ್ನು ಮತ್ತು ಓದುಗನಿಂದ ಸಮಾಜವನ್ನು ಹೇಗೆ ಮೌಲ್ಯಯುತವಾಗಿ ಬದಲಾಯಿಸಬೇಕೆಂಬ ಪರಿಕಲ್ಪನೆ ಕವಿಗಳಲ್ಲಿರುವುದು ನನ್ನ ಪ್ರಕಾರ ಶ್ಲಾಘನೀಯವೆ. ಚಿಂತಕನಿಗೆ ತನ್ನ ಚಿಂತನೆಯನ್ನು ಸಮಾಜಕ್ಕೆ ತಿಳಿಸಲು ಇರುವ ಮಾರ್ಗಗಳಲ್ಲಿ ಬರಹವೂ ಒಂದು. ಆ ನಿಟ್ಟಿನಲ್ಲಿ ಕವಿಗಳು ಗೆದ್ದಿದ್ದಾರೆ.

ಕೇವಲ ಕಾವ್ಯ ಶೈಲಿ, ಕಾವ್ಯಾತ್ಮಕತೆಯನ್ನು ನೋಡುವುದಕ್ಕಿಂತ‌ ಕವಿಯ ಭಾವವನ್ನು ನೋಡಿದರೆ ಸಾಕಲ್ಲವೇ ಎಂದು ಕೃತಿಯ ಓದಿನ ಕೊನೆಗೆ ಅನಿಸುತ್ತದೆ. ತಮ್ಮ ವಯೋ ಅನುಭವವನ್ನೆಲ್ಲ ಕ್ರೋಢೀಕರಿಸಿ ಅನುಭವಗಳಿಗೆ ಪದಗಳ ರೂಪ ಕೊಟ್ಟು ಓದುಗನಿಗೆ ನೀಡಿದ್ದು ಬದುಕಿನ ಸಾರ್ಥಕತೆಯನ್ನು ತೋರಿಸುತ್ತದೆ.
ಇಂತಹ ಕೃತಿಯನ್ನು ಹೆಚ್ಚು ಹೆಚ್ಚು ಯುವ ಜನತೆ ಓದಲೇಬೇಕು. ಬದುಕಿನ ಏಲ್ಲಾ ಆಯಾಮಗಳನ್ನು ಕಂಡುಂಡ ಲೇಖಕರ ಮಾರ್ಗದರ್ಶೀ ಕವಿತೆಗಳು ಉತ್ತಮ ಬದುಕಿಗೆ ಪ್ರೇರಕ ಶಕ್ತಿಯಾಗಿ ನಮ್ಮ ಜೀವನವನ್ನು ಧನಾತ್ಮಕವಾಗಿ ಭದ್ರಪಡಿಸಿಕೊಳ್ಳುವಲ್ಲಿ ನೆರವಾಗುತ್ತವೆ.

ಕೊನೆಯದಾಗಿ, ಶ್ರೀ ಹೆಚ್ ಷೌಕತ್ ಅಲಿಯವರಿಂದ ಮತ್ತಷ್ಟು ಮೌಲ್ಯಯುತವಾದ ಕವಿತೆಗಳು ಬರಲಿ. ಅವರ ಅನುಭವದ ನುಡಿಗಳು ಕವಿತಾ ಸಂಕಲನದ ರೂಪದಲ್ಲಿ ಓದುಗರ ಕೈ‌ ಸೇರಲಿ ಅವರ ಸಾಹಿತ್ಯದ ಸಿರಿ ಎಲ್ಲ ಓದುಗರಿಗೆ ತಲುಪಿ ಬದುಕನ್ನು ಹಸನಾಗಿಸಲಿ ಎಂದು ಆಶಿಸುತ್ತ ನನ್ನ ಕೃತಿ ಅವಲೋಕನಕ್ಕೆ ಅಲ್ಪ ವಿರಾಮ ನಿಡುತ್ತೇನೆ….-

ವರದೇಂದ್ರ ಕೆ ಮಸ್ಕಿ

‌ 9945253030

ಪ್ರತಿಗಳಿಗಾಗಿ ಸಂಪರ್ಕಿಸಿ
– ಹೆಚ್ ಷೌಕತ್ ಅಲಿ
6364619967

Don`t copy text!