ಗಜಲ್‌

ಗಜಲ್‌

ನಾನು ಸತ್ತರೆ ಬಹಳಷ್ಟು ಜನ ಅಳುವವರಿದ್ದಾರೆ ನನಗೆ ಗೊತ್ತು
ಇದ್ದಾಗ ಕಿರುಕುಳ ನೀಡುತ ನಗುವವರಿದ್ದಾರೆ ನನಗೆ ಗೊತ್ತು

ಸಂಪನ್ನತೆಯ ಮುಖವಾಡದಲಿ ಸ್ವರ್ಗವನು ತೋರುವರು
ನೇಪಥ್ಯದಿ ಮಾತಿನ ವಿಷ ಉಣಿಸುವವರಿದ್ದಾರೆ ನನಗೆ ಗೊತ್ತು

ನಯವಂಚನೆ ಆಧುನಿಕ ಜಗತ್ತಿನ ಅಚ್ಚರಿಯ ಕತ್ತಲು ಬೆಳಕು
ಬೆಣ್ಣೆಯಲದ್ದಿ ಬೆನ್ನಿಗೆ ಚೂರಿ ಇರಿವವರಿದ್ದಾರೆ ನನಗೆ ಗೊತ್ತು

ತಮ್ಮದೆಲ್ಲವ ಬೆಚ್ಚಗೆ ಕಾಪಿಟ್ಟು ಪರನಿಂದನೆಯಲಿ ಮಥಿಸುವರು
ಬೇಡೆಂದಾದರೆ ಪ್ರತಿಹೆಜ್ಜೆ ತುಳಿವವರಿದ್ದಾರೆ ನನಗೆ ಗೊತ್ತು

ಪ್ರೀತಿಅಂತಃಕರಣ ಕೈಗೆಟುಕದ ದೂರ ದಿಗಂತವೆ ಈಗೀಗ
ತಗ್ಗಿಗೆ ಬಿದ್ದ ತೋಳವೆಂದು ಕಲ್ಲೆಸೆವವರಿದ್ದಾರೆ ನನಗೆ ಗೊತ್ತು

ಕಣ್ಣಲಿ ಸಾಗರ ನಿರ್ಮಿಸಿ ತಿಮಿಂಗಿಲಿನಂತಾಗುವರೆ ಹೆಚ್ಚು ʻಗಿರಿʼ
ಇರುವಾಗ ಜೀವಂತಸಮಾಧಿ ಮಾಡುವವರಿದ್ದಾರೆ ನನಗೆ ಗೊತ್ತು

ಮಂಡಲಗಿರಿ ಪ್ರಸನ್ನ

Don`t copy text!