ರವಿಯನ್ನು ಬೆಳಗಿದ ರವಿ—ಗುರುವಿಗೆ ಗುರುವಾದವ


ರವಿಯನ್ನು ಬೆಳಗಿದ ರವಿ—ಗುರುವಿಗೆ ಗುರುವಾದವ

ನಭೋಮಂಡಲದಲ್ಲಿ ಕೋಟ್ಯಾನುಕೋಟಿ ನಕ್ಷತ್ರಗಳಿವೆ.ಹಲವಾರು ಗೆಲಾಕ್ಸಿಗಳಿವೆ.ನಾವು ಹಾಲುಹಾದಿಯ ಗೆಲಾಕ್ಸಿಯಲ್ಲಿರುವೆವು ಈ ಗೆಲಾಕ್ಸಿಯಲ್ಲಿರುವ ನಮಗೆ ರವಿ ನಿತ್ಯ ಬೆಳಕು ಚೆಲ್ಲುವವನಾಗಿದ್ದಾನೆ. ಒಬ್ಬ ಬೆಳಗುವ ರವಿಯನ್ನು ಇನ್ನೊಬ್ಬ ರವಿ ಬೆಳಗಿದ ಪರಿ. ಯನ್ನು ಹೇಳುವ ಉದ್ದೇಶ ಹಾಗೂ ಗುರುವನ್ನು ಗುರುವಾಗಿ ಮಾಡಿದ ಮಹಾಗುರು ವಿನ ಬಗೆಗೆ ಹೇಳುವುದೇ ಇಂದಿನ ನನ್ನ *ಮನದನಿಸಿಕೆ

ನಾವು *ರವಿ* ಸೂರ್ಯ, ದಿವಾಕರ,ಭಾನು, ಆದಿತ್ಯ,ಬಾನು ತೇಜ,ಮುಂತಾದ ಹೆಸರುಗಳಿಂದ ಕರೆಯಲ್ಪಡುವ ನಕ್ಷತ್ರವೇ ನಮ್ಮ ಸೌರವ್ಯೂಹದ ಅಧಿಪತಿ. ಆದರೆ ನನ್ನದೇ ಆದ ವಾಸ್ತವ ಲೋಕದ *ರವಿಯನ್ನು ಬೆಳಗಿದ ರವಿ* ಎಂದರೆ ನನ್ನ ಹೆಸರು ರವಿ ನನ್ನ ಬಾಹ್ಯ ಪ್ರಪಂಚಕ್ಕೆ ಪರಿಚಯಿಸಿದ ಮಹಾವ್ಯಕ್ತಿ, ಮಹಾಶಕ್ತಿ ಇನ್ನೊಬ್ಬ ರವಿ. ಈ ಒಗಟಾಗಿರುವ ಮಾತಿನ ತಾತ್ಪರ್ಯ ಏನೆಂದರೆ ನಾನು ಎಲ್ಲರಂತೆ ಸಾಮಾನ್ಯ ಶಿಕ್ಷಕ ವೃತ್ತಿಯನ್ನು ಮಾಡುತ್ತಿರುವೆ ಆದರಿನ್ನೂ ಶಿಕ್ಷಕನಾಗಿಲ್ಲ. ಕೇವಲ ಶಿಕ್ಷಕ ವೃತ್ತಿ ಮಾಡುತ್ತಿದ್ದೇನೆ.ನನ್ನ ಹೆಮ್ಮೆಯ ಶಿಷ್ಯ ಕರ್ನಾಟಕದ ಸಿಂಗಂ ಖ್ಯಾತಿಯ ಸನ್ಮಾನ್ಯ ಶ್ರೀ ರವಿ.ಡಿ.ಚೆನ್ನಣ್ಣವರ ನನ್ನನ್ನು ಅತೀ ಉನ್ನತ‌ ಸ್ಥಾನಕ್ಕೇರಿಸಿದ ವ್ಯಕ್ತಿ.ಅವರು ನನ್ನ ಬಗೆಗೆ ಹಲವಾರು ಉಪನ್ಯಾಸಗಳಲ್ಲಿ ಹೇಳಿದ ಪ್ರಶಂಸನೀಯ ಮಾತುಗಳು ನನಗೆ ಜಗತ್ತಿನ ಯಾವ ಪ್ರಶಸ್ತಿ, ಬಿರುದುಗಳು ಸಮವಲ್ಲಾ.
ಗದಗ್ ತಾಲೂಕಿನ ಅತ್ಯಂತ ಚಿಕ್ಕದಾದ ಗ್ರಾಮ ನೀಲಗುಂದ. ಈ ಗ್ರಾಮದ ರವಿ ಡಿ ಚೆನ್ನಣ್ಣವರ್ ಮುಳಗುಂದ ಪಟ್ಟಣದಲ್ಲಿ ಎಸ್ ಜೆ ಜೆ ಎಂ ಶ್ರೀಯುತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನನ್ನ ಶಿಷ್ಯನಾಗಿ ಬಂದು ನನಗೆ ಪ್ರತಿನಿತ್ಯ ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದುದ್ದರಿಂದ ಈ ಪ್ರಶ್ನೆಗಳಿಗೆ ನಾನು ಒಬ್ಬ ಶಿಷ್ಯನಂತೆ ಓದುಗನಾದೆ ನನಗೆ ಆತ ಗುರುವಾಗಿ ಒಬ್ಬ ಒಳ್ಳೆಯ ಶಿಷ್ಯನನ್ನು ತಯಾರು ಮಾಡಿದ ನನ್ನ ವೃತ್ತಿ ಬದುಕಿನಲ್ಲಿ ರವಿ ಕೇಳುವಷ್ಟು ಪ್ರಶ್ನೆಗಳನ್ನು ಮತ್ಯಾರೂ ಇಲ್ಲಿಯವರಿಗೂ ಯಾರೂ ಕೇಳಿಲ್ಲ. ನಮ್ಮ ಮಹಾವಿದ್ಯಾಲಯದಲ್ಲಿ ಜಟಿಲವಾದ ಪ್ರಶ್ನೆಗಳನ್ನು ಕೇಳಿದಾಗ ಎಲ್ಲ ನನ್ನ ವೃತ್ತಿ ಬಾಂಧವರು ಆ ರವಿಯನ್ನು ಈ ರವಿ ಎಂದರೆ ನನ್ನ ಕಡೆಗೆ ಕಳಿಸುತ್ತಿದ್ದರು. ಆತನ ಪ್ರಶ್ನೆಗಳಿಗೆ ಸಾಧ್ಯವಾದಷ್ಟು ತಕ್ಷಣ ಉತ್ತರ ನೀಡುತ್ತಿದೆ ಆದರೆ ಕೆಲವೊಂದು ಪ್ರಶ್ನೆಗಳು ತಿಳಿಯದೆ ಇದ್ದಾಗ ಮನೆಯಲ್ಲಿ ಓದಿಕೊಂಡು ಒಂದೆರಡು ದಿನಗಳಲ್ಲಿ ಉತ್ತರಿಸುತ್ತಿದ್ದೆ. ಉತ್ತರಿಸುತ್ತಿದ್ದಂತೆ ಮತ್ತೊಂದು ಪ್ರಶ್ನೆಯನ್ನು ಹಾಕುವ ಮನೋವೃತ್ತಿ ಆತನಲ್ಲಿತ್ತು ಜ್ಞಾನ ಪಡೆಯುವ ಅಗಮ್ಯ ಉತ್ಸುಕತೆ ಆತನಲ್ಲಿತ್ತು.

ಅಯ್ಯಾ ನೀನೆನಗೆ ಗುರುವಪ್ಪಡೆ ನಾ ನಿನಗೆ ಶಿಷ್ಯನಪ್ಪಡೆ, ಎನ್ನ ಕರಣಾದಿ ಗುಣಂಗಳ ಕಳೆದು ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣದಲಡಗಿ, ಎನ್ನ ಪ್ರಾಣನ ಧರ್ಮವ ನಿಲಿಸಿ, ನೀನೆನ್ನ ಕಾಯದಲಡಗಿ, ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡು ಗುಹೇಶ್ವರಾ ಅಲ್ಲಮರ ವಚನದಂತೆ ನನ್ನ ತನು ಮನ ಪ್ರಾಣದಲ್ಲಿ ನೆಲೆನಿಂತ ಮಹಾ ಚೇತನ ಎಂದರೆ ಅದು ರವಿ ಡಿ ಚನ್ನಣ್ಣವರ. ಇದು ಅತಿಶಯೋಕ್ತಿಯ ಮಾತಲ್ಲ.ನೂರಕ್ಕೆ ನೂರರಷ್ಟು ಸತ್ಯ.
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ ತತ್ ಸ್ವಯಂ ಯೋಗ ಸುಸಿದ್ಧ: ಕಾಲೇನ ಆತ್ಮ ನಿ ವಿದಂತಿ ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದುದು ಬೇರೊಂದಿಲ್ಲ.ಶುದ್ಧ ಮನಸ್ಸಿನ ಯೋಗಿಯೆನಿಸಿದವನು ಮಾತ್ರ ಈ ಜ್ಞಾನವನ್ನು ತನ್ನಲ್ಲಿ ತಾನೇ ಕಂಡುಕೊಳ್ಳುತ್ತಾನೆ.
ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತಿನಂತೆ “ಪ್ರತಿನಿತ್ಯ ಓದುವ ಶಿಷ್ಯನಾದಲ್ಲಿ ಮಾತ್ರ ಗುರುವಾಗ ಬಲ್ಲ”ಆದ್ದರಿಂದ ನಾನು ಶಿಷ್ಯನಾದೆ. *ರವಿ ನನಗೆ ಇನ್ನೊಬ್ಬ ರವಿ* ಯಾಗಿ ಹೊಸ ಜ್ಞಾನದ ಜ್ಯೋತಿಯಾದನು.

ನಾನು ನಿನಗೊಲಿದೆ ನೀನು ಎನಗೊಲಿದೆ. ನೀನೆನ್ನನಗಲದಿಪ್ಪೆ ನಾ ನಿನ್ನನಗಲದಿಪ್ಪೆನಯ್ಯ.ನಿನಗೆ ನನಗೆ ಬೇರೊಂದು ಠಾವುಂಟೇ? ನೀನು ಕರುಣಿ ಎಂಬುದ ನಾನು ಬಲ್ಲೆನು.ನೀನಿರಿಸಿದ ಗತಿಯೊಳಗೆ ಇಪ್ಪಳಾನಯ್ಯ ನೀನೇ ಬಲ್ಲೆ ಚೆನ್ನಮಲ್ಲಿಕಾರ್ಜುನಾ

ಗುರು ಶಿಷ್ಯರ ಅನ್ಯೋನ್ಯ ಸಂಬಂಧ ಪಡೆದ ನಾನೇ ಧನ್ಯನು.ನನ್ನ ವೃತ್ತಿ ಬದುಕಿನಲ್ಲಿ ಹಲವಾರು ವಿದ್ಯಾರ್ಥಿಗಳು ನನಗೆ ಗುರುವಾಗಿ, ತಾಯಿಯಾಗಿ, ತಂಗಿಯಾಗಿ,ಮಗಳಾಗಿ,ಮಗನಾಗಿ ಪ್ರೀತಿಯನ್ನುಮತ್ತು ಮಾರ್ಗದರ್ಶನ ನೀಡಿದ್ದಾರೆ.ಅದರಲ್ಲಿ ಇಂದು ನಿಜವಾಗಿ ಶಿಕ್ಷಕನೆಂದರೆ ಹೇಗಿರಬೇಕೆಂದು ತೋರಿಸಿದವರು ಅದೇ ರವಿ.ಡಿ.ಚೆನ್ನಣ್ಣವರ

ನಿಮ್ಮಿಂದಲಾನಾದೆನು. ಎನಗೆ ದೇಹೇಂದ್ರಿಯ ಮನ ಪ್ರಾಣಾದಿ ಗಳಾದವು. ಆ ದೇಹೇಂದ್ರಿಯ ಮನಪ್ರಾಣಾಗಳಿಗೆ ಕರ್ತನು ನೀನೇ. ಅವರ ಆಗು ಚೇಗು ಸುಖ-ದುಃಖ ಎಲ್ಲವೂ ನೀನೆ ನೀನೇ.ಒಳಗೂ ನೀನೇ, ಹೊರಗೂ ನೀನೇ. ನಾನೆಂಬುದು ನಡುವಣ ಭ್ರಾಂತು. ನಿನ್ನ ವಿನೋದ ನೀನೇ ಬಲ್ಲೆ ದೇವರಾಯ ಸೊಡ್ಡಳಾ

ಎನ್ನೊಳಗೆ ನೀನು ಪ್ರವೇಶ ನಿನ್ನೊಳಗೆ ನಾನು ಪ್ರವೇಶ. ದೇವ ನೀನಲ್ಲದಿಲ್ಲ ಭಕ್ತ ನಾನಲ್ಲದಿಲ್ಲ. ಈ ಪರಿಯ ಮಾಡುವರಿನ್ನಾರು ಹೇಳು? ಎನಗೆ ನೀನೇಗತಿ, ನಿನಗೆ ನಾನೇ ಗತಿ.ಇನ್ನೇಕೆ ಜವನಿಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?
ಈ ಮೇಲಿನ ವಚನಗಳಂತೆ ನಾನು ಹಾಗೂ ರವಿ ಚೆನ್ನಣ್ಣವರ ಒಂದೇ ಉಸಿರಾಗಿದ್ದೇವೆ.ಅವರಿಗೆ ನಾನು ಕಲಿಸಿರುವೆ ಎಂಬುದಕ್ಕಿಂತ ಅವರಿಂದ ಕಲಿತದ್ದು,ಇನ್ನೂ ಕಲಿಬೇಕಾದುದು ಬಹಳಷ್ಟಿದೆ. ನಾನಿನ್ನು ವಿದ್ಯಾರ್ಥಿಯಾಗಿರುವೆ. ನನಗೆ ಹಲವಾರು ವಿದ್ಯಾರ್ಥಿಗಳು ಇಂದಿಗೂ ಉತ್ತಮ ಮಾರ್ಗದರ್ಶಕರಾಗಿದ್ದಾರೆ.

ಭಕ್ತಿ ಇಲ್ಲದ ಬಡವ ನಾನಯ್ಯ, ಕಕ್ಕಯ್ಯನ ಮನೆಯಲು ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ಎಲ್ಲ ಪುರಾತನರು ನೆರೆದು ಭಕ್ತಿಭಿಕ್ಷವನ್ನಿಕ್ಕಿದಡರೆ ಎನ್ನ ಪಾತ್ರೆ ತುಂಬಿತ್ತು ಕೂಡಲ ಸಂಗಮದೇವಾ

ಬಡತನವನ್ನು ಹಾಸಿಕೊಂಡು ಬಡತನವನ್ನೇ ಹೊದ್ದುಕೊಂಡು,ಬಡತನ ಕಹಿನೆನಪುಗಳನ್ನು ಮುಕ್ತವಾಗಿ ಸಭೆ ಸಮಾರಂಭಗಳಲ್ಲಿ ಹೇಳುತ್ತಾ ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ.
ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ ಅದರಲ್ಲಿ ಮೊದಲಿಗ ನಾನೇ ಎಂಬ ಅಹಂ ಕೂಡಾ ನನಗಿದೆ.
ಶರಣ ಸಾಹಿತ್ಯ,ದಾಸ ಸಾಹಿತ್ಯ,ಜನಪದ ಸಾಹಿತ್ಯ,ಅವರು ಆಳವಾಗಿ ಅಧ್ಯಯನ ಮಾಡಿದ್ದಾರೆ.

ಮಗಾ ತಂದೆಯನ್ನು ಮೀರಿಸಬೇಕು, ಶಿಷ್ಯ ಗುರುವನ್ನು ಮೀರಿಸಬೇಕು ಅಂದಾಗಲೇ ಇಬ್ಬರಿಗೂ ತೃಪ್ತಿ.ಆ ಕೆಲಸ ಮಾಡಿದ ನನ್ನ ವೃತ್ತಿ ಬದುಕಿನ ಮಹಾ ಚೇತನ ರವಿ ಚೆನ್ನಣ್ಣನವರ.ಇಂದಿಗೂ ಸಾವಿರಾರು ಜನರಿದ್ದರೂ ಹಣೆಹಚ್ಚಿ ನಮಸ್ಕಾರ ಮಾಡುತ್ತಿರುವುದು ಅವರ ಘನ ವ್ಯಕ್ತಿತವಕ್ಕೆ ಸಾಕ್ಷಿಯಾಗಿದೆ.

ರವೀಂದ್ರ ಆರ್ ಪಟ್ಟಣ
ಮುಳಗುಂದ—-ರಾಮದುರ್ಗ

Don`t copy text!