ವಿಜಯದಶಮಿ

 

ವಿಜಯದಶಮಿ

ಭಾರತ ಹಬ್ಬಗಳ ತವರೂರು.ವಿವಿಧತೆಯಲ್ಲಿ ಏಕತೆಯನ್ನು ಸಾರುವ ಇಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಜನಸಮುದಾಯಗಳು ವರ್ಷಪೂರ್ತಿ ಹಬ್ಬಹರಿದಿನಗಳನ್ನು ಆಚರಿಸುತ್ತಲೇ ಇರುತ್ತಾರೆ. ಭಾರತೀಯರು ಆಚರಿಸುವ ಬಹುತೇಕ ಹಬ್ಬಗಳು ಗತವ್ಯಕ್ತಿಯ ಅಥವಾ ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿವೆ.ಇವು ಧರ್ಮ,ಸಂಸ್ಕೃತಿ,ಪರಂಪರೆ,ಇತಿಹಾಸದ ಭಾಗವಾಗಿವೆ.ಇವು ಕೇವಲ ಆಚರಣೆಗಳಿಗೆ ಸೀಮಿತವಾಗಿರದೆ ಸಮಗ್ರ ಕುಟುಂಬಕ್ಕೆ ಆನಂದ,ಚೈತನ್ಯ ನೀಡುವ ಶಕ್ತಿಗಳಾಗಿವೆ.ಕುಟುಂಬ ಕುಟುಂಬಗಳ ನಡುವೆ ಸುತ್ತಮುತ್ತಲಿನ ಸಮಾಜದ ನಡುವೆ ಬಾಂಧವ್ಯ ಬೆಸೆಯುವ ಸಾಧನಗಳಾಗಿವೆ. ಅಂತಹ ಬಾಂಧವ್ಯವನ್ನು ಬೆಸೆಯುವ ಹಬ್ಬಗಳಲ್ಲಿ ಒಂದಾದ ವಿಜಯದಶಮಿ ಕರ್ನಾಟಕದ ಜನತೆಗೆ ನಾಡಹಬ್ಬವಾಗಿದೆ.ಇದು ಪೌರಾಣಿಕ,ಐತಿಹಾಸಿಕ,ಧಾರ್ಮಿಕ,ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ವಿಜಯದಶಮಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತದಾದ್ಯಂತ ಆಚರಿಸುವ ಹಬ್ಬವಾಗಿದೆ.ದೇವಿಯ ಆರಾಧನೆಗೆ ಮೀಸಲಾದ ಈ ಹಬ್ಬವನ್ನು ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಎಂದೂ, ಕರ್ನಾಟಕದಲ್ಲಿ ದಸರಾ, ನವರಾತ್ರಿ ಎಂದು ಕರೆಯಲಾಗುತ್ತದೆ. ನವರಾತ್ರಿಯಲ್ಲಿ ರಾತ್ರಿ ಎಂದರೆ ಆಗುತ್ತಿರುವ ಬದಲಾವಣೆಗಳು ಎಂದರ್ಥ. ಭೂಮಿಯು ತಿರುಗುತ್ತಿರುವುದರಿಂದ ಸೃಷ್ಟಿಯಲ್ಲಿ ಹಗಲು-ರಾತ್ರಿಗಳೆಂಬ ಬದಲಾವಣೆಗಳು ಸಂಭವಿಸುತ್ತಿರುತ್ತವೆ.

ಕಾಲಪುರುಷನಲ್ಲಿ ಈ ಬದಲಾವಣೆಗಳನ್ನು ಮಾಡುವವಳು ಕಾಲರಾತ್ರಿ. ಆ ದೇವತೆಯ ಆರಾಧನೆಯೇ ನವರಾತ್ರಿ. ಹಾಗೆಯೇ ದಸರಾ ಶಬ್ದ ದಶ+ಹರಾ ದಿಂದ ಬಂದಿದೆ .ಹರಾ ಎಂದರೆ ಸೋಲು.ಹತ್ತು ದಿಕ್ಕುಗಳನ್ನು ದೇವಿ ತನ್ನ ಶಕ್ತಿಯಿಂದ ಸೋಲಿಸಿ ಸಂಪನ್ನಳಾಗಿದ್ದರಿಂದ ದಸರಾ ಆಗಿದೆ. ಎರಡು ರೀತಿಯ ನವರಾತ್ರಿ ಆಚರಣೆಗಳಿದ್ದು, ವಸಂತ ಋತುವಿನಲ್ಲಿ ಬರುವ ನವರಾತ್ರಿ ವಾಸಂತಿಕಾ ನವರಾತ್ರಿಯಾಗಿದ್ದು, ಈ ನವರಾತ್ರಿ ಪೂಜೆ ಸಕಾಲವಾದದ್ದು. ಶರದ್ ಋತುವಿನಲ್ಲಿ ಬರುವ ನವರಾತ್ರಿ ಶರನ್ನವರಾತ್ರಿ ಯಾಗಿದ್ದು ಈ ಕಾಲದಲ್ಲಿ ನಡೆಯುವ ಪೂಜೆ ಅಕಾಲ ಪೂಜೆ .ಈ ನವರಾತ್ರಿ ತಾಂತ್ರಿಕ ಸಾಧಕರಿಗೆ ಮಹತ್ವದ್ದಾಗಿದ್ದು,ಇವರು ರಾತ್ರಿ ಹೊತ್ತಿನಲ್ಲಿ ದೇವಿಯನ್ನು ಪೂಜಿಸಿ ಒಲಿಸಿಕೊಳ್ಳುತ್ತಾರೆ.


ಶರನ್ನವರಾತ್ರಿ ಆಶ್ವಯುಜ ಮಾಸದ ಪ್ರತಿಪದೆಯಿಂದ ಪ್ರಾರಂಭವಾಗಿ ದಶಮಿ ತಿಥಿಯವರೆಗೆ ನಡೆಯುತ್ತದೆ.ಜಗತ್ತಿನಲ್ಲಿ ಯಾವಾಗ ತಾಮಸ ಅಸುರ ಕ್ರೂರ ಜನರು ಪ್ರಬಲರಾಗಿ ಸಾತ್ವಿಕ ಮತ್ತು ಧರ್ಮ ಸಜ್ಜನರನ್ನು ಪಿಡಿಸುತ್ತಾರರೋ ಆಗ ಧರ್ಮಸಂಸ್ಥಾಪನೆಗಾಗಿ ದೇವಿ ಪುನಃ ಪುನಃ ಅವತಾರ ಎತ್ತುತ್ತಾಳೆ.ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ದೇವಿಯು ಶೈಲಪುತ್ರಿ,ಬ್ರಹ್ಮಚಾರಿಣಿ,ಚಂದ್ರಘಂಟಾ,ಕೂಷ್ಮಾಂಡಾ,ಸ್ಕಂದಮಾತಾ,ಕಾತ್ಯಾಯಿನಿ,ಕಾಲರಾತ್ರಿ ಮಹಾಗೌರಿ,ಸಿದ್ಧಿದಾತ್ರಿ ಎಂಬ ಒಂಬತ್ತು ಅವತಾರಗಳನ್ನು ತಾಳಿದಳು ಎಂಬ ನಂಬಿಕೆ ಭಕ್ತರದು.ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ದೇವಿಯನ್ನು ಒಂಬತ್ತು ರೂಪಗಳಿಂದ ಆರಾಧನೆ ಮಾಡಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನಗಳು ತಮೋಗುಣ ಕಡಿಮೆ ಮಾಡುವ ತಮೋಗುಣ ಮಹಾಕಾಳಿಯನ್ನು, ನಂತರದ ಮೂರು ದಿನಗಳು ರಜೋಗುಣ ವೃದ್ಧಿಸಲು ಮಹಾಲಕ್ಷ್ಮಿಯನ್ನು, ಕೊನೆಯ ಮೂರು ದಿನಗಳು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ವಗುಣ ಮಹಾಸರಸ್ವತಿಯನ್ನು ಆರಾಧಿಸಲಾಗುತ್ತದೆ. ಹತ್ತನೆಯ ದಿನ ದೇವಿಯು ಚಂಡ-ಮುಂಡ ಶುಂಭ-ನಿಶುಂಭ,ರಕ್ತಬೀಜಾಸುರ, ಮಹಿಷಾಸುರ ರಾಕ್ಷಸರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ.
ನವರಾತ್ರಿ ಹಬ್ಬದ ಆಚರಣೆ ಕುರಿತು ಪುರಾಣ ಮತ್ತು ಜನಪದ ಕಾವ್ಯಗಳಲ್ಲಿ ಉಲ್ಲೇಖವಿದೆ. ತೇತ್ರಾಯುಗದಲ್ಲಿ ಶ್ರೀರಾಮನು ರಾವಣನ ಸಂಹಾರ ಮಾಡುವ ಮುಂಚೆ ನಾರದನು ಶರನ್ನವರಾತ್ರಿ ವೃತವನ್ನು ಆಚರಿಸುವಂತೆ ರಾಮನಿಗೆ ತಿಳಿಸಿದನು. ವೃತ ಆಚರಿಸಿದ ರಾಮನು ದಶಮಿಯ ದಿನ ರಾವಣನನ್ನು ಸಂಹಾರ ಮಾಡಿದ.ದ್ವಾಪರಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟು ವಿರಾಟನ ಗೋಗ್ರಹಣ ಸಮಯದಲ್ಲಿ ಬನ್ನಿವೃಕ್ಷದಿಂದ ಆಯುಧಗಳನ್ನು ಮರಳಿ ಪಡೆದು ಅಧರ್ಮಿಗಳಾದ ಕೌರವರ ವಿರುದ್ಧ ಯುದ್ಧ ಮಾಡಿ ಜಯ ಸಾಧಿಸಿದ್ದು ಇದೆ ವಿಜಯದಶಮಿ ದಿನ. ಜನಪದ ಕಾವ್ಯಗಳು ರಾಮಚಂದ್ರ ಶಮೀವೃಕ್ಷವನ್ನು ಪೂಜಿಸಿ ರಾವಣನ ಮೇಲೆ ಯುದ್ಧಕ್ಕೆ ಹೋದನೆಂದೂ,ವಿರಾಟನ ಗೋಗ್ರಹಣದ ಸಂದರ್ಭದಲ್ಲಿಅರ್ಜುನನು ಶೇಮಿದೇವಿಯನ್ನು ಆರಾಧಿಸಿದನೆಂದು ಹೇಳುತ್ತವೆ.
ಜನಪದ ಗರತಿಯ,
ಕಲ್ಲು ಕಡಬು ಮಾಡಿ ಮುಳ್ಳು ಸಾವಿಗೆ ಮಾಡಿ
ಬನ್ನಿಯ ಎಲೆಯಾಗ ಎಡೆಮಾಡಿ! ಪಾಂಡವರು
ಉಂಡು ಹೋಗ್ಯಾರೋ ವನವಾಸೊ
ಎಂಬ ಹಾಡು ಪಾಂಡವರು ಬನ್ನಿ ವೃಕ್ಷದ ಸಂಪರ್ಕದಲ್ಲಿದ್ದದ್ದು, ವನವಾಸ ಸಂದರ್ಭದಲ್ಲಿ ಅವರು ಅನುಭವಿಸಿದ ಕಷ್ಟಗಳನ್ನು ವಿವರಿಸುತ್ತದೆ.
ಕರ್ನಾಟಕದಲ್ಲಿ ನಾಡಹಬ್ಬವಾದ ದಸರೆಗೆ ಐತಿಹಾಸಿಕ ಹಿನ್ನೆಲೆಯೂ ಇದೆ. ಇದನ್ನು ಕನ್ನಡಿಗರ ಹಬ್ಬವನ್ನಾಗಿಸಿದವರು ಕರ್ನಾಟಕ ರತ್ನ ಸಿಂಹಾಸನಾಧೀಶ್ವರರಾದ ವಿಜಯನಗರದ ಅರಸರು.ಇವರು ಹಬ್ಬದ ಆಚರಣೆಗಾಗಿಯೇ ಮಹಾನವಮಿ ದಿಬ್ಬವನ್ನು ರಚಿಸಿ ವಿಜೃಂಭಣೆಯಿಂದ ಹಬ್ಬದ ಆಚರಣೆ ಮಾಡುತ್ತಿದ್ದರು.ವಿಜಯನಗರದ ಅರಸರ ಕಾಲದಲ್ಲಿ ವಿಜಯದಶಮಿಯ ಅಂದಿನ ಮೆರವಣಿಗೆ ವೈಭವೋಯಪೇತವಾಗಿತ್ತೆಂದು ವಿದೇಶಿ ಪ್ರವಾಸಿಗರಾದ ಇಟಲಿಯ ನಿಕೊಲೊ-ದೆ-ಕೊಂತಿ, ಪರ್ಶಿಯಾದ ಅಬ್ದುಲ್ ರಜಾಕ್,ಇಟಲಿಯ ಡೊಮಿಂಗೋ ಡಯಾಸ್ ಹೇಳುತ್ತಾರೆ.ಅಬ್ದುಲ್ ರಜಾಕ್ ಇಮ್ಮಡಿ ದೇವರಾಯನ ಕಾಲಕ್ಕೆ ಭೇಟಿ ನೀಡಿದ್ದನು. ಅವನು ಕ್ರಿ.ಶಕ ೧೪೪೩ ರ ದಸರಾ ಉತ್ಸವದ ಬಗ್ಗೆ ವಿವರಣೆ ನೀಡಿದ್ದಾನೆ. ಡೋಮಿಂಗೋ ಡಯಾಸ್ ೧೫೨೦ ಕೃಷ್ಣದೇವರಾಯನ ಕಾಲದ ಉತ್ಸವದ ಬಗ್ಗೆ ಬರೆದಿದ್ದಾನೆ ಎನ್ನುತ್ತಾರೆ ಸಂಸ್ಕೃತಿ ಚಿಂತಕರಾದ ಡಾ. ಶಲ್ವಪಿಳ್ಯೆ ಅಯ್ಯಂಗಾರ. ವಿಜಯನಗರ ಅರಸರ ನಂತರ ಪ್ರವರ್ಧಮಾನಕ್ಕೆ ಬಂದ ಮೈಸೂರು ಒಡೆಯರು ದಸರಾ ಆಚರಣೆ ನಡೆಸಿದರು. ೧೬೧೦ ರಲ್ಲಿ ಮೈಸೂರಿನ ಅರಸರಾದ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವ ಆರಂಭಿಸಿದರು. ೧೯೬೯ ರಲ್ಲಿ ದಸರಾ ನಡೆದು ಬಳಿಕ ಆಚರಣೆ ನಿಂತುಹೋಯಿತು. ೧೯೭೨ ರಿಂದ ರಾಜ್ಯಸರ್ಕಾರ ನಾಡಹಬ್ಬ ಹೆಸರಿನಿಂದ ದಸರಾ ಆಚರಣೆ ಮುಂದುವರೆಸಿದೆ.ಈಗ ಅಂಬಾರಿಯಲ್ಲಿ ರಾಜರ ಬದಲಾಗಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆ ನಡೆಯುತ್ತದೆ.
ಪೌರಾಣಿಕ ಐತಿಹಾಸಿಕ ಮಹತ್ವ ಪಡೆದಿರುವ ವಿಜಯದಶಮಿ ಪ್ರಾರಂಭದಲ್ಲಿ ಕೃಷಿಗೆ ಸಂಬಂಧಪಟ್ಟ ಉತ್ಸವವಾಗಿರುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು (ಮುಂಗಾರಿ ಬೆಳೆ) ಬರುವ ವೇಳೆ ರೈತರು ಈ ಹಬ್ಬವನ್ನು ಆಚರಿಸುತ್ತಾರೆ.ಕಲಶಸ್ಥಾಪನೆ(ಘಟಸ್ಥಾಪನೆ)ಯಲ್ಲಿ ಒಂಬತ್ತು ರೀತಿಯ ಧಾನ್ಯಗಳನ್ನು ಬಿತ್ತಿ ದಸರೆಯ ದಿನ ಈ ಧಾನ್ಯದ ಮೊಳಕೆಯನ್ನು ದೇವರಿಗೆ ಅರ್ಪಿಸುತ್ತಾರೆ.ಜೊತೆಗೆ ಆಯುಧಪೂಜೆ ಸಂದರ್ಭದಲ್ಲಿ ಆಯುಧಪೂಜೆಗೆ ಜೋಳದತೆನೆ ಸಮೇತ ದಂಟುಗಳನ್ನು ಇಡುತ್ತಾರೆ.ದಸರೆಯ ದಿನ ನಡೆಯುವ ಆಯುಧ ಪೂಜೆಯಲ್ಲಿ ರಾಜಮಹಾರಾಜರು ಶಸ್ತ್ರಗಳನ್ನು ಪೂಜಿಸಿದರೆ, ಕುಶಲಕರ್ಮಿಗಳು ತಮ್ಮ ಕಸುಬಿಗೆ ಬಳಸುವ ಉಪಕರಣಗಳನ್ನು ,ವ್ಯಾಪಾರಿಗಳು ವ್ಯಾಪಾರಕ್ಕೆ ಬಳಸುವ ಸಾಧನಗಳನ್ನು, ರೈತರು ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಹೀಗಾಗಿ ಕೃಷಿ ಆಚರಣೆಯಾಗಿದ್ದ ಇದು ಕಾಲಕ್ರಮೇಣ ಧಾರ್ಮಿಕ ಸ್ವರೂಪ ಪಡೆದು,ತರುವಾಯ ರಾಜಕೀಯ ಸ್ವರೂಪ ಪಡೆದಿರುವ ಸಾಧ್ಯತೆಗಳಿವೆ.
ಸಾಂಸ್ಕೃತಿಕವಾಗಿ ಮಹತ್ವನ್ನು ಪಡೆದಿರುವ ಈ ಹಬ್ಬ ಪ್ರದೇಶಕ್ಕನುಸಾರವಾಗಿ ಆಚರಣೆಗಳಲ್ಲಿ ಭಿನ್ನತೆಯನ್ನು ಪಡೆದಿದೆ‌.ಮೈಸೂರಿನಲ್ಲಿ ಜಂಬೂಸವಾರಿಯ ಜೊತೆಗೆ ಗೊಂಬೆಗಳನ್ನು ಕೂಡಿಸುವುದರಿಂದ ಇದು ‘ಗೊಂಬೆಹಬ್ಬ’ ಎನಿಸುತ್ತದೆ .ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಈ ಸಂದರ್ಭದಲ್ಲಿ ದೇವಿ ಮತ್ತು ಗಣಪತಿಯ ಆರಾಧನೆ ನಡೆಯುತ್ತದೆ. ಕೆಲವು ಭಾಗಗಳಲ್ಲಿ ರಾಮಲೀಲಾ ಎಂದು ರಾವಣ ದಹನವು ನಡೆಯುತ್ತದೆ.ಉತ್ತರ ಕರ್ನಾಟಕದ ಭಾಗಗಳಲ್ಲಿ ಇದಕ್ಕೆ ದಸರಾ ಜೊತೆಗೆ ವಿಶೇಷವಾಗಿ ಬನ್ನಿ ಮುಡಿಯುವ ಹಬ್ಬ ,ಘಟ್ಟ ಹಾಕುವ ಹಬ್ಬ ,ದೀಪ ಹಾಕುವ ಹಬ್ಬ ಎಂದು ಕರೆಯುತ್ತಾರೆ.ಶಕ್ತಿದೇವತೆಯ ದೇವಸ್ಥಾನಗಳಲ್ಲಿ, ದೇವಿ ಉಪಾಸಕರ ಮನೆಗಳಲ್ಲಿ, ದೇವಿ ಆರಾಧನೆ ನಡೆಯುತ್ತದೆ .ಕೆಲವೊಂದು ಮನೆಗಳಲ್ಲಿ ಇದೇ ವೇಳೆ ಘಟಸ್ಥಾಪನೆ ((ನವಧಾನ್ಯಗಳನ್ನು ಮಣ್ಣಿನ ಮಡಕೆಯ ಕೆಳಭಾಗದಲ್ಲಿ ಬಿತ್ತಿ ಒಂಬತ್ತನೇ ದಿನ ದೇವಿಗೆ ಅರ್ಪಿಸುವುದು), ದೀಪಾ ಹಾಕುವುದು (ಒಂಬತ್ತು ದಿನ ನಿರಂತರವಾಗಿ ನಂದಾದೀಪ ಬೆಳಗುವುದು) ಮಾಡುತ್ತಾರೆ. ಜೊತೆಗೆ ಒಂಬತ್ತು ದಿನಗಳವರೆಗೆ ಭದ್ರಕಾಳಿ ನೆಲೆಸಿರುವಳು ಎಂಬ ನಂಬಿಕೆಯಿಂದ ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸುತ್ತಾರೆ. ದಸರೆಯ ದಿನ ತಮ್ಮ ಉದ್ಯೋಗಕ್ಕನುಸಾರವಾಗಿ ಆಯುಧ ಪೂಜೆ ಮಾಡುತ್ತಾರೆ. ಸಾಯಂಕಾಲ ಊರ ಹಿರಿಯರು ಊರ ಹೊರಗಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಅಲ್ಲಿಯೇ ಬನ್ನಿಮುಡಿದು ಬರುತ್ತಾರೆ.ನಂತರ ದೇವಸ್ಥಾನಗಳಿಗೆ,ಮಠಗಳಿಗೆ ಭೇಟಿ ನೀಡಿ ತರುವಾಯ ಕುಟುಂಬದವರೊಂದಿಗೆ ಆತ್ಮೀಯತೆಯಿಂದ ಬನ್ನಿ ವಿನಿಮಯ ಮಾಡಿಕೊಳ್ಳುತ್ತಾರೆ. ಬನ್ನಿ ಮುಡಿಯುವ ಸಂದರ್ಭದಲ್ಲಿ ಪರಸ್ಪರ ಬನ್ನಿ ಎಲೆಗಳನ್ನು ಕೊಟ್ಟು “ನಾವು ನೀವು ಬಂಗಾರದಂಗ ಇರೋಣ” ಎಂದು ಹೇಳಿಕೊಳ್ಳುತ್ತಾರೆ.


ಈ ಬನ್ನಿ ಮುಡಿಯುವ ಸಂಪ್ರದಾಯದ ಹಿಂದೆ ಒಂದು ಪೌರಾಣಿಕ ಕಥೆಯೂ ಇದೆ.ಹಿಂದೆ ಮಹಾನ್ ಎಂಬ ಗುರುವಿಗೆ ಶಮೀವೃತ ಮತ್ತು ವೃಕ್ಷೀತ ಎಂಬ ಶಿಷ್ಯಂದಿರಿದ್ದರು. ಶಮೀವೃತ ತಂದೆ ತಾಯಿ ಇಲ್ಲದ ಬಡವನಾದರೆ, ವೃಕ್ಷೀತ ರಾಜಕುಮಾರ.ವಿದ್ಯೆ ಕಲಿಸಿದ ನಂತರ ಗುರುದಕ್ಷಿಣೆ ಬೇಡಿದಾಗ ವೃಕ್ಷೀತ ಅಂಬಾರಿ ಎತ್ತರದಷ್ಟು ಸುವರ್ಣ ನಾಣ್ಯ ನೀಡಿ ತನ್ನ ಸ್ನೇಹಿತ ಏನು ದಕ್ಷಿಣೆ ನೀಡುವ ಎಂದು ಪರೀಕ್ಷಿಸಲು ಮರೆಯಾಗಿ ಗುರುವನ್ನು ಹಿಂಬಾಲಿಸುತ್ತಾನೆ. ಶಮೀವೃತನ ಹತ್ತಿರ ಬಂದ ಗುರುಗಳು ನಿನ್ನ ಗುಡಿಸಲ ಹಿಂದಿರುವ ವೃಕ್ಷವನ್ನು ನೀಡು ಎಂದಾಗ ಆ ವೃಕ್ಷ ಸುವರ್ಣ ವೃಕ್ಷವಾಗಿ ಎಲೆ ಉದುರಿಸಿದಷ್ಟು ಬಂಗಾರದ ರಾಶಿಯೇ ಅಲ್ಲಿ ನಿರ್ಮಾಣವಾಗುತ್ತದೆ.ಆಗ ಗುರುಗಳು ವೃಕ್ಷೀತನನ್ನು ಕುರಿತು ಕೊಟ್ಟೆನೆಂಬ ಅಹಂ ಇಲ್ಲದೆ ಪ್ರೀತಿಯಿಂದ ಕೊಟ್ಟ ಒಂದೆಲೆಯು ಬಂಗಾರಕ್ಕೆ ಸಮ ಎಂದು ಹೇಳುತ್ತಾರೆ. ತಪ್ಪಿನ ಅರಿವಾದ ವೃಕ್ಷೀತ ಶಮಿವೃತನನ್ನು ಅಪ್ಪಿಕೊಳ್ಳುತ್ತಾನೆ. ಅವರಿಬ್ಬರ ಬಾಂಧವ್ಯದ ಸಂಕೇತವಾಗಿ ಆ ವೃಕ್ಷಕ್ಕೆ ಶಮಿವೃಕ್ಷ ಎಂಬ ಹೆಸರು ಬಂದಿತು.ಅಂದಿನಿಂದ ಶಮೀವೃಕ್ಷದ ಆರಾಧನೆ ಮತ್ತು ಶಮೀವೃಕ್ಷದ ಎಲೆಗಳನ್ನು ಬಂಗಾರ ಎಂದು ಭಾವಿಸಿ ವಿನಿಮಯ ಮಾಡಿಕೊಳ್ಳುವ ಬನ್ನಿ ಮುಡಿಯುವ ಪದ್ಧತಿ ಆಚರಣೆಗೆ ಬಂದಿತೆಂದು ಹೇಳಲಾಗುತ್ತದೆ.ಈ ಬನ್ನಿ ಮುಡಿಯುವ ಸಂಪ್ರದಾಯ ಹಳೆ ಸಂಬಂಧವನ್ನು ಪುನಃ ಬೆಸೆದರೆ,ಹೊಸ ಸಂಬಂಧವನ್ನು ಸೃಷ್ಟಿಸುತ್ತದೆ .ಈ ಮೂಲಕ ಜನರ ನಡುವೆ ಬಾಂಧವ್ಯ ಬೆಸೆಯುವ ಕಾರ್ಯವನ್ನು ಈ ಹಬ್ಬ ಮಾಡುತ್ತದೆ. ಜೊತೆಗೆ ಈ ದಿನ ಸರ್ವಕಾರ್ಯಗಳಿಗೂ ಶ್ರೇಷ್ಠ ಎಂಬ ಭಾವನೆ ಇದ್ದು ಹೊಸ ಕಾರ್ಯಗಳನ್ನು ಪ್ರಾರಂಬಿಸುವದಿದ್ದರೆ ಇಂದು ಪ್ರಾರಂಭಿಸುತ್ತಾರೆ .ಇದೇ ದಿನ ಜನಪದರ ಆರಾಧ್ಯದೇವಿ ಶಿಗವ್ವನ ಪ್ರತಿಷ್ಠಾಪನೆಯೂ ನಡೆಯುತ್ತದೆ.
ನಮ್ಮ ಜನಪದ ಹಿರಿಯರು ಯಾವುದೇ ಹಬ್ಬವನ್ನು ಆಚರಣೆ ಮಾಡಿದರೂ ಅದಕ್ಕೊಂದು ವೈಚಾರಿಕತೆ, ವೈಜ್ಞಾನಿಕ ಕಾರಣವನ್ನು ಇಟ್ಟುಕೊಂಡೆ ಮಾಡಿರುತ್ತಾರೆ.ಇದಕ್ಕೆ ನವರಾತ್ರಿಯು ಹೊರತಲ್ಲ.ನವರಾತ್ರಿಯಲ್ಲಿ ಉಪವಾಸ ವೃತಗಳ ಆಚರಣೆ ನಡೆಯುತ್ತದೆ. ಪ್ರಕೃತಿಯ ನಿಯಮದಂತೆ ಅಶ್ವಯುಜಮಾಸ ಕತ್ತಲೆಯ ರಾತ್ರಿಯತ್ತ (ಜೂನ್ ೨೨ ವರ್ಷದ ಅತಿದೊಡ್ಡ ಹಗಲು- ಡಿಸೆಂಬರ್ ೨೨ ವರ್ಷದ ಅತಿದೊಡ್ಡ ರಾತ್ರಿ) ಹೊರಳುತ್ತಿರುವ ಕಾಲ. ಇಲ್ಲಿ ಹಗಲಿನ ಪ್ರಮಾಣ ಕಡಿಮೆ ಇರುವುದರಿಂದ ದುಡಿಮೆಯ ಪ್ರಮಾಣವೂ ಕಡಿಮೆ.ಈ ಅವಧಿಯಲ್ಲಿ ಹೆಚ್ಚು ಆಹಾರ ಸೇವಿಸಿದರೆ, ದೇಹ ಜೀರ್ಣಿಸಿಕೊಳ್ಳದೆ ಅಜೀರ್ಣವಾಗಿ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿ ಆರೋಗ್ಯದ ದೃಷ್ಟಿಯಿಂದ ಹಿರಿಯರು ಉಪವಾಸ ವೃತಗಳನ್ನು ಜಾರಿಗೆ ತಂದರು. ಕತ್ತಲೆಯ ಮಾಸವಾಗಿದ್ದರಿಂದ ಜೊತೆಗೆ ಮಳೆಗಾಲವಾದ ಈ ಸಂದರ್ಭದಲ್ಲಿ ಹುಳಹುಪ್ಪಡಿಗಳು ಹುತ್ತ,ಭೂಮಿಯಿಂದ ಹೊರಗೆ ಬರುವದರಿಂದ ಅವುಗಳಿಂದ ರಕ್ಷಿಸಿಕೊಳ್ಳಲು ದೀಪ ಬೆಳಗಿಸುವ ಪರಂಪರೆಯನ್ನು ಪ್ರಾರಂಭಿಸಿದರು.ಶಮೀವೃಕ್ಷ (ಬನ್ನಿಮರ ) ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪತ್ತಿ ಮಾಡುವ ಮರ. ಬೆಳಗಿನ ಹೊತ್ತು ನಿರ್ಮಲವಾದ ವಾತಾವರಣದಲ್ಲಿ ಬನ್ನಿ ಮರದಿಂದ ಬರುವ ಶುದ್ಧವಾದ ಗಾಳಿಯನ್ನು ಸೇವಿಸುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಕಡಿಮೆಯಾಗುತ್ತವೆ. ಈ ಕಾರಣಕ್ಕಾಗಿ ಈ ವೇಳೆ ಬನ್ನಿ ವೃಕ್ಷದ ಪೂಜೆಯನ್ನು ಆಚರಣೆಗೆ ತಂದರು. ಇದರೊಂದಿಗೆ ನಮ್ಮ ಮನಸ್ಸಿನಲ್ಲಿರುವ ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರ,ಸ್ವಾರ್ಥ,ಅನ್ಯಾಯ,ಅಮಾನವೀಯತೆ,ಅಹಂಕಾರ ಎಂಬ ಹತ್ತು ಅವಗುಣಗಳನ್ನು ನಿರ್ಮೂಲನೆ ಮಾಡಲು ತಿಳಿಸಿದರು.
ಜಾಗತೀಕರಣದ ಈ ಕಾಲಮಾನದಲ್ಲಿ ಪರಸ್ಪರ ಸಂಬಂಧಗಳನ್ನು ಕಳೆದುಕೊಂಡು ಬದುಕುತ್ತಿದ್ದೇವೆ.ಕೊಳ್ಳುಬಾಕ ಸಂಸ್ಕೃತಿ ಬೆಳೆಸಿಕೊಂಡು,ಹೊಟ್ಟೆಬಾಕುತನವನ್ನು ರೂಢಿಸಿಕೊಂಡು ಅನಾರೋಗ್ಯಕ್ಕೆ ಈಡಾಗುತ್ತಿದ್ದೆವೆ.ಹಿರಿಯರು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ,ಮಾನಸಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ರೂಢಿಸಿದ ಈ ಹಬ್ಬ ಜಾಗತೀಕರಣದ ಸಮಸ್ಯೆಗಳಿಗೆ ಉತ್ತರವಾಗಿದೆ. ಸಂಬಂಧಗಳನ್ನು ಬೆಸೆಯುವ ಈ ಹಬ್ಬವನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ರಕ್ಷಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

-ಡಾ.ರಾಜೇಶ್ವರಿ ವೀ.ಶೀಲವಂತ
ಬೀಳಗಿ

Don`t copy text!