ಕೊಪ್ಪಳ ಬಜಾರ್ ನಲ್ಲೊಂದು ಲಿಂಗಾಯತರ ಚಿನ್ನದ ಜ್ಯುವೆಲರ್ಸ್ ಅಂಗಡಿ ಪ್ರಾರಂಭ

ಕೊಪ್ಪಳ ಬಜಾರ್ ನಲ್ಲೊಂದು ಲಿಂಗಾಯತರ ಚಿನ್ನದ ಜ್ಯುವೆಲರ್ಸ್ ಅಂಗಡಿ ಪ್ರಾರಂಭ

ಇದರಲ್ಲೇನು ಆಶ್ಚರ್ಯ ? ಎಂದು ನೀವು ಕೇಳಬಹುದು.ಮೊನ್ನೆ ಮುದ್ದೇಬಿಹಾಳ ವಾಟ್ಸಾಪ್ ಗ್ರೂಪಿನಲ್ಲೊಂದು ಸಂದೇಶವನ್ನು ನೋಡಿದೆ ಅದು ಈ ರೀತಿಯಾಗಿತ್ತು “ಮುದ್ದೇಬಿಹಾಳದ ಲಿಂಗಾಯತ ವ್ಯಾಪಾರಿಗಳು ಅನ್ಯರಾಜ್ಯದ (CRP) ವ್ಯಾಪಾರಿಗಳ ಹಠಾವೋ ಕುರಿತು ಒಂದು ಸಭೆಯನ್ನು ಆಯೋಜಿಸಿ ಸ್ಥಳೀಯ ಎಲ್ಲ ವ್ಯಾಪಾರಿಗಳು ಈ ಸಭೆಗೆ ಆಗಮಿಸಬೇಕೆಂದು ವಿನಂತಿಸಿಕೊಂಡಿದ್ದರು”. ಆ ಸಭೆಯಲ್ಲಿ ಈಗಾಗಲೇ ನಮ್ಮ ಊರಿನಲ್ಲಿ ನೂರಾ ಮೂವತ್ತಕ್ಕೂ ಹೆಚ್ಚು ಅಂಗಡಿಗಳು ಅನ್ಯರಾಜ್ಯದ (CRP ಗಳ) ವ್ಯಾಪಾರಿಗಳ ಪಾಲಾಗಿವೆ. ಹೀಗಾಗಿ ಅವರ ದಾಳಿಯಿಂದ ನಮ್ಮ ವ್ಯಾಪಾರ ವ್ಯವಹಾರವನ್ನು ರಕ್ಷಿಸಿಕೊಳ್ಳುವದು ಹೇಗೆ ? ಎಂದು ಚರ್ಚೆ ಮಾಡಿದರಂತೆ.

ಇದು ಕೇವಲ ಮುದ್ದೇಬಿಹಾಳ ವ್ಯಾಪಾರಿಗಳ ಆತಂಕವಲ್ಲ ಇಡಿ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಎಲ್ಲ ಸಣ್ಣ ನಗರ, ದೊಡ್ಡ ನಗರ ಹಾಗೂ ಉಪನಗರಗಳ ವ್ಯಾಪಾರಿಗಳ ಆತಂಕವೂ ಹೌದು.ಸುಮಾರು ನಾಲ್ಕು ದಶಕಗಳ ಹಿಂದೆ ನಮ್ಮೂರ ಕೊಪ್ಪಳದ ಮಾರುಕಟ್ಟೆಯ ವ್ಯಾಪಾರ ವ್ಯವಹಾರಗಳೆಲ್ಲವೂ ಲಿಂಗಾಯತರ ಕೈಯಲ್ಲಿತ್ತು.ಶೇಕಡಾ ತೊಂಬತ್ತರಷ್ಟು ಕಿರಾಣಿ, ದಲಾಲಿ,ಟೆಂಗಿನಕಾಯಿ, ಬಟ್ಟೆ,ಹೋಟೆಲ್, ಖಾನಾವಳಿ, ಹಾರ್ಡ್ ವೇರ್,ಆಟೋಮೊಬೈಲ್ ಬಿಡಿಭಾಗಗಳ, ಯಂತ್ರೋಪಕರಣ,ಮೆಷಿನರಿಗಳ, ಗೃಹೋಪಯೋಗಿ, ಪಾತ್ರೆ-ಪಗಡಿಗಳ,ವಿದ್ಯುದ್ದುಪಕರಣಗಳ,ಮಿಠಾಯಿ, ಸ್ಟೇಷನರಿ,ಹೂವು,ಪೂಜಾ ಸಾಮಾಗ್ರಿಗಳ,ಪಾನ ಬೀಡಾ, ಕಾಳುಕಡಿ ತುಂಬುವ,ಪೇಪರ-ಪುಸ್ತಕಗಳ,ಮುಂತಾದ ಅಂಗಡಿಗಳು ಹಾಗೆಯೇ ಎಣ್ಣೆಗಾಣ,ಎಣ್ಣೆ ಮಿಲ್ಲುಗಳು, ಜಿನ್ನಿಂಗ್ ಫ್ಯಾಕ್ಟರಿ,ಕಾಳುಕಡಿ ಬೀಸುವ ಫ್ಲೋರ್ ಮಿಲ್,ಮಡಿಕೆ, ಕುಡಿಕೆ,ಒಲೆ ತಯಾರಿಕಾ ಘಟಕಗಳು ಮುಂತಾದುವೆಲ್ಲವೂ ಲಿಂಗಾಯತ ವ್ಯಾಪಾರಿಗಳ ಮಾಲೀಕತ್ವದಲ್ಲಿವು.ಹಾಗೆ ಸಿನಿಮಾ ಥಿಯೇಟರಗಳು, ನಾಟಕ ಕಂಪನಿಗಳು ಸಹ ಲಿಂಗಾಯತರ ಮಾಲೀಕತ್ವದಲ್ಲಿದ್ದವು ಆದರೆ ಇಂದು ? ಕೊಪ್ಪಳದ (ನಿಮ್ಮೂರಿನ )ಮಾರುಕಟ್ಟೆಯಲ್ಲಿ ಲಿಂಗಾಯತರ ಅಂಗಡಿಗಳು ಬೆರಳೆಣಿಕೆಯಲ್ಲಿ ಉಳಿದಿವೆ. ಹಾಗಾದರೆ ಇನ್ನುಳಿದ ಲಿಂಗಾಯತರ ಅಂಗಡಿಗಳು ಎಲ್ಲಿ ಹೋದವು ?

ಮೇಲೆ ತಿಳಿಸಿದ ವ್ಯಾಪಾರಗಳಲ್ಲಿ ಶೇಕಡಾ ತೊಂಭತ್ತರಷ್ಟು ಲಿಂಗಾಯತರ ಕೈ ಜಾರಿ ಹೋಗಿವೆ ಇದಕ್ಕೆ ಯಾರು ಹೊಣೆ ? ಕಾರಣಗಳೇನು ? ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳುವ ದುಸ್ಥಿತಿ ಇಂದು ಲಿಂಗಾಯತರಿಗೆ ಬಂದಿದೆ.ಬಹುಶಃ ಲಿಂಗಾಯತರ ಕೈಯಿಂದ ಯಾರೂ ವ್ಯಾಪಾರವನ್ನು ಕಸಿದುಕೊಂಡಿರಲಿಕ್ಕಿಲ್ಲ.ಲಿಂಗಾಯತರ ಯಥಾಸ್ಥಿತಿವಾದ, ನಮ್ಮವರ ಅಂಗಡಿಗಳಲ್ಲಿ ನಾವು ವ್ಯವಹಾರ ಮಾಡದೆ ಇರುವುದು, ಹಿರಿಯರಿಗೆ ಮಕ್ಕಳ ಮೇಲೆ ನಂಬಿಕೆಯಿಲ್ಲದಿರುವುದು,ಕಿರಿಯರು ಹಿರಿಯರ ಮಾರ್ಗದರ್ಶನ ಪಡೆಯುವಲ್ಲಿ ತೋರಿಸುವ ನಿರಾಸಕ್ತಿ , ಬದಲಾವಣೆ ಹಾಗೂ ವಾಸ್ತವಕ್ಕೆ ತಮ್ಮನ್ನು ತೆರೆದುಕೊಳ್ಳದೆ ಇರುವದು.ತಮ್ಮ ವೃತ್ತಿಯನ್ನು ಪ್ರೀತಿಸದೇ ಇರುವದು,ಅಧುನಿಕ ವ್ಯಾಪಾರದ ರೀತಿ ನೀತಿಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳದೇ ಇರುವುದು,ಸಮಯಕ್ಕೆ ಮಹತ್ವ ಕೊಡದೇ ಇರುವುದು,ತಾವು ಮಾಡುತ್ತಿರುವ ವೃತ್ತಿಯ ಶ್ರೇಷ್ಠತೆಯ ಬಗ್ಗೆ ಅರಿತುಕೊಳ್ಳದೇ ಇರುವುದು,ತಮ್ಮ ವೃತ್ತಿಯಲ್ಲಿ ನಿಷ್ಠೆ ಮತ್ತು ಶ್ರದ್ಧೆಯ ಕೊರತೆ, ಕಾಯಕವೇ ಕೈಲಾಸ ಎನ್ನುವ ತತ್ತ್ವವನ್ನು ರೂಢಿಸಿಕೊಳ್ಳದೇ ಇರುವದು ಇನ್ನೂ ಮುಂತಾದ ಕಾರಣಗಳಿಂದ ವ್ಯಾಪಾರ ಲಿಂಗಾಯಿತರ ಕೈಯಿಂದ ಜಾರಿ ಹೋಗಿರಬಹುದು

ಸಿಂಧಿ, ಜೈನ, ಪುರೋಹಿತ್ ಮುಂತಾದ ಧರ್ಮಿಯರಲ್ಲಿ ವಂಶದಿಂದ ವಂಶಕ್ಕೆ ಶ್ರೀಮಂತಿಕೆ ಹೆಚ್ಚುತ್ತಾ ಹೋದರೆ ಲಿಂಗಾಯತರಲ್ಲೇಕೆ ವಂಶದಿಂದ ವಂಶಕ್ಕೆ ಶ್ರೀಮಂತಿಕೆ ಕಡಿಮೆಯಾಗುತ್ತಿದೆ ? ಅನ್ಯ ರಾಜ್ಯಗಳಿಂದ ನಮ್ಮೂರಿಗೆ ಬಂದು ವ್ಯಾಪಾರದಲ್ಲಿ ಯಶಸ್ವಿಯಾಗಲು ಅವರಿಗೆ ಸಾಧ್ಯವಾದರೆ ನಮಗೇಕೆ ಸಾಧ್ಯವಾಗುತ್ತಿಲ್ಲ ? ಲಿಂಗಾಯತರ ಕೈಯಿಂದ ವ್ಯಾಪಾರ ಜಾರಿಹೋಗಲು ಅನ್ಯ ರಾಜ್ಯದ ವ್ಯಾಪಾರಿಗಳು ಕಾರಣ ಅಲ್ಲವೇ ಅಲ್ಲ ! ನಮ್ಮಲ್ಲಿರುವ ಕಾಯಕ ನಿಷ್ಠೆಯ ಕೊರತೆ, ಬದಲಾವಣೆಗಳಿಗೆ ತಕ್ಕಂತೆ ಬದಲಾಗದೇ ಇರುವುದು,ತಮ್ಮ ವೃತ್ತಿಯನ್ನು ಪ್ರೀತಿಸದೇ ಇರುವವದು, ವ್ಯಾಪಾರದ ಜೊತೆ ಜೊತೆಗೆ ರಾಜಕಾರಣ, ಜೂಜು,ಮೋಜು ಗಳನ್ನು ಅಳವಡಿಸಿಕೊಂಡಿರುವದರಿಂದಲೇ ಇಂದು ಲಿಂಗಾಯತರ ಕೈಯಿಂದ ವ್ಯಾಪಾರ ಜಾರಿ ಹೋಗಿರಬಹುದೇನಿಸುತ್ತದೆ.ಆಧುನಿಕ ವ್ಯಾಪಾರೋದ್ಯಮಗಳಿಗೆ ತಕ್ಕಂತೆ ಬದಲಾಗದಿದ್ದರೆ ಮಾರುಕಟ್ಟೆಯಲ್ಲಿ ಲಿಂಗಾಯತ ವ್ಯಾಪಾರಿಗಳಿಗೆ ಉಳಿಗಾಲವಿಲ್ಲ.

ಊರೂರುಗಳಲ್ಲಿರುವ ಲಿಂಗಾಯತ ಯುವಕರೇ ಏಳಿ,ಎದ್ದೇಳಿ, ಎಚ್ಚರವಾಗಿ,ಹೊಸ ವಿಸ್ವಾಸದಿಂದ ಉದ್ಯಮ, ವ್ಯವಹಾರ, ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಿ ಹತ್ತಾರು ಜನರ ಜೀವನಕ್ಕೆ ಆಧಾರವಾಗಿ.ನಮ್ಮನ್ನು ಯಾರೂ ಕೇಳುವವರಿಲ್ಲ, ನಮಗೆ ಯಾರು ಸಹಾಯ ಮಾಡುವವರಿಲ್ಲ, ನಮಗ್ಯಾರು ಪ್ರೋತ್ಸಾಹ ಮಾಡುವವರಿಲ್ಲ, ಬೆನ್ನುತಟ್ಟುವವರಿಲ್ಲ ಎನ್ನುವ ನಕಾರಾತ್ಮಕ (Negative)ಚಿಂತನೆಗಳನ್ನು ಕೈಬಿಟ್ಟು ಸಕಾರಾತ್ಮಕವಾದ (Positive) ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನುಗ್ಗಿ.ನಾವು ಬೆಳೆದು ಯಶಸ್ಸಿನ ಹಾದಿ ಹಿಡಿದ ಮೇಲೆಯೇ ಎಲ್ಲರೂ ತಮ್ಮವರು, ನಮ್ಮವರು ಎಂದು ನಮ್ಮನ್ನು ಗುರುತಿಸುತ್ತಾರೆ. ಅಲ್ಲಿಯವರೆಗೆ ನಮಗೆ ನಾವೇ ಗುರುವಾಗಬೇಕು, ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕು ಇದು ಸತ್ಯ ಮತ್ತು ವಾಸ್ತವ.ಇದನ್ನು ಅರಿತುಕೊಂಡು ನಡೆದಾಗ ಮಾತ್ರ ನಾವು ಅನ್ಯ ರಾಜ್ಯದ ವ್ಯಾಪಾರಿಗಳ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬಹುದೇನಿಸುತ್ತದೆ.

ಊರೂರುಗಳಲ್ಲಿರುವ ಎಲ್ಲ ಲಿಂಗಾಯತ ವ್ಯಾಪಾರಿಗಳು ತಮ್ಮ ತಮ್ಮ ವೃತ್ತಿ ಮಾತ್ಸರ್ಯವನ್ನು ಮರೆತು ತಮ್ಮೂರಿನಲ್ಲಿ ಒಂದು ಕಡೆ ಸೇರಿ ಇದಕ್ಕೆ ಪರಿಹಾರವೇನು ಎಂದು ಚಿಂತನೆ ಮಾಡಲು ಸಾಧ್ಯವೇ ? ಸಭೆಯ ಉದ್ದೇಶ ಅನ್ಯರಾಜ್ಯಗಳ (CRP ಗಳನ್ನು ) ವ್ಯಾಪಾರಿಗಳನ್ನು ಹೇಗೆ ತುಳಿಯಬೇಕು ? ಹೇಗೆ ಓಡಿಸಬೇಕೆಂಬುದು ಆಗಿರಬಾರದು.ಬದಲಾಗಿ ನಮ್ಮ ವ್ಯಾಪಾರವನ್ನು ಪರಸ್ಪರ ಸಹಕಾರದಿಂದ ಅಭಿವೃದ್ಧಿಪಡಿಸಿಕೊಂಡು ಗಟ್ಟಿಯಾಗಿ ತಳವೂರಿ ನಮ್ಮ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬಹುದು,ಆಧುನಿಕ ವ್ಯಾಪಾರದ ತಂತ್ರಗಾರಿಕೆಗಳನ್ನು ಹೇಗೆ ಮೈಗೂಡಿಸಿಕೊಳ್ಳಬೇಕು,ವೃತ್ತಿ ನೈಪುಣ್ಯವನ್ನು ಹೇಗೆ ಸಾಧಿಸಬೇಕು,ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸಭೆಯಲ್ಲಿ ಚರ್ಚೆ ಆಗಲಿ.ಸಾಧ್ಯವಾದರೆ ವರ್ಷದಲ್ಲಿ ಎರಡು ಸಲ ವ್ಯಾಪಾರದಲ್ಲಿ ಶ್ರೇಷ್ಠತೆ ಹಾಗೂ ನೈಪುಣ್ಯತೆಯನ್ನು ಸಾಧಿಸಿರುವ ಲಿಂಗಾಯತ ಯುವ ವಾಣಿಜ್ಯೋದ್ಯಮಿಗಳನ್ನು ಆಮಂತ್ರಿಸಿ ನಿಮ್ಮ ಊರಿನಲ್ಲಿ (Workshop) ಕಾರ್ಯಾಗಾರವನ್ನು ಏರ್ಪಡಿಸಬಹುದಲ್ಲವೇ ? ನಾವು ಯಾರನ್ನೊ ಓಡಿಸಬೇಕು,ಯಾರನ್ನೊ ತುಳಿಯಬೇಕು ಎಂದು ಒಗ್ಗಟ್ಟಾಗಬೇಕಾಗಿಲ್ಲ.ಬದಲಾಗಿ ನಮ್ಮಲ್ಲಿರುವ ಜಡತ್ವವನ್ನು ಓಡಿಸಬೇಕಾಗಿದೆ.ಏನು ಮಾಡಿದರೆ ಏನು ಐತಿ ಎನ್ನುವ ಭಾವನೆಗಳನ್ನು ಹೊಡೆದೋಡಿಸಬೇಕಾಗಿದೆ.ನಮ್ಮ ಅಸ್ತಿತ್ವ, ನಮ್ಮ ವ್ಯಾಪಾರವನ್ನು ಉಳಿಸಿಕೊಳ್ಳಲಿಕ್ಕೆ ನಾವು ಒಂದಾಗಿ ಸಾಗಬೇಕಾದ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ.

ಇಂಥಹ ನಿರಾಶಾದಾಯಕ ದಿನಗಳಲ್ಲೂ ಅಲ್ಲೊಬ್ಬ ಇಲ್ಲೊಬ್ಬ ನಮ್ಮ ಯುವಕರು ವ್ಯಾಪಾರ ಕ್ಷೇತ್ರಕ್ಕೆ ಬರುತ್ತಿರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ಭರವಸೆಯ ಬೆಳಕು ಮಿಂಚುತ್ತದೆ.ಒಂದೊಂದಾಗಿ ಲಿಂಗಾಯತರ ಅಂಗಡಿಗಳು ಮುಚ್ಚುತ್ತಾ ಇತಿಹಾಸವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಕೊಪ್ಪಳದ ಲಿಂಗಾಯತ ಹುಡುಗನೊಬ್ಬ ತಿಂಗಳಿಗೆ *ಎರಡು ಲಕ್ಷ*(2 Lack ) ವೇತನ ಪಡೆಯುವ ಉದ್ಯೋಗಕ್ಕೆ ರಾಜೀನಾಮೆ ಒಗೆದು *ಮೇಘಾ ಜ್ಯುವೆಲರ್ಸ್ ಶೋ ರೂಮ್* ಎನ್ನುವ ಚಿನ್ನದ ಅಂಗಡಿಯನ್ನು ಇಂದು15-10-2021 ರಂದು ಪ್ರಾರಂಭಿಸುತ್ತಿದ್ದಾನೆ.ಬಾಗಲಕೋಟೆ, ಬೆಳಗಾವಿ,ವಿಜಯಪುರ,ಬೀದರ, ಕಲಬುರ್ಗಿ,ಯಾದಗಿರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಾತ್ರ ಲಿಂಗಾಯತರ ಮಾಲೀಕತ್ವದಲ್ಲಿ ಚಿನ್ನದ ಅಂಗಡಿಗಳು ಶತ ಶತಮಾನಗಳಿಂದಲೂ ಇವೆ.ಆದರೆ ಕೊಪ್ಪಳ ಜಿಲ್ಲೆಯಲ್ಲಿಯೇ ಇದುವರೆಗೂ ಲಿಂಗಾಯತರ ಮಾಲೀಕತ್ವದಲ್ಲಿ ಚಿನ್ನದಂಗಡಿಗಳನ್ನು ಯಾರೂ ತೆರೆದಿರಲಿಲ್ಲ.ಆದರೆ ಈ ಸಾಹಸವನ್ನು ಮಾಡುತ್ತಿರುವ ಯುವಕ ಕೊಪ್ಪಳದ *ಸಿದ್ಧಲಿಂಗೇಶ ಪಂಪಣ್ಣ ವಾರದ*.ಈತ ಬಿ.ಕಾಂ, ಎಂ.ಬಿ.ಎ ಪದವೀಧರನಾಗಿ ಸುಮಾರು ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿರುವ ಎಂ.ಎನ್.ಸಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದ.ಭಾರತದ ಪ್ರತಿಯೊಬ್ಬ ವಾಣಿಜ್ಯ ಪದವೀಧರ *E &Y ( Earnest and Young ) ಮಲ್ಟಿನ್ಯಾಷನಲ್* ಕಂಪನಿಯಲ್ಲಿ ಉದ್ಯೋಗ ಪಡೆದುಕೊಳ್ಳುವ ಕನಸು ಕಾಣುತ್ತಿರುತ್ತಾರೆ.ಈ ಕಂಪನಿ ದೇಶ ವಿದೇಶಗಳ ಉದ್ಯಮಿಗಳ, ವ್ಯಕ್ತಿಗಳ, ಸಂಸ್ಥೆಗಳ ವ್ಯಾಪಾರ, ವ್ಯವಹಾರ-ವಾಣಿಜ್ಯಗಳ ಆಡಿಟಿಂಗ್ ಕಾರ್ಯವನ್ನು ನಿರ್ವಹಿಸುತ್ತದೆ.ಈ *ಬಹುರಾಷ್ಟ್ರೀಯ ಕಂಪನಿ World ranking ನಲ್ಲಿ top 10 ನಲ್ಲಿ* ಇದೇ ಎಂದು ಕಂಪನಿಯ ಉದ್ಯೋಗಿಗಳು ಮಾತನಾಡುತ್ತಿರುವುದನ್ನು ಕೇಳಿದ್ದೇನೆ.ಇದೆ ಬಹುರಾಷ್ಟ್ರೀಯ ಕಂಪನಿಯಲ್ಲಿ ತಿಂಗಳಿಗೆ ಎರಡು ಲಕ್ಷ ಸಂಬಳ ಎಣಿಸುತ್ತ ತಣ್ಣಗೆ ಉದ್ಯೋಗ ಮಾಡುತ್ತಿದ್ದ *ಸಿದ್ಧಲಿಂಗೇಶ ಪಂಪಣ್ಣ ವಾರದ* ಕಳೆದೆರಡು-ಮೂರು ತಿಂಗಳ ಹಿಂದೆ ರಾಜೀನಾಮೆಯನ್ನು ಕೊಟ್ಟು *ಕೊಪ್ಪಳ ನಗರದ ಜವಾಹರ ರಸ್ತೆಯ ಆಜಾದ್ ಸರ್ಕಲ್ ನ ಬಳಿ ತನ್ನದೇ ಆದ ಮೇಘಾ ಜ್ಯುವೆಲ್ಲರ್ಸ್ ಶೋ ರೂಮನ್ನು ಪ್ರಾರಂಭಿಸುವದರ ಮೂಲಕ ವ್ಯಾಪಾರ ಕ್ಷೇತ್ರದಲ್ಲಿ ಧುಮುಕಿದ್ದಾನೆ.*

ಹೈಸ್ಕೂಲು ಓದುತ್ತಿದ್ದಾಗಿನಿಂದಲೂ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಅನುಭವವನ್ನು ಪಡೆದುಕೊಂಡಿದ್ದಾನೆ.ಆರ್ಥಿಕವಾಗಿ ಮನೆತನದಿಂದ ಅನುಕೂಲಸ್ಥ ಹಾಗೂ ಇಷ್ಟು ವರ್ಷ ದುಡಿದು ಗಳಿಸಿ ಉಳಿತಾಯ ಮಾಡಿದ ಹಣವನ್ನು ಸೇರಿಸಿ ದೊಡ್ಡ ಬಂಡವಾಳ ಹಾಕಿ ಬಂಗಾರದ ಅಂಗಡಿಯನ್ನು ಪ್ರಾರಂಭಿಸುವ ರಿಸ್ಕನ್ನು ತೆಗೆದುಕೊಂಡಿದ್ದಾನೆ.ಲಾಭ ನಷ್ಟದ ಚಿಂತೆ ಇಲ್ಲದೆ ತಿಂಗಳಿಗೆ ಎರಡು ಲಕ್ಷ ಸಂಬಳ ಎಣಿಸುವ ನೌಕರಿಯನ್ನು ಬಿಟ್ಟು ಈ ರಿಸ್ಕ್ ನ್ನು ಎಕೆ ತೆಗೆದುಕೊಂಡಿದ್ದೀರಿ ಎಂದು ಕೇಳಿದರೆ.ನೌಕರಿಯಲ್ಲಿ ಏಕತಾನತೆ ಇರುತ್ತದೆ. ಹೊಸ ಹೊಸ ಸಾಹಸವನ್ನು ಕೈಗೊಳ್ಳುವದಕ್ಕೆ ಅಲ್ಲಿ ಅವಕಾಶವಿರುವದಿಲ್ಲ.ಎಲ್ಲದಕ್ಕೂ ಮೇಲಿನವರ ಆದೇಶಕ್ಕೆ ಕಾಯಬೇಕಾಗುತ್ತದೆ. ನಮ್ಮ ಸೃಜನಶೀಲತೆಯನ್ನು ಸಾಕಾರಗೊಳಿಸಲು ಅಲ್ಲಿ ಅವಕಾಶ ಕಡಿಮೆ.ಸ್ವಯಂ ಉದ್ಯೋಗದಲ್ಲಿ ಹಾಗಲ್ಲ, ರಿಸ್ಕನ್ನು ಎದುರಿಸುತ್ತಲೇ ನಮ್ಮ ಸೃಜನಶೀಲತೆಯನ್ನು ಸಾಕಾರಗೊಳಿಸಬಹುದು. ಹತ್ತಾರು ಜನರಿಗೂ ಉದೋಗವನ್ನು ಕೊಡಬಹುದು.

ಶತ ಶತಮಾನಗಳಿಂದಲೂ ನಮ್ಮ ಮನೆತನದ ಹಿರಿಯರು *”ಉದ್ಯಮವನ್ನು ಸ್ಥಾಪಿಸು, ಉದ್ಯೋಗ ನೀಡು” ಎನ್ನುವ ಶ್ರೇಷ್ಠ ಆದರ್ಶವನ್ನು ನಮಗೆ ಬಿಟ್ಟುಹೋಗಿದ್ದಾರೆ.* ಈ ಮನೆತನದ ವಾರಸುದಾರರಾದ ನಾವು ಹಿರಿಯರ ಪರಂಪರೆಯನ್ನು ಮುಂದುವರೆಸದಿದ್ದರೆ ಹೇಗೆ ? ನಮ್ಮ ತಂದೆ *ಶ್ರೀ ಪಂಪಣ್ಣ ಕೊಟ್ರಪ್ಪ ವಾರದರವರು ಬಿ.ಕಾಂ, ಎಲ್.ಎಲ್.ಬಿ ಪದವೀಧರರಾದರು* ಸಹ ವಕೀಲಿ ವೃತ್ತಿಯನ್ನು ಪ್ರಾರಂಭಿಸದೆ ಸುಮಾರು ಮೂರು ದಶಕಗಳ ಹಿಂದೆ ಮೇಘಾ ಆಪ್ಟಿಕಲ್ಸ್ ಅನ್ನು ಪ್ರಾರಂಭಿಸಿ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿದ್ದಾರೆ.ಮೊನ್ನೆ ಮೊನ್ನೆ ಕಳೆದ ತಿಂಗಳು 60 + ವಯಸ್ಸಿನಲ್ಲಿಯೂ ಸಹ ಮೇಘಾ ಆಪ್ಟಿಕಲ್ಸ್ ನ ಮತ್ತೊಂದು ಬ್ರ್ಯಾಂಚನ್ನು ಪ್ರಾರಂಭಿಸಿದ್ದಾರೆ. ಹಾಗೆಯೇ ನನ್ನ ತಮ್ಮ *ಮೃತ್ಯುಂಜಯ ಪಂಪಣ್ಣ ವಾರದ ಉತ್ತರ ಪ್ರದೇಶದ ಕಾನ್ಪುರ್ ನ I I T ಯಲ್ಲಿ ಎಂ.ಟೆಕ್ ಮಾಡಿ* ಹೈದ್ರಾಬಾದಿನ ದೊಡ್ಡ ಕಂಪನಿಯಲ್ಲಿ ಉದ್ಯೋಗ ಮಾಡುತ್ತಾ ಲಕ್ಷ ಲಕ್ಷ ಸಂಬಳ ಎಣಿಸುತ್ತಿದ್ದರು ಸಹ ವ್ಯಾಪಾರ ವ್ಯವಹಾರಗಳ ಕ್ಷೇತ್ರವನ್ನು ಪ್ರವೇಶಿಸಬೇಕೆಂದು ಚಿಂತನೆ ನಡೆಸಿದ್ದಾನೆ.ನಮ್ಮ ಮನೆತನದ ವ್ಯಾಪಾರಿ ಸಂಸ್ಕಾರ ನನ್ನ ಮೈಯಲ್ಲಿ ಸಹಜವಾಗಿ ಹರಿದು ಬಂದಿರುವುದರಿಂದ ಹಾಗೂ ಅನ್ಯ ರಾಜ್ಯದವರು ಇಲ್ಲಿ ಬಂದು ವ್ಯಾಪಾರವನ್ನು ಪ್ರಾರಂಭಿಸಿ ಯಶಸ್ವಿಯಾಗಲು ಸಾಧ್ಯವಾದರೆ ನನಗೇಕೆ ಸಾಧ್ಯವಿಲ್ಲ ? ಎನ್ನುವ ಆತ್ಮವಿಶ್ವಾಸದಿಂದ ವ್ಯಾಪಾರ (Business) ಕ್ಷೇತ್ರಕ್ಕೆ ಬಂದಿದ್ದೇನೆ ಎನ್ನುತ್ತಾನೆ ಸಿದ್ಧಲಿಂಗೇಶ. *Risk is the only guarantee of life* ಎನ್ನುವ ತತ್ವಕ್ಕೆ ತನ್ನನ್ನು ಅರ್ಪಿಸಿಕೊಂಡಿರುವ ಸಿದ್ದಲಿಂಗೇಶ ಪಂಪಣ್ಣ ವಾರದರವರು ನಕಾರಾತ್ಮಕ (Negative) ಚಿಂತನೆಯಲ್ಲಿರುವ ನಮ್ಮ ಲಿಂಗಾಯತ ಯುವಕರಿಗೆ ವಾಣಿಜ್ಯೋದ್ಯಮ ಕ್ಷೇತ್ರಗಳನ್ನು ಪ್ರವೇಶಿಸಲು ಆದರ್ಶವಾಗಲಿ ಎಂದು ಹಾರೈಸುತ್ತಾ ಮಹಾತ್ಮ ಬಸವೇಶ್ವರ ಸಿದ್ಧಲಿಂಗೇಶ ವಾರದರವರಿಗೆ ಯಶಸ್ಸನ್ನು ದಯಪಾಲಿಸಲಿ…

ಗವಿಸಿದ್ದಪ್ಪ ವೀ. ಕೊಪ್ಪಳ

Don`t copy text!