ಮಹಾ ನವಮಿ : ಶರಣರ ಹುತಾತ್ಮ ದಿನ!

ಮಹಾ ನವಮಿ : ಶರಣರ ಹುತಾತ್ಮ ದಿನ!

ಶರಣ ಬಸವಣ್ಣ ಜಾತಿವಿನಾಶ ಚಳವಳಿ ರೂಪಿಸಿದ ಮಹಾ ಬಂಡಾಯಗಾರ.
ಸಮಗಾರ ಹರಳಯ್ಯ ಮತ್ತು ಬಸವಣ್ಣನವರ ಬಾಂಧವ್ಯ ಅತ್ಯಂತ ನಿಕಟವಾಗಿತ್ತು.
ಇವರಿಬ್ಬರ ಬಾಂಧವ್ಯ ಎಷ್ಟೊಂದು ನಿಕಟವಾಗಿತ್ತೆಂದರೆ ಬಸವಣ್ಣನು ಸಮಗಾರ ಹರಳಯ್ಯನ ಮಗನಾದ ಶೀಲವಂತನಿಗೂ ಮತ್ತು ಬ್ರಾಹ್ಮಣ ಮಂತ್ರಿ ಮಧುವರಸನ ಮಗಳಾದ ಲಾವಣ್ಯವತಿಗೂ ಅಂತರ್ಜಾತಿ ವಿವಾಹ ನಡೆಸುವ, ಆ ಮೂಲಕ ಜಾತಿ ವಿನಾಶ ಮಾಡುವ ಕ್ರಾಂತಿಕಾರಿ ಹಂತ ತಲುಪಿತ್ತು.

ಮಾದಿಗ ಮತ್ತು ಬ್ರಾಹ್ಮಣರ ನಡುವೆ ಅಂತರ್ಜಾತಿ ವಿವಾಹ ನಡೆದುಹೋಯಿತು. ಬಸವಣ್ಣನ ಕ್ರಾಂತಿಕಾರಿ ನಡಿಗೆಯನ್ನು ನೋಡಿದ ಸಂಪ್ರದಾಯವಾದಿ ಪುರೋಹಿತಶಾಹಿಗಳು ಸಹಿಸದಾದರು. ಜಾತಿ ಜಾತಿಗಳ ನಡುವೆ ಮೇಲು-ಕೀಳಿನ ಜಾತಿ ವಿಧ್ವೇಷದ ಕಿಚ್ಚು ಹಚ್ಚಿದರು. ‘ಸಮಾಜಬಾಹಿರವೂ, ನೀತಿಬಾಹಿರವೂ, ಧರ್ಮಬಾಹಿರವೂ ಆದ ಕೆಲಸಗಳಲ್ಲಿ ತೊಡಗಿರುವ ಶರಣರನ್ನು ಕೊಚ್ಚಿಕೊಲ್ಲದ ಹೊರತು ಸನಾತನ ಧಾರ್ಮಿಕ ವ್ಯವಸ್ಥೆಗೆ ಉಳಿಗಾಲವಿಲ್ಲ’ ಎಂದು ರೊಚ್ಚಿಗೆದ್ದ ಪಟ್ಟಭದ್ರ ಜನ ಸಾವಿರಾರು ಶರಣರ ತಲೆಗಳನ್ನು ಕಡಿದು ಚೆಂಡಾಡಿದರು. ಸಾವಿರಾರು ಶರಣರನ್ನು ಆನೆಗಳ ಕಾಲುಗಳಿಗೆ ಸರಪಳಿ ಬಿಗಿದು ಎಳೆಯಿಸಿ ಕೊಲ್ಲುವ ‘ಎಳೆಹೂಟೆ’ ಶಿಕ್ಷೆ ನೀಡಿ ಕೊಂದುಹಾಕಿದರು. ಪ್ರಭುತ್ವ ವಿರೋಧಿಯೆಂದು ಭಾವಿಸಲಾದ ಸಾವಿರಾರು ಅಮೂಲ್ಯ ವಚನ ಕಟ್ಟುಗಳನ್ನು ಬಿಡದೆ ಹುಡುಕಿಸಿ ಬೆಂಕಿಗೆಸೆದು ಸುಡಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು.

ಈ ಘಟನೆ ನಡೆದದ್ದು ಮಹಾನವಮಿಯ ದಿವಸ. ಇಂತಹ ಕರಾಳ ನವಮಿಯ ದಿನ ಶರಣರು, ತಮಗೊದಗಿದ ಮರಣಕ್ಕೆ ಅಂಜದೆ ‘ಮರಣವೇ ಮಹಾನವಮಿ’ ಎಂದು ದೇಹತ್ಯಾಗ ಮಾಡಿದರು. ಲಭ್ಯವಿರುವ ಉಲ್ಲೇಖಿತ ದಾಖಲೆಗಳ ಪ್ರಕಾರ ಲಕ್ಷದ ಮೇಲೆ ತೊಂಭತ್ತಾರು ಸಾವಿರ ವಚನಕಾರರು ಹನ್ನೆರಡನೇ ಶತಮಾನದಲ್ಲಿದ್ದರು. ಸಾವಿರ ಸಾವಿರ ಸಂಖ್ಯೆಯ ಶರಣರ ದೇಹಗಳು ಛಿದ್ರಛಿದ್ರವಾಗುತ್ತಿರುವ, ವಚನ ಕಟ್ಟುಗಳು ಉರಿದು ಬೂದಿಯಾಗಿಹೋಗುವ ಇಂತಹ ಸಾಮಾಜಿಕ ಸಂಕ್ಷೋಭಿತ ಪರಿಸ್ಥಿತಿಗೆ ಸಿಲುಕಿದ ಅನೇಕ ವಚನಕಾರರು, ಕೆಲವಾದರೂ ಅಮೂಲ್ಯ ವಚನಕಟ್ಟುಗಳನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಜೀವರಕ್ಷಿಸಿಕೊಳ್ಳಲು, ಆ ಮೂಲಕ ವಚನ ಚಳವಳಿಯ ಆಶಯಗಳನ್ನು ಜೀವಂತವಾಗಿರಿಸಲು ಕಲ್ಯಾಣ ತೊರೆದು ದಿಕ್ಕಾಪಾಲಾಗಿ ಓಡಿಹೋದರು. ಇದೆಲ್ಲವೂ ನಡೆದದ್ದು ಮಹಾನವಮಿಯ ದಿವಸ. ಇಂತಹ ಮಹಾನವಮಿ ದಿವಸವನ್ನು ನಾವು ನಾಡಹಬ್ಬವನ್ನಾಗಿ ಆಚರಿಸಲು ಸಾಧ್ಯವೇ?!

ಜಾತಿವಿನಾಶ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಹುದೊಡ್ಡ ಆಶಯ ಮತ್ತು ಗುರಿ. ಇದು ಮೂಲದಲ್ಲಿ ಬುದ್ಧಗುರು ಮತ್ತು ಬಸವಣ್ಣನವರ ಆಶಯ ಮತ್ತು ಗುರಿಯೂ ಆಗಿತ್ತು ಎಂಬುದನ್ನು ನಾವು ಮರೆಯದಿರೋಣ. ಸಾವಿರಾರು ಜನರ ಹತ್ಯೆಗೆ ಕಾರಣವಾದ ‘ಕಲ್ಯಾಣ ಕ್ರಾಂತಿ’ ಎಂಬುದು ಎರಡು ರಾಜ್ಯಗಳ ನಡುವೆ ರಾಜ್ಯ ವಿಸ್ತರಣೆ ಮತ್ತು ಅಧಿಕಾರಕ್ಕಾಗಿ ನಡೆದ ಯುದ್ಧವಲ್ಲ. ರಾಜ್ಯಕ್ಕಾಗಿ ಅಥವಾ ಆಸ್ತಿಪಾಸ್ತಿಗಳ ಪಾಲುಪಾರಿಕತ್ತಿಗಾಗಿ ಅಣ್ಣತಮ್ಮಂದಿರ ನಡುವೆ ನಡೆದ ಸೋದರ ವ್ಯಾಜ್ಯವೂ ಅಥವಾ ದಾಯಾದಿ ಕಲಹವೂ ಅಲ್ಲ. ಇದು ಮಹಾಭಾರತ ಕಥೆಯಲ್ಲ. ಕೋಮುದೊಂಬಿಯೂ (Communal riot) ಅಲ್ಲ. ಮತೀಯ ಧ್ವೇಷದ ಸ್ಫೋಟವೂ ಅಲ್ಲ. ಒಬ್ಬನ ಹೆಂಡತಿಯನ್ನು ಮತ್ತೊಬ್ಬನು ಹೊತ್ತೊಯ್ದುದಕ್ಕೆ ನಡೆದ ಯುದ್ಧವೂ ಇದಲ್ಲ. ಇದು ರಾಮಾಯಣ ಕಥೆಯಲ್ಲ. ಬದಲಾಗಿ ‘ಕಲ್ಯಾಣ ಕ್ರಾಂತಿ’ ಎಂಬುದು ವರ್ಣಸಂಕರ ಆಗದಂತೆ, ಅಂತರ್ಜಾತಿ ಮದುವೆಗಳು ನಡೆಯದಂತೆ ತಡೆಯಲು, ಜಾತಿ ಪದ್ಧತಿಯನ್ನು ಪೋಷಿಸಲು ವೈದಿಕಶಾಹಿ ಬ್ರಾಹ್ಮಣರು ನಡೆಸಿದ ಸಂಚಿನ ಪ್ರತಿಫಲ. ಬ್ರಾಹ್ಮಣರ ಆಜ್ಞಾನುಪಾಲಕನಾದ ಅಲ್ಲಿನ ಒಬ್ಬ ರಾಜ ತನ್ನದೇ ಪ್ರಜೆಗಳ ವಿರುದ್ಧ ತನ್ನ ಸೇನೆಯನ್ನೇ ಬಿಟ್ಟು ತನ್ನ ಪ್ರಜೆಗಳನ್ನೇ ಕೊಲ್ಲಿಸಿದ ವಾಸ್ತವ ಗತ ಚರಿತ್ರೆ.

ಸರ್ಕಾರದ ಯಂತ್ರಾಂಗವೇ ಪ್ರಜೆಗಳನ್ನು ಕೊಂದು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದ್ದರ ವಿರುದ್ಧ ಕೃದ್ಧರಾದ ಜನಸಾಮಾನ್ಯರು ರಾಜನ ರುಂಡ ಕಡಿದರು. ಜಾತ್ಯತೀತ ಕಲ್ಯಾಣ ರಾಜ್ಯವನ್ನು ರೂಪಿಸಬೇಕೆಂದು ಹೋರಾಟ ಮಾಡುತ್ತಿದ್ದ ಬಸವಣ್ಣನ ಕಣ್ಣೆದುರಿನಲ್ಲಿಯೇ ಈ ಕರಾಳ ಘಟನೆಗಳು ನಡೆದುಹೋದವು. ಇಂತಹ ಘಟನಾವಳಿಗಳಿಂದ ಬ್ರಮನಿರಸನಗೊಂಡ ಬಸವಣ್ಣ ಆತ್ಮಹತ್ಯೆ ಮಾಡಿಕೊಂಡ ಅಥವಾ ಬಸವಣ್ಣನನ್ನು ಆ ರಾಜನ ಸೇನೆ ಕೂಡಲ ಸಂಗಮದವರೆಗೂ ಬೆನ್ನಟ್ಟಿಹೋಗಿ ಕೊಂದು ಹಾಕಿತು. ಇದನ್ನು ಬಸವಣ್ಣ ಕೂಡಲಸಂಗಮದೇವನಲ್ಲಿ ಐಕ್ಯನಾದನೆಂದು ಚರಿತ್ರೆ ತಿಳಿಸುತ್ತದೆ.

ಬಸವಣ್ಣ ಮತ್ತಿತರ ಶರಣರ ಹತ್ಯೆಯ ನಂತರ ಅಕ್ಕನಾಗಮ್ಮ ಮತ್ತು ಚೆನ್ನಬಸವಣ್ಣ ಈಗಿನ ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದುರ್ಗಮವಾದ ಜೋಯಿಡಾ ತಾಲ್ಲೂಕಿನ ಉಳುವಿಗೆ ಬಂದು ಜೀವ ಉಳಿಸಿಕೊಳ್ಳುತ್ತಾರೆ. ಅಲ್ಲಿ ಚೆನ್ನಬಸವಣ್ಣನ ದೇಹ ಜರ್ಜರಿತವಾಗಿ ಅವನು ಚಿಕ್ಕ ವಯಸ್ಸಿನಲ್ಲಿಯೇ ದೇಹ ವಿಸರ್ಜಿಸುತ್ತಾನೆ. ಅಕ್ಕನಾಗಮ್ಮ ಉಳುವಿ ತೊರೆದು ಕಾಡು ಕಣಿವೆ ಇಳಿದು ಗಾವುದ ಗಾವುದ ನಡೆದು ತರೀಕೆರೆಗೆ ಬಂದು, ತರೀಕೆರೆ ಹತ್ತಿರ ದೇಹತ್ಯಾಗ ಮಾಡುತ್ತಾಳೆ. ಕಲ್ಯಾಣದಿಂದ ಉಳುವಿಗೆ ಧಾವಿಸಿ ಬರುವಾಗ ಶರಣರ ಹಿಂದೆಯೇ ಬಿಜ್ಜಳನ ದಂಡು ಬೆನ್ನಾಡಿ ಹೋದದ್ದರಿಂದ ಈತನಕದ ದಾರಿಯನ್ನು ‘ದಂಡಿನ ದಾರಿ’ ಎಂದು ಕರೆಯುತ್ತಾರೆಂದು ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು ಐತಿಹಾಸಿಕ ಸಾಕ್ಷ್ಯ ಒದಗಿಸಿದ್ದಾರೆ. ಒಂದು ಗುಂಪು ಸೊನ್ನಲಿಗೆ ಸಿದ್ಧರಾಮನೊಂದಿಗೆ ಮಹಾರಾಷ್ಟ್ರದ ಸೊಲ್ಲಾಪೂರದ ಕಡೆಗೂ, ಇನ್ನೊಂದು ಗುಂಪು ಶ್ರೀಶೈಲಕ್ಕೂ, ಅರುಹಂತಪುರ- ಗೋಸಲ – ಗುಮ್ಮಳಾಪುರಕ್ಕೂ, ಎಡೆಯೂರು-ಸಿದ್ಧಗಂಗೆ-ಸಿದ್ಧರಬೆಟ್ಟಗಳಿಗೂ ಶರಣರು ಹೋದರೆಂದು ನಂಬಲಾಗುತ್ತದೆ. ಹೀಗೆ ಕಲ್ಯಾಣದ ಶರಣರು ನಡೆದುಹೋದ ದಾರಿ ಇರುವ ಕಡೆಗಳಲ್ಲೆಲ್ಲಾ ಲಿಂಗಾಯತರ ಪ್ರಾಬಲ್ಯವಿರುವುದನ್ನು ನೋಡಬಹುದು. ಕಲ್ಯಾಣ ಕ್ರಾಂತಿಯ ಮೇರು ಶರಣರಾದ ಮಾದಾರ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳು ದಕ್ಷಿಣದ ತುದಿಯ ಚಾಮರಾಜನಗರದ ಅರುಹಂತಪುರಕ್ಕೆ ಬಂದರೆಂದು ನಂಬಲಾಗುತ್ತದೆ.

ಅಂತರ್ಜಾತಿ ಮದುವೆಗಳು ನಡೆಯದಂತೆ ತಡೆಯಲು ಮತ್ತು ಜಾತಿ ಪದ್ಧತಿಯನ್ನು ಪೋಷಿಸಲು ಯುವಜೋಡಿಯಾದ ಶೀಲವಂತ ಮತ್ತು ಲಾವಣ್ಯವತಿಯರನ್ನು ಹನ್ನೆರಡನೇ ಶತಮಾನದಲ್ಲಿ ಹತ್ಯೆ ಮಾಡಿದಂತೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಇವತ್ತಿನ ದಿನಗಳಲ್ಲಿಯೂ ಯಥಾಸ್ಥಿತಿ ಜಾತಿವಾದಿಗಳು ಅಂತರ್ಜಾತಿ ಮದುವೆಗಳನ್ನು ವಿರೋಧಿಸುವುದು ಈ ಜಾತಿಗ್ರಸ್ತ ಸಮಾಜದಲ್ಲಿ ಮಾಮೂಲು ವಿದ್ಯಮಾನವಾಗಿದೆ. ನಾಗರಿಕ ಸಮಾಜದ ನಾವು ಮನುಧರ್ಮಶಾಸ್ತ್ರ ಪ್ರಣೀತ ಜಾತಿಕಟ್ಟುಗಳನ್ನು ಪಾಲಿಸುವ ಕಡೆಗೆ ಚರಿತ್ರೆಯ ಹಿಂದಕ್ಕೆ ಚಲಿಸಬಾರದು. ಹಾಗೆ ಹಿಂದಕ್ಕೆ ಚಲಿಸುವ ಮತಾಂಧ ಮನಸ್ಸುಗಳ ವರ್ತನೆಯಿಂದಾಗಿಯೇ ‘ಮರ್ಯಾದಾ ಹತ್ಯೆ’ ಹೆಸರಿನಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ.

ಶರಣರು ‘ಮರಣವೇ ಮಹಾನವಮಿ’ ಎಂದು ಇದೇ ಮಹಾನವಮಿಯ ದಿವಸ ಆತ್ಮಾರ್ಪಣೆ ಮಾಡಿಕೊಂಡಿದ್ದಾರೆ. ಇಂತಹ ಮಹಾನವಮಿ – ದಸರಾ ಆಚರಣೆ ನಮಗೆ ಬೇಕೆ? ಸನಾತನ ಧರ್ಮವು ವಿಧಿಸಿರುವ ಜಾತಿ ಪದ್ದತಿಯನ್ನು ನಾಶಮಾಡಬೇಕೆಂಬುದು ಬುದ್ಧಗುರು – ಬಸವಣ್ಣ – ಅಂಬೇಡ್ಕರ್ – ಕುವೆಂಪು ಅವರ ಆಶಯ ಮತ್ತು ಗುರಿಗಳಾಗಿದ್ದವು ಎಂಬುದನ್ನು ಮಹಾನವಮಿಯ ಈ ದಿವಸ ನಾವು ಮರೆಯದಿರೋಣ. ಅವರ ಆಶಯಗಳಿಗೆ ಜೀವವಿದೆ. ಮಹಾ ನವಮಿ : ಶರಣರ ಹುತಾತ್ಮ ದಿನ!

-ಡಾ.ವಡ್ಡಗೆರೆ ನಾಗರಾಜಯ್ಯ
8722724174 

Don`t copy text!