ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ರ‍್ಯಾಲಿ

ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ರ‍್ಯಾಲಿ

e-ಸುದ್ದಿ ಮಸ್ಕಿ

ಕಳೆದ ಮೂರು ದಶಕಗಳ ಬೇಡಿಕೆಯಾದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯತವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ, ಮೋಚಿ. ಸಮಗಾರ ಸೇರಿದಂತೆ ದಲಿತ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಬೃಹತ್ ರ‍್ಯಾಲಿ ನಡೆಸಿದರು.

ಪಟ್ಟಣದ ಗಾಂಧಿ ನಗರದಿಂದ ಆರಂಭವಾದ ರ‍್ಯಾಲಿ ಅಶೋಕ ವೃತ್ತ, ಡಾ.ಖಲೀಲ್ ವೃತ್ತ, ದೈವದಕಟ್ಟೆ, ಕನಕವೃತ್ತದ ಮೂಲಕ ಸಾಗಿ ಹಳೆಯ ಬಸ್ ನಿಲ್ದಾಣದ ಬಳಿಯ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳಕ್ಕೆ ಆಗಮಿಸಿತು.

ರ‍್ಯಾಲಿಯುದ್ದಕ್ಕೂ ಸದಾಶಿವ ಆಯೋಗದ ವರದಿಗೆ ಜಾರಿಗೆ ವಿಳಂಭ ಮಾಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸಭೆಯನ್ನುದ್ದೇಶಿಸಿ ಹೋರಾಟ ಸಮಿತಿ ಮುಖಂಡ ಜಿ.ಪಂ.ಮಾಜಿ ಸದಸ್ಯ ಎಚ್.ಬಿ.ಮುರಾರಿ  ಮಾತನಾಡಿ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯವನ್ನು ಕೇಳಲು ಕಳೆದ ೩೦ ವರ್ಷಗಳಿಂದ ಬೀದಿಯಲ್ಲಿ ಹೋರಾಟ ಮಾಡುತ್ತಿದ್ದೇವೆ ಆದರೆ ಅಂದಿನಿಂದ ಈವರೆಗೆ ನಮ್ಮನ್ನಾಳಿರುವ ಸರ್ಕಾರಗಳು  ನಮ್ಮ ಹೋರಾಟ ಕಡೆಗಣಿಸಿವೆ. ಆದ್ದರಿಂದ ನಮ್ಮ ಹೋರಾಟದ ರೋಪರೇಶೆಗಳನ್ನು ಬದಲಿಸಿಕೊಂಡು ವಿಧಾನಸೌಧದ ಮೂರನೇ ಮಹಡಿಗೆ ಹೋರಾಟ ಮಾಡೋಣ ಎಂದು ಕರೆ ನೀಡಿದರು. ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೋರಹಾಕಿದರು. ನ್ಯಾ.ಸದಾಶಿವ ಆಯೋಗದ ವರದಿ ಸಂವಿಧಾನ ಬದ್ಧವಾಗಿದೆ. ವರದಿಯನ್ನು ವಿರೋಧಿಸುವವರು ಸಂವಿಧಾನದ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪ್ರತಿನಿತ್ಯ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯತ್ತಿವೆ. ಆದರೆ ಸರ್ಕಾಗಳು ಮಾತ್ರ ಇದನ್ನು ನೋಡಿಕೊಂಡು ಸುಮ್ಮನೆ  ಕುಳಿತುಕೊಂಡಿವೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು ವರದಿ ಜಾರಿ ಬಗ್ಗೆ ಹೇಳುತ್ತಿವೆ ಹೊರತು ಜಾರಿ ಮಾಡಲು ಮುಂದೆ ಬರುತ್ತಿಲ್ಲ. ಕೂಡಲೇ ವರದಿ ಜಾರಿಗೆ ತರದಿದ್ದರೆ ನಮ್ಮ ಹೋರಾಟ ಬೇರೆ ಮಾರ್ಗ ಹಿಡಿಯುತ್ತಿದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಲಿಂಗಸಗೂರಿನ ಸಹಾಯಕ ಆಯುಕ್ತ ರಾಹುಲ್ ಸಂಕನೂರು ಆಗಮಿಸಿದರು. ಹೋರಾಟ ಸಮಿತಿಯ ಸದಸ್ಯರು ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸಾಹಿತಿ ದಾನಪ್ಪ ನಿಲೋಗಲ್, ದಲಿತ ಮುಖಂಡ ದೊಡ್ಡಪ್ಪ ಮುರಾರಿ, , ಪಾಮಯ್ಯ ಮುರಾರಿ, ದುರಗಪ್ಪ ಗುಡಗಲದಿನ್ನಿ, ದೊಡ್ಡ ಕರಿಯಪ್ಪ, ಹನುಮಂತಪ್ಪ ಮೋಚಿ, ಹನುಮಂತಪ್ಪ ಮುದ್ದಾಪೂರ, ಹನುಮಂತಪ್ಪ ಪರಾಪೂರ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪೂರ, ತಿಕ್ಕಯ್ಯ ಬಿ. ಮಲ್ಲಪ್ಪ ಗೋನಾಳ, ಹನುಮಂತಪ್ಪ ಮೋಚಿ, ಮೌನೇಶ ಮುರಾರಿ, ಅಶೋಕ ಮುರಾರಿ, ದುರ್ಗರಾಜ ವಟಗಲ್, ಬಸವರಾಜ ಉದ್ಬಾಳ್. ಸಂತೋಷ ಹಿರೇದಿನ್ನಿ, ಸೇರಿದಂತೆ ಮಾದಿಗ, ಛಲುವಾದಿ, ಸಮಗಾರ ಸೇರಿದಂತೆ ಮೀಸಲಾತಿ ಒಳಪಡುವ ಸಮುದಾಯಗಳು ಸಾವಿರಾರು ಮಹಿಳೆಯರು ಹಾಗೂ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Don`t copy text!