ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮತ್ತು ಪ್ರಾಣೇಶಿಯ ನಗಿಚ್ಯಾಟಿಕಿ ಮಾತುಗಳು

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮತ್ತು ಪ್ರಾಣೇಶಿಯ ನಗಿಚ್ಯಾಟಿಕಿ ಮಾತುಗಳು

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಘೋಷಣೆಯಾದಾಗ ಪ್ರತಿಬಾರಿಯೂ ಅಲ್ಲಲ್ಲಿ ಚದುರಿದಂತೆ ಅಪಸ್ವರದ ಟೀಕೆ ಟಿಪ್ಪಣಿಗಳು ಕೇಳಿ ಬರುವುದು ವಾಡಿಕೆ. ಎಂದಿನಂತೆ ಈ ಬಾರಿಯೂ ಅಂತಹದ್ದೇ ಅಪಸವ್ಯದ ಸ್ವರಗಳು ಕೇಳಿ ಬಂದಿರುವುದು ಹೊಸತೇನಲ್ಲ. ಅಂದಹಾಗೆ ಪ್ರಶಸ್ತಿ ಪಟ್ಟಿಗೆ ಸಹಜವಾಗಿ ಸಂಘಪರಿವಾರ ಸೂತಕದ ಪರಿಮಳ ಸೋಂಕಿದೆಯೆಂಬ ಮಾತುಗಳು ಕೆಲವರಿಂದ ಕೇಳಿ ಬಂದಿವೆ. ಹಾಗೆಂದು ಪರಿವಾರದವರಿಗೆ ಪ್ರಶಸ್ತಿ ಕೊಡಬಾರದೆಂದೇನು ನಿಯಮ ಇಲ್ಲವಲ್ಲ ಎಂಬ ಪ್ರತ್ಯುತ್ತರದ ಮಾತುಗಳು ಸಹಿತ ವ್ಯಕ್ತಗೊಂಡಿವೆ.

ಆದರೆ ಬೆಳವಾಡಿ ಅಂಥವರು ಸಾರ್ವತ್ರಿಕ ಚುನಾವಣೆ ಸಂದರ್ಭಗಳಲ್ಲಿ ನೇರವಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಂತೆ ‘ಮೋದಿಪರ’ ವಕಾಲತ್ತು ವಹಿಸಿದ್ದು ಮರೆಯುವುದುಂಟೇ.? ಅಷ್ಟುಮಾತ್ರವಲ್ಲದೇ ಯಥೇಚ್ಛ ಖರ್ಚುಮಾಡಿ ಅವರಿಂದಲೇ ಮೈಸೂರು ರಂಗಾಯಣಕ್ಕೆ ”ಪರ್ವ” ಎಂಬ ನಾಟಕ ತಯಾರಿಸಿರುವುದು‌. ಅಂಥದಕ್ಕೆಲ್ಲ ಋಣಸಂದಾಯದಂತೆ ಅಂಥವರಿಗೆ ಪ್ರಶಸ್ತಿ ಸಂದಾಯಗೊಂಡಿರುವುದು ಎದ್ದು ಕಾಣುವಂತಿದೆಯೆಂಬ ಪ್ರಗತಿಪರ ವಲಯದ ಪ್ರತಿಕ್ರಿಯೆಗಳು. ಅಂತೆಯೇ ಅದನ್ನೆಲ್ಲ ಮರೆಮಾಚುವ ಶ್ಯಾಣೇತನವನ್ನು ಸಹಿತ ಮರೆಯದೇ ಮೆರೆಯಲಾಗಿದೆ.

ಅಂಥದೊಂದು ಅಚ್ಚರಿಯ ಶ್ಯಾಣೇತನವೆಂದರೆ ಡಾವಣಗೇರಿ ಜಿಲ್ಲೆ ಜಗಳೂರು ಗೊಲ್ಲರಹಟ್ಟಿಯ ಗಾಂವಟಿ ಸೂಲಗಿತ್ತಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತಿಯಾಗಿದೆ. ಅದರ ಒಳಾರ್ಥದ ಮತ್ತೊಂದು ಸೋಜಿಗವೆಂದರೆ ಎಪ್ಪತ್ತೈದು ವರ್ಷದ ಈ ಸೂಲಗಿತ್ತಿ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆ. ಹೆಸರು ಸುಲ್ತಾನಬೀ. ಈ ಗುರುತಿಸುವಿಕೆ ಗಮನಾರ್ಹವಾದ ದೃಷ್ಟಿಬೊಟ್ಟಿನಂತಿದೆ. ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಅವಳ ಹೆಸರು ವೈದ್ಯಕೀಯ ಕ್ಷೇತ್ರದ ಡಾ. ಸುಲ್ತಾನ್ ಬಿ. ಎಂದು ಘೋಷಣೆ ಆಗಿದೆ. ವಾಸ್ತವವಾಗಿ ಅದು ಜಾನಪದ ಕ್ಷೇತ್ರದಲ್ಲಿ ಇರಬೇಕಿತ್ತು.

ಅಪಶೃತಿಯ ಮತ್ತೊಂದು ಸಂಗತಿ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಗೊಂಡಿದೆ. ಅದೇನೆಂದರೆ ಸರಕಾರವೇ ನೇಮಣೂಕಿ ಮಾಡಿರುವ ಪ್ರಸ್ತುತ ಜಾನಪದ ಅಕಾಡೆಮಿಯ ತನ್ನ ಸದಸ್ಯ ಮಹಾರುದ್ರಪ್ಪ ವೀರಪ್ಪ ಇಟಗಿ ಎಂಬುವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಆ ಮೂಲಕ ಸರಕಾರ ದರಕಾರ ಇಲ್ಲದಂತೆ ತಾನೇ ಖುದ್ದಾಗಿ ಶಿಷ್ಟಾಚಾರದ ನಿಯಮಗಳನ್ನು ಉಲ್ಲಂಘಿಸಿದ ಮುಜುಗರ. ಈ ಯಡವಟ್ಟು ವಿಷಯ ಕುರಿತು ವರ್ತಮಾನ ಪತ್ರಿಕೆಗಳು ವಿಶೇಷಸುದ್ದಿ ವಿಶ್ಲೇಷಣೆ ಪ್ರಕಟಿಸಿವೆ.

ಅಂದಹಾಗೆ ಪ್ರಶಸ್ತಿ ಪಡೆದ ಪ್ರಸ್ತುತ ಜಾನಪದ ಅಕಾಡೆಮಿ ಸದಸ್ಯರು ಮುಖ್ಯಮಂತ್ರಿಯವರ ತವರು ಜಿಲ್ಲೆಯವರು. ಹೌದು ಮುಖ್ಯಮಂತ್ರಿಯವರ ಹಾವೇರಿ ಜಿಲ್ಲೆಗೆ ಈ ಬಾರಿ ನಾಲ್ಕು ಪ್ರಶಸ್ತಿಗಳು ಸಂದಾಯವಾಗಿವೆ. ಕೆಲವರಿಂದ ಅದು ಮುಖ್ಯಮಂತ್ರಿ ಅವರ ಜಿಲ್ಲೆಯಲ್ಲವೇ ಎಂಬ ಸಹಜ ಸಮಜಾಯಿಷಿ. ಅದೇ ನಮ್ಮ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ತಲಾ ಒಂದೊಂದರಂತೆ ಪ್ರಶಸ್ತಿ. ಬೃಹತ್ ಜಿಲ್ಲೆ ಬೆಳಗಾವಿಗೂ ಅದೇಗತಿ. ಏಕೀಕರಣೋತ್ತರ ಇಂತಹ ಅನೇಕ ಏರುಪೇರುಗಳು. ಸಾಮಾಜಿಕ, ಸಾಂಸ್ಕೃತಿಕ ಅಸಮತೋಲನಗಳನ್ನು ಕಂಡು ಅಲ್ಲಿನ ಕೆಲವರು ರಾಜ್ಯೋತ್ಸವದ ಈ ಸಂದರ್ಭದಲ್ಲಿ ತುಂಬಾ ಕಠೋರವಾಗಿ ಖಂಡಿಸಿದ್ದಾರೆ.

ಪುರಸ್ಕರಿಸಲೇಬೇಕಿದ್ದ ಒಂದೆರಡು ಪ್ರಮುಖ ಸಾಂಸ್ಕೃತಿಕ ಪ್ರಕಾರಗಳನ್ನು ಈ ಬಾರಿ ಪರಿಗಣಿಸದಿರುವುದು ಲೋಪವೆಂದೇ ಹೇಳ ಬೇಕಾಗಿದೆ. ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ಚಿತ್ರಕಲೆ ಪ್ರಕಾರಗಳನ್ನು ಈ ಸಲ ಪ್ರಶಸ್ತಿಗೆ ಪರಿಗಣಿಸಿಲ್ಲ. ಈಗಾಗಲೇ ಈ ಕುರಿತು ಕೆಲವು ಮಂದಿ ಕಲಾವಿದರು ಅಸಮಾಧಾನ ತೋಡಿಕೊಂಡಿದ್ದಾರೆ. ಅವರದೇ ಸಂಸ್ಕಾರ ಭಾರತಿಯ ದಾವಣಗೆರೆ ಜಿಲ್ಲಾ ಅಧ್ಯಕ್ಷರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ತಮ್ಮ ತೀವ್ರ ಅಸಮಾಧಾನದ ಪ್ರತಿಕ್ರಿಯೆ ತೋರಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋಗಳ ಕ್ರುಯಾಲಿಟಿ ಚೆಕಪ್ ಗಳಂತಿರುವ ಆನ್ ಲೈನ್ ಶಿಫಾರಸು ತಂತ್ರಗಳ ಅನುಸರಿಸಿಕೆ. ಈ ಬಾರಿ ಜನಮೆಚ್ಚುಗೆಯ ಆಯ್ಕೆಗಳೆನ್ನುವ ಹಣೆಪಟ್ಟಿಗೆ ಇಷ್ಟೊಂದು ಹರಸಾಹಸ ಹುನ್ನಾರದ ಅಗತ್ಯವಿರಲಿಲ್ಲ ಎನಿಸುತ್ತದೆ. ತಮಗೆ ಬೇಕ ಬೇಕಾದವರಿಗೆ ಆನ್ ಲೈನ್ ಮೆಚ್ಚುಗೆಯ ಬಳಕೆಯಾದುದೇ ಅಧಿಕ. ಹೀಗಿರುವಾಗ ಶತಮಾನ ಪೂರೈಸುತ್ತಿರುವ ವೃತ್ತಿ ರಂಗಭೂಮಿಯ ನಿಡುಗಾಲದ ರಂಗಜೀವ ಚನ್ನಬಸಯ್ಯ ಗುಬ್ಬಿ ಆನ್ ಲೈನ್ ಗಳ ಕಣ್ಣಿಗೆ ಕಾಣುವುದುಂಟೇ.? ಅಂತೆಯೇ ಶತಮಾನದ ಈ ಚರಿತ್ರಾರ್ಹ ಚೇತನಕ್ಕೆ ಈ ಬಾರಿಯೂ ಪ್ರಶಸ್ತಿ ಇಲ್ಲ.

ಅದೆಲ್ಲ ಒತ್ತಟ್ಟಿಗಿರಲಿ. ಅಪ್ಪುವಿನ ಅಗಲಿಕೆಯಿಂದ ಮೂರುದಿನ ಶೋಕದ ಮನೆಯಂತಾಗಿದ್ದ ಕನ್ನಡನಾಡು ಅದಾದ ಮರುದಿನವೇ ಕನ್ನಡ ರಾಜ್ಯೋತ್ಸವ ಆಚರಿಸಿತು. ನೆನಪಿಸಿಕೊಂಡಂತೆ ಕಂಪನಿ ನಾಟಕಗಳಲ್ಲಿ ಶೋಕ ಸನ್ನಿವೇಶಗಳ ತರುವಾಯ ರಸ್ತಾ ಸೀನಿನ ಹಾಸ್ಯ ಸನ್ನಿವೇಶಗಳ ಪ್ರದರ್ಶನ ಖಾಯಂ. ಅಂತೆಯೇ ರಾಜ್ಯೋತ್ಸವ ಪ್ರಶಸ್ತಿ ಪ್ರದಾನದಂದು ಪ್ರಶಸ್ತಿ ಪುರಸ್ಕೃತರ ಪರವಾಗಿ ಹಾಸ್ಯಕಲಾವಿದ ಗಂಗಾವತಿ ಪ್ರಾಣೇಶಗೆ ಎರಡೇ ಎರಡು ನಿಮಿಷಗಳ ಕಾಲ ಮಾತಾಡಲು ಕಾರ್ಯಕ್ರಮ ನಿರೂಪಕರು ಅವಕಾಶ ನೀಡಿದರು.‌

ಆದರೆ ಆತ ಬರೋಬ್ಬರಿ ಹದಿನೈದು ನಿಮಿಷಗಳ ಕಾಲ ಎಂದಿನಂತೆ ತನ್ನ ಬಾಯಿ ಬಂಡವಾಳದ ಮಾತಿನ ತೌಡು ಕುಟ್ಟಿದರು. ತೌಡಿನ ತುಂಬೆಲ್ಲ ಸೂಕ್ಷ್ಮ ಸ್ವಪ್ರತಿಷ್ಠೆ ಮತ್ತು ಆತ್ಮರತಿಯೇ ತುಂಬಿ ತುಳುಕುತಿತ್ತು. ನಮ್ಮ ಉತ್ತರ ಕರ್ನಾಟಕದ ನಿತ್ಯಾನುಭವದ ಸಣ್ಣ ಸಣ್ಣ ಸಂಗತಿಗಳನ್ನು ಯಥೋಚಿತವಾಗಿ ನಗೆಚ್ಯಾಷ್ಟಿಯ ಪಂಚಿಂಗ್ ಡೈಲಾಗುಗಳಲ್ಲಿ ಪ್ರಸ್ತುತ ಪಡಿಸುವುದು ಪ್ರಾಣೇಶಗೆ ಕರಗತವಾಗಿದೆ. ಔಚಿತ್ಯದ ವಿವೇಚನೆಯಿಲ್ಲದೇ ಅದನ್ನು ಎಲ್ಲಾ ಸಭೆ ಸಮಾರಂಭಗಳು ಬಳಕೆ ಮಾಡಿಕೊಳ್ಳುವ ಚಪಲ. ಅದೊಂದು ರೂಢಿಗತ ಪ್ಯಾಷನ್, ಪ್ಯಾಂಡಮಿಕ್ ಸನ್ನಿ ತರಹ ಪಸರಿಸಿದೆ. ಟೀವಿಗಳಿಗೆ ಟಿಆರ್ಪಿಯ ತಹತಹ. ಅದು ರಾಜ್ಯೋತ್ಸವದ ಕನ್ನಡ ಸಂಸ್ಕೃತಿಯಂತಹ ಗಂಭೀರ ಕಾರ್ಯಕ್ರಮಕ್ಕು ಅನ್ವಯ ಆಗಬೇಕೇ.?

ಇದೇ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿ ಕೊಲ್ಹಾರದ ಕೃಷ್ಣ ಕುಲಕರ್ಣಿಯವರಂತಹ ಸಂಸ್ಕೃತಿ ಚಿಂತಕರಿಂದ ಅಂದು ಗಂಭೀರ ಚಿಂತನೆಯ ಮಾತುಗಳನ್ನು ಆಡಿಸಬಹುದಿತ್ತು. ಅಷ್ಟೇ ಯಾಕೆ ಅದೇ ವೇದಿಕೆಯಲ್ಲಿದ್ದ ಅಪರೂಪದ ಆಶುಕವಿ ಬೀಳಗಿಯ ಸಿದ್ದಪ್ಪ ಬಿದರಿಯವರಿಂದ ನಾಲ್ಕಾರು ಆಶುಕವಿತೆಗಳನ್ನು ಹೇಳಿಸಿದ್ದರೆ ಸಾಕಿತ್ತು. ಸಭೆಗೆ ಜವಾರಿ ಸಂಸ್ಕೃತಿ ಸಂಭ್ರಮದ ಶೋಭೆ ಬರುತಿತ್ತು. ಖರೇ ಖರೇ ಸಂಸ್ಕೃತಿ ಚಿಂತನೆಗಳೆಲ್ಲ ಈಗ ಔಟ್ ಡೇಟೆಡ್ ಸಂಗತಿಯಂತಾಗಿವೆ. ಬಾಯಿಕೆಟ್ಟು ಬೆಂಡಾದ ಮನಸುಗಳಿಗೆ ನಕಲಿಗಳ ಮೃಷ್ಟಾನ್ನವಾಗಿದೆ. ನಾವಾಗೇ ಒಂದಷ್ಟು ನಕರಿಯ ಬೀಸುನಗೆ ಮಾತುಗಳು ಬೇಕೇ ಬೇಕೆನ್ನುವಂತೆ ಅನಿವಾರ್ಯಸ್ಥಿತಿ ನಿರ್ಮಿಸಿಕೊಂಡಂತಾಗಿದೆ.

ಅಷ್ಟಕ್ಕೂ ಅವತ್ತು ಪ್ರಾಣೇಶ ಆಡಿದ ಮಾತುಗಳು ಮತ್ತವೇ ಸವಕಲು ಸರಕುಗಳು.‌ ಅದೇ ಎದುರು ಮನೆಯ ಶೆಟ್ಟರ ಹುಡುಗಿ. ಮತ್ತದೇ ತನ್ನ ಓದು ವ್ಯಾಸಂಗದ ಪರಸಂಗಗಳು. ತಾನಲ್ಲದೇ ಶಾಲಾಶಿಕ್ಷಕ ಮತ್ತು ಸ್ವಾತಂತ್ರ್ಯ ಯೋಧನಾಗಿದ್ದನೆಂಬ ತನ್ನಪ್ಪ, ತನ್ನ ಅಣ್ತಮ್ಮಂದಿರು, ತನ್ನವ್ವಗೆ ಬರುತ್ತಿರುವ ಮಾಸಿಕ ಮೂವತ್ತು ಸಹಸ್ರ ಪಿಂಚಣಿ ಮತ್ತು ತಾನು ಸ್ಟಾರ್ ಇಮೇಜಿನ ಸೆಲೆಬ್ರಿಟಿ ಪಟ್ಟ ಗಿಟ್ಟಿಸಿಕೊಂಡ ಶ್ಯಾಣೇತನ. ಇಂತಹ ಅನೇಕಾನೇಕ ಮಿತಿಮೀರಿದ ಆತ್ಮರತಿಯ ಪ್ರತಿಷ್ಠಿತ ಮಾತುಗಳದ್ದೇ ಒಳಹೊಡೆತ. ಆದರೆ ಎಲ್ಲೆಲ್ಲೂ ಎಳ್ಳರ್ಧ ಕಾಳಿನಷ್ಟೂ ಅನುಮಾನ ಬಾರದಂತೆ ಅದನ್ನೆಲ್ಲ ಪ್ರಸ್ತುತ ಪಡಿಸುವಲ್ಲಿ ಅವನು ಭಾರೀ ಜಾಬಾದ.

ಇನ್ನುಮುಂದೆ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಅರ್ಜಿ ಗುಜರಾಯಿಸಂಗಿಲ್ಲ. ಸರಕಾರವೇ ಅರ್ಹರನ್ನು ಶೋಧಿಸುವುದಂತೆ. ಪ್ರಶಸ್ತಿಯ ಮೊತ್ತ ಲಕ್ಷದಿಂದ ಐದು ಲಕ್ಷಕ್ಕೆ ಏರಿಕೆ. ವಯಸ್ಸು ಅರವತ್ತರಿಂದ ಕೆಳಗಿಳಿಕೆಯೆಂದು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಂದರೆ ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯೆಂಬ ಮಾರಿಹಬ್ಬದ ಖರೇ ಖರೇ ಆಟ ನಿಂತು ನೋಡುವಂತಾಗಬಹುದು.?

ಮರೆತ ಕಿರುಮಾತು
ಮುಖ್ಯಮಂತ್ರಿಯ ಗಮನ ಸೆಳೆದು ಗೆಲುವು ಗಳಿಸಿದ್ದು ಕಿಕ್ಕೇರಿಯ ಕಿರಿಕ್ಕು.

ಮಲ್ಲಿಕಾರ್ಜುನ ಕಡಕೋಳ
9341010712

Don`t copy text!