ಬೀಗ ಹಾಕಿರುವೆ

ಬೀಗ ಹಾಕಿರುವೆ

ಗೆಳೆಯ
ನಿನ್ನ ಸವಿ ವಚನಗಳು
ಇನ್ನೊಬ್ಬರ ಹಿತ್ತಾಳೆ ಕಿವಿಗೆ
ಕೇಳದಿರಲೆಂದು
ನನ್ನ ಹೃದಯದ ಬಾಗಿಲಿಗೆ
ಬೀಗ ಹಾಕಿರುವೆ

ಊರ ಬಾಯಿಯ
ಕೊಚ್ಚೆ ನೀರಲ್ಲಿ
ನಮ್ಮ ಹೆಸರುಗಳು
ತೇಲಿಹೋಗುವ
ಆಟಿಕೆಯ ದೋಣಿಯಾಗದಿರಲೆಂದು
ಹಾಕಿಕೊಂಡಿರುವೆ
ನನ್ನ ಮನಕ್ಕೆ ಬೀಗವನು

ಸಾಧನೆ ಮಾಡಿ
ಸಾಧಿಸಿ ಗಳಿಸಿದ
ಬಿರುದು -ಬಾವಲಿಗಳಿಗೆ
ಬೆಂಕಿಗೆ ತುಪ್ಪ ಹಾಕಬಾರದೆಂದು
ಹಾಕಿರುವೆ
ನನ್ನ ಯಶದ ಬಾಗಿಲಿಗೆ
ಬೀಗವನು

ಊರಾಚೆ ಸುಂದರ
ಬನಗಳಲ್ಲಿ
ಹರಿಯುವ ಸ್ವಚ್ಛಂದ ತಿಳಿನೀರಿನ
ಮರಳಿನಲ್ಲಿ
ಗುಬ್ಬಿ ಗೂಡು ಕಟ್ಟಿ
ಆಡಿದ
ಸುಂದರ ನೆನಪುಗಳನ್ನು

ಬಂಧಿಸಿಕೊಂಡಿರುವೆ ನನ್ನ
ಭಾವ ಬಂಧನದಲ್ಲಿ
ನಿನ್ನ ಸವಿ ನೆನಪುಗಳನು

ಪ್ರೊ ಸಾವಿತ್ರಿ ಕಮಲಾಪೂರ*
ಮೂಡಲಗಿ

Don`t copy text!