ಭ್ರಷ್ಟಾಚಾರ, ಅವ್ಯವಸ್ಥೆಗಳ ಗೂಡಾಗಿರುವ ಹಂಪಿ ವಿಶ್ವವಿದ್ಯಾಲಯ
e-ಸುದ್ದಿ, ಹಂಪಿ
ಪ್ರಾಧ್ಯಾಪಕ ಹುದ್ದೆಗೆ ಮುಂಬಡ್ತಿ ನೀಡಲು ಉಪಕುಲಪತಿ 6 ಲಕ್ಷ ರೂಪಾಯಿ ಲಂಚ ಕೇಳುತ್ತಿದ್ದಾರೆ ಎಂದು ಸಹ-ಪ್ರಾಧ್ಯಾಪಕರೊಬ್ಬರು ಆರೋಪಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ ಹಂಪಿಯ ನಿವೃತ್ತ ಉಪ ಕುಲಪತಿ ಸೇರಿದಂತೆ ಹಲವು ನಿವೃತ್ತ ಪ್ರಾಧ್ಯಾಪಕರಿಗೆ ವಿಶ್ವವಿದ್ಯಾಲಯವು ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಸಂದಾಯ ಮಾಡದೇ ಕೋಟ್ಯಾಂತರ ರೂಪಾಯಿ ಬಾಕಿಯಿಟ್ಟಿರುವ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಭಡ್ತಿ ನೀಡಲು ಲಂಚ, ಪಿಂಚಣಿಯಿಂದ ಕಮೀಷನ್ ಹಾಗೂ ಬೇಕಾಬಿಟ್ಟಿ ನೇಮಕಾತಿ ನಡೆಸುತ್ತಿದ್ದಾರೆ ಎಂದು ಅಲ್ಲಿನ ಪ್ರಾಧ್ಯಾಪಕರು ಸೇರಿದಂತೆ ವಿದ್ಯಾರ್ಥಿಗಳು ಕೂಡಾ ಆರೋಪಿಸಿದ್ದಾರೆ.
“ಕನ್ನಡ ವಿಶ್ವವಿದ್ಯಾಲಯ ಹಂಪಿ” ರಾಜ್ಯದ ಹಂಪಿಯಲ್ಲಿರುವ ಸಂಶೋಧನಾ ಆಧಾರಿತ ಸಾರ್ವಜನಿಕ ವಿಶ್ವವಿದ್ಯಾಲಯವಾಗಿದೆ. ಇದನ್ನು 1991 ರಲ್ಲಿ ಕರ್ನಾಟಕ ಸರ್ಕಾರವು ಕನ್ನಡ ವಿಶ್ವವಿದ್ಯಾಲಯ ಕಾಯಿದೆ-1991 ಮೂಲಕ ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವ ಮತ್ತು ಕರ್ನಾಟಕದ ಜಾನಪದ ಸಾಹಿತ್ಯ, ಸಂಪ್ರದಾಯಗಳು, ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಅಲ್ಲಿಂದ ಇತ್ತೀಚೆಗಿನವರೆಗೂ ವಿದ್ಯಾಲಯವು ಹಲವಾರು ಗಮನಾರ್ಹ ಸಂಶೋಧನೆಗಳನ್ನು, ಕೆಲಸವನ್ನು ಮಾಡಿದೆ.
ಆದರೆ ಇತ್ತೀಚೆಗಿನ ವರ್ಷಗಳಲ್ಲಿ ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಪ್ರಕಟಣೆಗಳು ನಿಂತು ಹೋಗಿದೆ ಎಂದು ವಿದ್ಯಾಲಯದ ಅಧ್ಯಾಪಕರ ಸಂಘ ಆರೋಪಿಸಿದೆ. ಜೊತೆಗೇ ನ್ಯಾಕ್ ಮಾನ್ಯತೆಯಲ್ಲಿ ‘ಎ’ ಶ್ರೇಣಿಯಲ್ಲಿದ್ದ ವಿಶ್ವವಿದ್ಯಾಲಯ ಈಗ ‘ಬಿ’ ಶ್ರೇಣಿಗೆ ತಲುಪಿದೆ, ಅಲ್ಲದೇ, ದೂರಶಿಕ್ಷಣ ನಿರ್ದೇಶನಾಲಯದ ಮಾನ್ಯತೆಯನ್ನೂ ಕಳೆದುಕೊಂಡಿದೆ ಎಂದು ಸಂಘವು ಬೇಸರ ವ್ಯಕ್ತಪಡಿಸಿದೆ.
ಜೊತೆಗೆ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರ ಪಿಂಚಣಿ ಸೇರಿದಂತೆ ಕೋಟ್ಯಾಂತರ ರೂಪಾಯಿಗಳ ಸವಲತ್ತನ್ನು ಸಂದಾಯವನ್ನು ಇನ್ನೂ ಮಾಡಿಲ್ಲ ಎಂದೂ ನಿವೃತ್ತ ಪ್ರಾಧ್ಯಾಪಕರೇ ಆರೋಪಿಸಿದ್ದು ಅಲ್ಲದೇ ರಾಜ್ಯಪಾಲರಿಗೆ ಪತ್ರವನ್ನೂ ಬರೆದಿದ್ದಾರೆ.
ಇಷ್ಟೇ ಅಲ್ಲದೇ, ವಿದ್ಯಾಲಯದ ಸಹ-ಪ್ರಾಧ್ಯಾಪಕರಾಗಿರುವ ಡಾ.ಎಂ.ಮಲ್ಲಿಕಾರ್ಜುನಗೌಡ ಅವರು ಕುಲಪತಿಗಳಾಗಿದ ಸ.ಚಿ.ರಮೇಶ ಅವರ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ. ಕುಲಪತಿ ಸ.ಚ.ರಮೇಶ್ ಅವರು ಸಹ ಪ್ರಾಧ್ಯಾಪಕ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಮುಂಬಡ್ತಿ ನೀಡಲು 6 ಲಕ್ಷ ರೂಪಾಯಿ ಲಂಚ ಕೇಳುತ್ತಿದ್ದಾರೆ ಎಂದೂ ಮಲ್ಲಿಕಾರ್ಜುನಗೌಡ ಅವರು ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ನಿಯಮಗಳನ್ನು ಪಾಲಿಸದೇ, ಮೀಸಲಾತಿಯನ್ನು ಉಲ್ಲಂಘಿಸಿ ಒಂದೇ ಜಾತಿಗೆ ಸೇರಿದ ಅಭ್ಯರ್ಥಿಗಳನ್ನು ನೇಮಕಗೊಳಸಲು ವಿಸಿ ಮತ್ತು ಕಾನೂನು ಘಟಕದ ಸಂಚಾಲಕರೊಬ್ಬರು ಹುನ್ನಾರ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನಗೌಡ ಅವರು ಆರೋಪಿಸಿದ್ದಾರೆ. ಅದರ ಬಗ್ಗೆ ತಕರಾರು ತೆಗೆದಿರುವುದಕ್ಕೆ ಮತ್ತು ಸಿಎಎಸ್ ಮುಂಬಡ್ತಿಗೆ ಲಂಚ ಕೇಳುವುದನ್ನು ಪ್ರಶ್ನಿಸಿದ ನಂತರ ತನ್ನನ್ನು ವಿಶ್ವವಿದ್ಯಾಲಯದಿಂದ ವರ್ಗಾವಣೆಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ ಮಲ್ಲಿಕಾರ್ಜುನಗೌಡ ಅವರು.
ಈ ಮಧ್ಯೆ ವಿಶ್ವವಿದ್ಯಾಲಯದಲ್ಲಿನ ಎಸ್ ಸಿ, ಎಸ್ ಟಿ, ಒಬಿಸಿ ಮತ್ತು ಇತರೆ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೂಡ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ತಮ್ಮಿಂದಲೂ ಪ್ರಾಧ್ಯಾಪಕರು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಪತ್ರ ಚಳುವಳಿ ನಡೆಸಲು ತೀರ್ಮಾನಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿಗಳು ಹೇಳುವಂತೆ ಅವರ ವಿದ್ಯಾರ್ಥಿ ವೇತನಕ್ಕೆ ಸಹಿ ನೀಡುವುದಕ್ಕೆ ಕೂಡಾ ಲಂಚ ಪಡೆಯಲಾಗುತ್ತಿದೆ ಎಂದರೆ ಏನು ಹೇಳಬೇಕು. ಅವುಗಳಲ್ಲೂ ಪರ್ಸಂಟೇಜ್ ಕೇಳಲಾಗುತ್ತಿದೆ. ಜೊತೆಗೇ ಏಕಾಏಕಿ ತಮ್ಮ ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡುವುದನ್ನು ಕೂಡಾ ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.
“ಖರೀದಿ ಮತ್ತು ಇತರೆ ಹಣಕಾಸಿನ ವ್ಯವಹಾರಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಸಾರಾಂಗದ ಪ್ರಕಟಣೆಗಳು ನಿಂತು ಹೋಗಿವೆ. ಜೊತೆಗೇ ವಿಶ್ವ ವಿದ್ಯಾಲಯದ ಭೂಮಿಯನ್ನೂ ಒತ್ತುವರಿ ಮಾಡಲಾಗುತ್ತಿದೆ. ಡಿ.ಲಿಟ್ ಪದವಿಗಳನ್ನೂ ಹಣಕ್ಕಾಗಿ ಮಾರಾಟ ಮಾಡಲಾಗುತ್ತಿದೆ” ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆರೋಪಿಸಿದ್ದಾರೆ.
ಈ ಎಲ್ಲಾ ವಿವಾದಗಳ ಮಾತನಾಡಿದ ವಿಶ್ವವಿದ್ಯಾಲಯದ ಉಪಕುಲಪತಿ ಸ.ಚಿ.ರಮೇಶ ಅವರು, “ಪ್ರಾಧ್ಯಾಪಕರ ನಿವೃತ್ತಿ ಪಿಂಚಣಿ ನೀಡಲು ಸರ್ಕಾರದಿಂದ ಅನುದಾನ ಬಂದಿಲ್ಲ. ಹಾಗಾಗಿ ಅವುಗಳನ್ನು ನೀಡಿಲ್ಲ. ಅನುದಾನದ ಕುರಿತು ಸರ್ಕಾರಕ್ಕೆ ಹತ್ತಾರು ಬಾರಿ ಪತ್ರ ಬರೆದಿದ್ದೇನೆ. ಉಳಿದಂತೆ ಲಂಚ ಆರೋಪಕ್ಕೆ ಯಾವುದೇ ಆಧಾರವಿಲ್ಲದೆ ಆರೋಪ ಮಾಡಲಾಗುತ್ತಿದೆ. ಮಾಡುತ್ತಿರುವ ಆರೋಪಗಳಿಗೆ ಸರಿಯಾದ ಸಾಕ್ಷಿ, ಆಧಾರಗಳನ್ನು ಕೊಟ್ಟರೆ ತಪ್ಪಿತಸ್ಥರ ವಿರುದ್ಧ ನಾನೇ ಆದರೂ ನನಗೆ ಶಿಕ್ಷೆ ಆಗಲಿ. ಈ ಆರೋಪಗಳ ಬಗ್ಗೆ ಈಗಾಗಲೇ ವಿದ್ಯಾಲಯದ ಸಿಂಡಿಕೇಟ್‌ಗೆ ದೂರು ನೀಡಿದ್ದೇನೆ” ಎಂದು ಅವರು ಹೇಳುತ್ತಿದ್ದಾರೆ.
ಹಣಕಾಸು ಅಧಿಕಾರಿ ರಮೇಶ್ ನಾಯಕ್ ಮಾತನಾಡುತ್ತಾ, “ಪಿಂಚಣಿ ಯಾರಿಗೂ ನಿಂತಿಲ್ಲ, ಕೊಡಲಾಗುತ್ತಿದೆ. ಮಹಾಲೆಕ್ಕಪಾಲರು ನೇಮಕಾತಿ ಸಮಸ್ಯೆಗಳನ್ನು ಮುಂದಿಟ್ಟು ಇಬ್ಬರದು ತಡೆ ಹಿಡಿದಿದ್ದಾರೆ. ಇನ್ನೂ ಪಿಂಚಣಿ ಸೌಲಭ್ಯಗಳು ಟೆಕ್ನಿಕಲ್ ಸಮಸ್ಯೆಯಿಂದ ಉಳಿದುಕೊಂಡಿವೆ. ಕೆಲವರು 7 ನೇ ವೇತನ ಆಯೋಗದ ಪ್ರಕಾರ ರಜೆಗಳಿಕೆ ಕೇಳುತ್ತಿದ್ದಾರೆ. ಆದರೆ ಅದಕ್ಕೆ ಪಿಂಚಣಿ ನಿಯಮಗಳು ವಿರುದ್ಧವಾಗಿವೆ. ಇನ್ನೂ ಕೆಲವರಿಗೆ ತಾವು ನಿವೃತ್ತರಾದ ವಿಶ್ವವಿದ್ಯಾಲಯದಲ್ಲಿ ಗಳಿಕೆ ರಜೆ ತೆಗೆದುಕೊಳ್ಳಬೇಕು. ನಾವು ಇಲ್ಲಿ ಕೊಡಲು ಸಾಧ್ಯವಿಲ್ಲ. ಈ ರೀತಿಯಾಗಿ ಸಮಸ್ಯೆಗಳಿವೆ” ಎಂದು ಹೇಳುತ್ತಿದ್ದಾರೆ ಹಣಕಾಸು ಅಧಿಕಾರಿ ರಮೇಶ್ ನಾಯಕ್ ರು..!
ಹೀಗೆಲ್ಲಾ ಸಮಸ್ಯೆಗಳನ್ನು ಒಡಲಲ್ಲಿಟ್ಟುಕೊಂಡ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಒಳ ಒಳಗೇ ಅಸಯ ತಾಪತ್ರಯಗಳಿಂದ ಬೇಯಿತ್ತಿದೆ. ಇದನ್ನು ಪರಿಹರಿಸುವವರು ಯಾರು ಎಂಬುದೇ ಈಗ ಬಹು ಚಿಂತೆಯಾಗಿದೆ.!?
# ಕೆ.ಶಿವು.ಲಕ್ಕಣ್ಣವರ