ಬಳಗಾನೂರು ಪಪಂ ಅತಂತ್ರ ಮಸ್ಕಿ ಮತ್ತೇ ಪುರಸಭೆಯ ಅಧಿಕಾರದ ಗದ್ದುಗೆ ಏರಿದ ಬಿಜೆಪಿ

 

ಬಳಗಾನೂರು ಪಪಂ ಅತಂತ್ರ
ಮಸ್ಕಿ ಮತ್ತೇ ಪುರಸಭೆಯ ಅಧಿಕಾರದ ಗದ್ದುಗೆ ಏರಿದ ಬಿಜೆಪಿ

e-ಸುದ್ದಿ ಮಸ್ಕಿ

ಮಸ್ಕಿ: ಮಸ್ಕಿ ಪುರಸಭೆಯ 23 ವಾರ್ಡ್ ಗಳಲ್ಲಿ 14 ವಾರ್ಡ್ ಗಳಲ್ಲಿ ಬಿಜೆಪಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಎರಡನೇ ಬಾರಿಗೆ  ಅಧಿಕಾರದ ಚುಕ್ಕಾಣಿ ಹಿಡಿದಿದೆ. ತಾಲ್ಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮೈಲುಗೈ ಸಾಧಿಸಿದ್ದರು ಸಹ  ಅಧಿಕಾರ ಹಿಡಿಯುವುದು ಕಷ್ಟವಾಗಿದೆ.
ಮಸ್ಕಿ ಪುರಸಭೆಯ 23 ವಾರ್ಡ್ ಗಳಲ್ಲಿ ಒಂದರಲ್ಲಿ ಅವಿರೋಧ ಆಯ್ಕೆಯಾಗಿದ್ದು ಉಳಿದ 22ಕ್ಕೆ ಡಿ. 27 ರಂದು ಚುನಾವಣೆ ನಡೆದಿತ್ತು. 13 ವಾರ್ಡ್ ಗಳಲ್ಲಿ ಬಿಜೆಪಿ ಹಾಗೂ 9 ವಾರ್ಡ್ ಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಪುರಸಭೆ ಅಧಿಕಾರ ಹಿಡಿಯಬೇಕು ಎಂದು ಕನಸು ಕಂಡಿದ್ದ ಕಾಂಗ್ರೆಸ್ ಗೆ ಪುರಸಭೆ ಚುನಾವಣೆ ಫಲಿತಾಂಶ ನಿರಾಶೆ ಮೂಡಿಸಿದೆ.
ತಾಲ್ಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿಯ 12 ಸ್ಥಾನಗಳಲ್ಲಿ 6 ರಲ್ಲಿ ಬಿಜೆಪಿ, 5 ರಲ್ಲಿ ಕಾಂಗ್ರೆಸ್ ಹಾಗೂ 1 ರಲ್ಲಿ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಸರಳ ಬಹುಮತಕ್ಕೆ 7 ಸದಸ್ಯರ ಅವಶ್ಯಕತೆ ಇದ್ದು ಅತಂತ್ರ ಸ್ಥಿತಿ
ನಿರ್ಮಾಣವಾಗಿದೆ.
ಚುನಾವಣೆ ಫಲಿತಾಂಶ ಹೊರ ಬಿಳುತ್ತಿದ್ದಂತೆ ಮತ ಏಣಿಕೆ ಕೇಂದ್ರವಾದ ಸರ್ಕಾರಿ ದೇವನಾಂಪ್ರಿಯ ಅಶೋಕ ಪದವಿ ಕಾಲೇಜು ಮುಂಭಾಗದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಬಣ್ಣ  ಎರಚಿ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಫಲಿತಾಂಶ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್ ಮಾಡಲಾಗಿತ್ತು.

ಬಳಗಾನೂರು ಹಾಗೂ ತುರ್ವಿಹಾಳ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಸ್ಕಿ ಪುರಸಭೆಯಲ್ಲಿ ಕಾಂಗ್ರೆಸ್ ಗೆ ನಿರ್ಧಿಷ್ಟ ಸ್ಥಾನಗಳು ಬರದಿದ್ದರೂ ಸಹ ಮತ ಪ್ರಮಾಣದಲ್ಲಿ ಹೆಚ್ಚಿನ ಮತಗಳು ಬಂದಿವೆ. ಈ ಫಲಿತಾಂಶ ಕಾಂಗ್ರೆಸ್ ಪರವಾಗಿದೆ ಎಂಬುದು ಸಾಭಿತಾಗಿದೆ. ಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಲಾಗುವುದು.
–      ಬಸನಗೌಡ ತುರ್ವಿಹಾಳ, ಶಾಸಕರು ಮಸ್ಕಿ
 

ಮಸ್ಕಿ ಪುರಸಭೆಯಲ್ಲಿ ಬಿಜೆಪಿ ಸ್ಪಷ್ಟ ಅಧಿಕಾರಕ್ಕೆ ಬಂದಿರುವುದು ಸಂತಸ ತಂದಿದೆ. ಕಳೆದ ಅವದಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ. ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಲಾಗುವುದು. ತುರ್ವಿಹಾಳ ಪಟ್ಟಣ ಪಂಚಾಯಿತಿಯಲ್ಲಿ ಮತದಾರರು ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ.
–      ಪ್ರತಾಪಗೌಡ ಪಾಟೀಲ್ ಮಾಜಿ ಶಾಸಕರು

Don`t copy text!