ಬಂದುದೆಲ್ಲವ ಸ್ವೀಕರಿಸಬೇಕು
ಈ ಜೀವನವೇ ಹಾಗೆ… ಈ ಕ್ಷಣ ಇದ್ದಂತೆ ಮರುಕ್ಷಣ ಇರದು.ಬಂದುದೆಲ್ಲವ ಸ್ವೀಕರಿಸುತ್ತ ಸಾಗಬೇಕಷ್ಟೆ!….ಹೌದು,ಬರುವ ಘಳಿಗೆ ಏನು ಹೊತ್ತು ಬರುವುದು ಎಂದು ಅರಿವಿಲ್ಲದ ನಾವು ಬಂದೊದಗುವ ಎಲ್ಲದಕ್ಕೂ ಗಟ್ಟಿಯಾಗಿರಬೇಕು. ಹಾಗಾದರಷ್ಟೇ ನಮ್ಮೊಳಗಿನ ಬಲ ಕುಂದದೆ ಜಾಗ್ರತವಾಗಿರುತ್ತದೆ.ಹುಟ್ಟು ಸಾವು ಯಾವುದೂ ನಮ್ಮ ಕೈಯಲ್ಲಿಲ್ಲ.ಇರುವಷ್ಟು ದಿನ ಧೈರ್ಯದಿಂದ ಬದುಕಿ ಬಾಳಬೇಕು. ಪ್ರತಿ ಕ್ಷಣ ಮನಸ್ಸೆಂಬ ಕುದುರೆಯನ್ನು ಹಿಡಿತದಲ್ಲಿಟ್ಟುಕೊಂಡು ಸಾಗಬೇಕಾಗುತ್ತದೆ.ಆದರೆ ಅದು ಅಷ್ಟು ಸುಲಭವಲ್ಲ! ಅದಕ್ಕಾಗಿ ಧ್ಯಾನ,ಪೂಜೆ ಆಧ್ಯಾತ್ಮಿಕ ಸಾಧನೆ ಬಲು ಮುಖ್ಯ. ಬರುವ ಎಲ್ಲವನ್ನು ಬಂದಂತೆ ಸ್ವೀಕರಿಸಲು ಮೊದಲು ನಮ್ಮೊಳ ಮನಸ್ಸನ್ನು ಸಜ್ಜುಗೊಳಿಸಬೇಕು. ಹಾಗಾದಾಗ ಮಾತ್ರವೇ ಹೊರಜಗತ್ತನ್ನು ಎದುರಿಸಿ ಬಂದುದೆಲ್ಲವ ಸಮರ್ಥವಾಗಿ ನಿರ್ವಹಿಸಲು ದೇಹಕ್ಕೆ ಸಾಧ್ಯ.
ಕಾಲ ಯಾರಿಗಾಗಿಯೂ ನಿಲ್ಲದು. ಸದಾ ಚಲಿಸುತ್ತಲೇ ಇರುವ ಅದರೆದುರು ಪ್ರತೀ ಜೀವಿ ತಲೆಬಾಗಲೇಬೇಕು.ನೋವು, ನಲಿವು ಏನೇ ಬಂದರೂ ಎದುರಿಸಬೇಕು.ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷ ಅಂದರೆ ೨೦೨೧ ಕ್ಕೆ ವಿದಾಯ ಹೇಳಿ ಬರಲಿರುವ ೨೦೨೨ ರ ಹೊಸ ವರುಷ ಅಡಿ ಇಡುತ್ತಿದೆ.
ಇಡೀ ಮಾನವ ಕುಲಕ್ಕೆ ಕಂಟಕವಾಗಿ ಬಂದ ಕೊರೊನ ಮಹಾಮಾರಿ ಕಳೆದ ಕೆಲವು ತಿಂಗಳಿನಿಂದ ಹತೋಟಿಗೆ ಬಂದಿದ್ದರೂ ಅದು ಮಾಡಿದ ಅವಾಂತರ,ನಷ್ಟ,ಜೀವಹಾನಿ ಯಾವುದನ್ನೂ ಆದಷ್ಟು ಸುಲಭದಲ್ಲಿ ಮರೆಯುವಂತಿಲ್ಲ! ತನ್ನವರನ್ನು ಕಳೆದುಕೊಂಡು ಬಾರದೂರಿನತ್ತ ಪಯಣಿಸಿದ ಬಂಧುಗಳನ್ನು ನೆನೆದು ಇಂದಿಗೂ ಅನೇಕ ಜನರು ಕಣ್ಣಿರು ಸುರಿಸುತ್ತಿದ್ದಾರೆ.ನನ್ನದು,ನನ್ನದು ಎಂದು ಮೆರೆದ ಸ್ವಾರ್ಥಿಗಳೂ ಕೂಡ ಒಂದಿಷ್ಟು ಬದಲಾಗಿ ಮಾನವೀಯತೆಯನ್ನು ಕಲಿತುಕೊಂಡಿದ್ದಾರೆ.ಮನುಷ್ಯ ಮತ್ತೊಬ್ಬ ಮನುಷ್ಯನಿಗಾಗಬೇಕು, ಒಂಟಿಯಾಗಿ ನಾಲ್ಕು ಗೋಡೆಗಳ ಮಧ್ಯೆ ಇರುವುದು ಎಷ್ಟು ಕಷ್ಟ ಎಂಬ ಪಾಠವನ್ನು ಕಲಿತಿದ್ದಾನೆ ಎನ್ನುವುದಕ್ಕಿಂತ ಕರೋನಾ ಕಲಿಸಿತು ಎಂದು ಹೇಳಬಹುದು.ವೈರಸ್ಸಿನ ದಾಳಿಯೊ, ರೋಗನಿರೋಧಕ ಶಕ್ತಿ ಕುಗ್ಗಿದ ಪರಿಣಾಮವೋ ಅಥವಾ ಪ್ರಕೃತಿ ಮುನಿಸಿಕೊಂಡ ಕಾರಣವೋ ಒಟ್ಟಿನಲ್ಲಿ ಮನುಷ್ಯ ಉಸಿರಾಡುವುದಕ್ಕೂ ಪರದಾಟ ನಡೆಸಬೇಕಾದ ಸಂದರ್ಭ ಬಂದೊದಗಿ ಮುಖಗವಸು ಹಾಕದೇ ಪರ್ಯಾಯವಿಲ್ಲದಂತಾಗಿದೆ.
ಮದುವೆಯಾದ ಇಷ್ಟು ವರ್ಷಗಳಲ್ಲಿ ನಾನು ನಮ್ಮ ಮನೆಯವರು ಮತ್ತು ಇಬ್ಬರು ಮಕ್ಕಳು ಸುಮಾರು ಮೂರು ತಿಂಗಳುಗಳ ಕಾಲ ಒಟ್ಟಿಗೆ ಪ್ರತೀ ಕ್ಷಣ ಇದ್ದದ್ದು ಇದೇ ಕೊರೊನಾ ಸಮಯದಲ್ಲಿ.ನಾಳೆ ಹೇಗೆ?…ಏನು ಎಂಬುದರ ನಡುವೆಯೂ ನಾಲ್ಕು ಜನ ಆದಷ್ಟು ಎಲ್ಲರೂ ಸಂತಸದಿಂದ ಇರುವಂತೆ ನೋಡಿಕೊಳ್ಳುವಲ್ಲಿ ನಾ ಸಫಲಳಾಗಿದ್ದಂತೂ ನಿಜ!… ಪ್ರತಿದಿನ ದೇವರಿಗೆ ಕೈ ಮುಗಿಯುತ್ತ ಈ ಮಹಾಮಾರಿ ತೊಲಗಿ ಜಗವೆಲ್ಲ ಮತ್ತೆ ನಸು ನಗುವಂತಾಗುವಂತೆ ಹರಸು ಭಗವಂತ ಎಂಬ ಪ್ರಾರ್ಥನೆ ಮಾಡುವುದು ಬಿಟ್ಟರೆ ಮತ್ಯಾವ ದಾರಿ ಇರಲಿಲ್ಲ.ಕುಟುಂಬದವರೆಲ್ಲ ಒಟ್ಟಾಗಿ ಕುಳಿತು ಊಟ, ತಿಂಡಿ ಮಾಡುತ್ತಿದ್ದೆವು.ಇದರಿಂದ ನಮ್ಮೆಲ್ಲರ ನಡುವಿನ ಬಾಂಧವ್ಯ ಹೆಚ್ಚಾಗಿ,ಪರಸ್ಪರ ಮತ್ತಷ್ಟು ಅರ್ಥ ಮಾಡಿಕೊಳ್ಳಲು ಅವಕಾಶವಾದಂತಾಯಿತು. ಬೆಳಿಗ್ಗೆ ಸಾಯಂಕಾಲ ಯೋಗ ಒಂದಿಷ್ಟು ವ್ಯಾಯಾಮ ಮಾಡುತ್ತ ಚೆಸ್,ಲೂಡೋ ,ಕೇರಮ್ಗಳಂತ ಒಳಾಂಗಣ ಆಟ ಆಡುತ್ತ ಬುದ್ಧಿಗೂ ಕಸರತ್ತು ಕೊಟ್ಟು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುತ್ತ ದಿನಗಳೆದೆವು.ಒಂದು ವಾರಗಳ ಕಾಲ ಕಾಫೀ, ಚಹಾ ಮಾಡಲು ಹಾಲು ಸಿಗದೆ ತುಂಬಾ ತೊಂದರೆ ಆಗಿತ್ತು.ಆದರೂ ಆ ದಯಾನಿಧಿ ಸದ್ಗುರುವಿನ ದಯೆಯಿಂದ ಎರಡು ಹೊತ್ತಿನ ಊಟಕ್ಕೇನು ಕೊರತೆಯಾಗಲಿಲ್ಲ.ಆಗೆಲ್ಲ ಕೆಲಸ ಕಳೆದುಕೊಂಡು ,ಹುಟ್ಟೂರಿಗೆ ಹೋಗಲು ಆಗದೆ ಕಾಲ್ನಡಿಗೆಯಲ್ಲಿ ಜನ್ಮಭೂಮಿಕಡೆ ಮುಖ ಮಾಡಿದ ಜನರನ್ನು ಕಂಡು ದುಃಖವಾಗುತ್ತಿತ್ತು.ಆದಷ್ಟೂ ಬೇಗ ಮರಳಿ ಎಲ್ಲ ಸಹಜ ಸ್ಥಿತಿಗೆ ಮರಳಲಿ ಎಂದು ಕೊಳ್ಳುತ್ತಿದ್ದೆವು.ಆಗಾಗ ಹೊರಗಿನ ತಿಂಡಿಗೆ ಮೊರೆಹೋಗುತ್ತಿದ್ದ ಮಕ್ಕಳಿಬ್ಬರು ಹೊರಗಿನ ವಿಷಮ ಸ್ಥಿತಿ ಕಂಡು ಮನೆಯಲ್ಲಿ ಏನಿದೆಯೋ ಅದನ್ನೇ ತಿನ್ನುತ್ತೇವೆ ನೀವು ಜಾಸ್ತಿ ಹೊರಗಡೆ ಹೋಗಬೇಡಿ ಎಂದು ಅಪ್ಪನಿಗೆ ಹೇಳುವಷ್ಟು ಬುದ್ಧಿವಂತರಾದರು.ಸೃಷ್ಟಿ ಯಾವಾಗ ಯಾವ ಪಾಠ ಕಲಿಸುತ್ತದೆಯೋ ಬಲ್ಲವರಾರು!?…ಆನ್ಲೈನ್ನಲ್ಲಿ ನಡೆದ ಹಲವಾರು ಸಾಹಿತ್ಯ,ಸಂಗೀತ ಸ್ಪರ್ಧೆಗಳಲ್ಲಿ ಮನೆಯವರೆಲ್ಲ ಸ್ಪರ್ಧಿಸಿ ಬಹುಮಾನ ಕೂಡ ಪಡೆದುಕೊಂಡೆವು.
ಇತ್ತೀಚಿನ ಕೆಲ ತಿಂಗಳುಗಳಿಂದ ಶುರುವಾದ ಹಲವಾರು ಸಾಹಿತ್ಯ ಮತ್ತು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕನ್ನಡ ನಾಡು ನುಡಿಯ ವೈಭವ, ಬರಹ,ಕವಿತೆಗಳನ್ನು ಕೇಳುವ ಸದಾವಕಾಶದಿಂದ ಮನಸ್ಸು ಚೇತರಿಸಿಕೊಂಡು ಸಂಭ್ರಮಿಸುತ್ತಿದೆ. ಒಳಿತು, ಕೆಡಕು ಏನೇ ಇದ್ದರೂ ನಮ್ಮವರೆಂಬ ಆತ್ಮೀಯರು ಜೊತೆಗಿದ್ದರೆ ಅದನ್ನೆದುರಿಸುವ ಶಕ್ತಿ ಮತ್ತು ಹಂಚಿಕೊಂಡು ಬಾಳುವ ರೀತಿಗೆ ಒಗ್ಗಿಕೊಂಡ ಮನುಷ್ಯ ಸಂಗಜೀವಿ.ಹಾಗಾಗಿಯೇ ನೋವು,ನಲಿವಿನಲ್ಲಿ ನಮ್ಮವರು ಸದಾ ಹತ್ತಿರ ಇರಬೇಕು ಎಂದು ಒಳಮನಸ್ಸು ಹಂಬಲಿಸುತ್ತದೆ.
ಸುಖ ದುಃಖ ಮಿಶ್ರಣದ ಮತ್ತೊಂದು ವರ್ಷಕ್ಕೆ ವಿದಾಯ ಕೋರುತ್ತಾ,ಬರುವ ದಿನಗಳಲ್ಲಿ ಇಡೀ ವಿಶ್ವ ಶಾಂತಿ,ಸಮೃದ್ಧಿ, ಸಂತಸದಿಂದ ನಲಿದಾಡಲಿ ಎಂದು ದೇವರಲ್ಲಿ ವಿನಂತಿಸಿಕೊಳ್ಳುತ್ತ ಕಳೆಯುತ್ತಿರುವ ವರುಷದ ಮಾಸದ ನೆನಪುಗಳೊಂದಿಗೆ ನವೀನ ವರುಷವನ್ನು ಹರುಷದಿಂದ ಸ್ವಾಗತಿಸೋಣ ಬಂಧುಗಳೆ!
–ಸರೋಜಾ ಶ್ರೀಕಾಂತ್ ಅಮಾತಿ
ಕಲ್ಯಾಣ್, ಮುಂಬೈ