ಹೊಸ ವರುಷಕೆ ಸೂರ್ಯ ನುದಯಿಸುವ ದಿಕ್ಕು ಬದಲಾಗಿದೆಯೆ? , ಹಕ್ಕಿಯ ಇಂಚರ ಬದಲಾಗಿದೆಯೆ?,
ಹೊಸ ವರುಷಕೆ ಸೂರ್ಯ ನುದಯಿಸುವ ದಿಕ್ಕು ಬದಲಾಗಿದೆಯೆ? , ಹಕ್ಕಿಯ ಇಂಚರ ಬದಲಾಗಿದೆಯೆ?, ಗಡಿಯಾರದ ಚಲನೆ ಬದಲಾಗಿದೆಯೆ?, ಎಲ್ಲವೂ ಯಥಾಸ್ಥಿತಿ. ನಮ್ಮ ಮನಸ್ಥಿತಿ, ಹೊರಗಿನ ಪರಿಸ್ಥಿತಿ ಎಲ್ಲವೂ ಯಥಾಸ್ಥಿತಿ, ಬದಲಾದದ್ದು ಕೇವಲ ವರುಷದ ಅಂಕಿ ಅದೂ ವ್ಯವಹಾರಿಕ ಜಗತ್ತಿಗೆ ಮಾತ್ರ.
ದಿನಚರಿ ಕೂಡಾ ಅದೇ ಬೆಳಿಗ್ಗೆ ಚಹಾ, ದಿನಪತ್ರಿಕೆ ಓದು, ಅದರಮೇಲೊಂದಿಷ್ಟು ಟಿಪ್ಪಣಿ, ತಿಂಡಿ, ಊಟ ,ನಿದ್ದೆ, ಎಲ್ಲವೂ ಅದೇ, ಅದೇ ಆಫೀಸು, ಅದೇ ಕೆಲಸ, ಅದೇ ಮನೆ , ಆದರೂ ಹೊಸ ವರುಷ ಬಂತೆಂದು ಸಂಭ್ರಮಿಸುವುದು ನೆಪ ಮಾತ್ರ.
ಬದಲಾಗದ ಮನಸು, ಬದಲಾಗದ ಕನಸು ಸಮಯದ ಚಲನೆಗೂ ತನ್ನದೆ ಓಟ , ಕರಗುತಿರುವುದು ಆಯಸ್ಸಿನ ಗಂಟು . ಮೊನ್ನೆಯಂತೆ ನಿನ್ನೆಯಿಲ್ಲ , ನಿನ್ನೆಯಂತೆ ಇಂದಿಲ್ಲ, ಇಂದಿನಂತೆ ನಾಳೆಯಿಲ್ಲ. ಕಳೆದ ಸಮಯ ತೃಪ್ತಿ ತಂದಿದೆಯೆ, ಸಾರ್ಥಕತೆ ಕಂಡಿದೆಯೆ , ಯಾವುದರ ಬೆಂಬತ್ತಿದೆ ಈ ಜಗ ಅರೆ ಘಳಿಗೆ ನಿಲ್ಲುವಾ ವಿರಮಿಸುವಾ …ಅಸ್ಮಿತೆಯ ಹುಡುಕಾಟ , ಕಾಣದ ಬದುಕಿಗೆ ಹಂಬಲಿಸಿದೆ ಮನ .
ಆಯುಷ್ಯದ ಚಕ್ರ ನಿಲ್ಲದೆ ಓಡುತಿದೆ ಅದರ ಸಾರ್ಥಕತೆಯ ಗುಟ್ಟನ್ನು ಬಸವಣ್ಣನವರು ಹೇಳುವರು….
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು , ಹೊತ್ತು ಹೋಗದ ಮುನ್ನ ಮೃತ್ಯು ಮುಟ್ಟದ ಮುನ್ನ ತೊತ್ತುಗೆಲಸವ ಮಾಡು ಕೂಡಲಸಂಗಮದೇವನ
ಎಲ್ಲರೂ ಹುಟ್ಟುವರು ಅದೇ ಅರ್ಥವಿಲ್ಲದ ಬಾಳನ್ನು ಬಾಳುವರು ಮತ್ತೆ ಲಯವಾಗುವರು . ಹುಟ್ಟಿ ಅಳಿಯುವ ಮಧ್ಯದ ಬದುಕು ಅದು ತನ್ನ ಸಾರ್ಥಕತೆಯನ್ನು ಕಾಣಬೇಕು. ಸಕಲರ ಒಳಿತಿಗಾಗಿ ಮಿಡಿಯುವ, ದುಡಿಯುವ ಹೃನ್ಮನಗಳು ಅಮರ. ಈ ದೇಹದ ಅಂತ್ಯವು ಸೃಷ್ಟಿಯ ಸಹಜ ಕ್ರಿಯೆ ಆದರೆ ಈ ದೇಹ ಅಂತ್ಯವಾಗುವ ಮುನ್ನ ಸತ್ಯದ ನಿಲುವನರಿತು ಬಾಳುವುದೇ ಶರಣರ ಬದುಕು.
ಕ್ರಿಮಿ ಕೀಟಗಳು ಹುಟ್ಟುವವು ಸಾಯುವವು , ಬಳಕೆಗೆ ಬಾರದ ಕಬ್ಬಿಣ ಕೂಡಾ ತುಕ್ಕು ಹಿಡಿದು ನಷ್ಟವಾಗುವುದು ಹಾಗೆಯೆ ಬದುಕು ಹೇಗೆ ವ್ಯರ್ಥವಾಗಿ ಕಳೆಯುತಿದೆ ಎಂದು ಅಲ್ಲಮರು ಹೇಳುವರು .
ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ , ಕತ್ತಲೆಯಾಯಿತ್ತ ಕಂಡು ಮಜ್ಜನಕ್ಕೆರೆವರಯ್ಯಾ …
ಕಾಯ ಒಂದು ದೆಸೆ ಜೀವ ಒಂದು ದೆಸೆ, ಗುಹೇಶ್ವರನೆಂಬ ಲಿಂಗ ತಾನೊಂದು ದೆಸೆ.
ಬೆಳಗಾಗೆದ್ದ ಕೂಡಲೆ ಹೊಟ್ಟೆ ಪಾಡಿಗಾಗಿ ಚಿಂತೆ, ಏನು ಉಣ್ಣಲಿ, ಏನು ಉಡಲಿ, ಏನು ಮಾಡಲಿ ಎಲ್ಲದರ ಚಿಂತೆ , ಕತ್ತಲೆಯಾದ ಬಳಿಕ ನಿದ್ದೆ ಸ್ನಾನ, ಪೂಜೆ ಮತ್ತದೇ ಚಕ್ರ ಇದು ಲಿಂಗದ ನೇಮವೆ ?, ಹಗಲಿನಲ್ಲಿ ಭವಸಂಸಾರದ ಚಿಂತೆ ಇರುಳಿನಲ್ಲಿ ಪರದ ಚಿಂತೆ ಇದು ಲಿಂಗದ ನೇಮವೇ , ಕಾಯದ ಬದುಕು ಒಂದೆಡೆ ಜೀವದ ಆಸೆ ಮತ್ತೊಂದೆಡೆ ಇಂತಹ ಸಮಯದ ಪರಿಧಿಗೆ ಸಿಲುಕಿದವರು ಲಿಂಗದ ನೆಲೆಯರಿಯಲು ಸಾಧ್ಯವಿಲ್ಲ.
ಲೋಕದ ಭಜನೆಯಲ್ಲಿ ಸಿಲುಕಿ , ಇದ್ದೂ ಇಲ್ಲದಂತೆ ಬದುಕುವ ಪರಿ ಅವರೊಬ್ಬ ಕುರಿ ಹಿಂಡಿನೊಳಗಿನ ಕುರಿಯಂತೆ ಎಂದು ಅಲ್ಲಮರು ನುಡಿವರು..
ಅಗ್ಗವಣಿ , ಧೂಪ, ದೀಪ ನಿವಾಳಿಯಲ್ಲಿ , ಪೂಜಿಸಿ ಪೂಜಿಸಿ ಬಳಲುತ್ತಿದಾರೆ ಏನೆಂದರಿಯರು ಎತೆಂದರಿಯರು , ಜನ ಮರಳೋ ಜಾತ್ರೆ ಮರುಳೋ ಎಂಬಂತೆ ಎಲ್ಲರೂ ಪೂಜಿಸಿ ಏನನೂ ಕಾಣದೆ ಲಯವಾಗಿ ಹೋದರು ಗುಹೇಶ್ವರಾ
ಎಂಥ ಅದ್ಬುತ ನುಡಿ, ಎಲ್ಲರೂ ಲಿಂಗದ ಮೇಲೆ ಅಗ್ಗವಣಿ ಹಾಕುವರು ,ಧೂಪ ದೀಪ ಹಚ್ಚುವರು ಎಲ್ಲರೂ ಮಾಡಿದ್ದನ್ನು ಮಾಡುವರು ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಎಷ್ಟು ವರುಷ ಕಳೆದರೇನು ಗುರಿಯನರಿಯರು ಗಮ್ಯವನರಿಯರು ಅರ್ಥವಿಲ್ಲದೆ ಪೂಜಿಸಿ ವ್ಯರ್ಥವಾಗಿ ಬಳಲುತಿರುವರು . ಹಾಗೆಯೇ ಸವೆದು ಹೋಗುತ್ತಿದೆ ಆಯುಷ್ಯವೆಂಬ ಬಂಡಿ.
ಅರ್ಥಪೂರ್ಣವಾಗಿ ಬದುಕುವ ಬದುಕಿನ ರಹಸ್ಯ ಅಡಗಿದೆ ಸಮಷ್ಟಿಯ ನೆಲೆಯಲ್ಲಿ , ಇದೇ ಶರಣರು ಕಂಡುಕೊಂಡ ಮೌಲ್ಯ , ಬಾಳಿದ ಆದರ್ಶ. ಇಂತಹ ಬದುಕು ಸಾರ್ಥಕ ಬದುಕು . ಹೊತ್ತು ಹೋಗದ ಮುನ್ನ ಮೃತ್ಯು ಮುಟ್ಟದ ಮುನ್ನ ತೊತ್ತುಗೆಲಸವ ಮಾಡು ಕೂಡಲಸಂಗಮದೇವನ ಎಂಬ ಸಾಲುಗಳು ದೇಹ ಅಳಿಯುವ ಮುನ್ನ ಜಗದ ಒಳಿತಿಗಾಗಿ ಮಿಡಿಯುವ ಬದುಕೇ ಲಿಂಗಮಯ ಲಿಂಗತನ್ಮಯ ಸಾರ್ಥಕ ಬದುಕಿನ ಮುನ್ನುಡಿಯಾಗಿವೆ.
ಕಳೆದು ಹೋದ ಸಮಯಕ್ಕೆ ಕೊರಗದೆ ಕಳೆಯುವ ಬದುಕಿಗೆ ರೆಕ್ಕೆ ಹಚ್ಚಿ ನಿಸ್ವಾರ್ಥದ ಬಾನಂಗಳದಲಿ ಹಾರುವ ಆಶಯಗಳೇ ಹೊಸ ಬದುಕಿನ ಮುನ್ನುಡಿ.
-′ಸುನಿತಾ ಮುರಶಿಳ್ಳಿ ಧಾರವಾಡ