ಹೊಸತು ವರುಷ ಮತ್ತೆ ಬರಲಿ
ಹೊಸತು ವರುಷ ಮತ್ತೆ ಬರಲಿ
ಬದುಕ ಭಾರ ಜೀಕಿ ಜೀಕಿ
ಸವೆದ ಜೀವಗಳಿಗೆ
ಹೊಸತು ಹರುಷ ನಿತ್ಯ ತರಲಿ
ನೊಗ ಹೊರಲು ಭುಜ ಕೊಡುವ
ಶುದ್ಧ ಉತ್ಸಾಹಿಗಳಿಗೆ
ಕರ್ಮಯೋಗಿ ರಾಶಿ ತೂರಿ
ಸುಗ್ಗಿ ಹಾಡು ಹಾಡಲಿ
ಮಡದಿ ಮಕ್ಕಳೊಡನೆ ಕೂಡಿ
ಮೂಟೆ ಮೂಟೆ ತುಂಬಲಿ
ಗಾನಯೋಗಿ ನೋವ ಮರೆತು
ಹೊಸತು ಹಾಡು ಹಾಡಲಿ
ಜಗವು ಕೇಳೆ ಹೊಸತು ರಾಗ
ತಲೆದೂಗುತ ನಲಿಯಲಿ
ಜ್ಞಾನಯೋಗಿ ಜಗದ ಪಾಪ
ತೊಳೆವ ಕೆಲಸ ಮಾಡಲಿ
ಪ್ರೀತಿ-ಸ್ನೇಹ ಒಂದೆ ಸಾಕು
ಬೇರೆ ಮದ್ದು ಏಕೆ ಬೇಕು
ಎಂಬ ಮಾತು ಸಾರಲಿ.
ತೃಣಕು ತುಣುಕು ಅಣುವೇ ಸ್ಪೂರ್ತಿ ಜಗವನಾಳ್ವೆ ಎನುತಿದೆ
ನಿಜದ ಮೂಲ ಮಹಾ ಮಂತ್ರ
ಪ್ರೀತಿ-ಸ್ನೇಹ ಎನ್ನದೇ
ಪಾರುಪತ್ಯ ನೋಡುವವಗೆ
ಕಾಣುತಿಹುದು ಶಾಂತಿ ನೆಮ್ಮದಿಯ ಕೊರತೆ
ಎದುರಿಗಿರುವ ವರುಷ ಪೂರ್ತಿ
ಬತ್ತದಿರಲಿ
ಪ್ರೀತಿ-ಒಲವಿನೊರತೆ.
✍️ ಆದಪ್ಪ ಹೆಂಬಾ ಮಸ್ಕಿ