ಹೊಸವರ್ಷಕೆ ಹೊಸಸಂಕಲ್ಪ

 

ಹೊಸವರ್ಷಕೆ ಹೊಸಸಂಕಲ್ಪ

ಕಳೆದ ವರ್ಷವನ್ನು ಬೀಳ್ಕೊಡುತ್ತಾ ಹೊಸ ವರ್ಷವನ್ನು ಸ್ವಾಗತಿಸೋಣ. ಜನೇವರಿ ತಿಂಗಳು ಬರುತ್ತಿರುವಂತೆ ಜನರಲ್ಲಿ ಅದೇನೋ ಉತ್ಸಾಹ ಸಂಭ್ರಮ. ನವವಧುವನ್ನು ಮನೆತುಂಬಿಕೊಳ್ಳುವ ತೆರದಿ ಹೊಸವರ್ಷವನ್ನು ಬರಮಾಡಿಕೊಳ್ಳುವದಕ್ಕೆ ತುದಿಗಾಲಲ್ಲಿ ನಿಲ್ಲುವ ಯುವ ಜನ‌ ಡಿಸೆಂಬರ್ ೩೧ ರ ರಾತ್ರಿಯಿಂದಲೇ ಆಚರಣೆ ಪ್ರಾರಂಭಿಸುವರು. ಅದಕ್ಕೆ ಸಾಕಷ್ಟು ಪೂರ್ವ ತಯ್ಯಾರಿ. ಬೆಂಗಳೂರಿನಂತಹ ಮೆಟ್ರೊ ಪೊಲಿಟನ್ ಸಿಟಿಗಳಿಗೆ ಸೀಮಿತವಾಗಿದ್ದ ಸಂಭ್ರಮಾಚರಣೆ ಇಂದು ಸಣ್ಣ ಸಣ್ಣ ಊರಿಗಳಿಗು ವ್ಯಾಪಿಸಿರುವದು ಸಂತಸ ಪಡುವಂಥದ್ದೋ ಬೇಸರದ ಸಂಗತಿಯೋ ತಿಳಿಯುತ್ತಿಲ್ಲ.‌ ರಸ್ತೆಗಳೆಲ್ಲ ದೀಪಾಲಂಕಾರದಿಂದ ಶೃಂಗಾರಗೊಂಡು ಝಗಮಗ ಎನ್ನುತ್ತಿರುತ್ತವೆ. ಹೊಟೆಲ್ ಗಳು ಕೂಡ ಪೈಪೋಟಿಯಿಂದ ಹೊಸವರ್ಷ ಸ್ವಾಗತಿಸಲು ಯುವ ಜನತೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಆಟ, ಊಟ, ಕೇಕ್ ಕತ್ತರಿಸುವದು, ಹಾಡು ಡಾನ್ಸ ಹೀಗೆ ಎಲ್ಲ ವ್ಯವಸ್ಥೆ ಮಾಡಿರುತ್ತಾರೆ. ಕಂಠಪೂರ್ತಿ ಕುಡಿದು, ಡಿಜೆ ಹಾಕಿ ಕುಣಿದು ಕುಪ್ಪಳಿಸಿ ಉನ್ಮಾದದಲ್ಲಿ ಸಂತಸ ಪಡುವರು. ಸರಿಯಾಗಿ ರಾತ್ರಿ ೧೨ ಕ್ಕೆ ದೀಪ ಆರಿಸುವದು. ಚೀರಾಟ ಕೂಗಾಟ ತಾರಕಕ್ಕೇರಿಸುವದು. ಇದು ನಮ್ಮ ಸಂಸ್ಕೃತಿಯೆ.
ಕುಣಿದರು, ಕುಣಿಯದಿದ್ದರೂ ಹೊಸ ವರ್ಷ ಬಂದೇ ಬರುತ್ತದೆ. ಜನೇವರಿ ಕ್ಯಾಲೆಂಡರ್ ವರ್ಷ. ಭಾರತೀಯರಿಗೆ ಯುಗಾದಿ ಹೊಸವರ್ಷ. ನಮ್ಮ ಹಬ್ಬಗಳ ಆಚರಣೆಯ ರೀತಿ ನೀತಿಗಳೆ ಬೇರೆ.
ಕಳೆದ ವರ್ಷದಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ
ವ್ಯಯಕ್ತಿಕ ಹಾಗು ಸಮಾಜದ ದೃಷ್ಟಿಯಿಂದ ಕೆಲವು ಸಂಕಲ್ಪಗಳನ್ನು ಮಾಡಿದರೆ ಹೇಗೆ? ಇವೆಲ್ಲ ನಮ್ಮ ಕೈಲಾಗುವ ಸಣ್ಣ ಸಣ್ಣ ವಿಚಾರಗಳೆ. ಹೊಸವರುಷವನ್ನು ಹೊಸ ಭರವಸೆಗಳೊಂದಿಗೆ, ಹೊಸ ಕನಸುಗಳೊಂದಿಗೆ ಸ್ವಾಗತಿಸಲು ಸಜ್ಜಾಗೋಣ

೧. ಹಿರಿಯರಾದವರು ಮಕ್ಕಳಿಗೆ ನಮ್ಮ ಹಬ್ಬಗಳ ಆಚರಣೆಯ ಪೌರಾಣಿಕ ಹಿನ್ನೆಲೆ ಹಾಗು ಅವುಗಳ ವೈಜ್ಞಾನಿಕ ಮಹತ್ವ ತಿಳಿಸುವದು.

೨.ಮಕ್ಕಳು ಹಿರಿಯರನ್ನು ಗೌರವಿಸುವದು. ಅವರ ಜೊತೆ ಸ್ವಲ್ಪ ಸಮಯ ಕಳೆಯುವದು.

೩. ಸಾಧ್ಯವಾದಷ್ಟು ಮನೆಯವರೆಲ‌್ಲ‌ ಒಟ್ಟಿಗೆ ಸೇರಿ‌ ಊಟ ಮಾಡುವದು, ವಿಚಾರ ವಿನಿಮಯ ಮಾಡಿಕೊಳ್ಳುವಲ್ಲಿ ಬೇರೆಯರ ಅಭಿಪ್ರಾಯಗಳಿಗೆ ಬೆಲೆ ಕೊಡುವದು.

೪.ನೆರೆ ಹೊರೆಯವರ ಕಷ್ಟಕ್ಕಾಗುವದು. ಒಟ್ಟಗಿರುವದು.

ಇಂದು ಕಂಡು‌ ಕೇಳರಿಯದ ರೋಗಾಣುಗಳಿಂದಾಗಿ ಜನರ ಜೀವನ ಮೌಲ್ಯ‌ ಕುಸಿದಿದೆ. ಆತ್ಮಾವಲೋಕನಕ್ಕೆ ಸಮಯ ಬಂದಿದೆ. ಈ ನಿಟ್ಟಿನಲ್ಲಿ

೫. ಆಸ್ತಿ ಮಾಡುವದಕ್ಕಿಂತ ಆರೋಗ್ಯದ ಕಡೆ ಗಮನ ಹರಿಸುವದು.ಅದಕ್ಕಾಗಿ ನಿಯಮಗಳನ್ನು ಪಾಲಿಸುವದು. ನಮಗಾಗಿ ಯೋಗ, ವಾಕ್ ಮುಂತಾದುವಕ್ಕೆ ಸಮಯ ಮೀಸಲಿಡುವದು.

೬.ಆಚರಿಸುವ ಪ್ರತಿ ಹಬ್ಬಕ್ಕೂ ಒಂದೊಂದು ಗಿಡನೆಟ್ಟು, ಸಂರಕ್ಷಿಸಿ ಬೆಳಸುವ ನಿರ್ಧಾರ.

೭. ನೀರಿಲ್ಲದ ಬದುಕು ಊಹೆಗು ನಿಲುಕದ್ದು. ಒಂದೊಂದು ಹನಿಯನ್ನು ಶೇಖರಿಸಿಡುವದು ಸಮಾಜ ಜೀವಿಗಳಾದ ಎಲ್ಲರ ಕರ್ತವ್ಯ. ಅದಕ್ಕಾಗಿ ನೀರು ಚೆಲ್ಲಿ ಪೋಲಾಗದಂತೆ‌ ನೋಡಿಕೊಳ್ಳುವದು.

೮. ವಿದ್ಯುತ್ ನ ಮಿತಬಳಕೆ‌ ಮತ್ತು ಪೋಲಾಗದಂತೆ ನೋಡಿಕೊಳ್ಳುವದು.

೯. ಪ್ಲಾಸ್ಟಿಕ್ ಬಳಕೆಯನ್ನು ಮಾಡದಿರುವದು.

೧೦. ಕಸ ನಿರ್ವಹಣೆಯಲ್ಲಿ‌ ನಮ್ಮ ಕರ್ತವ್ಯ ಪಾಲಿಸುವದು.

ಇವೆಲ್ಲ ಚಿಕ್ಕ‌ಪುಟ್ಟ ನಮ್ಮಿಂದಲೆ, ನಮಗಾಗಿ ಮಾಡುವ ಸಂಕಲ್ಪಗಳು. ಇದರಿಂದ ವ್ಯಕ್ತಿಗತ ಬೆಳವಣಿಯೊಂದಿಗೆ ಸಮಾಜದಲ್ಲಿ, ದೇಶದಲ್ಲಿ ಸಕಾರಾತ್ಮಕ ಬದಲಾವಣೆ ಆಗಬಹುದೆಂಬ ಸದಾಶಯ.
೨೧ ನೇ ಶತಮಾನಕ್ಕೂ ಅನ್ವಯವಾಗುವ ೧೨ ನೇ ಶತಮಾನದಲ್ಲೇ ಬಸವಣ್ಣನವರು ಹೇಳಿದ ಸಪ್ತ ಸೂತ್ರಗಳ ವಚನ:

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ, ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ,ಇದಿರು ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವರನೊಲಿಸುವ ಪರಿ.
ಇದರಲ್ಲಡಗಿರುವ ತತ್ವಗಳನ್ನೇ ಎಲ್ಲರು ತಮ್ಮ‌ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರೆ ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚು ಕಳೆ ಹಾಗು ಅರ್ಥಪೂರ್ಣ.

ಶಾರದಾ ಕೌದಿ
ಧಾರವಾಡ
8951491838

Don`t copy text!