ಅಕ್ಷರದವ್ವನಿಗೆ ಅಕ್ಷರ ನಮನಗಳು.
ಕ್ರಾಂತಿಜ್ವಾಲೆ ಸಾವಿತ್ರಿ ಬಾಯಿ ಪುಲೆ.
ರೀತಿ ರಿವಾಜುಗಳ ಧಿಕ್ಕರಿಸಿ
ಪರಂಪರೆಗೆ ಪ್ರಶ್ನೆಯೊಡ್ಡಿದೆ
ಸನಾತನ ವ್ಯವಸ್ಥೆಯ ವಿರುದ್ಧ
ಸಿಡಿಲ ಕಿಡಿಯಾದೆ!
ಧರ್ಮಶಾಸ್ತ್ರ ಕಂದಾಚಾರಗಳ
ಗರ್ಭದಲ್ಲಿ ಹೂತು ಹೋಗಿದ್ದ
ಹೆಂಗೂಸುಗಳನೆತ್ತಿ
ಅಸ್ಮಿತೆಯ ಉಸಿರನಿತ್ತೆ!
ಶೋಷಿತರ ಎದೆಯೊಳಗೆ
ಶಿಕ್ಷಣದ ಸ್ವರ ಮಿಡಿದೆ
ಜಾತಿ ಕುಲಗಳ ಬೇಡಿ
ಕಿತ್ತೆಸೆದು ಸಮತೆಯ
ಕಂಕಣ ತೊಡಿಸಿದೆ!
ಅವ್ವಾ,
ನೀನೆಷ್ಟು ಕರುಣಾಮಯಿ
ಮೇಲೆಸೆದ
ಕಲ್ಲು ಕೆಸರು ಸಗಣಿಗಳೆ
ಹೂಹಾರ ಪಚ್ಚೆ ಪದಕವೆಂದೆ
ಪೀಡನೆಗಳ ಪರಿಪರಿಯಾಗಿ
ಸಹಿಸಿಕೊಂಡೆ!
ದಮನಿತರ ದನಿಯಾಗಿ
ಹಂಗಿಲ್ಲದ ಬದುಕಿಗೆ
ಬೆಂಗಾವಲಾದೆ
ಅನ್ಯಾಯದ ವಿರುದ್ಧ
ಸಿಡಿದೆದ್ದ ಕ್ರಾಂತಿಜ್ವಾಲೆ
ಸಾವಿತ್ರಿ ಬಾಯಿ ಪುಲೆ!
–ಇಂದುಮತಿ ಅಂಗಡಿ ಇಳಕಲ್ಲ.