ಪುಸ್ತಕ ಪರಿಚಯ
ಮಕ್ಕಳನ್ನು ಸೆಳೆಯುವ ಸೋನಪಾಪುಡಿ
ಸೋನಪಾಪಡಿ(ಮಕ್ಕಳ ಪದ್ಯಗಳು)
ಲೇಖಕರು:ರಾಜಶೇಖರ ಕುಕ್ಕುಂದಾ
ಪ್ರಕಾಶಕರು: ಕನ್ನಡ ನಾಡು ಲೇಖಕರ ಹಾಗೂ ಓದುಗರ
ಸಹಕಾರ ಸಂಘ ನಿ. ಕಲಬುರಗಿ-೫೮೫೧೦೫
ಬೆಲೆ:೭೫/-
ಬೆಳಗಾಗುತ್ತಲೆ
ಬೆಳಗಿನ ತಿಂಡಿಗೆ
ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು
ಅಂಕಲ್ ಆಂಟಿಯ
ಸಂಜೆಯ ತಿಂಡಿಗೂ
ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು
ಬಾಪೂ ನೆಹರೂ
ಹುಟ್ಟು ಹಬ್ಬಕ್ಕೂ
ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು
ಸ್ವಾತಂತ್ರö್ಯದ ದಿನ
ಆಚರಣೆಗೂ
ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು
ಅಕ್ಕನ ನೋಡಲು
ಬಂದವರಿಗೂ
ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು
ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು
ನನಗೋ ತಿಂದು ತಲೆಚಿಟ್ಟು
ಉಪ್ಪಿಟ್ಟುಪ್ಪಿಟ್ಟುಪ್ಪಿಟ್ಟು
ನೀ ಯಾಕಿಷ್ಟು ಫೆವರಿಟ್ಟು
ಇಂತಹ ಮಕ್ಕಳನ್ನು ಸೆಳೆಯುವ, ಕುಣಿದು ಹಾಡಬಹುದಾದ..ಸದಾ ಮನದಲ್ಲಿ ಉಲಿಯಬಹುದಾದ, ದೊಡ್ಡವರಿಗೂ ಖುಷಿಕೊಡಬಹುದಾದ ಪದ್ಯಗಳನ್ನು ‘ಸೋನ ಪಾಪುಡಿ’ಯ ಮೂಲಕ ಕಟ್ಟಿಕೊಟ್ಟವರು ನಾಡಿನ ಹಿರಿಯ ಮಕ್ಕಳ ಕವಿ ರಾಜಶೇಖರ ಕುಕ್ಕುಂದಾ ಅವರು. ಮೂಲತಃ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕುಕ್ಕುಂದದವರಾದ ಶ್ರೀಯುತರು ಪ್ರಸ್ತುತ ಬಾಗಲಕೋಟೆಯ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನವ್ಯೊತ್ತರ ಕಾಲದ ಸಂದರ್ಭದಲ್ಲಿ ಮಕ್ಕಳ ಕಾವ್ಯವೂ ಬದಲಾಗಬೇಕು ಎನ್ನುವ ಹಲವು ವಾದವಿದ್ದರೂ ಮಕ್ಕಳ ಮನಸ್ಥಿತಿ ಬದಲಾಗಿದೆಯೆ…?ಕಾವ್ಯ ಎನ್ನುವುದೆ ಮಕ್ಕಳಿಗೆ ಹೊಸತಾಗಿರುವಾಗ ಅವರ ಭಾಷೆಯಲ್ಲಿ ಬರೆದಾಗಲೆ ಒಗ್ಗುವುದಲ್ಲವೇ? ಎನ್ನುವ ಪ್ರಶ್ನೆಗಳು ಏಳುತ್ತವೆ. ‘ಶುದ್ಧವಾದ ಜೇನು ಹೇಗೆ ನೂರಾರು ವರ್ಷವಿಟ್ಟರೂ ಕೆಡುವುದಿಲ್ಲವೊ ಹಾಗೆ ಮಕ್ಕಳ ಪದ್ಯಗಳು ರೂಪ ತಳೆಯಬೇಕು’ ಎನ್ನುವ ತಮ್ಮದೆ ನಿಲುವಿನ ಕುಕ್ಕುಂದ ಅವರು ನವ್ಯೋತ್ತರ ಸಂದರ್ಭದಲ್ಲಿದ್ದುಕೊಂಡು ತಾರ್ಕಿಕ ಚಿಂತನೆಗೆ ಹಚ್ಚುವ, ಹೊಸ ಪ್ರಜ್ಞೆ ಬೆಳೆಸುವ, ಗೇಯತೆ, ಪ್ರಾಸ ಹಲವನ್ನು ಒಟ್ಟು ಗೂಡಿಸಿ ಇಂದಿನ ಮಕ್ಕಳ ಆಶಯದ ಮನಸೂರೆಗೊಳಿಸುವ ಪದ್ಯಗಳನ್ನು ಇಲ್ಲಿ ಸಂಕಲಿಸಿದ್ದಾರೆ.
ನಾಯಿ ಒದರ್ತಾ ಇದ್ರೆ
ಬೌಬೌಬೌ
ರೊಟ್ಟಿ ಬೇಕಾಗಿರುತ್ತೆ
ತಿನ್ಸಿ ತಿನ್ಸಿ ತಿನ್ಸಿ
ಹೀಗೆ ಮುಂದುವರೆದು ಬೆಕ್ಕು ಕಪ್ಪೆ ಆದ ಮೇಲೆ
ಅಪ್ಪಾ ಒದರ್ತಾ ಇದ್ರೆ
ರ‍್ರ ರ‍್ರ ರ‍್ರ
ಅಮ್ಮ ಬೈದಿರ್ತಾಳೆ
ರಮ್ಸಿ ರಮ್ಸಿ ರಮ್ಸಿ
ಎಂದು ಮಕ್ಕಳಿಗೂ ಅರಿವಿರುವ ವಿಷಯವನ್ನು ನಡುವೆ ತಂದು ನಗೆ ಚೆಲ್ಲಿಸುತ್ತಾರೆ.
ಸ್ಕೂಲೆ ಇರ್ಬಾದು ಎನ್ನುವ ಪದ್ಯದಲ್ಲಿ
ಯಾಕೊ ನಮ್ಗೆ
ಹೀಗನಿಸುತ್ತೆ
ಸ್ಕೂಲೆ ಇರ್ಬಾದು
ಸ್ಕೂಲ್ ಇದ್ರನೂ
ತಲೆನೋವಂತ
ಮಿಸ್ಸೆ ಬರಬಾದು!
ಮಿಸ್ ಬಂದ್ರೂನು
ಆಟಾ ಆಡ್ಸಿ
ಹೇಳ್ಬೇಕಪ್ಪ ಕತಿ
ದಿನಾ ಇಡೀ
ಪಾಠ ಕೊರದ್ರೆ
ಹೇಳಿ ನಮ್ದೇನ್ಗತಿ!
ಇದು ಆಡೋ ವಯಸ್ಸಲ್ಲಿ ಓದಿ ಓದಿ ಎಂದು ಬೆಂಬತ್ತಿದ ಶಿಕ್ಷಣ ವ್ಯವಸ್ಥೆಗೆ, ಪಾಲಕರಿಗೆ ಹಿಡಿದ ಕನ್ನಡಿ
ಸೋನಪಾಪಾಡಿ
ಸೋನ ಪಾಪಡಿ
ತಂದವರ್ಯಾರು
ಊರಿನ ಸುದ್ದಿ
ಹೇಳ್ತಿದ್ರಲ್ಲ
ಅಮ್ಮನ ಫ್ರೆಂಡು
ಎನ್ನುತ್ತಾ
ಸೋನಪಾಪಾಡಿ
ಸೋನ ಪಾಪಡಿ
ತಿಂದವರ್ಯಾರು
ಆನ್ಲೆöÊನ್ ಪಾಠ
ನಡೀತಿರ್ವಾಗ
ನಾನೆ ಮತ್ಯಾರು?
ಇದು ಮಕ್ಕಳಿಗೆ ಖುಷಿ ನೀಡುವ ಪದ್ಯದ ಜೊತೆಗೆ ಆನ್‌ಲೈನ್ ತರಗತಿಗಳ ವ್ಯಂಗವೂ ಹೌದು…ಈ ಪದ್ಯ ಓದುತ್ತಾ ಮಕ್ಕಳು ತಾವು ಆನ್‌ಲೈನ್ ಪಾಠ ಕೇಳುವ ಸಂದರ್ಭದಲ್ಲಿ ಮಾಡಿದ್ದನ್ನು ಸ್ಮರಿಸಿ ನಗುವುದಂತೂ ಖಂಡಿತ,
ಮೇಲೆ ಉದಾಹರಿಸಿದ ಪದ್ಯಗಳ ಜೊತೆ ವಾಸ್ತವದ ನೆಲೆಗಟ್ಟಿನಲ್ಲಿ ಬರೆದ ರಿದಮ್ ಇರುವ ’ನನ್ನ ಸೈಕಲ್ಲು’ ‘ಎಂಥ ವಿಚಿತ್ರ’ ‘ಅಜ್ಜಿ ಮೊಮ್ಮU’À ’ನಾನಲ್ಲ ನಾನಲ’್ಲ ’ಚಿಂಟೂಮಾಮಾ’ ‘ಗುಬ್ಬಿ ಗುಬ್ಬಿ’ ‘ಮಳೆ ಮೋಡ’ ನಮ್ಮ ಭಾಗದ ಭಾಷೆಯ ‘ಚಿಕ್ಯಾ ಚಿಕ್ಯಾ ಎಲ್ಲೋದ’ ಆಟಕ್ಹೋಗಣ್ವಾ’ ಉಳಿದ ಎಲ್ಲಾ ಪ್ರಾಸ ಪದಗಳು ಮತ್ತೊಮ್ಮೆ ರಾಜರತ್ನಂ, ದಿನಕರ ದೇಸಾಯಿ, ಸಿದ್ಧಯ್ಯ ಪುರಾಣಿಕ, ಹೆಚ್.ಎಸ್ವಿ, ಲಕ್ಷ್ಮೀನಾರಾಯಣ ಭಟ್ಟರ ಪದ್ಯಗಳಷ್ಟೆ ನೆನಪುಳಿಯುವಂತೆ ಮಾಡುತ್ತದೆ.
ಕಲಬುರುಗಿಯ ಕನ್ನಡ ನಾಡು ಪ್ರಕಾಶನ ಪ್ರಕಟಿಸಿದ ಸದರಿ ಕೃತಿಗೆ ಡಾ.ಚಿಂತಾಮಣಿ ಕೊಡ್ಲೆಕೆರೆ ಬೆನ್ನುಡಿ ಬರೆದಿದ್ದಾರೆ. ಹೆಸರಾಂತ ಮಕ್ಕಳ ಚಿತ್ರಕಲಾವಿದ ಸಂತೋಷ ಸಸಿಹಿತ್ಲು ಅವರ ಚಂದದ ಚಿತ್ರಗಳಿವೆ..ವಿನಯ್ ಸಾಯ್ ಮುಖಪುಟವನ್ನು ಸೊಗಸಾಗಿ ಮುಖಪುಟ ವಿನ್ಯಾಸ ಮಾಡಿದ್ದಾರೆ. ಪಾಲಕರು, ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಹುಟ್ಟಿಸಬೇಕೆನ್ನುವ ಮನಸ್ಸುಗಳು ಮನೆಗೊಯ್ದರೆ ಸಾಕು ಕಣ್ಣಿಗೆ ಬಿದ್ದ ಮಕ್ಕಳು ಓದದೆ ಇರವು..ನೀವು ಓದಿ ಹೇಳಿದರಂತೂ ಸಕ್ಕರೆಗೆ ಇರುವೆ ಮುಕ್ಕುವಂತೆ ಸೋನ ಪಾಪಡಿಗೂ ಮುಗಿಬೀಳದೆ ಇರರು…ಮಕ್ಕಳ ಹೊಸ ಆಶಯಗಳ ಹಿನ್ನಲೆಯಲ್ಲಿ ಬರೆದಿರುವ ಸೊನಪಾಪಡಿ ಎಲ್ಲರ ಮನೆಗಳ ಮಕ್ಕಳ ಬಾಯಿಯನ್ನು ಚಪ್ಪರಿಸಲಿ.
– ಗುಂಡುರಾವ್ ದೇಸಾಯಿ, ಮಸ್ಕಿ