ಜನಪದ ಕೃಷ್ಣ ಪಾರಿಜಾತಕ್ಕೆ ಹೊಸ ಆಯಾಮ ನೀಡಿದ್ದ ಬಸವಲಿಂಗಯ್ಯ ಹಿರೇಮಠ ಅವರಿಗೆ ದುಃಖದ ವಿದಾಯ..
ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರಿನ ಹಿರೇಮಠರು ಜಾನಪದ ವಿಷಯದಲ್ಲಿ ಎಂ.ಎ. ಪದವೀಧರರಾಗಿದ್ದರು.
1983ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದು, ಬಿ.ವಿ.ಕಾರಂತರೊಂದಿಗೆ ರಂಗಸಂಗೀತ ಕುರಿತು ಅಭ್ಯಾಸ ಮಾಡಿ, ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದರು.
ಇವರ ರಚನೆಯ ಪರಿಷ್ಕೃತ ರಂಗರೂಪ-‘ಶ್ರೀಕೃಷ್ಣ ಪಾರಿಜಾತ’ ದೇಶ ವಿದೇಶಗಳಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ನಟ, ಗಾಯಕ, ಸಂಗೀತ ನಿರ್ದೇಶನ ಹೀಗೆ ಹತ್ತು ಹಲವು ವಲಯದಲ್ಲಿ ಕೃಷಿ ಮಾಡಿದ್ದು, ದಾಸ, ಶರಣ, ತತ್ವಪದಗಳು, ಬಯಲಾಟ ಈ ಎಲ್ಲ ಪ್ರಕಾರದ ಸಾಹಿತ್ಯವನ್ನು ವಿದೇಶದಲ್ಲೂ ಪ್ರಚಾರ-ಪ್ರಸಾರ ಮಾಡಿದ ಕೀರ್ತಿ ಇವರಿಗಿತ್ತು.
ಪತ್ತಾರ ಮಾಸ್ತರರ `ಸಂಗ್ಯಾ ಬಾಳ್ಯಾ’ ಪದ್ಯಕ್ಕೆ ರಂಗರೂಪ ನೀಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ ಶರೀಫ್ ಹೀಗೆ ಇವರ ಪ್ರತಿಭೆಗೆ ಅನೇಕ ಪುರಸ್ಕಾರಗಳು ಸಂದಿದ್ದವು.
ಮಸ್ಕಿಯ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಗೀತದ ರಸದೌತಣ ನೀಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
–ಅರುಣ್ ಜೋಳದಕೂಡ್ಲಿಗಿ