ಕನ್ನಡದ ಸಾಕ್ಷಿಪ್ರಜ್ಞೆ ಡಾ.ಚಂಪಾ
ಕನ್ನಡನಾಡಿನ ಸಾಕ್ಷಿಪ್ರಜ್ಞೆಯಾಗಿದ್ದ ಡಾ.ಚಂದ್ರಶೇಖರ ಪಾಟೀಲರು ವೃತ್ತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು,ಪ್ರವೃತ್ತಿಯಿಂದ ಕನ್ನಡದ ಕಟ್ಟಾಳುವಾಗಿದ್ದರು.ಕನ್ನಡ ನಾಡು, ನುಡಿ, ಜಲ ಮೂಲಗಳಿಗೆ ಧಕ್ಕೆ ಬಂದಾಗ ಹೋರಾಟಗಳನ್ನು ರೂಪಿಸಿ ಪ್ರತಿಭಟಿಸಿ ನ್ಯಾಯ ಕೊಡಿಸಲು ಪ್ರಯತ್ನಿಸಿದ ಧೀಮಂತ ನಾಯಕ.ವೈದಿಕಶಾಹಿಯ ಜೀವವಿರೋಧಿ ನಿಲವುಗಳನ್ನು ವಿರೋಧಿಸುತ್ತಲೇ ತುಳಿತಕ್ಕೊಳಗಾದವರ, ಅಸ್ಪೃಶ್ಯರ, ಅಸಹಾಯಕರ ಹಾಗೂ ದುರ್ಬಲರ ಧ್ವನಿಯಾಗಿದ್ದವರು.
ಸತ್ಯದ ಪರವಾಗಿ ಎಂಥವರನ್ನಾದರೂ ಎದುರು ಹಾಕಿಕೊಳ್ಳಲು ಹಿಂಜರಿಯದ ಚಂದ್ರಶೇಖರ ಪಾಟೀಲರು ಕರ್ನಾಟಕದಾದ್ಯಂತ ಅನೇಕ ಹೋರಾಟಗಾರರನ್ನು ಪ್ರೋತ್ಸಾಹಿಸಿ ಬೆಳೆಸಿದವರು.ಎಪ್ಪತ್ತರ ದಶಕದಿಂದ ತಮ್ಮ ಪ್ರಖರವಾದ ಮಾತುಗಳಿಂದಲೇ ಕನ್ನಡಿಗರನ್ನು ಬಡಿದೆಬ್ಬಿಸುತ್ತಲೆ, ತಮ್ಮ ಮೊನಚು ಮಾತುಗಳಿಂದ ಪುರೋಹಿತಶಾಹಿಗಳನ್ನ, ಪಕ್ಷಪಾತಿಗಳನ್ನ, ಭ್ರಷ್ಟರಾಜಕಾರಣಿಗಳನ್ನ ತಿವಿಯುತ್ತಾ ಎಚ್ಚರಿಸುತ್ತಿದ್ದರು.
ಎಪ್ಪತ್ತರಿಂದ ಇಪ್ಪತ್ತರವರೆಗೆ ಸುಮಾರು ಐದು ದಶಕಗಳು ಡಾಕ್ಟರ್ ಚಂದ್ರಶೇಖರ ಪಾಟೀಲರ ವೈಚಾರಿಕ ವಿಚಾರಗಳ ಹಾಗೂ ಹೋರಾಟದ ದಶಕಗಳಾಗಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಂಕ್ರಮಣ ಮಾಸಿಕ ಪತ್ರಿಕೆಯ ಮೂಲಕ ಸಾವಿರಾರು ಯುವ ಕತೆಗಾರರು, ಕವಿಗಳು,ವಿಮರ್ಶಕರು, ವೈಚಾರಿಕರನ್ನು ಬೆಳಸಿ ಪ್ರೋತ್ಸಾಹಿಸಿ ಕನ್ನಡ ನಾಡಿಗೆ ಅರ್ಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ.ಎಸ್. ಎಲ್. ಭೈರಪ್ಪನವರ ಅಧ್ಯಕ್ಷೀಯ ಭಾಷಣಕ್ಕೆ ಪ್ರತಿಯಾಗಿ ತಮ್ಮ ವೈಚಾರಿಕ ವಿಚಾರಗಳಿಂದ ಪ್ರತಿಕ್ರಿಯಿಸಿ ಮಾಡಿದ ಸಮಾರೋಪ ಭಾಷಣ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣಗಳಲ್ಲಿಯೇ ಚಾರಿತ್ರಿಕ ದಾಖಲೆಯಾಗಿ ಉಳಿದಿದೆ.ಆ ಸಮಾರೋಪ ಭಾಷಣಕ್ಕೆ ನಾನು ಮತ್ತು ಕೊಪ್ಪಳದ ಹಿರಿಯ ಗೆಳೆಯರಾದ ಅಲ್ಲಮಪ್ರಭು ಬೆಟ್ಟದೂರು, ಎಚ್. ಎಸ್. ಪಾಟೀಲ,ಕೆ.ಬಿ.ಬ್ಯಾಳಿ, ಎ.ಎಂ. ಮದರಿ,ಸೋಮನಗೌಡ ಪಾಟೀಲ,ಅಂದಾನಪ್ಪ ಬೆಣಕಲ್ ಮುಂತಾದವರು ಸಾಕ್ಷಿಯಾಗಿದ್ದೆವ
ಚಂದ್ರಶೇಖರ ಪಾಟೀಲರಿಗೆ ಕೊಪ್ಪಳದ ಸಂಪರ್ಕ ಬಂದದ್ದು 1964 ರಲ್ಲಿ. ಬಳ್ಳೊಳ್ಳಿ ಅವರ ಮಿಲನಲ್ಲಿ ನಡೆಯುತ್ತಿದ್ದ ಕೊಪ್ಪಳದ ನಾಡಹಬ್ಬದ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದಾಗ.ಅವರನ್ನು ಕೊಪ್ಪಳದ ನಾಡಹಬ್ಬಕ್ಕೆ ಆಮಂತ್ರಿಸಿದವರು ಅವರ ಕ್ಲಾಸ್ ಮೇಟ್ ಆಗಿದ್ದ ಚನ್ನಪ್ಪ ನಿಡಶೇಶಿಯವರು.ಅಂದಿನಿಂದ ಪ್ರಾರಂಭವಾದ ಅವರ ಕೊಪ್ಪಳದ ಸಂಬಂಧ ಕರಳುಬಳ್ಳಿಯ ಭಾಗವೇ ಆಗಿಹೋಗಿತ್ತು.
ಡಾಕ್ಟರ್ ಚಂದ್ರಶೇಖರ ಪಾಟೀಲರು ಮತ್ತು ಕೊಪ್ಪಳಕ್ಕೆ ಅವಿನಾಭಾವ ಸಂಬಂಧ.ಕನ್ನಡನಾಡಿನ ಬಂಡಾಯ ಕವಿ ಗವಿಸಿದ್ದ ಬಳ್ಳಾರಿ ಹಾಗೂ ಅಲ್ಲಮಪ್ರಭು ಬೆಟ್ಟದೂರು ಇವರ ಪ್ರೀತಿಯ ಶಿಷ್ಯಂದಿರು.ಹೀಗಾಗಿ ಕೊಪ್ಪಳದ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮೇಲಿಂದ ಮೇಲೆ ಬರುತ್ತಿದ್ದರು.ಗವಿಸಿದ್ಧ ಬಳ್ಳಾರಿ,ಅಲ್ಲಮಪ್ರಭು ಬೆಟ್ಟದೂರು,ಎಚ್.ಎಸ್.ಪಾಟೀಲ್ ಪ್ರಹ್ಲಾದ್ ಬೆಟಗೇರಿ, ಮಹಾಂತೇಶ ಕೊತಬಾಳ, ಲಿಂಗರಾಜ ನವಲಿ ಇಲ್ಲ ತಿಮ್ಮನಗೌಡರ, ವಿಠ್ಠಪ್ಪ ಗೋರಂಟ್ಲಿ,ಅಂದಾನಪ್ಪ ಬೆಣಕಲ್ ಇವರು ಪ್ರಾರಂಭಿಸಿದ ಕುದುರಿಮೋತಿ ಹೋರಾಟಕ್ಕೆ ಡಾ. ಚಂದ್ರಶೇಖರ ಪಾಟೀಲರು ಧುಮುಕುವದರೊಂದಿಗೆ ಕುದರಿಮೋತಿ ಹೋರಾಟ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿತ್ತು.ಈ ಹೋರಾಟದಿಂದಾಗಿಯೇ ಕರ್ನಾಟಕದ ಮಠ ಮಾನ್ಯಗಳ ಪೀಠಾಧಿಪತಿಗಳನ್ನು ಎಚ್ಚರಿಸಿ ತಮ್ಮ ಮಠ ಮಾನ್ಯಗಳ ಸಂಪ್ರದಾಯ ಹಾಗೂ ಪರಂಪರೆಗಳಲ್ಲಿ ಅನೇಕ ಬದಲಾವಣೆಗಳನ್ನು ತಂದುಕೊಂಡರು ಎನ್ನುವುದು ಐತಿಹಾಸಿಕ ಸತ್ಯ.
ಡಾಕ್ಟರ್ ಚಂದ್ರಶೇಖರ ಪಾಟೀಲರ ಬದುಕು ಬರಹ ಕುರಿತು ಕೊಪ್ಪಳದ ಸಾಹಿತ್ಯ ಭವನದಲ್ಲಿ ಮೂರು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.ಆ ಸಮಾರಂಭದಲ್ಲಿ ಗದುಗಿನ ತೋಂಟದಾರ್ಯ ಸ್ವಾಮಿಗಳು, ಶೂದ್ರ ಶ್ರೀನಿವಾಸ್, ರಮ್ಜಾನ್ ದರ್ಗಾ,ರಹಮತ್ ತರಿಕೇರಿ, ಪುರುಷೋತ್ತಮ ಬಿಳಿಮಲೆ,ಪುಸ್ತಕಮನೆಯ ಹರಿಹರಪ್ರಿಯ ಮುಂತಾದವರು ಭಾಗವಹಿಸಿದ್ದರು ಅವು ಸಮಾರಂಭ ಕೊಪ್ಪಳದ ಸಾಹಿತ್ಯಾಸಕ್ತರಿಗೆ ರಸದೌತಣವನ್ನು ಉಣಬಡಿಸಿತ್ತು ಮೇಲೆ ಹಾಕಿರುವ ಭಾವಚಿತ್ರದಲ್ಲಿ ಚಂದ್ರಶೇಖರ ಪಾಟೀಲ್ ರೊಂದಿಗೆ ನಾನು ಮತ್ತು ರಮ್ಜಾನ್ ದರ್ಗಾ,ಶೂದ್ರ ಶ್ರೀನಿವಾಸ್’ ಮಹಾಂತೇಶ ಮಲ್ಲನಗೌಡರ ಇದ್ದು ಈ ಸಮಾರಂಭದ ಯಶಸ್ವಿಗಾಗಿ ನಾನು ದುಡಿದದ್ದು ಮನಸ್ಸಿನಲ್ಲಿ ಇನ್ನೂ ಹಚ್ಚ ಹಸಿರಾಗಿ ಉಳಿದಿದೆ.ಅಂದಿನ ಕಾರ್ಯಕ್ರಮದಲ್ಲಿ ಅವರ ತುರ್ತು ಪರಿಸ್ಥಿತಿಯ ಕಾಲದ ಶಿಷ್ಯನಾಗಿದ್ದ ನೀಲಕಂಠಯ್ಯ ಹಿರೇಮಠ ಪ್ರೀತಿಯಿಂದ ಹೂವಿನ ಹಾರ ಹಾಕಿ ಗೌರವಿಸಲು ಹೋದಾಗ ಹೂವಿನ ಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಚಂದ್ರಶೇಖರ ಪಾಟೀಲರು ತಾವು ಬದುಕಿದಷ್ಟು ದಿನ ತಾವು ಕಂಡ ಸತ್ಯದ ಸಾಕಾರಕ್ಕಾಗಿ ಹೋರಾಟ ನಡೆಸಿದ ನಿಷ್ಟುರಿ.ಇವರ ನಿಧನದಿಂದಾಗಿ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಹಾಗೂ ಹೋರಾಟಗಾರರಿಗೆ ಸ್ಫೂರ್ತಿಯ ಸೆಲೆ ಬತ್ತಿದಂತಾಗಿದೆ.ಡಾ.ಚಂದ್ರಶೇಖರ ಪಾಟೀಲರ ಆತ್ಮಕ್ಕೆ ಮಹಾತ್ಮ ಬಸವೇಶ್ವರ ಶಾಂತಿಯನ್ನು ಕರುಣಿಸಲಿ. ಹೋಗಿಬನ್ನಿ ಗುರುಗಳೇ,ಮತ್ತೊಮ್ಮೆ ಹುಟ್ಟಿಬನ್ನಿ ಗುರುಗಳೆ…
–ಗವಿಸಿದ್ದಪ್ಪ ವೀ. ಕೊಪ್ಪಳ