ವೀರ ಯೋಧ
ಕಾಶ್ಮೀರ ಭಾರತಾಂಬೆಯ ಮುಕುಟ
ಸದಾ ಹೊಳೆವ ವಜ್ರ ಕಿರೀಟ
ಬೆನ್ನ ಹಿಂದೆ ಚಳಿ ಗಾಳಿ
ಹಿಮದ ದಾಳಿ
ಕೊರೆವ ಛಳಿಯಲು
ಭಾರತಾಂಬೆಯ ಕಾಯುವ ಕಾಯಕ ನನ್ನದು
ಆ ಛಳಿ ನಮ್ಮ
ರಕ್ತವನು ಹೆಪ್ಪುಗಟ್ಟಿಸಬಹುದು
ಮೃದು ಮಧುರ ನೆನಪುಗಳನ್ನಲ್ಲ
ನೆನಪುಗಳು ಆ ಕ್ಷಣ ನಮ್ಮನು ಮೆದುಗೊಳಿಸಬಹುದು
ವೈರಿಗಳ ಕಂಡರೆ ರುಂಡ ಚೆಂಡಾಡದೇ
ಬಿಡುವವರು ನಾವಲ್ಲ ||
ಅಂದು ಕೈಯಲಿ ಬ್ಯಾಟಿತ್ತು
ಎದುರಾಳಿ ಗೆಳೆಯ
ಹಾಕಿದ ಬಾಲನು ಬೌಂಡರಿಗಟ್ಟುತ್ತಿದ್ದೆ
ಅವ ಕೈ ಕೊಡವಿಕೊಳ್ಳುವುದ ನೋಡಿ
ಖುಷಿ ಪಡುತ್ತಿದ್ದೆ
ಇಂದು ಕೈಯಲಿ ಬಂದೂಕಿದೆ
ಎದುರಾಳಿ ವೈರಿ
ತೂರಿ ಬರುತಿರೆ
ಅವನ ರುಂಡ ಚೆಂಡಾಡಿ
ಲೋಕದಾಚೆ ಅಟ್ಟುತ್ತಿರುವೆ.
ಅಮ್ಮನ ಮುಡಿಗೆ ಕೈಹಾಕಿದವನ
ನೆನೆದು ಕುದಿಯುತ್ತಿರುವೆ ||
ಮತ್ತೆ ಮನ
ತಂಪಾದ ಹಿಮಕೊಳ
ಹಿಮಗುಡ್ಡದ ಮೇಲೆ
ನನ್ನೂರ ಹೆಸರು ಮಸ್ಕಿ
ಎಂದು ಬರೆದೆ
ಒಂದೆರಡು ದಿನ
ಹಿಮಗಾಳಿಗೆ ಅಳಿಸಿ ಹೋದೀತದು
ನನ್ನ ಎದೆಗೂಡ ನೋಡಬನ್ನಿ
ಭಾರತ ಎಂದು ಬರೆದುಕೊಂಡಿರುವೆ
ಎಂದಾದರು ಯಾರಿಂದಲಾದರು
ಅಳಿಸಲಾದೀತೇ ಅದನು ?
ನೀವೇ ಹೇಳಿ
ಜೈ ಹಿಂದ್ ||
✍️ ಆದಪ್ಪ ಹೆಂಬಾ ಮಸ್ಕಿ
Wonderful tribute!