( ಕಿರುಲೇಖನ )
ಅಮ್ಮನ ಒಲುಮೆ -ಬಾಳಿನ ಚಿಲುಮೆ
ಅಮ್ಮ ಅಂದರೆ ಏನೋ ಹರುಷವು ನಮ್ಮ ಬಾಳಿಗೆ ಅವಳೆ ದೈವವು.
ಅಮ್ಮ ಎನ್ನುವ ಪದವೇ ಸುಂದರ ಕಾವ್ಯವು, ಅಗೋಚರ ಶಕ್ತಿಯೊಂದನ್ನು ದೇವರೆಂದು ನಂಬಿರುವ ನಾವು. ಗುಡಿ, ಚರ್ಚು, ಮಸೀದಿಗಳಲ್ಲಿ, ಕಲ್ಲು, ಮಣ್ಣು, ಕಟ್ಟೆಗೆಯಲ್ಲಿ ಹುಡುಕುತ್ತಿದ್ದೇವೆ. ಅಲ್ಲೆಲ್ಲಾ ದೇವರಿದ್ದನೋ ಇಲ್ಲವೋ ತಿಳಿಯದು,
ಆದರೆ ಕಣ್ಣಿಗೆ ಕಾಣುವ ನಿಜ ದೈವ, ನಮ್ಮನ್ನ ನವಮಾಸ ಒಡಲೊಳಗಿಟ್ಟುಕೊಂಡು ಅಪರಿಮಿತ ನೋವುಂಡು ಹೆತ್ತು, ತಾನೆಷ್ಟೇ ಕಷ್ಟ-ನಷ್ಟ ಹಿಂಸೆ ಅನುಭವಿಸುತ್ತಿದ್ದರು, ಅಕ್ಕರೆಯಲ್ಲಿ ಆರೈಕೆ ಮಾಡುವ ಹೆತ್ತವಳನ್ನೇ ಮರೆಯುತ್ತಿದ್ದೇವೆ. ಸತ್ಯವಾಗಿಯೂ ಆಕೆಯೇ ದೇವತೆ.ಅಮ್ಮನ ಒಲಿಮೆ-ಬಾಳಿನ ಚಿಲುಮೆ.
ಇದು ಅಕ್ಷರಶಃ ಸತ್ಯ. ತಾಯಿ ತನ್ನ ಕರುಳ ಕುಡಿಗಳಿಗಾಗಿ ಅವರ ಸುಖಕ್ಕಾಗಿ, ಏಳ್ಗೆಗಾಗಿ ಹಗಲಿರುಳು ಪರಿತಪಿಸುವಳು, ತನ್ನಲ್ಲೇ ಅಗಾಧ ಶಕ್ತಿಯಿದ್ದರೂ ಕಾಣದ ದೇವರಲ್ಲಿ ಬೇಡಿಕೊಳ್ಳುವಳು, ಶ್ರೇಯಸ್ಸಿಗಾಗಿ ಹರಕೆ ಹೊತ್ತುಕೊಳ್ಳುವಳು., ಕಂದಮ್ಮಗಳ ಸಂತಸದಿ ಅವಳು ಹರುಷದಿ ಇರುವಳು. ಅವರಿಗೆ ಕಿಂಚಿತ್ತೆ ನೋವಾದ್ರು ಸೃಷ್ಟಿಕರ್ತನಿಗೆ ಹಿಡಿಶಾಪ ಹಾಕುವಳು, ಮಕ್ಕಳ ವಿನಃ ಅಮ್ಮನಿಗೆ ಬೇರೆ ಲೋಕವೇ ಇಲ್ಲ. ಇಂತಹ ಮಹಾನ್ ತ್ಯಾಗಮಯಿ, ಮಮತೆಯ ದೇವತೆಯಾದ ತಾಯಿಯನ್ನು ನಾವಿಂದು ಹೇಗೆ ನೋಡಿಕೊಳ್ಳುತ್ತಿದ್ದೇವೆ ?
ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಸತಿಯ ಸವಿಯಾದ ಮೋಹಕ ಮಾತಿಗೆ ಮರುಳಾಗಿಯೋ, ಅಥವಾ ವಿಲಾಸಿ ಜೀವನಕ್ಕೆ ತೊಡಕುಂಟಾಗುವದೆಂದೋ, ಮತ್ತಿನ್ಯಾವುದೋ ಕಾರಣಕ್ಕಾಗಿ ಹೆತ್ತವರನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದೇವೆ. ವೃದ್ದಾಶ್ರಮವೆನ್ನುವದು ಹೆತ್ತವರಿಗೆ ನರಕವೇ ಸರಿ. ಇಲ್ಲಾ ಅದಕ್ಕಿಂತಲೂ ಭಯಂಕರವೆಂದ್ರೂ ತಪ್ಪಾಗಲಾರದು. ಆ ಕ್ಷಣ ಸಾವಿಗಿಂತಲೂ ಭೀಕರವಾಗಿರುತ್ತದೆ ಅವರಿಗೆ, ತನ್ನ ಗರ್ಭಸಂಜಾತರೆ ನಮ್ಮಹೃದಯವನ್ನ ಸಜೀವವಾಗಿ ದಹಿಸುತ್ತಿಹರಲ್ಲವೆಂದು ಅಂತರಂಗದಿ ಆಕ್ರಂದಿಸುತ್ತಾರೆ. ಅದು ಯಾರಿಗೂ ಕಾಣದ ನೋವಿನ ಜ್ವಾಲೆ, ಇದು ಮುಂದೊಂದು ದಿನ ನಮ್ಮನ್ನ ಆಪೋಶನ ತಗೆದುಕೊಳ್ಳುವದು ನಿಶ್ಚಿತ.
ನಮ್ಮಂತೆಯೇ ನಮ್ಮ ಮಕ್ಕಳು ನಡೆದುಕೊಂಡ್ರೆ ? ಆಗ ನಮ್ಗಳ ಪರಸ್ಥಿತಿ ಹೇಗಿರುತ್ತೆ ಒಮ್ಮೆ ಕಲ್ಪಿಸಿಕೊಂಡು ನೋಡಿರಿ. ದೇವರು ಎಲ್ಲಾ ಕಡೆಯೂ ಇರಲು ಸಾದ್ಯವೆಲ್ಲವೆಂದೇ ತಾಯಿಯನ್ನು ಮನುಕುಲಕ್ಕೆ ನೀಡಿದ್ದಾನೆಂದು ತಿಳಿದವರು ಹೇಳುತ್ತಾರೆ, ದೇವತಾ ಸಮಾನವಾದ ಮಾತೆಯನ್ನು ಅಕ್ಕರೆಯಿಂದ ಮಗುವಿನಂತೆ ನೋಡಿಕೊಂಡರೆ, ಪುಣ್ಯವು ಲಭಿಸುವದು ಅಮ್ಮನ ಹರಕೆ ಹಾರೈಕೆ ಒಲುಮೆಯಿಂದ ಬಾಳಿನಲ್ಲಿ ಹರುಷದ ಚಿಲುಮೆ ಚಿಮ್ಮುವದು ಖಂಡಿತ…
✍ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.