ಕೃತಿಯೊಂದು ಹಾಟ್ ಕೇಕ್ ಆದ ಪರಿ
ವ್ಯಕ್ತಿ ತನ್ನ ಇಡೀ ಬದುಕಿನಲ್ಲಿ ‘ಮಾಡುವ’ ಕ್ರಿಯೆಗೆ ಸಾಕ್ಷಿಯಾದಾಗ, ಅದೇ ಬದುಕು ‘ಹೇಳುವ’ ಶಬ್ದಗಳಿಗೆ ಕಿವಿಯಾದಾಗ ಆಗುವ ಅನುಭವವೇ ಭಿನ್ನ. ಒಬ್ಬ ಸೃಜನಶೀಲ ಬರಹಗಾರನಾದವನ ಮನಸಿಗೆ ಆವರಿಸುವುದು ಬರೀ ಮೌನ! ಆ ಚಿಂತನೆಯಲ್ಲಿ ಅಕ್ಷರಶಃ ಮೂಕ ಸ್ಥಿತಿ! ಆ ಮೌನವನು ಧೇನಿಸಿ ಆಲಿಸಿದಾಗ ಬರಹಕ್ಕೆ ಹೊಸ ಹೊಳವು! ಹೊಳೆಯುವ ಆ ವಸ್ತು ನಿತ್ಯ ನೂತನ, ವಿನೂತನ. ಆ ಅನುಭವ ಅಕ್ಷರಗಳಾಗಿ ಹರಿದು ಪುಸ್ತಕ ರೂಪದಲ್ಲಿ ಹೊರ ಬಂದಾಗ, ಅದೊಂದು ಹಾಟ್ ಕೇಕ್! ಅದೇ ಸಿದ್ದು ಯಾಪಲಪರವಿಯವರ ‘ಹಗಲಿನಲ್ಲಿಯೆ ಸಂಜೆಯಾಯಿತು’ ಕೃತಿ!!!
ಇದರ ಮೊದಲ ಮುದ್ರಣ ೨೦೨೧ ಆಗಸ್ಟ್, ಎರಡನೇ ಮುದ್ರಣ ೨೦೨೧ ಸೆಪ್ಟೆಂಬರ್, ಮೂರನೇ ಮುದ್ರಣ ೨೦೨೧ ಅಕ್ಟೋಬರ್, ಹೀಗೆ ಕ್ರಮವಾಗಿ ಪ್ರತಿ ತಿಂಗಳಿಗೊಮ್ಮೆ ಮರು ಮುದ್ರಣಕ್ಕೊಳಗಾದ ಕೃತಿ. ಇನ್ನೂ ಸ್ವಾರಸ್ಯಕರ ಸಂಗತಿ ಎಂದರೆ ಲೇಖಕರು ಈ ಕೃತಿ ರಚನೆಗೆ ತೆಗೆದುಕೊಂಡ ಅವಧಿಯೂ ಕೇವಲ ಒಂದೇ ಒಂದು ತಿಂಗಳು.
ಆಗ ಮೊದಲ ಓದುಗಳಾಗಿ ಓದಿ ಮುಗಿಸಿದಾಗ, ಇದು ಆತ್ಮ ಕಥನವೊ? ಜೀವನ ಚರಿತ್ರೆಯೊ? ಅಥವಾ ಅನುಭವದ ಘಟನಾವಳಿಯೊ? ಸಹಜವಾಗಿಯೆ ಪ್ರಶ್ನೆಗಳು ಎದ್ದಿದ್ದವು. ಕೊನೆಗೆ ‘ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳವರೊಂದಿಗಿನ ಸ್ಮರಣೀಯ ಘಟನೆಗಳು’ ಎನ್ನುವ ಒಳಪುಟದ ಟ್ಯಾಗ್ ಲೈನ್‌ನೊಂದಿಗೆ ‘ಹಗಲಿನಲ್ಲಿಯೆ ಸಂಜೆಯಾಯಿತು’ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಆಗ ನಿಟ್ಟುಸಿರಿನೊಂದಿಗೆ ಮತ್ತೆ ಮನಸು ಆಲೋಚನೆಗಳ ಹರಿಬಿಟ್ಟಿತು.
ಸಾಹಿತ್ಯ ಯಾವತ್ತೂ ನಿಂತ ನೀರಲ್ಲ. ಅದು ಹರಿವ ಜೀವ ನದಿ. ಪ್ರತಿಯೊಬ್ಬ ಬರಹಗಾರನಿಗೂ ಹೊಸತನ್ನು ನೋಡುವ ವಿಶೇಷ ದೃಷ್ಟಿಕೋನ ಇದ್ದೇ ಇರುತ್ತದೆ. ಅದು ಅವನೊಳಗಿನ ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯನ್ನು ಅವಲಂಭಿಸಿರುತ್ತದೆ. ಭಾವನೆಗಳು ಮಡುಗಟ್ಟಿ ತೀವ್ರವಾಗಿ ಹೊರ ಬರುವ ಬರಹ ಎಂದರೆ, ಅದು ಸಾಯುವ ಸ್ಥಿತಿಯಲ್ಲಿರುವ ವ್ಯಕ್ತಿಯ ಬಾಯಿಂದ ಹೊರಡುವ ಸತ್ಯದ ಮಾತಿನಂತೆ! ಬರವಣಿಗೆ ಯಾವುದೇ ಒತ್ತಡವಿಲ್ಲದೆ, ಸರಳವಾಗಿ, ಸುಲಲಿತ ಭಾಷೆಯ ಮೂಲಕ, ಜೀವನಾನುಭವದಿಂದ ಹೊರಹೊಮ್ಮುವುದೇ ಹೊಸತನದ ಬರಹ! ಇಂಥ ಬರಹವನ್ನು ಯಾವ ಪ್ರಕಾರಕ್ಕೆ ಸೇರಿಸಬಹುದು? ಇಂತಹ ಪ್ರಶ್ನೆಯ ಗೊಂದಲಕ್ಕೆ ಬೀಳಲು ಕಾರಣ, ನಮ್ಮೊಳಗಿನ ಸಿದ್ಧ ಮಾದರಿಯ ಅಪೇಕ್ಷೆ. ಆದರೆ ಈ ಕೃತಿಯಲ್ಲಿ ಲೇಖಕರು ಸಾಂಪ್ರದಾಯಿಕ ನಿರೂಪಣೆಯನ್ನು ಬಿಟ್ಟು ಹೊಸ ಹಾದಿ ಹಿಡಿದಿರುವುದು ಸ್ಪಷ್ಟವಾಗಿದೆ. ಹಾಗೆಯೇ ಅವರು ಅದರಲ್ಲಿ ಯಶಸ್ವಿಯೂ ಆಗಿರುವುದಕ್ಕೆ ಈ ಕೃತಿಯ ಮರು ಮುದ್ರಣವೇ ಸಾಕ್ಷಿ. ಇದೇ ಅದರ ಗುಟ್ಟು ಕೂಡ ಹೌದು.
ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳು ಯಾವತ್ತೂ ಪ್ರಗತಿಶೀಲ ಚಟುವಟಿಕೆಗಳನ್ನು ಮಾಡುತ್ತ, ಪ್ರಗತಿಪರ ವಿಚಾರಧಾರೆಯ, ಸಕಾರಾತ್ಮಕ ಮನೋಭಾವ ಹೊಂದಿದವರು. ಸಿದ್ದು ಯಾಪಲಪರವಿಯವರ ಜೀವನದುದ್ದಕ್ಕೂ ಮಾರ್ಗದರ್ಶಕರಾಗಿ, ಆತ್ಮಬಲ ತುಂಬುವವರಾಗಿ, ಓದು ಬರಹಕ್ಕೆ ಸ್ಪೂರ್ತಿದಾಯಕರಾಗಿ, ಸಂದಿಗ್ಧತೆಯಲ್ಲಿ ಸ್ಥೈರ್ಯ ಹುಟ್ಟಿಸುವವರಾಗಿದ್ದರು. ‘ಅಜ್ಜಾವ್ರ’ ನೆರಳಲ್ಲಿ ಬೆಳೆದು, ಸದಾ ಅವರ ಆಶೀರ್ವಾದದಡಿಯಲ್ಲೇ ಜೀವನ ಸಾಗಿಸುತ್ತ ಬಂದವರು.
ಸಿದ್ದು ಯಾಪಲಪರವಿಯವರ ಜೀವ ಚಿತ್ರಣ ‘ಬ್ಯಾಸರಿಲ್ಲದ ಜೀವ’ ಬರೆಯುವಾಗ, ಅವರು ಅಜ್ಜಾವ್ರ ಒಡನಾಟವನ್ನು ಅಗತ್ಯವಿದ್ದಷ್ಟು ಹೇಳಿದ್ದರು. ಅದನ್ನು ಹಾಗೇ ನಿರೂಪಿಸಿದ್ದೆ. ಅಲ್ಲಿ ಗಮನಿಸಿದ್ದೇನೆಂದರೆ ಯಾಪಲಪರವಿಯವರ ಇಡೀ ಬದುಕಿನುದ್ದಕ್ಕೂ ಅಜ್ಜಾವ್ರ ಪಾಲು ಇದ್ದೇ ಇತ್ತು. ಹಾಗಾಗಿ ಗುರು ತೋಂಟದ ಸಿದ್ಧಲಿಂಗ ಸ್ವಾಮಿಗಳು, ವಿದ್ಯಾ ಗುರು ಸಿದ್ಧಲಿಂಗ ಪಟ್ಟಣಶೆಟ್ಟಿ, ಇವರಿಬ್ಬರ ಪ್ರಭಾವ, ಪ್ರೇರಣೆಯಿಂದಲೇ ಈ ಸಿದ್ದು ಎದ್ದು ನಿಂತಿರಲು ಸಾಧ್ಯ ಎನಿಸುತ್ತದೆ. ಈ ಅಂಶವನ್ನೇ ಅವರು ವಿನಮ್ರವಾಗಿ ತಮ್ಮ ಮಾತುಗಳಲ್ಲಿ ನಿವೇದಿಸಿಕೊಂಡಿರುವುದರ ಹಿನ್ನೆಲೆಯನ್ನು ಗ್ರಹಿಕೆಬಹುದು. ಇದೇ ಮಾತನ್ನು ಚಂದನದ ‘ಶುಭೋದಯ’ ನೇರ ಪ್ರಸಾರದಲ್ಲೂ ಉಲ್ಲೇಖಿಸಿರುವುದು ವೀಕ್ಷಕರ ಮನದಲ್ಲಿನ್ನೂ ಮಾಸಿಲ್ಲ.
ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ‘ಈ ಗ್ರಂಥ ಓದಿದೆ ಎನ್ನುವುದಕ್ಕಿಂತ ಗ್ರಂಥವೇ ಓದಿಸಿಕೊಂಡು ಹೋಯಿತು’ ಎಂದು ಹೇಳಿದ್ದಾರೆ. ಡಾ.ವೀರಣ್ಣ ರಾಜೂರ ಅಲ್ಲದೆ ಅನೇಕರ ಅಭಿಪ್ರಾಯವೂ ಇದೇ ಆಗಿದೆ. ಈ ಕೃತಿಯ ನಿರೂಪಣಾ ಶೈಲಿ ಮತ್ತು ಬಳಸಿದ ಸಶಕ್ತ ಭಾಷೆಯೇ ಓದಿನ ಓಘಕ್ಕೆ ಪರಿಣಾಮಕಾರಿ.
ಮಠದ ಮೂಲಕ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳು, ಅನೇಕ ಆದರ್ಶಗಳನ್ನು ಹೊಸದಾಗಿ ರೂಢಿಸಿಕೊಂಡು, ಸಾಧ್ಯವೇ ಇಲ್ಲ ಎನ್ನುವಂತಹ ವಿಷಯಗಳನ್ನು ಸಾಧ್ಯವಾಗಿಸುತ್ತ, ಸಮಾಜದಲ್ಲಿ ಅಭಿವೃದ್ಧಿ ಸಾಧಿಸುತ್ತ, ನಿರಂತರ ಹೋರಾಡಿ, ಅನಿರೀಕ್ಷಿತವಾಗಿ ಅಗಲಿದ್ದು, ಒಡನಾಟದಲ್ಲಿದ್ದ ಅನೇಕ ಹಿರಿಯರಿಗೆ, ಪೂಜ್ಯರಿಗೆ ತಿಳಿದ ಸಂಗತಿ. ಅಜ್ಜಾವ್ರ ಬದುಕು ತೆರೆದ ಪುಸ್ತಕದಂತೆ ಇದ್ದುದರಿಂದ ಸಾಕ್ಷಿಯಾದ ಪ್ರಜ್ಞಾವಂತರು ಇನ್ನೂ ನಮ್ಮ ಮಧ್ಯೆ ಜೀವಂತವಾಗಿದ್ದು, ಆ ಘಟನೆಗಳನ್ನು ಸ್ಮರಿಸುತ್ತಿರುವುದೇ ಈ ಕೃತಿಗೆ ವಿಶೇಷ ಮೆರುಗು ತಂದಿದೆ. ಅಸಂಖ್ಯಾತ ಅನುಯಾಯಿಗಳೂ ಈ ಸಾಲಿಗೆ ಸೇರಿದ್ದಾರೆ.
ಅಂತಹ ಮೇರು ವ್ಯಕ್ತಿತ್ವದ ಸರಳ ಜೀವಿಯ ಕುರಿತು, ಅವರೊಂದಿಗಿನ ತಮ್ಮ ಜೀವನಾನುಭವವನ್ನು ವಿಶಿಷ್ಟವಾಗಿ ನಿರೂಪಿಸಿದ ಪ್ರಜ್ಞಾವಂತಿಕೆ ಸಿದ್ದು ಯಾಪಲಪರವಿ ಅವರದು. ಇಲ್ಲಿಯ ನಿರೂಪಣೆಗೆ ಭಾಷೆ, ಶೈಲಿ, ಘಟನೆಗಳೇ ಜೀವಾಳ. ವಾಸ್ತವ ನೆಲೆಯಲ್ಲಿ ಭಾವನಾತ್ಮಕ ಚಿಂತನೆಯ ಮೂಲಕ ಘಟನೆಗಳು ಪ್ರಾಮಾಣಿಕವಾಗಿ ಜನ್ಮ ತಾಳಿವೆ. ಒಮ್ಮೆ ಓದಲು ಕೈಗೆತ್ತಿಕೊಂಡರೆ ಮುಗಿಸಿಯೇ ಕೆಳಗಿಡಬೇಕು ಎನ್ನುವ ಅನೇಕ ಓದುಗರ ಅಭಿಪ್ರಾಯ ಒಪ್ಪಲೇಬೇಕು.
ಅಜ್ಜಾವ್ರ ಡಂಬಳದ ಪಾದಯಾತ್ರೆ, ತೇರಿನ ಗಾಲಿಗೆ ಅನ್ನ ನೈವೇದ್ಯ ನಿಷೇಧ, ಪುಸ್ತಕ ಪ್ರೇಮ, ಕೃತಿ ಪ್ರಕಟಣೆ, ನೇರ ವಿಮರ್ಶೆ, ಅನವಶ್ಯಕ ಹೊಗಳಿಕೆಯ ವಿರೋಧಿ, ಅಧಿಕ ಪ್ರಸಂಗಿಗಳ ಸುಮ್ಮನಾಗಿಸುವುದು, ಪ್ರತಿ ಕಾರ್ಯಕ್ರಮದ ಆಶೀರ್ವಚನದ ಮಾತುಗಳು, ಸಾದಾ ಉಡುಪು, ಸರಳ ಜೀವನ ಶೈಲಿ ಎಲ್ಲವನ್ನೂ ಸಿದ್ದು ಯಾಪಲಪರವಿಯವರ ಜೀವ ಚಿತ್ರಣ ಬರೆಯುವಾಗ ಸುಂದರವಾಗಿ ಹೇಳಿದ್ದರು. ಈಗ ಸ್ವತಃ ಅವರೇ ಅಜ್ಜಾವ್ರ ಕುರಿತು ಬರೆಯುವಾಗ ಅನೇಕ ಅಂಶಗಳನ್ನು ಜ್ಞಾಪಿಸಿಕೊಂಡು, ಮರೆತೇ ಹೋಗಬಹುದಾದಂತಹ ವಿಷಯಗಳನ್ನು ಈ ಕೃತಿಯಲ್ಲಿ ಮತ್ತೆ ಕಟ್ಟಿ ಕೊಟ್ಟ ಹೆಚ್ಚುಗಾರಿಕೆ. ಅಜ್ಜಾವ್ರ ಅಜರಾಮರ ವ್ಯಕ್ತಿತ್ವವನ್ನು ಕೃತಿ ರೂಪದಲ್ಲಿ ಶಾಶ್ವತಗೊಳಿಸಿದ ಹಿರಿಮೆ. ಅದರೊಂದಿಗೆ ಅವರ ಸುತ್ತಮುತ್ತ ಸೇವೆ ಸಲ್ಲಿಸುತ್ತಿದ್ದ ನಿಸ್ವಾರ್ಥ ಜೀವಿಗಳನ್ನೂ ನೆನೆದು ಜೀವಂತವಾಗಿರಿಸಿದ್ದಾರೆ.
ಅಜ್ಜಾವ್ರ ಆಪ್ತರಿಗೆ ಇನ್ನೂ ಕೆಲವು ಅಂಶಗಳನ್ನು ಸೇರಿಸಬಹುದಿತ್ತು ಎನ್ನುವ ಅಭಿಪ್ರಾಯವೂ ಬರುತ್ತಿದೆ. ವ್ಯಕ್ತಿ ಶಕ್ತಿಯಾಗಿ ಬೆಳೆದು ನಿಂತಾಗ ಎಷ್ಟು ಬರೆದರೂ ಕಡಿಮೆಯೆ. ಹಾಗೆಯೇ ಉಳಿದುಕೊಂಡ ಸಂಗತಿಗಳನ್ನು ಲೇಖಕರು ಪರಿಗಣಿಸಿ, ಪರಿಷ್ಕೃತ ಆವೃತ್ತಿ ಹೊರ ತರಲಿ ಎನ್ನುವ ಅಪೇಕ್ಷೆ ಸಮಕಾಲೀನರದು.
ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ಕುರಿತು ಹಲವಾರು ಕೃತಿಗಳು ಬಂದಿದ್ದರೂ, ಇದೊಂದು ಐತಿಹಾಸಿಕವಾಗಿ ಮೈಲಿಗಲ್ಲಾದ ಹೊತ್ತಿಗೆ. ಆ ಕಾರಣಕ್ಕಾಗಿಯೇ ‘ಹಗಲಿನಲ್ಲಿಯೆ ಸಂಜೆಯಾಯಿತು’ ಪುಸ್ತಕಗಳ ಪ್ರತಿಗಳು ಹಾಟ್ ಕೇಕಿನಂತೆ ಮುಗಿದು ಹೋಗಿವೆ. ಇದೀಗ ಮತ್ತೆ ನಾಲ್ಕನೇ ಮುದ್ರಣಕ್ಕೆ ಸಜ್ಜಾಗಿ ನಿಂತಿರುವುದು ಅಜ್ಜಾವ್ರ ಆದರ್ಶಗಳ ಚಲನಶೀಲತೆ.
ಇಂದಿಗೂ ತೋಂಟದಾರ್ಯ ಶ್ರೀಗಳು ಅಂದರೆ ಅಜ್ಜಾವ್ರ ವ್ಯಕ್ತಿತ್ವವೇ ಕಣ್ಣ ಮುಂದೆ ನಿಲ್ಲುತ್ತದೆ. ಹಾಗಾಗಿ ಅವರ ಅಸಂಖ್ಯಾತ ಅನುಯಾಯಿಗಳ ಪ್ರೀತಿ, ಶುಭ ಹಾರೈಕೆಗಳು ಈ ಕೃತಿಗೆ ಮತ್ತು ಕೃತಿಕಾರರಿಗೆ ಸದಾ ಇದ್ದೇ ಇರುತ್ತದೆ.
-ಸಿಕಾ