ಬಾ ಬಾ ಬಾ ಅಂಬಿಗರ ಚೌಡಯ್ಯ
ಬಾ ಬಾ ಬಾ ಅಂಬಿಗರ ಚೌಡಯ್ಯ
ಮತ್ತೊಮ್ಮೆ ಮರ್ತ್ಯಕೆ
ಗಣಚಾರಿಯಾಗಿ ಜನಿಸಿ.
ಬರುವಾಗ ಮಣಬಾರದ
ಚಪ್ಪಲಿಗಳ ಹೊತ್ತು ಬಾ
ಲೊಟಲೊಟನೆ ಹೊಡೆದು
ನಮಗೆ ಬುದ್ಧಿ ಕಲಿಸ ಬಾ.
ವೀರಾಧಿ ವೀರನಾಗಿ
ಖಡ್ಗವ ಜಪಳಿಸುತ ಬಾ
ಹಾದಿ ತಪ್ಪಿದ ನಮಗೆ
ಬಡೆದು ದಾರಿ ತೋರು ಬಾ.
ಸುಳ್ಳು ವೇಷ ಹಾಕಿದವರ
ಚರ್ಮ ಸುಲಿಯ ಬಾ
ಪೊಳ್ಳು ಮಾತನಾಡುವವರ
ನಾಲಿಗೆಯ ಸೀಳು ಬಾ.
ಕಟ್ಟಿಕೊಂಡ ಲಿಂಗ ಬಿಟ್ಟು
ಸ್ಥಾವರಕ್ಕೆರಗುವವರಿಗೆ
ಹೊಳೆಯೊಳಗೆ ಮುಳುಗಿಸಿ
ಲಿಂಗೈಕ್ಯವ ಮಾಡು ಬಾ.
ಜ್ಞಾನವೆಂಬ ಹರಿಗೋಲಲಿ
ಕ್ರಿಯೆಯೆಂಬ ಹುಟ್ಟನಿಡಿದು
ಭವಸಾಗರವ ದಾಂಟಿಸಿ
ಮುಕ್ತಿಯಗಾಣಿಸಲು ಓಡೋಡಿ ಬಾ.
–ಶ್ರೀಮತಿ ರುದ್ರಮ್ಮ ಅಮರೇಶ್ ಹಾಸಿನಾಳ ಗಂಗಾವತಿ.