ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯ

“ನ್ಯಾಯ ನಿಷ್ಠುರಿ ದಾಕ್ಷಿಣ್ಯ ಪರನಲ್ಲ
ಲೋಕವಿರೋಧಿ ಶರಣನಾರಿಗೂ
ಅಂಜುವನಲ್ಲ”
ಎಂಬ ಅಪ್ಪ ಬಸವನ ಮಾತೇ
ಮೈವೆತ್ತು ನಿಂತವನೀ ‘ನಿಜಶರಣ’.

ಗೋಸುಂಬೆಗಳಿಗೆ,
ಶಾಸ್ತ್ರದ ಬದನೆಕಾಯಿಗಳಿಗೆ
ಸರಿಯಾಗಿ ಬೆನ್ನಬಾರನೆತ್ತುವ
ನಿಷ್ಕರುಣಿ ಚೌಡ…..

ಪಾಪ ಪುಣ್ಯಗಳ ಕಪಟ
ಶಾಸ್ತ್ರದಿ ಹುಟ್ಟಿದ
ಈ ಭವಸಾಗರದಿ
ಅರಿವಿನ ದೋಣಿಯ ಬಿಟ್ಟು
ಅಭಯದ ಉಟ್ಟನ್ಹಿಡಿದು
ಜಗವ ಪಾರು ಮಾಡಿದ ದಿಟ್ಟ.

ತಾನೇ ದೇವರೆಂದು,ತನ್ನರಿವೇ
ಗುರುವೆಂದು, ಧರ್ಮ ದೇವರ
ಎದೆ ನಡುಗುವಂತೆ
ವಚನಗಳನೊರೆದ
“ಅಂಬಿಗರ ಚೌಡಯ್ಯ”

ಸಕಲ ಜೀವರಿಗೆ ಲೇಸ ಬಯಸಿದ
ಬಸವನ ಕಲ್ಯಾಣಕೆ
ದಾಳಿಯಿಕ್ಕಿದ ದುರುಳರ
ಹಿಂಡನ್ನು ಇರಿದು ತರಿದ
ವೀರ ಗಣಾಧೀಶ…

ಜಗದ ಬದುಕಿನ ಸಂಜೀವಿನಿ
ಎನಿಸಿದ ವಚನಗಳ ನಿಟ್ಟನ್ನು
ಕಾಪಿಟ್ಟು ಕೊಟ್ಟ
ಜೀವ ರಕ್ಷಕ ಧೀರ
ನಮ್ಮನೆಲ್ಲಾ ಕಾಪಾಡಿದ
ಕರುಣಾಳು
ನಿಮಗಿದೋ ಶರಣು
ಶರಣು…ಶರಣು…..

-ಕೆ.ಶಶಿಕಾಂತ
ಲಿಂಗಸೂಗೂರ

Don`t copy text!