ಮತ್ತೆ ಬೇರೆ ಕುರುಹುಂಟೇ ?
ಅಂಗದ ಗುಣವನರತು ಲಿಂಗವನರಿಯಬೇಕೆಂಬರು
ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ ?
ಅಂಗವೆ ಲಿಂಗ, ನಿರಂಗವೆ ಸಂಗ.
ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ.
-ನಿಜಶರಣ ಅಂಬಿಗರ ಚೌಡಯ್ಯ
ಹಿರಿಯ ಅನುಭವಿ ದಿಟ್ಟ ಗಣಾಚಾರಿ ಬಂಡುಕೋರ ಲಿಂಗ ತತ್ವ ನಿಷ್ಠ ಅಂಬಿಗರ ಚೌಡಯ್ಯನವರ ವಚನಗಳು ಭವಿಗಳಿಗೆ ಚಾಟಿ ಏಟು ಇದ್ದಂತೆ. ಶರಣರ ಸಂಕುಲದಲ್ಲಿ ಅತ್ಯಂತ ದಿಟ್ಟಗಟ್ಟಿ ಧ್ವನಿ ಎಂದರೆ ಅನುಭವಿ ವಚನಕಾರ ಅಂಬಿಗರ ಚೌಡಯ್ಯನವರದ್ದು.
ಇವತ್ತಿನ ಹಾವೇರಿ ಜಿಲ್ಲೆಯ ಅಂದಿನ ಶಿವಪುರ ನಂತರದಲ್ಲಿ ಚೌಡಯ್ಯದಾನಪುರ ಗ್ರಾಮ. ತಂದೆ ವಿರೂಪಾಕ್ಷ ತಾಯಿ ಪಂಪಾದೇವಿ ಮಡದಿ ಸುಲೋಚನಾ ಮಗ ಪುರವಂತ . ಮೂಲತಃ ಅಂಬಿಗರ ಚೌಡಯ್ಯನು ಬೆಸ್ತ ನಾವಿಕ ಅಂಬಿಗ ವೃತ್ತಿಯನ್ನು ನಡೆಸುವವನು.
ಒಂದು ದಿನ ಗುತ್ತಲ ರಾಜರ ಮಕ್ಕಳು ನೌಕಾ ವಿಹಾರಕ್ಕೆ ಹೋದಾಗ ದೋಣಿ ಮುಳುಗಿ ಮಕ್ಕಳು ಸಾಯುವ ಸಂದರ್ಭದಲ್ಲಿ ಅಂಬಿಗರ ಚೌಡೇಶ ರಾಜನ ಮಕ್ಕಳನ್ನು ಬದುಕಿಸಿದನೆಂಬ ಪ್ರತೀತಿ ಇದೆ. ಇದಕ್ಕೆ ಪ್ರತಿಯಾಗಿ ಗುತ್ತಲ ರಾಜನು ನಿಜಶರಣ ಅಂಬಿಗರ ಚೌಡಯ್ಯನಿಗೆ ನೂರಾರು ಎಕರೆ ಭೂಮಿಯನ್ನು ಬಹುಮಾನದ ರೂಪದಲ್ಲಿ ಉಂಬಳಿಯಾಗಿ ಕೊಟ್ಟನಂತೆ ಸತ್ಯ ಶುದ್ಧ ಕಾಯಕ ಮಾಡುವ ಅಂಬಿಗರ ಚೌಡಯ್ಯನಿಗೆ ಇಷ್ಟೊಂದು ಪ್ರಮಾಣದ ಭೂಮಿಯನ್ನು ತಾನೊಬ್ಬನೇ ಏಕೆ ಹೊಂದಬೇಕು ಅದನ್ನು ತನ್ನ ಊರಾದ ಶಿವಪುರಕ್ಕೆ ದಾನವಾಗಿ ಕೊಟ್ಟನು. ಹೀಗಾಗಿ ಶಿವಪುರದ ಗ್ರಾಮದ ಜನತೆಯ ಕಲ್ಯಾಣಕ್ಕಾಗಿ ತನಗೆ ದೊರೆತ ಭೂಮಿಯನ್ನು ದಾನವಾಗಿ ಕೊಟ್ಟ ಪರಿಣಾಮವಾಗಿ ಶಿವಪುರವನ್ನು ದಾನಪುರ ಎಂದು ಕರೆವರು.
ಇವನ ವಚನಗಳಲ್ಲಿ ವಸ್ತು ನಿಷ್ಟತೆ ನೇರವಾಗಿ ಹೇಳುವ ಪ್ರಾಮಾಣಿಕ ಪ್ರಯತ್ನ ಸ್ತುತ್ಯ.
ಶರಣ ಸತಿ ಲಿಂಗ ಪತಿ ಎಂದು ಅಪ್ಪ ಬಸವಣ್ಣನವರು ಹೇಳಿದಾಗ. ಅದನ್ನು ಸಾತ್ವಿಕವಾಗಿ ವಿರೋಧಿಸಿದ ಧೀರ ನಿಜ ಶರಣ. ಈ ಹಿನ್ನೆಲೆಯಲ್ಲಿ ಮೇಲಿನ ವಚನ ವಿಶ್ಲೇಷಣೆ ಪಡೆಯುತ್ತದೆ.
ಅಂಗದ ಗುಣವನರತು ಲಿಂಗವನರಿಯಬೇಕೆಂಬರು
ಅಂಗ ಕಾಯಗುಣ ಅರಿತು ಲಿಂಗ ಸಾಧನೆ ಮಾಡಬೇಕೆಂಬರು. ಶರೀರ ಸಂಬಂಧವಾದ ತಾಮಸ ವಿಷಯ ಮನುಷ್ಯನ ಸತ್ ಚಿತ್ ಆನಂದವನ್ನು ಹದಗೆಡಿಸುವ ಅವ ಗುಣಗಳು. ಇವುಗಳನ್ನು ಸಂಪೂರ್ಣ ನಿಗ್ರಹಿಸಿ ಕಾಯ ಶುದ್ಧ ಮನ ಶುದ್ಧವಾದಲ್ಲಿ ಅಂಗವೇ ದೇವನಿರುವ ಪವಿತ್ರ ಪ್ರಸನ್ನ ಸ್ಥಾನ. ಹಿರಿಯರ ಆಗ್ರಹದಂತೆ ಅಪೇಕ್ಷೆಗೆ ಭಕ್ತರು ಶರೀರ ಸ್ವಾಸ್ತ್ಯ ಬಗ್ಗೆ ಗಮನ ಹರಿಸುವುದು ಅಂಗದ ಅವಗುಣ ಕಳೆದು ಸಾತ್ವಿಕ ಭಾವ ಮೂಡಿಸಲು ಯತ್ನಿಸುವುದು ಭಕ್ತರ ಬೇರೆ ಬೇರೆ ಕಸರತ್ತುಗಳು
ಅಂಗದ ಗುಣವನರತು ಲಿಂಗವನರಿಯಬೇಕೆಂಬರು ಇದು ಹಿರಿಯರ ಮಾತು ಮತ್ತು ನಡೆದು ಬಂದ ಸಂಪ್ರದಾಯ.
ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ ?
ಅಂಗದ ಶುಚಿತ್ವ ಭಾವ ಮನ ಶುದ್ಧತೆಯ ರೀತಿಯನ್ನು ಕಂಡು ಕೊಂಡು ತನು ಮನ ಭಾವ ಶುದ್ಧವಾದ ಬಳಿಕ ಅಂಗವೇ ಲಿಂಗವೆಂದರಿತ ಬಳಿಕ ಲಿಂಗಕ್ಕೆ ಮತ್ತೆ ಬೇರೊಂದು ಕುರುಹು ಉಂಟೆ? ಎಂದು ಪ್ರಶ್ನಿಸುವ ಮೂಲಕ ನಮ್ಮ ಕಾಯ ಅಂಗವೇ ಲಿಂಗವಾಗಬೇಕು ಎಂದು ಆಶಯ ವ್ಯಕ್ತಪಡಿಸುವ
ಮಹಾ ತತ್ವನಿಷ್ಟ ಅಂಬಿಗರ ಚೌಡಯ್ಯ ಅವರ ಪ್ರಾಮಾಣಿಕ ಕಳಕಳಿ ನಿಜಕ್ಕೂ ಗಟ್ಟಿ ಧ್ವನಿಯ ಅಪ್ರತಿಮ ಅನುಭವ ನುಡಿಗಳು
ಅಂಗವೆ ಲಿಂಗ, ನಿರಂಗವೆ ಸಂಗ.
ಅಂಗವೆ ಲಿಂಗವಾಗಿ ಅಂಗಗುಣ ವಿಮುಕ್ತಿ ನಿರಂಗ ಏಕಾಂತದ ಲೋಕಾಂತದ ಸುಂದರ ಅನುಭವವೇ ಸಂಗ. ಇದನ್ನೇ ದೈವೀ ಸಂಬಂಧ ಎಂದು ನಿಜ ಶರಣ ಅಂಬಿಗರ ಚೌಡಯ್ಯನವರ ಅಭಿಮತ. ಭಕ್ತ ತಾನು ತನ್ನ ಸ್ವಂತ ಪ್ರಜ್ಞೆಯ ಜೊತೆಗೆ ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಬದುಕಬಹುದು ಎಂಬ ವಿಶ್ವಾಸ ಮತ್ತು ತಾತ್ವಿಕ ಗಟ್ಟಿತನ. ಅಂಗವೇ ಆಚಾರವೇ ಲಿಂಗ
ಅನುಭಾವವೇ ಜಂಗಮ ಇವುಗಳನ್ನು ಅರಿಯುವ ಸುಂದರ ಭಾವವೇ ಗುರು. ಇವೆಲ್ಲವೂ ಕಾಯ ಗುಣಗಳು.
ಭಾವದಅಂಗವನರಿಯಬೇಕೆಂದನಂಬಿಗ ಚೌಡಯ್ಯ.ನಿಜಶರಣ ಅಂಬಿಗರ ಚೌಡಯ್ಯ
ಕಾಯ ಹಸನಗೊಳಿಸಿದ ಭವಿ ತನ್ನ ತನು ಶುದ್ಧ ತನ್ನ ಭಾವ ಶುದ್ಧ ತನ್ನ ಸತ್ ಚಿತ್ ಶುದ್ಧ ತನ್ನ ಆಚಾರ ಶುದ್ಧವಾದ ಮೇಲೆ ತನ್ನ ಅಂಗವೇ ಲಿಂಗ. ಇಂತಹ ಭಾವದ ಅಂಗ ಅಂದ್ರೆ ಪ್ರಜ್ಞೆಯ ವಿವಿಧ ಬಗೆಯ ವಿಕಾಸದ ಹಂತವನ್ನು ಅರಿಯುವುದು ಬಲು ಮುಖ್ಯ ಅದು ಭಕ್ತನ ಸಾಧನ ಮತ್ತು ಯೋಗ. ಇಂತಹ ಯೋಗ ಸಾಧನೆಗೆ ಅಷ್ಟಾವರಣ ಕುರುಹುಗಳು ಬಾಹ್ಯ ಮತ್ತು ಅಂತರಂಗದ ಪ್ರಜ್ಞೆಯನ್ನು ಅರಿವನ್ನು ಅನುಸಂಧಾನಗೊಳಿಸಲು ಮಾತ್ರ ಉಪಯುಕ್ತ. ಒಮ್ಮೆ ಅಂಗವೇ ಲಿಂಗವಾದಾಗ ಬಾಹ್ಯ ಲಿಂಗಗಳು ನೈಪತ್ಯಕ್ಕೆ ಜಾರುತ್ತವೆ
ಹಾಗಂತ ಲಿಂಗ ಯೋಗವನ್ನು ಅಂಬಿಗರ ಚೌಡಯ್ಯ ಅಲ್ಲಗಳೆದಿಲ್ಲ. ಆದರೆ ಭಾವ ಶುದ್ಧತೆಗೆ ಕಾಯಕಕ್ಕೆ ಆದ್ಯತೆ ನೀಡಿರುವ ಲಿಂಗ ಸನ್ನಿಹಿತ ಪ್ರಜ್ಞೆ ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಣುತ್ತೇವೆ.
ಇಂತಹ ಭಾವ ಶುದ್ಧತೆ ಅರಿವಿನ ಸಾಕಾರತೆ ಪ್ರಜ್ಞೆಯನ್ನು ಸುಂದರವಾಗಿಡುವ ನಿತ್ಯ ಯೋಗ ಶರಣರದ್ದು ಎಂದು ಹೇಳುತ್ತಾ ಅಂಗ ಲಿಂಗ ಸಮಾನತೆ ಸಾಮರಸ್ಯದ ಅರಿವು ಮೂಡಿಸುವ ಇವರ ವಚನಗಳು ಅಧ್ಯಯನಕಾರರಲ್ಲಿ ಅಧ್ಯಯನ ಬದ್ಧತೆ ಶಿಸ್ತು ಮತ್ತು ಮಾನಸಿಕವಾಗಿ ತನ್ನನ್ನು ವಚನ ಚಳವಳಿಯಲ್ಲಿ ಭಾಗವಹಿಸಲು ಪ್ರೇರೇಪಿಸುತ್ತವೇ.
–ಡಾ ಶಶಿಕಾಂತ ಪಟ್ಟಣ ರಾಮದುರ್ಗ