ಸಾಹಿತ್ಯ ಕ್ಷೇತ್ರದ ಪ್ರಭೆ- ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ.

ಸಾಹಿತ್ಯ ಕ್ಷೇತ್ರದ ಪ್ರಭೆ.

ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ.

ಹೈದರಾಬಾದ ಕರ್ನಾಟಕ ಎಂದರೆ ಈಗಿನ ಕಲ್ಯಾಣ ಕರ್ನಾಟಕವೆಂದು ಕರೆಸಿಕೊಳ್ಳುವ ಅವಿಭಜಿತ ರಾಯಚೂರ, ಕಲಬುರ್ಗಿ, ಮತ್ತು ಬೀದರ ಜಿಲ್ಲೆಗಳು. ಇವು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದಿದ್ದರೂ ಅಲ್ಲಲ್ಲಿ ಆವಾಗಾವಾಗ ಮಾಹಾತ್ಮರು ಹುಟ್ಟಿ ಬೆಳೆದು ತಮ್ಮ ತಮ್ಮ ಕರ್ಮಗಳಿಂದ ಮತ್ತು ಜ್ಞಾನದಿಂದ ಪಾವನಗೊಳಿಸಿದ್ದಾರೆ. ದಾಸಸಾಹಿತ್ಯ, ವಚನಲೋಕ ಮತ್ತು ಇನ್ನಿತರ ಸಾಹಿತ್ಯ ಕೃಷಿಗಳಿಗೆ ಮೆರುಗು ನೀಡಿ ಶ್ರೀಮಂತಗೊಳಿಸಿದ್ದಾರೆ.

ಅನೇಕ ದಾಸವರೇಣ್ಯರು ಭಕ್ತಿ ಪಂಥಕ್ಕೆ ಕೊಡುಗೆ ನೀಡಿದವರು ಇದೇ ಪ್ರದೇಶದವರು. ವಚನ ಸಾಹಿತ್ಯಕ್ಕೆ ಶ್ರೀಬಸವಣ್ಣನವರು ಮತ್ತು ಅವರ ಶಿಷ್ಯರು ನೀಡಿದ ಕೊಡುಗೆಗಳನ್ನು ನೆನೆಯಬಹುದು. ಮಳಖೇಡ ಯತಿಗಳು , ಮಂತ್ರಾಲಯದ ಪ್ರಭುಗಳು ಇದೇ ಭೂಮಿಯಲ್ಲಿ ಸಂಚರಿಸುತ್ತ ಜ್ಞಾನದೀಪ ಬೆಳಗಿಸಿದ್ದಾರೆ. ಇತ್ತೀಚೆಗೆ  ಕನ್ನಡದ ಗಜಲ್ ಗಳಿಗೆ  ಮಹತ್ವ ಕೊಟ್ಟು ನೀರೆರೆದವರು ಹೆಚ್ಚಾಗಿ ಈ ಪ್ರದೇಶದವರೆ ಆಗಿದ್ದಾರೆ. ತಮ್ಮ ತಮ್ಮ ಆಳವಾದ ಜ್ಞಾನದಿಂದ ಕನ್ನಡ ಭಾಷೆಯಲ್ಲಿ “ಗಜಲ್” ಗಳನ್ನು ರಚಿಸಿ “ಗಜಲ್ ಸಾಹಿತ್ಯ” ಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಸರಸ, ವಿರಸ, ಗಾಂಭೀರ್ಯದಿಂದ ಕೂಡಿದ ಸುಂದರ ಗಜಲ್ ಗಳನ್ನು ರಚಿಸಿ ಶ್ರೀಮಂತಗೊಳಿಸಿದ್ದಾರೆ.

ಇಂತಹ ಪವಿತ್ರ ನಾಡಿನಲ್ಲಿ ಹುಟ್ಟಿ ಬೆಳೆದು , ಶಿಕ್ಷಣ ಪಡೆದು ವಿಜಾಪುರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡವರು ಶ್ರೀಮತಿ ಪ್ರಭಾವತಿ ಶಾಂತಮಲ್ಲಪ್ಪ ದೇಸಾಯಿಯವರು. ಹುಟ್ಟಿದ ಮನೆ ಮತ್ತು ಮೆಟ್ಟಿದ ಮನೆಗಳು ಬೇರೆ ಬೇರೆ ಪ್ರದೇಶಗಳಾದರೂ ವಿಜಾಪುರ ಜಿಲ್ಲೆಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ನಿವೃತ್ತಿ ಜೀವನವನ್ನು ಸಾಗಿಸುತ್ತಿದ್ದಾರೆ. ನಾನು ವಿಜಾಪೂರದ ನಿವಾಸಿಯೆಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತ “ಸಾಹಿತ್ಯದ” ಕೃಷಿಗೆ ಬಹು ಮಹತ್ವ ಕೊಟ್ಟು ಉತ್ತಮ ಕವಿಯೆಂದು ತಮ್ಮ ಹೆಸರನ್ನು ಸಾಹಿತ್ಯ ಕ್ಷೇತ್ರದಲ್ಲಿ ನಮೂದಿಸಿದ್ದಾರೆ. “ಗಜಲ್” ಗಳನ್ನು ರಸಮಯವಾಗಿಯೂ ಮತ್ತು ಹೃದಯಕ್ಕೆ ತಟ್ಟುವಂತೆ ಬರೆಯುವದರಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಇವರು ರಚಿಸಿದ ಮತ್ತು ರಚಿಸುತ್ತಿರುವ ಗಜಲ್ ಗಳು ಕವನಗಳು ಹನಿಗವನಗಳು ಪ್ರಬಂಧಗಳು ಇನ್ನಿತರ ಕಾವ್ಯಗಳು ಜನಮನದಲ್ಲಿ ಛಾಪು ಮೂಡಿಸಿವೆ ಮತ್ತು ಮೂಡಿಸುತ್ತಾ ಇವೆ. ಇವರ ಗಜಲ್ಗಳು ತುಂಬಾ ಭಾವನಾತ್ಮಕವಾಗಿ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಲಿವೆ. ಇವೆಲ್ಲವುಗಳನ್ನು ಸವಿಸ್ತಾರವಾಗಿ ನೋಡೋಣ.

ಮನೆತನಗಳ ಹಿನ್ನೆಲೆ ಮತ್ತು ಇತರ ಮಾಹಿತಿಗಳು.

ಸುಸಂಸ್ಕೃತ “ಹಸ್ಮಕಲ್” ಮನೆತನದಲ್ಲಿ ಜನನ. ರಾಯಚೂರು ಜಿಲ್ಲೆಯ ಹಸಮಕಲ್ಲ ಗ್ರಾಮದವರು. ಇವರ ತಂದೆ ರಾಯಚೂರಿನ ಲ್ಲಿ ನೆಲೆ ನಿಂತವರು. ತಂದೆ ತಾಯಿಗಳಿಗೆ ನಾಲ್ಕನೆಯವರಾಗಿ ಹುಟ್ಟಿ ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ಪ್ರಾಥಮಿಕ ಶಿಕ್ಷಣವನ್ನು ರಾಯಚೂರಿನಲ್ಲಿ ಮುಗಿಸಿ ಹಿರಿಯಕ್ಕ ಶೈಲಜಾ ಇವರಲ್ಲಿ ಕಲಬುರ್ಗಿಯಲ್ಲಿ ಪಿ ಯು ಸಿ ವರೆಗೆ ಶಿಕ್ಷಣ . ಈ ಹಿರಿಯಕ್ಕ ಡಾಕ್ಟರೇಟ ಪದವಿ ಹೊಂದಿದವರು . ಈಗ ತೀರಿಕೊಂಡಿದ್ದಾರೆ. ಪಿ ಯು ಸಿ ನಂತರ ಹುಬ್ಬಳ್ಳಿಯಲ್ಲಿ ಮೂರು ವರ್ಷದ “ಡಿಪ್ಲೋಮಾ ಇನ್ ಡ್ರೆಸ್ ಮೇಕಿಂಗ ಕೋರ್ಸ್ “ ಮುಗಿಸಿದರು.

ಡಿಸೆಂಬರ 1969ರಲ್ಲಿ ಬಿಜಾಪೂರದ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ಮುಖ್ಯ ಬೋಧಕರಾಗಿ ಕೆಲಸಕ್ಕೆ ಸೇರಿದರು. 1973ರಲ್ಲಿ ಅಫಜಲಪೂರ ತಾಲೂಕಿನ ಅರ್ಜುಣಗಿಯ ಶ್ರೀಶಾಂತಮಲ್ಲಪ್ಪ ದೇಸಾಯಿ ಇವರ ಜತೆ ಲಗ್ನವಾಯಿತು. ಇವರ ಪತಿ ಒಳ್ಳೆಯ ಶಿಕ್ಷಣ ತಜ್ಞರು. ಬಿಎಸ್ ಸಿ ಬಿಎಡ್ ಮುಗಿಸಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರೆಂದು ಉತ್ತಮ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದವರು. ಅಲ್ಲಿಯೇ ಹೊಲಮನೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮೂರು ಜನ ಮಕ್ಕಳು ಇವರಿಗೆ.

ಶ್ರೀಮತಿ ಪ್ರಭಾವತಿದೇಸಾಯಿ ಇವರು ನೌಕರಿ ಮಾಡುತ್ತಲೇ ಎರಡು ಪದವಿಗಳನ್ನು ಮುಗಿಸಿ ನಿವೃತ್ತಿಯ ನಂತರ ಎಂ ಎ ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಮಹನೀಯರು. ಸರಕಾರಿ ನೌಕರಿ ಮುಂದಿನ ಶಿಕ್ಷಣ ಮತ್ತು ಸಾಹಿತ್ಯದ ಕೃಷಿ ಎಲ್ಲವನ್ನು ಸತತವಾಗಿ ನಿರ್ವಹಿಸಿದ ಜಾಣ್ಮೆ ಇವರದು. ಅವಿಶ್ರಾಂತ ಜೀವನ , ತುಂಬಾ ತುಂಬಾ ಉತ್ಸಾಹಭರಿತ ಜೀವನ. ಎಲ್ಲವನ್ನು ಸರಿಯಾಗಿ ತೂಗಿಸಿಕೊಂಡು ಹೋದದ್ದು ದೊಡ್ಡ ಪವಾಡವೇ ಸರಿ . 75ರ ಹರೆಯದ ಇವರು ಇನ್ನೂ ಸಾಹಿತ್ಯ ಸೇವೆ ಮಾಡುತ್ತ ವಿಮರ್ಶೆಗಳನ್ನು ಬರೆಯುವದರಲ್ಲಿ ತಮ್ಮ ಜಾಣ್ಮೆಯನ್ನು ತೋರಿಸುತ್ತಿರುವದು ಅನುಪಮವಾದದ್ದು ಮತ್ತು ಶ್ಲಾಘನೀಯವಾದದ್ದು. ಇವರು ಇವೆಲ್ಲದರ ಸಾಧನೆಗಳನ್ನು ಸಾಧಿಸುತ್ತ ಒಳ್ಳೆಯ ಸಾಧಕರಾಗಿದ್ದಾರೆ. ಇವರ ಸಾಧನೆಗಳಿಗೆ ಪೂರ್ಣವಿರಾಮ ಇಲ್ಲವೇ ಇಲ್ಲ. ಇನ್ನೂ ನಾನು ಮಾಡುವ ಸಾಧನೆಗಳು ಬಹಳ ಇವೆ ಎಂದು ನಗುತ್ತಲೇ ನುಡಿಯುತ್ತಾರೆ. ಇವರು ರಚಿಸಿದ ಕವನಗಳು ಹನಿಗವನಗಳು ಪ್ರಬಂಧಗಳು ಗಜಲ್ಗಳು ಇನ್ನಿತರ ಕೃತಿಗಳು ಪರಿಪೂರ್ಣವಾಗಿದ್ದು ಒಳ್ಳೆಯ ರಸಭರಿತ ಹಣ್ಣುಗಳಂತೆ ಸ್ವಾದ ನೀಡುತ್ತಲಿವೆ.

ಶ್ರೀಮತಿ ಪ್ರಭಾವತಿ ದೇಸಾಯಿ ಅವರ ಕೃತಿಗಳು.

1. ಕವನ ಸಂಕಲನಗಳು ಮತ್ತು ಹನಿಗವನಗಳು.
1. ಮೌನ ಕೋಗಿಲೆ ಕವನಗಳು 2002
2. ಮಿಶ್ರ ಕಾವ್ಯ ಕವನಗಳು 2016
3. ಮುಂಗಾರು ಹನಿಗಳು ಹನಿಗವನಗಳು 2005
4. ಮಧು ಸಾರ ಹನಿಗವನಗಳು 2012

2. ಕನ್ನಡ ಗಜಲ್ ಗಳು.
1. ಮೌನ ಇಂಚರ (ಅಲಭ್ಯ) 2007
2. ಮಿಡಿತ 2014
3. ನಿನಾದ 2018
4. ಭಾವಗಂಧಿ 2020

3. ಆಧುನಿಕ ವಚನಗಳು.
1. ಶಾಂತ ಪ್ರಭೆಯ ವಚನಗಳು 2011
2.ವಚನ ಪ್ರಭೆ (ಅಲಭ್ಯ) 2013
3.ವಚನ ಮಿಂಚು 2017

4. ಪ್ರಬಂಧಗಳು ಸಂಕಲನಗಳು.
1. ಮೊಬಾಯಿಲ್ ಪಯಣ ಹಾಗೂ ಇತರ ಪ್ರಬಂಧಗಳು. 2009
2. ಮುಸ್ಸಂಜೆ ಕಥಾಸಂಕಲನಗಳು. 2012
3. ಸ್ವಚ್ಛ ಭಾರತ ಹಾಗೂ ಇತರ ಪ್ರಬಂಧಗಳು (ಅಲಭ್ಯ) 2015
4. ಕಪ್ಪು ಹಣ ಹಾಗೂ ಇತರ ಪ್ರಬಂಧಗಳು. 2019

5. ಇತರ ಕೃತಿಗಳು.
1. ರಂಗ ಸ್ಪಂದನ ಸಂಪಾದಿತ ಕೃತಿ (ಅಲಭ್ಯ) 2006
2. ಪಕ್ಷಿನೋಟ ಲಂಡನ್ ಪ್ರವಾಸ ಕಥನ 2014
3. ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ ತರಹೀ ಗಜಲ್ ಗಳು 2021

6. ದರ್ಪಣ.

ಪ್ರಭಾವತಿ ದೇಸಾಯಿ ಇವರ ಗಜಲ್ ಅನುಸಂಧಾನ 2021

ಇವರು ಒಟ್ಟು 19-20 ಪುಸ್ತಕಗಳನ್ನು ರಚಿಸಿ ಮುದ್ರಿಸಿದ್ದಾರೆ. ಕವನಗಳು ಹನಿಗವನಗಳು ಕನ್ನಡ ಗಜಲ್ ಗಳು ಆಧುನಿಕ ವಚನಗಳು ಪ್ರಬಂಧಗಳು ಮತ್ತು ಸಂಕಲನಗಳು ಹಾಗೂ ಇತರ ಪ್ರಬಂಧಗಳನ್ನು ರಚಿಸಿ ಮುದ್ರಿಸಿ ಸಾಹಿತ್ಯಲೋಕಕ್ಕೆ ಅರ್ಪಣೆ ಮಾಡಿದ್ದಾರೆ. ಇವೆಲ್ಲವುಗಳ ಕುರಿತು ಒಂದೊಂದಾಗಿ ತಮ್ಮ ಗಮನಕ್ಕೆ ತರಲು ಪ್ರಯತ್ನಪಡುವೆ. ಅನುಪಮ ಶಬ್ದಗಳ ಜೋಡಣೆ ಅರ್ಥ ಗರ್ಭಿತವಾದ ವಿಚಾರ ವೇದನೆ, ಸರಸ ವಿರಸದ ನುಡಿಗಳು ಮನಸೊರೆಗೊಳ್ಳುತ್ತವೆ. ಗಜಲ್ ಗಳನ್ನು ಓದುವಾಗ ಕಣ್ಣೀರ ಹನಿಗಳು ಉದುರುವದುಂಟು. ಅಷ್ಟು ಹೃದಯ ಸ್ಪರ್ಶಿಸುವ ನುಡಿಗಳನ್ನು ಒಳಗೊಂಡಿವೆ.

1. ಕವನ ಸಂಕಲನಗಳು ಮತ್ತು ಹನಿಗವನಗಳು.
ಬಲು ಸುಂದರವಾದ ಕವನಗಳ ಸಂಕಲನ ಇದು ಮೌನಕೋಗಿಲೆ ಕವನಗಳು ಅರ್ಥ ಗರ್ಭಿತವಾಗಿವೆ.
ಬಳುಕುವಲತೆ, ಹುಲುಸಾಗಿ ಬೆಳೆದು ಹೆಮ್ಮರವನಪ್ಪಿ ಅರಳಲಿರುವ ಮತ್ತುಅರಳಿದ ಸುವಾಸನೆಯನ್ನು ಬೀರುವ ಮಲ್ಲಿಗೆ ಎಲ್ಲರನ್ನು ಸ್ವಾಗತಿಸಲು ಮನವು ನುಡಿಯಿತು. ಇದೇ “ಪ್ರಕೃತಿ”. ಇದೇ ಲತೆ ಸುಳಿಗಾಳಿಗೆ ಸಿಲುಕಿ ಹೆಮ್ಮರದ ಅಡಿಗೆ ಸಿಲುಕಿ ನರಳುತ ಕೈಚಾಚಿ ಎಲ್ಲರನು ಕರೆಯುತಿರೆ ರಕ್ಷಣೆಗಾಗಿ, ಇದಕ್ಕೆ ಮನ ಹೇಳಿತು “ವಿಕೃತಿ” ಎಂದು. ಪ್ರಕೃತಿ ವಿಕೃತಿಯ ಸುಂದರ ವರ್ಣನೆಯನ್ನು ಮನ ಮುಟ್ಟುವಂತೆ ವಿವರಣೆಯನ್ನು ಕವಿಯು ನೀಡಿದ್ದಾರೆ.
ಇದೇ ಸಂಕಲನದಲ್ಲಿ ಹೆಣ್ಣಾಗಿ ಹುಟ್ಟೀನಿ ಹಡೆದವರಿಗೆ ಹುಣ್ಣಾಗೀನಿ ಅಂಗೈಯಾಗಿನಮುಳ್ಳಾಗಿನೀ ಸಮಾಜದಾಗ ಕೀಳಾಗೀನಿ ಎಂಬ ನುಡಿಗಳಲ್ಲಿ ದುರಂತದ ಛಾಯೆ ಅಡಗಿದೆ. ಓದುಗರ ಮನಗಳನ್ನು ಕದಡುವ ಶಬ್ದಗಳ ವರ್ಣನೆ ಚೆನ್ನಾಗಿದೆ. ಮನ ಮಿಡಿಯುತ್ತದೆ. ಸುಮಾರು 50 ಕವನಗಳ ಸಂಕಲನವು ತುಂಬಾ ಉತ್ತಮವಾಗಿದೆ. ಎಲ್ಲ ಕವನಗಳು ರಸಮಯ ಮತ್ತು ವಿರಸಮಯ ಕ್ಷಣಗಳನ್ನು ಎತ್ತಿ ತೋರಿಸುತ್ತವೆ. ಇದರಂತೆ ಮಿಶ್ರಕಾವ್ಯದ ಸಂಕಲನವು ತುಂಬಾ ಯೋಗ್ಯಕವನಗಳನ್ನು ಹೊಂದಿದ್ದು ನಿಜವಾದ ಅರ್ಥಗಳನ್ನು ಬಿಂಬಿಸುತ್ತಾ ಹೋಗುತ್ತವೆ. ಇಲ್ಲಿ ಕವಿಯು ತುಂಬಾ ಜಾಣ್ಮೆಯಿಂದ ಪದಗಳ ಜೋಡಣೆ ಮಾಡಿದ್ದಾರೆ.

ಮಾವು ಬೇವಿನ ಚಿಗುರಿನಲಿ
ಮಲ್ಲಿಗೆ ಸಂಪಿಗೆಯ ಪರಿಮಳದಲಿ
ಕೋಗಿಲೆಯ ಪಂಚಮಗಾನದಲಿ
ವಸಂತಾಗಮವು ಕಾಣುವದು ಜಗವು 
ಎಂತಹ ಸುಂದರ ವರ್ಣನೆ ಇದು.
ಮಧುಸಾರ ಪುಸ್ತಕವು ಹನಿಗವನಗಳ ಸಂಗ್ರಹಣೆ ಇದ್ದು ಸುಂದರವಾದ ವರ್ಣನೆಗಳನ್ನು ಒಳಗೊಂಡಿವೆ
ಮುಂಜಾವಿನ ಮುಸುಕಿನಲಿ
ಕೋಗಿಲೆಯ ಇಂಚರದಲಿ
ನಲ್ಲೆ ಮೈಮರೆತಿರಲು
ಅರುಣ ಪಾರಿಜಾತದಲಿ
ಸ್ಪರ್ಶಿಸಿ ಎಚ್ಚರಿಸಿದ ʼ
ಇಲ್ಲಿ ಅರುಣದೇವನ ವೈಭವವು ಕಾಣಬರುತ್ತದೆ.

ಮುಂಗಾರು ಹನಿಗಳ ಸಂಕಲನವೂ ಓದುವಂತಹ ಹನಿಗವನಗಳನ್ನು ಒಳಗೊಂಡಿದೆ.
ಹೆರಲಿಲ್ಲ ಬಿದಿರು
ಹೂಕಾಯಿ ಹಣ್ಣು
ಹಾಡಿದಳು ಲಾಲಿ
ತೊಟ್ಟಿಲಾಗಿ ತೂಗಿ
ಹೊತ್ತಳು ಬುಟ್ಟಿಯಾಗಿ
ಹಣ್ಣುಕಾಯಿ ಹೂಗಳನು”
ಇಲ್ಲಿ ಬಿದಿರಿನ ಮಹತ್ವವನ್ನು ಬಿಂಬಿಸಲಾಗಿದೆ. ಬದಿರು ಬಿರುಸಾದರೂ ಮಾತೃಹೃದಯದ ಕಲ್ಪನೆ ಮಾಡಿ ಅದರ ಮಹತ್ವವನ್ನು ಕವಿ ಇಲ್ಲಿ ತಿಳಿಸಿದ್ದಾರೆ.

2. ಕನ್ನಡದ ಗಜಲ್ ಗಳು.
ಮಿಡಿತ ನಿನಾದ ಮತ್ತು ಭಾವಗಂಧಿ ಇವುಗಳು ಇವರ ಗಜಲ್ ಸಂಕಲನಗಳು. ಈಮೂರು ಸಂಕಲನಗಳು ಹೆಸರೇ ಸೂಚಿಸುವಂತೆ ಮಿಡಿತಗಳ ನಿನಾದ ನಾದಗಳ ಮತ್ತು ಭಾವನೆಗಳ ಸುಂದರ ವರ್ಣನೆಗಳನ್ನು ಒಳಗೊಂಡು ಬಲು ಅರ್ಥ ಪೂರ್ಣವಾಗಿವೆ.
“ನೀ ಉಟ್ಟ ಹಸಿರು ರೇಶ್ಮೆ ಉಡುಪು ಚೆಲುವಾಗಿದೆ ಗೆಳತಿ,
ನಿನ್ನ ಆ ಹಳೆಯ ಹಳದಿ ಉಡುಪು ಎಲ್ಲಿ ಹೋಗಿದೆ ಗೆಳತಿ, “
ಹಸಿರು ಪೈರಿಗೆ ಮತ್ತು ಒಣಗಿದ ಮುಪ್ಪಾದ ಪೈರಿಗೆ ಹೋಲಿಸಿ ವರ್ಣಿಸಲಾಗಿದೆ. ಎಂತಹ ಸುಂದರ ಉಪಮೆಯು ಇದು ಸೃಷ್ಟಿಗೆ.
ಇನಿಯನ ಬರುವಿಕೆಗೆ ಕಾಯ್ದ ನಂತರ ಬಂದ ಬೇಸರ ನುಡಿಗಳು ಇವು.
ದಿಡ್ಡಿ ಬಾಗಿಲಲಿ ನೆಟ್ಟ ಕಣ್ಣ ದೀಪದ
ಅರುಣ ಪ್ರಭೆ ಸುಪ್ರಭಾತ ಹಾಡಿದರೂ ಬರಲಿಲ್ಲ ಅವನು “
ಸುಂದರವಾದ ಕಲ್ಪನೆ ಇದರಲ್ಲಿ ಅಡಗಿದೆ. ಇನ್ನೂ ಅನೇಕ ರಸಮಯ , ವಿರಸಮಯ ಮತ್ತು ಗಾಂಭೀರ್ಯಯುಕ್ತವಾದ “ಗಜಲ್” ಗಳು ಇವರಿಂದ ಸಾಹಿತ್ಯಲೋಕಕ್ಕೆ ಅರ್ಪಿತವಾಗಿವೆ.

3. ತರಹೀ ಗಜಲ್ ಗಳು ಮತ್ತು ಆಧುನಿಕ ವಚನಗಳು.
ಗಜಲ್ ಗಳನ್ನು ಹೆಣೆಯುವದರಲ್ಲಿ ಪರಿಣಿತರಾದವರ ಗಜಲ್ ಗಳ ಒಂದು ಸಾಲನ್ನು ಎತ್ತಿಕೊಂಡು ಅದಕ್ಕನುಗುಣವಾಗಿ ಗಜಲ್ ಗಳನ್ನು ರಚಿಸುವದಕ್ಕೆ ತರಹೀಗಜಲ್ ಗಳು ಎಂದು ಕರೆಯುವರು. ಎಪ್ಪತ್ತನಾಲ್ಕು ಗಜಲ್ ಕಾರರ ಬರಹವನ್ನು ಅನುಸರಿಸಿ ತಮ್ಮದೇ ಶೈಲಿಯಲ್ಲಿ ತರಹಿ ಗಜಲ್ ಗಳನ್ನು ಇವರು ರಚಿಸಿದ್ದಾರೆ. ಇವುಗಳಲ್ಲಿ ನಾಜೂಕತೆ ಸರಸ ,ವಿರಸ, ಇನ್ನಿತರ ರಸಗಳ ಮಾಧುರ್ಯ ತುಂಬಿವೆ. ಇವುಗಳನ್ನು ಓದುವಾಗ ಎಲ್ಲರೀತಿಯ ವೇದನೆಯ, ವೇದನೆಯಿಲ್ಲದ ರಸವನ್ನು ಸವಿಯಬಹುದು. ಇದು ಒಂದು ಹೊಸ ಪ್ರಯೋಗವನ್ನು ಲೇಖಕ ಮಾಡಿದ್ದಾರೆ.
ಇದೇ ರೀತಿ ವಚನಗಳು ಉತ್ತಮ ಮತ್ತು ಸೌಂದರ್ಯಯುತವಾಗಿದ್ದು ಓದುವಾಗ ಪೂರ್ಣ ಓದಿ ಮುಗಿಸಬೇಕೆಂಬ ಭಾವನೆ ಉಂಟು ಮಾಡುತ್ತವೆ.
ಪುಷ್ಪವನಗಲದ ಕಂಪಂತೆ
ಶಶಿಯನಗಲದ ಬೆಳದಿಂಗಳಂತೆ
ದೇಹನಗಲದ ಉಸಿರಂತೆ
ಸತಿ ಪತಿಗಳು ಅಗಲದಂತಿದ್ದರೆ
ಅದುವೆ ಸುಖೀಸಂಸಾರ ನೋಡಾ ಶಾಂತಪ್ರಭೆ.

ಅತಿ ಮಧುರವಾದ ಈ ವಚನವು ಓದುಗರ ಮನವನ್ನು ಸೊರೆಗೊಳ್ಳುವದರಲ್ಲಿ ಸಂಶಯವೇ ಇಲ್ಲ. ಇದೇ ತರಹದ ವಚನಗಳು ಸಾಹಿತ್ಯರಂಗದಲ್ಲಿ ಮೆಚ್ಚುಗೆ ಪಡೆಯುತ್ತಲೆ ಇವೆ. ವಚನಗಳನ್ನು ಒಂದಕ್ಕೊಂದು ಮಿಗಿಲು ಎಂಬಂತೆ ರಚಿಸಲಾಗಿವೆ.
ಇವರ ಇನ್ನುಳಿದ ಪ್ರಂಬಂಧಗಳು , ಸಂಕಲನಗಳು ಮಧುರವಾದ ಭಾಷೆಯಿಂದ ರೂಪುಗೊಂಡಿದ್ದು ಮನಸೊರೆಗೊಳ್ಳುತ್ತವೆ.

ಮೊಬಾಯಿಲ್ ಪಯಣ, ಮುಸ್ಸಂಜೆ, ಕಪ್ಪು ಹಣ ಹಾಗೂ ಇತರ ಪ್ರಬಂಧಗಳು ಓದುಗರ ಮನವನ್ನು ಅಪಹರಿಸಿ ತಾವಿದ್ದ ಲೋಕಕ್ಕೆ ಕರೆದೊಯ್ಯುತ್ತಿವೆ. ಲಂಡನ್ ಪ್ರವಾಸದ ಅನುಭವಗಳನ್ನು ಪಕ್ಷಿನೋಟ ಪುಸ್ತಕದಲ್ಲಿ ರಸಮಯವಾಗಿ ವಿವರಿಸಿದ್ದಾರೆ. “ ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ತರಹೀ ಗಜಲ್ ಗಳು ಲೇಖಕರ ಪೂರ್ಣ ಪ್ರಮಾಣದ ಜ್ಞಾನವನ್ನು ಬಿಂಬಿಸುತ್ತವೆ.

ನಾನು ಅನುಭವಿಸಿದ ಸುಂದರ ಕ್ಷಣಗಳನ್ನು ತಿಳಿಸಿ ಈ ಲೇಖನಿಯನ್ನು ಮುಕ್ತಾಯಗೊಳಿಸುವೆ. ಇವರ ಸಾಹಿತ್ಯಸೇವೆ ಮುಂದುವರೆಯಲಿ ಎಂದು ಹೃತ್ಫೂರ್ವಕವಾಗಿ ಆಶಿಸುವೆ.

ಸುಂದರ ಕ್ಷಣಗಳು.

ಮಧುರ ಮಧುರ ಈ ಕ್ಷಣ ಕ್ಷಣಗಳಲಿ,
ರವಿಯ ಕಿರಣಗಳು ಸುತ್ತ ಹರಡುತಲಿ,
“ಗಜಲು” ಮಜಲುಗಳ “ ಮೆಟ್ಟಿಲ” ನೇರುತಲಿ,
“ಪ್ರಭೆ” ಸೂಸುತಿದೆ ತನ್ನ ಕಂಪನು ಬೀರುತಲಿ

 

ಮನಮನದ “ಭಾವನೆ” ಬೆಸೆಯುತ,
ಸರಸವಿರಸಗಳ ಅರಿತು ಅರಹುತ,
“ಮೌನ”ದಿಂದ ಹಿಡಿತ “ಮಿಡಿತ”ಗಳ ಅರಿಯುತ,
ನಾದ”ನಿನಾದ “ ದ ನಾದವ ಹರಹುತ,
“ಪ್ರಭೆ” ಮಿನುಗುತಿದೆ, ನಭದಲಿ, ನಭದಲಿ.

ಕಪ್ಪು ಮೋಡಗಳ ಮಧ್ಯ ಮಧ್ಯದಲಿ ,
ಕಾಣದೇ ಕಾಣುತಿವೆ ಬಲು ಮಿಂಚುಗಳು,
ಮಿಂಚಿನ, ಮಿಂಚಿನ ಬೆಳಕು ಬೆಳಕಿನಲಿ,
ಮಿಂಚುತಿದೆ ಮಿನುಗುತಿದೆ ನಭದಲಿ,
“ಪ್ರಭೆ” ಚಣಚಣದಿ, ಚಣಚಣದಿ.

ಸಾಹಿತ್ಯದ ಕೃಷಿಯಲ್ಲಿ.

“ಗಜಲು” ಮಜಲುಗಳ ಮೆಟ್ಟಿಲನೇರುತ,
“ಭಾವ ಗಂಧದ” ಸುಮಧುರ ಕ್ಷಣಗಳಲಿ,
“ಮೌನ” ದಿಂದ ಹಿಡಿತ “ಮಿಡಿತ”ಗಳ
ನಾದ ನಿನಾದದಿ ಮಿಂಚುತ , ಮಿರುಗುತ,
ಶ್ರೀಮತಿ ಪ್ರಭಾವತಿ ಶಾಂತಮಲ್ಲಪ್ಪ ದೇಸಾಯಿ,
ಇವರ “ಪ್ರಭೆ” ನಭದ ತುಂಬ ಬೆಳಗುತಲಿದೆ,
ಇವರ ಸಾಹಿತ್ಯದ ಸಾಧನೆಗಳಿಗೆ ಕೊನೆಯೇ ಇಲ್ಲ,
ಇವರ “ಗಜಲು”ಗಳಂತೂ ಸುಂದರವಿದ್ದು
ಅಂಬರವನ್ನು ಚುಂಬಿಸುವಂತೆ ಭಾಸವಾಗುತ್ತಿದೆ.
ಸಾಹಿತ್ಯದಲ್ಲಿ ಇರುವ ಆಸಕ್ತಿ ಅನುಪಮವಾದದ್ದು.
ಇವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು
ತುಂಬು ಹೃದಯದಿಂದ ಹಂಬಲಿಸುವೆ.
ಪ್ರೀತಿ ಪುರಸ್ಕರವಾಗಿ ಈ ಬರಹಗಳ ಪುಷ್ಪವನ್ನು
ಅವರಿಗೆ ಸಮರ್ಪಿಸುತ್ತಿದ್ದೇನೆ.

ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ -3
ದೂರವಾಣಿ- 9972087473

 

Don`t copy text!