ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

ಕಲ್ಯಾಣ ಮಹಾಮನೆಯಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರ ನಾಯಕ ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು.
ಕಲ್ಯಾಣ ಕ್ರಾಂತಿಯು ರಕ್ತ ಸಿಕ್ತವಾಗಿ ಮಾರ್ಪಟ್ಟಾಗ ,ವಚನಗಳಿಗೆ ಸನಾತನಿಗಳಿಂದ ಆಪತ್ತು ವಿಪತ್ತು ಬಂದು ಒದಗಿದಾಗ ವಚನಗಳ ಸಂರಕ್ಷಣೆಗೆ ಮುಂದಾಗಿ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಅವುಗಳನ್ನು ಒಂದೆಡೆ ಕ್ರೋಢೀಕರಿಸಿ ಬಿಜ್ಜಳನ ಮಗ ಸೋವಿದೇವ ಹಾಗೂ ಅವನ ಸೈನ್ಯದ ದಾಳಿಯಿಂದ ಉಳಿಸಲು ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು ಹರ ಸಾಹಸ ಯುದ್ಧ ಮಾಡಬೇಕಾಗಿ ಬಂತು.

ಬಸವ ನಿಷ್ಠ ವಚನಕಾರ ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವರು. ಇವರು ಇಂದಿನ ಬಿಜಾಪುರ ಜಿಲ್ಲೆಯ ಹಿಪ್ಪರಗಿ (ದೇವರ ಹಿಪ್ಪರಗಿ) ಜನ್ಮ ತಾಳಿದರು.ಬಸವಣ್ಣ ಅಲ್ಲಮ ಅಕ್ಕ ಮಹಾದೇವಿ ಸಿದ್ಧರಾಮ ಚೆನ್ನ ಬಸವಣ್ಣ ಮತ್ತು ಮರುಳ ಶಂಕರದೇವರ ವಚನಗಳಲ್ಲಿ ಅವರರೆಲ್ಲರ ಪ್ರೀತಿಗೆ ಪಾತ್ರನಾಗಿ ಅವರಿಂದ ಸ್ತುತಿಗೆ ಒಳಗಾಗುತ್ತಾರೆ ಮಡಿವಾಳ ಮಾಚಿದೇವರು.

ಅನೇಕ ಲಿಂಗಾಯತ ಕೃತಿಗಳಲ್ಲಿ ಮಡಿವಾಳ ಮಾಚಿದೇವರ ವೀರತ್ವ ಶೌರ್ಯವನ್ನು ಕಥೆ ರೂಪಕ ಪುರಾಣಗಳಲ್ಲಿ ಕಾಣಬಹುದು.. ಜನಪದಿಗರಂತೂ ಮಡಿವಾಳ ಮಾಚಿದೇವನ ನಿಷ್ಠೆ ಭಕ್ತಿ ಬದ್ಧತೆಯನ್ನು ಕೊಂಡಾಡಿದ್ದಾರೆ. ಮಾಚಿದೇವರ ಹುಟ್ಟು ದೇವರ ಹಿಪ್ಪರಗಿಯಲ್ಲಾದರೂ ಅವರ ಕಾರ್ಯ ಕ್ಷೇತ್ರವು ಕಲ್ಯಾಣವಾಗಿತ್ತು. ಶರಣರ ಬಟ್ಟೆಗಳನ್ನು ಮಡಿ ಮಾಡುವ ,ಅಂದರೆ ಶರಣರ ಬಟ್ಟೆಗಳನ್ನು ಹಸನುಗೊಳಿಸಿ ಶುಭ್ರ ಮಡಿ ಮಾಡಿ ಅವುಗಳನ್ನು ಶರಣರ ಮನೆಗಳಿಗೆ ತಲುಪಿಸುವ ಪಾವನ ಕಾಯಕವನ್ನು ಮಡಿವಾಳ ಮಾಚಿದೇವ ಮಾಡುತ್ತಿದ್ದರು.
ಇವರ ಕಾಯಕವನ್ನು ಕಂಡು ಬೆರಗಾಗಿ ಆಸ್ಥಾನದ ಅನೇಕ ಮಂತ್ರಿಗಳು ದೊರೆ ಬಿಜ್ಜಳನ ಬಳಿ ದೊರೆಗಳ ರಾಣಿಯರ ಬಟ್ಟೆ ಮಡಿ ಮಾಡಿಸಲು ಸಲಹೆ ನೀಡುತ್ತಾರೆ. ಇದರಿಂದ ಉತ್ತೇಜಕನಾದ ರಾಜ ಬಿಜ್ಜಳ ನು ಮಡಿವಾಳ ಮಾಚಿದೇವನಿಗೆ ಆಜ್ಞೆ ಹೊರಡಿಸಿ ಬಿಜ್ಜಳನ ಮತ್ತು ಅರಸು ಮನೆತನದ ಬಟ್ಟೆಗಳನ್ನು
ಮಡಿ ಮಾಡಲು ಸೂಚಿಸುತ್ತಾನೆ. ಇದಕ್ಕೊಪ್ಪದ ಮಡಿವಾಳ ಮಾಚಿದೇವ ರಾಜನ ಆಜ್ಞೆಯನ್ನು ತಿರಸ್ಕರಿಸುತ್ತಾನೆ.
ಇದರಿಂದ ಕುಪಿತಗೊಂಡ ರಾಜ ಭಟರು ರಾಜ ಬಿಜ್ಜಳನಿಗೆ ಮಡಿವಾಳ ಮಾಚಿದೇವನ ನಿರಾಕರಣೆ ಹಾಗು ಅವನ ಸೊಕ್ಕಿನ ವಿಷಯ ಪ್ರಸ್ತಾಪ ಮಾಡುತ್ತಾರೆ. ಇದು ಬಿಜ್ಜಳನನ್ನು ಕೆರಳಿಸುತ್ತದೆ .ರಾಜ ಬಿಜ್ಜಳ ಮಡಿವಾಳ ಮಾಚಿದೇವನನ್ನು ಕರೆತರಲು ಮದಕರಿ, ಸೇನೆಯನ್ನು ಕಳಸಿಕೊಡುತ್ತಾನೆ. ಆನೆ ಸೈನ್ಯವು ಮಡಿವಾಳ ಮಾಚಿದೇವನ ಮನೆಗೆ ಬಂದು ರಾಜಾಜ್ಞೆಯನ್ನು ಪಾಲಿಸಲು ಮಡಿವಾಳ ಮಾಚಿದೇವನಿಗೆ ತಿಳಿಸುತ್ತಾರೆ. ಆಗ ಕೋಪಗೊಂಡ ಮಡಿವಾಳ ಮಾಚಿದೇವನು ತಾನು ಭಕ್ತರ ಬಟ್ಟೆ ವಸ್ತ್ರ ಮಡಿ ಮಾಡುವನೆ ಹೊರತು ಭವಿಗಳ ಬಟ್ಟೆ ಮಡಿ ಮಾಡುವದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾನೆ.
ಸೈನಿಕರು ಮಡಿವಾಳ ಮಾಚಿದೇವನನ್ನು ಬಂಧಿಸಿ ಆನೆಗೆ ಕಟ್ಟಿ ಎಳೆದುಕೊಂಡು ಹೋಗಲು ಮುಂದಾದಾಗ ಉಗ್ರ ಮಡಿವಾಳನು ತನ್ನ ವೀರಗತ್ತಿಯಿಂದ ಆನೆಯನ್ನು ಕೊಂದುಬಿಡುತ್ತಾನೆ. ಸೈನಿಕರು ಮಡಿವಾಳ ಮಾಚಿದೇವರ ಶೌರ್ಯ ಪರಾಕ್ರಮವನ್ನು ಬಿಜ್ಜಳನಿಗೆ ಹೇಳುತ್ತಾರೆ. ಆಗ ಬಿಜ್ಜಳ ಬಸವಣ್ಣನನ್ನು ಕರೆದುಕೊಂಡು ಮಡಿವಾಳ ಮಾಚಿದೇವನ ಮನೆಗೆ ಬರಲು. ಬಸವಣ್ಣನು ಮಡಿವಾಳ ಮಾಚಿದೇವನಿಗೆ ಬಿಜ್ಜಳನ ಮತ್ತು ಅರಸೊತ್ತಿಗೆಯ ಬಟ್ಟೆ ಮಡಿ ಮಾಡಲು ತಿರಸ್ಕರಿಸುವ ಕಾರಣವನ್ನು ಕೇಳುತ್ತಾನೆ. ಆಗ ಮಡಿವಾಳ ಮಾಚಿದೇವನು ಸತ್ಯ ಶುದ್ಧ ಕಾಯಕ ಮಾಡುವ ಶರಣರ ಬಟ್ಟೆ ಮಾತ್ರ ಮಡಿ ಮಾಡುವದಾಗಿ ಹೇಳುತ್ತಾನೆ. ಇದು ವರ್ಗ ಸಂಘರ್ಷದ ಮೊದಲ ಕ್ರಾಂತಿಯ ಕಹಳೆ ಎಂದರೆ ತಪ್ಪಾಗಲಾರದು.ಆಗ ಬಿಜ್ಜಳ ತನ್ನ ತಪ್ಪೊಪ್ಪಿಗೆ ವಿಷಾದತೆಯನ್ನು ಕ್ಷಮೆಯನ್ನು ಮಡಿವಾಳ ಮಾಚಿದೇವನಿಗೆ ಕೇಳುತ್ತಾನೆ.

ಮಡಿವಾಳ ಮಾಚಿದೇವರ ದೀಕ್ಷಾ ಗುರು ಮಲ್ಲಿಕಾರ್ಜುನ ,ಹಾಗು ಪೂರ್ವಾಶ್ರಮದ ದೈವವು ಕಲ್ಲಿನಾಥ ಹೀಗಾಗಿ ಇವರ ವಚನಗಳಲ್ಲಿ ಕಲಿದೇವರ ದೇವಾ .ಎಂಬ ಅಂಕಿತವನ್ನು ಕಾಣುತ್ತೇವೆ. ಮಡಿವಾಳ ಮಾಚಿದೇವರ ಒಟ್ಟು 146 ವಚನಗಳನ್ನು ಕಾಣುತ್ತೇವೆ.ಮಡಿವಾಳ ಮಾಚಿದೇವರ ವಚನಗಳಲ್ಲಿ ನಿಷ್ಟುರತೆ ಗಣಾಚಾರ ,ಕಲಿತನ, ಶೌರ್ಯ ಸಾಮಾಜಿಕ ಕಳಕಳಿ ವಿಡಂಬನೆ ಟೀಕೆಗಳನ್ನು ಕಾಣುತ್ತೇವೆ.

ಅಕ್ಕ ನಾಗಮ್ಮ ತನ್ನ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.

ಅಂಗದಿಂದುದಯವಾದಾತ ಮಡಿವಾಳಯ್ಯ.
ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ.
ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ.
ಪಾದೋದಕದಿಂದ ಉದಯವಾದವಳು ಅಕ್ಕಮಹಾದೇವಿ.
ಮಂತ್ರದಿಂದುದಯವಾದಾತ ನಿಮ್ಮ ಸೋದರಮಾವ ಬಸವಯ್ಯ.
ಪ್ರಸಾದದಿಂದುದಯವಾದಾತ ನೀನಲ್ಲವೆ ಚೆನ್ನಬಸವಯ್ಯ.
ಬಸವಣ್ಣಪ್ರಿಯ ಚೆನ್ನಸಂಗಯ್ಯ.

ಶರೀರ ಸಹಜ ಧರ್ಮಕ್ಕೆ ಜನಿಸಿದವನು ಮಡಿವಾಳಯ್ಯನು ,ಲಿಂಗ ಅಂದರೆ ಸಮಷ್ಟಿ ಭಾವಕ್ಕೆ ಹುಟ್ಟಿದವನು ರೇವಣ ಸಿದ್ಧರು , ಭಸ್ಮದಿಂದ ಹುಟ್ಟಿದವರು
ಸಿದ್ಧರಾಮರು,ಜ್ಞಾನದ ಪಾಠಕ್ಕಾಗಿ ಹುಟ್ಟಿದವಳು ಅಕ್ಕಮಹಾದೇವಿ ,ಮಂತ್ರದಿಂದುದಯವಾದಾತ ನಿಮ್ಮ ಸೋದರಮಾವ ಬಸವಯ್ಯ. ಎಂದೆನ್ನುತ್ತಾ
ಪ್ರಸಾದ ಪ್ರಸನ್ನತೆಯಿಂದ ಹುಟ್ಟಿದವ ನೀನು ಚೆನ್ನ ಬಸವಣ್ಣ ಎಂದು ಹೇಳುತ್ತಾ ಅವರವರ ಹುಟ್ಟಿನ ಸಾರ್ಥಕತೆಯನ್ನು ಅರ್ಥಪೂರ್ಣವಾಗಿ ಅಕ್ಕ ನಾಗಮ್ಮ ವಿವರಿಸಿದ್ದಾಳೆ.
ಅದೇ ರೀತಿಯಲ್ಲಿ ಮಹಾಜ್ಞಾನಿ ಅಲ್ಲಮರು ಮಡಿವಾಳ ಮತ್ತು ಇತರ ಶರಣರ ಬಗ್ಗೆ ಹೀಗೆ ಹೇಳುತ್ತಾರೆ.

ಎನ್ನ ಕಾಯವ ಬಸವಣ್ಣನಳವಡಿಸಿಕೊಂಡ.
ಎನ್ನ ಮನವ ಚನ್ನಬಸವಣ್ಣನಳವಡಿಸಿಕೊಂಡ.
ಎನ್ನ ಭಾವವ ಮಡಿವಾಳಯ್ಯನಳವಡಿಸಿಕೊಂಡ._
ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ
ಗುಹೇಶ್ವರಾ, ನಿಮ್ಮ ಶರಣರೆಂಬ ತ್ರಿಮೂರ್ತಿಗಳಿಗೆ
ನಮೋ ನಮೋ ಎನುತಿರ್ದೆನು.

ಕಾಯ ಮನಸ್ಸು ಮತ್ತು ಭಾವ (ಆತ್ಮ ) ಇವು ಚೈತನ್ಯದ ಸಂಯೋಜನೆ . ಬಸವಣ್ಣ ಅಲ್ಲಮರ ಕಾಯವನ್ನು ಅಳವಡಿಸಿಕೊಂಡರು.
ಮನವನ್ನು ಚೆನ್ನ ಬಸವಣ್ಣ ಅಳವಡಿಸಿಕೊಂಡರು .ಭಾವವನ್ನು ಮಡಿವಾಳಯ್ಯನವರು ಅಳವಡಿಸಿಕೊಂಡರು.ಹೀಗಾಗಿ ತಾವು ಗುಹೇಶ್ವರ ಲಿಂಗದಲ್ಲಿ ಬಯಲಾದೆನು ಎಂದು ಅಲ್ಲಮರು ತಮ್ಮ ನಿರಾಳತೆಯನ್ನು ವ್ಯಕ್ತ ಪಡಿಸುತ್ತಾರೆ.

ಬಸವಣ್ಣನು ಎಷ್ಟು ಮಡಿವಾಳ ಮಾಚಿದೇವರ ಕರ್ತತ್ವದ ಮೇಲೆ ನಂಬಿಕೆ ಇಟ್ಟಿದ್ದರೆನ್ನುವುದು ಈ ಕೆಳಗಿನ ವಚನಗಳಲ್ಲಿ ವ್ಯಕ್ತವಾಗುತ್ತದೆ .

ಎನ್ನ ಭಕ್ತಿಯ ಶಕ್ತಿಯು ನೀನೆ,
ಎನ್ನ ಯುಕ್ತಿಯ ಶಕ್ತಿಯು ನೀನೆ,
ಎನ್ನ ಮುಕ್ತಿಯ ಶಕ್ತಿಯು ನೀನೆ.
ಎನ್ನ ಮಹಾಘನದ ನಿಲವಿನ ಪ್ರಭೆಯನುಟ್ಟು
ತಳವೆಳಗಾದ ಸ್ವಯಜ್ಞಾನಿ
ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ
ಮಡಿವಾಳನಿಂದರಿದು ಬದುಕಿದೆನಯ್ಯಾ, ಪ್ರಭುವೆ.

ಬಸವಣ್ಣನವರ ಭಕ್ತಿಯಾ ಶಕ್ತಿ ,ಯುಕ್ತಿಯಾ ಶಕ್ತಿ ,ಮುಕ್ತಿಯಾ ಶಕ್ತಿ ,ಮಹಾ ಘನದ ನಿಲುವನುಟ್ಟು ಬದುಕಿದ ಮಡಿವಾಳಯ್ಯನವರು ಸ್ವಯಂ ಜ್ಞಾನಿಗಳು.ಅವರ ಜ್ಞಾನದಿಂದ ಅಕ್ಕನ ಅರಿವಿನ ವಿಸ್ತಾರ ಆಳವು ಅರಿವಾಗಿ ಬದುಕಿದೆನು ಎಂದು ಹೇಳಿದ್ದಾರೆ. ಬಸವಣ್ಣನವರು.

ವೈರಾಗ್ಯ ಮೂರ್ತಿ ಅಕ್ಕ ಮಹಾದೇವಿ ಕಲ್ಯಾಣಕ್ಕೆ ಬಂದು ಎಲ್ಲ ಶರಣರ ಭಾವಗಳಲ್ಲಿ ಬೆರೆತು ಮಹಾ ಮನೆಯ ಮಗಳಾಗಿ ತಾನು ಕಂಡ ಶರಣರ ದಿವ್ಯ ವ್ಯಕ್ತಿತ್ವವನ್ನು ಹರುಷದಿಂದ ಕೊಂಡಾಡಿದ್ದಾಳೆ.

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ,
ಸಿದ್ಧರಾಮಯ್ಯನೆ ಜಂಗಮ,
ಮಡಿವಾಳಯ್ಯನೆ ಜಂಗಮ,
ಚೆನ್ನಬಸವಣ್ಣನೆನ್ನ ಪರಮಾರಾಧ್ಯರು.
ಇನ್ನು ಸುಖಿಯಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ. .

ಬಸವಣ್ಣ ತನ್ನ ಅರಿವಿನ ಗುರು,ಅಲ್ಲಮರು ತನ್ನ ಯೋಗದ ಲಿಂಗ ಸ್ವರೂಪಿಗಳು, ಸಿದ್ಧರಾಮರು ಮತ್ತು ಮಡಿವಾಳಯ್ಯನವರು ತನಗೆ ಜಂಗಮ ಸ್ವರೂಪಿಗಳು ಜ್ಞಾನ ಮತ್ತು ಕ್ರಿಯೆಗಳನ್ನು ಸಮನ್ವಯಿಸಿದವರು.ಚೆನ್ನ ಬಸವಣ್ಣ ತನಗೆ ಪರಮಾರಾಧ್ಯ ಎಂದು ತನ್ನ ಪರಮ ಸುಖದ ಬದುಕನ್ನು ಹೇಳುತ್ತಾಳೆ.

ದಿಟ್ಟ ಶರಣೆ ಆಯ್ದಕ್ಕಿ ಲಕ್ಕಮ್ಮ ಕಲ್ಯಾಣದಲ್ಲಿ ಬಂದು ಶರಣರ ಸಂಕುಲದಲ್ಲಿ ತಾನು ಕಂಡುಕೊಂಡ ಬೇರೆ ಬೇರೆ ಭಾವಗಳನ್ನು ಈ ರೀತಿಯಾಗಿ ಹೇಳಿದ್ದಾಳೆ.

ಬಸವಣ್ಣನ ಪ್ರಸಾದವಕೊಂಡು ಎನ್ನ ಕಾಯ ಶುದ್ಧವಾಯಿತ್ತಯ್ಯಾ.
ಚೆನ್ನಬಸವಣ್ಣನ ಪ್ರಸಾದವಕೊಂಡು ಎನ್ನ ಜೀವ ಶುದ್ಧವಾಯಿತ್ತಯ್ಯಾ.
ಮಡಿವಾಳಯ್ಯನ ಪ್ರಸಾದವಕೊಂಡು ಎನ್ನ ಭಾವ ಶುದ್ಧವಾಯಿತ್ತಯ್ಯಾ.
ಶಂಕರದಾಸಿಮಯ್ಯನ ಪ್ರಸಾದವಕೊಂಡು ಎನ್ನ ತನು ಶುದ್ಧವಾಯಿತ್ತಯ್ಯಾ.
ಸಿದ್ಧರಾಮಯ್ಯನ ಪ್ರಸಾದವಕೊಂಡು ಎನ್ನ ಮನ ಶುದ್ಧವಾಯಿತ್ತಯ್ಯಾ.
ಘಟ್ಟಿವಾಳಯ್ಯನ ಪ್ರಸಾದವಕೊಂಡು ಎನ್ನ ಪ್ರಾಣ ಶುದ್ಧವಾಯಿತ್ತಯ್ಯಾ.
ಅಕ್ಕನಾಗಾಯಮ್ಮನ ಪ್ರಸಾದವಕೊಂಡು ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ.
ಮುಕ್ತಾಯಕ್ಕಗಳ ಪ್ರಸಾದವಕೊಂಡು ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ.
ಪ್ರಭುದೇವರ ಪ್ರಸಾದವಕೊಂಡು ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.
ಇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳ
ಪ್ರಸಾದವಕೊಂಡು ಬದುಕಿದೆನಯ್ಯಾ
ಮಾರೇಶ್ವರಪ್ರಿಯ ಅಮರೇಶ್ವರ .
ನಿಮ್ಮ ಶರಣರ ಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋ ಎನುತಿರ್ದೆನು.

ಮೇಲಿನ ವಚನದಲ್ಲಿಯೂ ಕೂಡ ಆಯ್ದಕ್ಕಿ ಲಕ್ಕಮ್ಮ ಮಹಾಜ್ಞಾನಿ ಅಲ್ಲಮರಂತೆ ಮಡಿವಾಳ ಮಾಚಿದೇವನಲ್ಲಿ ತನ್ನ ಭಾವ ಶುದ್ಧಿಯನ್ನು ಕಾಣುತ್ತಾಳೆ ಎಂದರೆ ಮಡಿವಾಳ ಮಾಚಿದೇವರು ಎಷ್ಟೊಂದು ಶುದ್ಧವಾಗಿದ್ದರು ಎಂದು ತಿಳಿದು ಬರುತ್ತದೆ.

ಚೆನ್ನಬಸವಣ್ಣ ಇವರೆಲ್ಲರಿಗಿಂತ ಅತ್ಯಂತ ಭಿನ್ನವಾಗಿ ಸೂಕ್ಷ್ಮತೆಯಲ್ಲಿ ಬಸವಣ್ಣ ಅಲ್ಲಮ ಮತ್ತು ಮಡಿವಾಳರನ್ನು ತಮ್ಮ ಅಧ್ಯಾತ್ಮದ ಶುದ್ಧಿಯಿಂದಾಗಿ ತಾವು ಹೇಗೆ ಬದುಕಿದೆವು ಎಂದು ಹೇಳಿದ್ದಾರೆ.

ಎನ್ನಂತರಂಗವೆ ಬಸವಣ್ಣ. ಬಹಿರಂಗವೆ ಮಡಿವಾಳಯ್ಯ,
ಈ ಉಭಯದ ಸಂಗವೆ ಪ್ರಭುದೇವರು !
ಇಂತೀ ಮೂವರ ಕರುಣದ ಕಂದನಾಗಿ ಬದುಕಿದೆ ಕಾಣಾ
ಕೂಡಲಚೆನ್ನಸಂಗಮದೇವಾ.

ಅಂತರಂಗ ಬಸವಣ್ಣನಾದರೆ ಅದರ ಬಹಿರಂಗ ಸ್ವರೂಪ ಗಣಾಚಾರ ಮೂರ್ತಿ ಮಡಿವಾಳ ಮಾಚಿದೇವರು ಇವರಿಬ್ಬರ ಸಮನ್ವಯ ಮೂರ್ತಿ ಅಲ್ಲಮರು ಇಂತಪ್ಪ ತ್ರಿವಿಧ ಕಾರುಣ್ಯ ಪುರಷರ ಕರುಣದಿಂದ ತಾವು ಬದುಕಿದೆನು ಎಂದು ಚೆನ್ನ ಬಸವಣ್ಣನವರು ಹೆಮ್ಮೆ ಅಭಿಮಾನದಿಂದ ಹೇಳುತ್ತಾರೆ.

ಮಡಿವಾಳ ಮಾಚಿದೇವ ಅತ್ಯಂತ ದಿಟ್ಟ ಗಣಾಚಾರಿಯಾಗಿ ಕಲ್ಯಾಣದ ಎಲ್ಲ ಶರಣರ ಪ್ರೀತಿ ವಿಶ್ವಾಸ ಗಳಿಸಿದರು. ನಿತ್ಯ ನಿತ್ಯ ಬಸವನ ಮಹಾ ಮನೆಗೆ ಅನುಭವ ಮಂಟಪಕೆ ಬೇಕಾಗ ಹತ್ತಿದನು. ಮಡಿವಾಳ ಮಾಚಿದೇವರಿಗೆ ಬಸವಣ್ಣ ಅತ್ಯಂತ ಮೌಲಿಕ ಪ್ರೀತಿಯ ವ್ಯಕ್ತಿ . ಬಸವಣ್ಣ ಲಿಂಗ ತತ್ವದ ರೂವಾರಿ ಎಂದು ಭಕ್ತಿಪೂರ್ವಕ ನಿವೇದನೆ ಮಾಡಿಕೊಂಡಿದ್ದಾನೆ ಮಡಿವಾಳ ಮಾಚಿದೇವರು.

ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.
ಸನ್ನಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.
ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ.

ಕಲ್ಯಾಣದ ತುಂಬೆಲ್ಲ ಬಸವನೆಂಬ ಬಳ್ಳಿ ಪಸರಿಸಿದೆ . ಆ ಬಳ್ಳಿಗೆ ಲಿಂಗವೆಂಬ ಅನೇಕ ತಾತ್ವಿಕ ಗೊಂಚಲಗಳು . ಒತ್ತಿ ಹಿಂಡಿದರೆ ಭಕ್ತಿ ಎಂಬ ರಸವು .
ಆಯತ ,ಸ್ವಾಯತ ,ಸನ್ನಿಹಿತ ,ಗುರು ,ಲಿಂಗ ,ಜಂಗಮ ,ಪಾದೋದಕ ಪ್ರಸಾದ ಬಸವಣ್ಣನಿಂದ ಹುಟ್ಟಿಕೊಂಡಿವೆ . ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,ಶೂನ್ಯ ಕಾಣಾ, ಕಲಿದೇವರದೇವಾ ಎಂದು ಸಮಗ್ರ ಸಮತೆಯ ಕ್ರಾಂತಿಯ ರೂವಾರಿ ಬಸವಣ್ಣ ಎಂದು ಮಡಿವಾಳ ಮಾಚಿದೇವ ಹೇಳಿಕೊಂಡಿದ್ದಾರೆ.

ಶರಣರು ಸ್ಥಿತಪ್ರಜ್ಞರು .ಅವರಿಗೆ ಸುಖ ಕಷ್ಟಗಳು ಬಿಸಿಲು ನೆರಳಿನಂತೆ , ಹೀಗಾಗಿ ಮಡಿವಾಳ ಮಾಚಿದೇವರು ತಮಗೆ ಸುಖ ಬಂದಲ್ಲಿ ದುಃಖ ಬಂದಲ್ಲಿ ಬಸವಣ್ಣನಾ ನೆನೆವೆನು ,ಲಿಂಗಾರ್ಚನೆ , ಜಂಗಮಾರ್ಚನೆ ಮಾಡುವಲ್ಲಿ ಬಸವಣ್ಣನ ನೆನಹು ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.ಇದು ಕಾರಣ, ಬಸವಣ್ಣ ಬಸವಣ್ಣಎನುತಿರ್ದೆನು ಕಾಣಾ, ಕಲಿದೇವಯ್ಯ ಎಂದು ಹೇಳುತ್ತಾ ಮಡಿವಾಳ ಮಾಚಿದೇವ ಬಸವಣ್ಣ ವ್ಯಕ್ತಿ ಮಾತ್ರವಾಗಿರದೆ ಶರಣ ಸಂಕುಲಕೆ ಶಕ್ತಿಯಾಗಿದ್ದರು ಮಂತ್ರ ಪುರುಷರಾಗಿದ್ದರು ಎಂದು ಅಭಿಮಾನದಿಂದ ಹೇಳುತ್ತಾನೆ.

ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.
ಇದು ಕಾರಣ, ಬಸವಣ್ಣ ಬಸವಣ್ಣ
ಎನುತಿರ್ದೆನು ಕಾಣಾ, ಕಲಿದೇವರ ದೇವಾ .

ಬಸವಣ್ಣನವರ ಗಡಿಪಾರಿನ ನಂತರ ಕಲ್ಯಾಣ ಕ್ರಾಂತಿಯ ರಕ್ತ ಸಿಕ್ತ ಹೋರಾಟದಲ್ಲಿ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ. ಮಾದನ ಹಿಪ್ಪರಗಿ
ಬೆಳಗಾವಿ ,ಕಾದ್ರೊಳ್ಳಿ , ಹುಣಶೀಕಟ್ಟಿ , ಮೂಗಬಸವ ,ಮುರಗೋಡ ,ತಲ್ಲೂರು ,ಕಾರಿಮನಿ ಕಟಕೋಳ ಚಂದರಗಿ ಗೊಡಚಿಗೆ ಬಂದು ಮಾಚಿದೇವರು ಐಕ್ಯರಾಗುತ್ತಾರೆ. ಮುದಿ ವೀರಣ್ಣನ ಗುಡಿ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ ಮೇಲೆ ಇಷ್ಟಲಿಂಗದ ಕರಡಗಿ ಇದೆ.ಮಡಿವಾಳ ಮಾಚಿದೇವನನ್ನು ಪುರಾಣಗಳಲ್ಲಿ ವೀರಭದ್ರನ ಅವತಾರವೆಂದು ಬಿಂಬಿಸುತ್ತಾರೆ. ಹೀಗಾಗಿ ಜಾನಪದ ಸಾಹಿತಿಗಳು ಅನೇಕ ಸಂಶೋಧಕರು ,ತಜ್ಞರು ಮಡಿವಾಳ ಮಾಚಿದೇವನ ಐಕ್ಯ ಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬರುತ್ತಾರೆ.
ಒಂದು ತಂಡ ತೊರಗಲ್ಲ ಮುನವಳ್ಳಿ ಸವದತ್ತಿ ಧಾರವಾಡ ಉಳವಿಗೆ ಹೋಯಿತು ಇನ್ನೊಂದು ತಂಡ ಉಣಕಲ್ ಹುಬ್ಬಳ್ಳಿ ಎಣ್ಣೆ ಹೊಳೆ ನುಲಿಗನೂರು ಮುಂತಾದ ಪ್ರದೇಶಕ್ಕೆ ಚದುರಿದರು. ಮಡಿವಾಳ ಮಾಚಿದೇವರ ಶಿಲ್ಪಿ ಕಲೆಯು ಮೂರ್ತಿಗಳು ಗದಗ ಮುಳಗುಂದ ಶಿಂಗಟಾಲೂರು ಮುಂತಾದ ಪ್ರದೇಶಗಳಲ್ಲಿ ಕಾಣುತ್ತೇವೆ.
ವೀರಭದ್ರ ದೇವರ ಗುಗ್ಗಳದಲ್ಲಿಯೂ ಅಂಬಿಗರ ಚೌಡಯ್ಯನವರ ವಚನ, ಮಡಿವಾಳ ಮಾಚಿದೇವರ ವಚನ, ಅಲ್ಲಮ್ಮರ ಬೆಡಗಿನ ವಚನಗಳು ಹೇಳಲ್ಪಡುತ್ತವೆ..ಗುಗ್ಗಳದಲ್ಲಿನ ಪುರವಂತರ ಉಡುಪು ಅಲ್ಲಿರುವ ಸಂಬಾಳ ವಾದ್ಯಗಳು ಕಲ್ಯಾಣದ ಚಾಲುಕ್ಯ ಕಳಚೂರ್ಯರ ಸೈನಿಕ ಸೇನೆಯ ವಾದ್ಯ ಪೋಷಾಕುಗಳಾಗಿವೆ.
ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದ ಹೋರಾಟದಲ್ಲಿ ಮಡಿವಾಳ ಮಾಚಿದೇವ ತನ್ನ ಪರಾಕ್ರಮದಿಂದ ವಚನ ಸಾಹಿತ್ಯ ಉಳಿಸುವಲ್ಲಿ ಅನುಪಮ ಸೇವೆ ಗೈದಿದ್ದಾನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ 15 ಕಿಲೋ ಮೀಟರ್ ಅಂತರದಲ್ಲಿರುವ ಗೊಡಚಿ ಶರಣರ ಸ್ಮಾರಕವಾಗಬೇಕು .
ಮಡಿವಾಳ ಮಾಚಿದೇವನು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ ದಿಟ್ಟ ಗಣಾಚಾರಿ.

ಡಾ.ಶಶಿಕಾಂತ.ರುದ್ರಪ್ಪಾ ಪಟ್ಟಣ -ರಾಮದುರ್ಗ.

Don`t copy text!