ನಾಳೆ ಬಾ , ನಾಳೆ ಬಾ
ಮನೆ ತುಂಬ ಧನಕನಕ , ಬಂಗಾರ, ಬೆಳ್ಳಿ, ಬಂಗಾರದ ನಾಣ್ಯಗಳನ್ನು ಹೊಂದಿದ್ದ ಒಬ್ಬ ಶ್ರೀಮಂತ ಮನುಷ್ಯನಿದ್ದ. ತನ್ನ ಎಲ್ಲ ಸಂಪತ್ತನ್ನು ಸದಾ ಕಾಯುತ್ತಲಿದ್ದ. ಯಾರಿಗೂ ದಾನ ಮಾಡುವ ಪ್ರವೃತ್ತಿಯಿರಲಿಲ್ಲ. ಇನ್ನೂ ಗಳಿಸಬೇಕು ಎಂದು ತಹತಹಿಸಿ ದಾನ ಮಾಡದ ಹಂತಕ್ಕೆ ಬಂದು ಮುಟ್ಟಿದ್ದ. ಇವನ ಚರ್ಯೆಯಿಂದ ಮನೆಯಲ್ಲಿಯ ಕುಟುಂಬದ ಸದಸ್ಯರು ತೀರಾ ಬೇಸತ್ತಿದ್ದರು. ಈ ಮನುಷ್ಯ ಇನ್ನೂ ಮುಂದೆ ಹೋಗಿ ತಿನ್ನುವದಕ್ಕೂ , ಉಣ್ಣುವದಕ್ಕೂ ಲೆಕ್ಕ ಹಾಕತೊಡಗಿದ. ಇದರಿಂದ ಮನೆಜನ , ಸುತ್ತಮುತ್ತಲಿನ ಜನ ಇವನ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು.
ಒಬ್ಬ ಬಡ ಮನುಷ್ಯ , ಇವನು ಲೇವಾದೇವಿ ಬಂಗಾರ ಬೆಳ್ಳಿ ಮಾರುವ ಅಂಗಡಿಗೆ ಬಂದು ದಾನ ಬೇಡಿದ. ನನ್ನಲ್ಲಿ ಚಿಕ್ಕಾಸು ಇಲ್ಲ. ತಿರುಗಿ ಹೋಗು ಎಂದು ಆ ಬಡ ಮನುಷ್ಯನನ್ನು ಸಾಗ ಹಾಕಿದ. ಅವನು ಆಚೆ ಹೋದ ಕೂಡಲೇ ತಾನು ಸಂತೋಷಿಸಿದ. ಮರುದಿನ ಆ ಬಡ ಮನುಷ್ಯ ಈತನ ಅಂಗಡಿಗೆ ಬಂದು ಮತ್ತೆ ದಾನ ಬೇಡಿದ. ಆ ಬಡವನ ಮುಖವನ್ನು ನೋಡಿ ನಿನ್ನೆ ನೀನು ಬಂದಿದ್ದೀ . ನಾ ಏನು ಹೇಳಿದೆ ನೆನಪು ಮಾಡಿಕೋ ಎಂದು ಹೇಳಿ ಆ ಬಡವನನ್ನು ಸಾಗಹಾಕಿದ. ಮಾರನೆಯ ದಿನ ಮತ್ತೆ ದಾನ ಬೇಡಲು ಬಂದ ಅವನನ್ನು ಬೈದು ಇನ್ನೊಮ್ಮೆ ಬರಬೇಡ ನಡೆ ಎಂದು ತಿರುಗಿ ಕಳಿಸಿದ. ಆ ಬಡ ಮನುಷ್ಯ ತನಗೆ ಮಕ್ಕಳ ಧಾರ್ಮಿಕ ಕಾರ್ಯಕ್ಕೆ ದುಡ್ಡು ಬೇಡಲು ಮತ್ತೆ ಬಂದ. ಏನೂ ಕೊಡದೇ ತಿರುಗಿ ಕಳಿಸಿದ. ಆದರೂ ಆ ಬಡ ಮನುಷ್ಯ ಈ ಸಾಹುಕಾರನ ಬೆನ್ನು ಬಿಡದೇ ಪ್ರತಿನಿತ್ಯ ಬಂದು ದಾನ ಬೇಡುವದು ನಡೆಯಿತು.ಈ ಶ್ರೀಮಂತ ಅವನನ್ನುತಿರುಗಿ ಕಳಿಸುತ್ತಲೇ ಇದ್ದ.ಕಡೆಗೆ ನಾಳೆ ಬಾ ನಾಳೆ ಬಾ ಎಂದು ಹೇಳಿ ಕಳಿಸುವದು ರೂಢಿ ಆಯಿತು.
ಆ ಬಡ ಮನುಷ್ಯ ಆ ಶ್ರೀಮಂತ ವ್ಯಕ್ತಿಯ ಅಂಗಡಿಗೆ ಹೋಗದೇ ಅವನ ಮನೆಗೆ ಬಂದ. ಶ್ರೀಮಂತ ಮನುಷ್ಯ ಮನೆಯಲ್ಲಿರಲಿಲ್ಲ. ನನ್ನ ಮಕ್ಕಳ ಕಲ್ಯಾಣಕಾರ್ಯಕ್ಕೆ ಏನಾದರೂ ಕೊಡಿರಿ ಎಂದು ಶ್ರೀಮಂತನ ಹೆಂಡತಿಗೆ ಕೇಳಿದ. ಜಿಪುಣ ಶ್ರೀಮಂತ ಮನೆಯಲ್ಲಿ ಏನೂ ಇಟ್ಟಿರಲಿಲ್ಲ. ಆಕೆ ಆ ಬಡ ಮನುಷ್ಯನನ್ನು ನೋಡಿ ಕನಿಕರಪಟ್ಟಳು. ಏನೂ ಇಲ್ಲಪ್ಪ ಮನೆಯಲ್ಲಿ , ಏನು ಕೊಡಲಿ ಎಂದು ಅವಳು ಆ ಬಡವನಿಗೆ ಹೇಳಿದಳು. ಆದರೂ ಆ ಬಡ ಮನುಷ್ಯ ಏನಾದರೂ ಕೊಡಿರಿ. ನೀವು ಕೊಟ್ಟರೇ ತುಂಬಾ ಉಪಕಾರ ಮಾಡಿದಂತೆ ಆಗುತ್ತದೆ ಎಂದು ಮತ್ತೆ ಕೇಳಿದಾಗ ತನ್ನ ಮೂಗಿನಲ್ಲಿರುವ ಮೂಗುತಿಯನ್ನು ತೆಗೆದು ಕೊಟ್ಟಳು. “ಕೃಷ್ಣಾರ್ಪಣ” ಎಂದು ಹರಸಿ ಆ ಬಡವನನ್ನು ಕಳಿಸಿದಳು.
ಆ ಬಡ ಮನುಷ್ಯ ಆ ಮೂಗುತಿಯನ್ನು ಮಾರಿ ಹಣ ಪಡೆಯಲು ಈ ಶ್ರೀಮಂತನ ಅಂಗಡಿಗೆ ಬಂದ. ಆಗ ಆ ಮೂಗುತಿಯನ್ನು ಆ ಶ್ರೀಮಂತ ಗುರುತು ಹಿಡಿದು ಬಡ ಮನುಷ್ಯನಿಗೆ ಕುಳಿತಿರಲು ಹೇಳಿ ಮೂಗುತಿಯನ್ನು ಭದ್ರವಾಗಿಟ್ಟ. ಮನೆಗೆ ಬಂದು ನಿನ್ನ ಮೂಗುತಿ ತಾ ಸ್ವಲ್ಪ ಬೇಕಾಗಿದೆ ಎಂದು ಹೆಂಡತಿಗೆ ಹೇಳಿದ. ಆಕ್ಷಣ ಆ ಹೆಣ್ಣು ಮಗಳು ಗಾಬರಿಯಾಗಿ ಈತ ನನಗೆ ಶಿಕ್ಷೆ ಕೊಡಲಾರದಿರಲಾರ. ಇರಿ ಎಂದು ಹೇಳಿ ಕೋಣೆಗೆ ಹೋಗಿ ವಿಷ ತೆಗೆದುಕೊಳ್ಳಲು ಬಟ್ಟಲು ಮೇಲೆತ್ತಿದಳು ಟನ್ ಎಂದು ಶಬ್ದವಾಯಿತು ನೊಡುತ್ತಾಳೆ ತಾನು ಕೊಟ್ಟಮೂಗುತಿ . ಅದನ್ನು ನೋಡಿ ಆಶ್ಚರ್ಯಪಟ್ಟು ಅದನ್ನು ಗಂಡನಿಗೆ ತಂದು ಕೊಟ್ಟಳು. ಆ ಶ್ರೀಮಂತ ತಡಬಡಾಯಿಸಿ ಅಂಗಡಿಗೆ ಹೋಗಿ ನೋಡಲಾಗಿ ಮೂಗುತಿ ಅಲ್ಲಿರಲಿಲ್ಲ.ಕೂಡಲು ಹೇಳಿದ ಬಡವನೂ ಕಾಣಿಸಲಿಲ್ಲ. ಗಾಬರಿಯಿಂದ ಅವನಿಗೆ ಮತಿಭ್ರಮಣೆಯಾದಂತಾಯಿತು. ತಕ್ಷಣ ಅವನಿಗೆ ಜ್ಞಾನೋದಯವಾಯಿತು. ಓ ದೇವರೇ ನನ್ನನ್ನು ಪರೀಕ್ಷಿಸಲೋಸುಗ ಬಡವನ ವೇಷದಲ್ಲಿ ಬಂದು ನನ್ನನ್ನು ಉದ್ಧರಿಸಿದ್ದಾನೆ ಎಂದು ವಿರಕ್ತಿ ಹೊಂದಿದ. ತನ್ನಲ್ಲಿದ್ದ ಎಲ್ಲವನ್ನೂ ಸಕಲ ಸಜ್ಜನರಿಗೆ ದಾನ ಮಾಡಿ “ಗೋಪಾಳಬುಟ್ಟಿ “ ಹಿಡಿದ. ಆತನೇ ಮುಂದೆ ಪುರಂದರದಾಸರೆಂದು ಪ್ರಸಿದ್ಧಿಹೊಂದಿದ. ದಾಸ ಶ್ರೇಷ್ಠರೆಂದು ಹೆಸರು ಪಡೆದು ಶ್ರೀಹರಿಯ ಸೇವೆ ಮಾಡಿ ಮುಕ್ತಿ ಪಡೆದ. ದೇವರೇ ಬಡವನ ರೂಪದಲ್ಲಿ ಬಂದು ಈ ನವಕೋಟಿ ನಾರಾಯಣನನ್ನು ಪರೀಕ್ಷಿಸಿ ಉದ್ಧರಿಸಿ,ಮುಕ್ತಿ ದಯಪಾಲಿಸಿದ. ಎಲ್ಲವೂ ದೇವನು ಬಯಸಿದಂತೆಯೇ ತಿರುವು ಪಡೆಯುವವು.
-ಕೃಷ್ಣ ನಾರಾಯಣ ಬೀಡಕರ
ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ 9972087473