ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.

ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.

ಪರಮ ಸುಖವೇ ಜೀವನದ ಮುಖ್ಯ ಧೇಯವಾಗಿರುವದರಿಂದ ಮಾನವ ಶತ ಶತಮಾನಗಳಿಂದಲೂ ಆ ಸಾಧನೆಯ ಹಾದಿಯಲ್ಲಿ ಸಾಗಿ ಬಂದಿದ್ದಾನೆ. 12 ನೇಯ ಶತಮಾನ ಅಂತಹ ಸಾಧನೆಯ ಸಿದ್ಧಿಯು ಉತ್ತುಂಗಕ್ಕೆರಿದ ಕಾಲ. ರಾಜಕೀಯ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಕ್ಷೇತ್ರಗಳಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದ ಅಚ್ಚಳಿಯದೇ ನಿಚ್ಚಳವಾಗಿ ಉಳಿಯುವ ಉಚ್ಛ ಕಾಲ.

ವಚನಗಳು ಬಸವಾದಿ ಶರಣರ ಸಾರ್ವಕಾಲಿಕ ಜೀವನ ಮೌಲ್ಯಗಳನ್ನು ಒಳಗೊಂಡ, ಸಾಧನೆಯ ಸಿದ್ಧಿಯ ಅನುಭವ ಪೂರ್ಣ ವಾಙ್ಮಯ. ಈ ವಚನಗಳು ಮರ್ತ್ಯರ ಮನದ ಮೈಲಿಗೆ ಕಳೆಯಲು ಬಂದ ಉನ್ನತ ಜನಪರ ಸಾಹಿತ್ಯ. ಅಕ್ಷರ ಅರಿಯದವರು ಕೂಡ ಈಡಿ ಜಗಕೆ ಅಕ್ಷರದ ಬೆಳಕು ನೀಡಿದರು.
ಸಮಾಜ ಚಿಗುರೊಡೆದಾಗಿನಿಂದ ಜಾತಿಯತೆಯ ಬೇರು ಆಳವಾಗಿ ಬೆಳೆಯುತ್ತಲೆ ಬಂದಿದೆ. ಅದರಷ್ಟೇ ಪ್ರಬಲವಾಗಿ ಸ್ತ್ರೀ ಪುರುಷರೆಂಬ ಬೇಧ ಭಾವ ಕೂಡ ಬೆಳೆದು ಬಂದಿದೆ. ಅಂತಹ ಕಾಲದಲ್ಲಿ ಸಮಾನತೆಯ ಸತ್ವಯುತ ಬೀಜ ಬಿತ್ತಿದವರು ನಮ್ಮ ಬಸವಾದಿ ಶರಣರು.

ಹೆಣ್ಣು ಶೂದ್ರಳು, ಅವಳು ಆಧ್ಯಾತ್ಮಿಕ ಸಾಧನೆಗೆ ಯೋಗ್ಯಳಲ್ಲ” ಎಂದಾಗ ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ ಕಪಿಲಸಿದ್ಧಮಲ್ಲಿಕಾರ್ಜುನ ಎಂದು “ಹೆಣ್ಣಿಗೆ ದೈವತ್ವವನ್ನು” ತಂದು ಕೊಟ್ಟವರು ನಮ್ಮ ಶರಣರು. “ಕೂಟಕ್ಕೆ ಸತಿ ಪತಿ ನಾಮವಲ್ಲದೆ, ಅರಿವಿಂಗೆ ಬೇರೊಂದೊಡಲುಂಟೆ” ಎಂದು ಆಯ್ದಕ್ಕಿ ಲಕ್ಕಮ್ಮ ಪ್ರಶ್ನಿಸಿದಳು. ಇಂತಹ ಸಾಧನೆಯ ಶಿಖರವೇರಿದ ಶರಣೆಯರಲ್ಲಿ ಕಲ್ಯಾಣದ ಅನುಭವ ಮಂಟಪದ ಮೇಲುಸ್ತುವಾರಿಯನ್ನು ನೋಡಿಕೊಂಡು, ಬಂದ ಅತಿಥಿಗಳನ್ನು ಆದರದಿಂದ ಸತ್ಕರಿಸಿದ, ಸದುವಿನಯದ ತುಂಬಿದ ಕೊಡವಾದ, ಬಸವಣ್ಣನವರ ವಿಚಾರ ಪತ್ನಿಯೂ ಆದ ಶರಣೆ ನೀಲಾಂಬಿಕೆ ತಾಯಿಯವರು ಕೂಡ ಒಬ್ಬರು.
ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾಸಿರ” ಎಂದು ಒಂದು ವಚನದಲ್ಲಿ ಉಲ್ಲೇಖವಾಗಿದ್ದರೂ ನಮಗೆ ಉಪಲಬ್ಧವಾದ ವಚನಗಳು 288 ಮಾತ್ರ.
ಮಡದಿ ಎನ್ನಲಾಗದು ಬಸವಂಗೆ ಎನ್ನನು, ಪುರುಷನೆನ್ನಲಾಗದು ಬಸವನ ಎನಗೆ, ಉಭಯಕುಳವ ಹರಿದು ಬಸವಂಗೆ ಶಿಶುವಾದೆನು. ಎಂಬಂತೆ ಶಿಶುಭಾವದಲ್ಲಿ ಬದುಕಿದವರು ನೀಲಾಂಬಿಕೆ ತಾಯಿ ಮತ್ತು ಬಸವಣ್ಣನವರು. ಸರ್ವಜ್ಞನ ತ್ರಿಪದಿಯಂತೆ “ಕುಂಡಲಿನಿಗೊಲಿದವರು ಹೆಂಡರಿಗೊಲಿವರೆ” ಎಂಬಂತೆ ಅನುಭಾವದ ಅರಿವಿನ ಬೆಳಕನರಿತವರು. ಸತಿಪತಿ ಭಾವ ಮೀರಿನಿಂದವರು.

ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.
ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.
ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು.
ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ.
ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮಪ್ರಸಾದಿಯಾದೆನಯ್ಯ.

ತಾಯಿ ನೀಲಾಂಬಿಕೆಯು ಅವಳು ಏರಿದ ಉನ್ನತ ಸ್ಥಿತಿಯನ್ನು ತಿಳಿಸುವ ಪ್ರಸಾದಿ ಸ್ಥಲದ ಈ ವಚನ ಬಸವಾದಿ ಶರಣರ ಕರುಣೆಯಿಂದ ಅವಳ ಸಾಕಾರ ಸ್ವರೂಪವನ್ನು ನಿರಾಕಾರ ಸ್ವರೂಪವನ್ನಾಗಿ ಮಾಡಿದರೂ ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ. ಸಾಮಾನ್ಯತೆಯಿಂದ ಅಸಮಾನ್ಯತೆಯೆಡೆಗೆ ಸಾಗಿ ಬಂದ ಪರಿಯನ್ನು ವಿವರಿಸುತ್ತಾಳೆ. ಬಸವಣ್ಣನವರು ಗುರು ಮತ್ತು ತಂದೆಯ ಸ್ಥಾನದಲ್ಲಿ ನಿಂತು ತಮ್ಮ ಜೀವನಕ್ಕೆ ಒಂದು ಮೌಲ್ಯವನ್ನು ತಂದುಕೊಟ್ಟವರು ಎಂಬುದು ಅವರ ಪ್ರತಿ ವಚನದಲ್ಲೂ ಎದ್ದು ಕಾಣುತ್ತದೆ.

ಅಂಡಜವಳಿದ ಬಸವಾ; ಪಿಂಡಜವಳಿದ ಬಸವಾ; ಆಕಾರವಳಿದ ಬಸವಾದ ನಿರಾಕಾರವಳಿದ ಬಸವಾ; ಸಂಗವಳಿದ ಬಸವಾದ ನಿಸ್ಸಂಗವಳಿದ ಬಸವಾ; ಸಂಗಯ್ಯನಲ್ಲಿ ಸ್ವಯಲಿಂಗವಾದ ಬಸವಾ
ತಮ್ಮ ಒಂದು ಪಿಂಡ ಶರೀರವನ್ನು ಮಂತ್ರ ಶರೀರವನ್ನಾಗಿ ಮಾಡಿದವರು ಬಸವಣ್ಣನವರು ಎಂಬುದನ್ನು ವಿವರಿಸುತ್ತಾರೆ.
ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.
“ಆನಳಿದೆನು ನೀನಳಿದೆನೆಂಬ ಶಬ್ದವಡಗಿ ನಿಃಶಬ್ದವಾಗಿ, ನಿಃಶೂನ್ಯಮಂಟಪದಲ್ಲಿ ನಿಂದು ನಾನು ಉರಿಯುಂಡ ಕರ್ಪೂರದಂತಾದೆನಯ್ಯ”
ಇಂದ್ರಿಯ ಜನ್ಯವಾದ ಸ್ಥೂಲಕಾಯದಲ್ಲಿ ಅಂಗಗುಣ ಅಳಿದು ಲಿಂಗ ಗುಣ ಅಳವಟ್ಟಾಗ ಲಿಂಗಕಾಯವಾಗುತ್ತದೆ. ಉರಿಯುಂಡ ಕರ್ಪೂರವು ಸುವಾಸನೆ ಬೀರಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಂತೆ ಅರಿಷಡ್ವರ್ಗವನ್ನು ಕಳೆದುಕೊಂಡು ನೀಲಾಂಬಿಕೆ ತಾಯಿ ಮಹಾ ಶಿವಶರಣೆಯನ್ನಾಗಿ ನಿಲ್ಲುತ್ತಾಳೆ. ಇಲ್ಲಿ ತಾಯಿಯ ನಿರಹಂಕಾರವನ್ನು ಸೂಚಿಸುತ್ತದೆ.

ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ.
ಶರಣರು ದಾಂಪತ್ಯ ಜೀವನವನ್ನು ದೈವತ್ವಕ್ಕೆರಿಸಿದವರು. ಸಂಸಾರದಲ್ಲಿ ಇದ್ದು ಇರದಂತೆ ಗೆದ್ದು ಬಂದವರು. ಕಮಲ ಪುಷ್ಪ ಸಮಾನ ಬದುಕಿದವರು. ಅರಿವಿನ ಅನುಭಾವದಿಂದ ನಾಣು ನೀನೆಂಬ ಉಭಯವನಳಿದವರು.
ಕಾಲಿಗೆ ಕಟ್ಟಿದ ಗುಂಡು, ಕೊರಳಿಗೆ ಕಟ್ಟಿದ ಬೆಂಡು, ತೇಲಲಾರದು ಗುಂಡು, ಮುಳುಗಲಾರದು ಬೆಂಡು, ಇಂತಪ್ಪ ಸಂಸಾರ ಶರಧಿಯಲಿ ಗುಂಡ ಕಳೆದು, ಬೆಂಡನುಳಿಸಿ ತೆಲಿಸು ಕೂಡಲ ಸಂಗಮದೇವ. ಎಂಬ ಬಸವಣ್ಣನವರ ವಚನದಂತೆ,
ಭೌತಿಕ ಭೊಗಮಯ ಭವಬಂಧನದಿಂದ ಬಿಡಿಸಿ, ಪಂಚಭೂತಗಳಿಂದಾದ ಈ ಕಾಯ ವಿಷಯವಾಸನೆಗಳನ್ನು ತೊರೆದು ಲಿಂಗಾಂಗಸಾಮರಸ್ಯದಿಂದ ನಿಃಸಂಸಾರಿಯಾದೆನಯ್ಯ. ಎಂದು ಹೇಳುತ್ತಾಳೆ. “ ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ ನುಡಿಯಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ ನಾನು ಹೆಣ್ಣಲ್ಲದ ಕಾರಣ, ನಾನು ಇಹಪರ ನಾಸ್ತಿಯಾದವಳಯ್ಯಾ”
ಎಮ್ಮಯ್ಯನವರ ಕರುಣದಿಂದ ಆನು ಪರಮಪ್ರಸಾದಿಯಾದೆನಯ್ಯ.
ಕರಣಂಗಳ ಹಂಗು ಹರಿದು, ಕಾಮದ ಸೀಮೆಯ ಹರಿದು, ಕಾಮದ ಪ್ರಪಂಚವನಳಿದು, ನಾನು ಪ್ರಸನ್ನ ವದನೆಯಾದೆನಯ್ಯಾ ಸಂಗಯ್ಯ.
ಪ್ರಸನ್ನತೆಯೇ ಪ್ರಸಾದ. ಶರಣರ ಕರುಣೆಯಿಂದ ಸುಖದುಃಖವನ್ನು ಸಮಾನವಾಗಿ ಸ್ವೀಕರಿಸಿ ಸಂತೃಪ್ತಿಯ ಶಾಂತ ಜೀವನವನ್ನು ನಡೆಸಿದೆ. ಎಂದು ನೀಲಾಂಬಿಕೆ ತಾಯಿಯವರು ಹೇಳುತ್ತಾರೆ.
ನಮ್ಮ ಶರಣರ ವ್ಯಕ್ತಿತ್ವ ಎಂತಹದು ಎಂದರೆ,
ಅಯ್ಯ ನಿಮ್ಮ ಶರಣರ ನಿಲವ ಸ್ವರ್ಗ ಮರ್ತ್ಯ ಪಾತಾಳದಲ್ಲಿ ಬಲ್ಲವರಿಲ್ಲವಯ್ಯ.
ಅಘಟಿತ ಘಟಿತರು, ಅಖಂಡಿತ ಮಹಿಮರು, ನಿಜದಲ್ಲಿ ನಿರ್ಲೇಪ ಭಾವದವರು.
ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವಾ ಮಾಡದೊಳು ತಾನಿಲ್ಲದಂತಿರಬೇಕು. ಎಂಬಂತೆ ಮಾಟ ಕೂಟಗಳನ್ನು ಮೀರಿದವರು ನಮ್ಮ ಬಸವಾದಿ ಶರಣರು.

ಸವಿತಾ ಮಾಟೂರು ‌ಇಲಕಲ್ಲ

Don`t copy text!